ನ್ಯಾಯಾಂಗ, ಸರ್ಕಾರದ ಮಧ್ಯೆ ಪದೇ ಪದೇ ಸಂಘರ್ಷ ಸಲ್ಲದು

ನ್ಯಾಯಾಂಗ ಹಾಗೂ ಸರ್ಕಾರದ ನಡುವೆ ಇತೀಚಿನ ದಿನಗಳಲ್ಲಿ ಆಗಿಂದಾಗ್ಗೆ ಮಾತಿನ ಸಮರ ನಡೆಯುತ್ತಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು, ಆಯುಕ್ತರ ನೇಮಕಾತಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನೂ ಒಳಗೊಂಡಂತೆ ಪ್ರಧಾನಿ, ವಿಪಕ್ಷ ನಾಯಕರ ಸಮಿತಿ ರಚಿಸಬೇಕೆಂಬ ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಂದ್ರ ಕಾನೂನು ಮಂತ್ರಿಗಳ ಅಸಮಧಾನಕ್ಕೆ ಕಾರಣವಾಗಿದೆ. ಮೊದಲೇ, ಕೊಲೆಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ತೃಪ್ತಿ ಇಲ್ಲ. ನ್ಯಾಯಾಧೀಶರ ಆಯ್ಕೆಯಲ್ಲಿ ತನಗೆ ಪರಿಪೂರ್ಣ ಪಾತ್ರ ವಹಿಸಲು ಆಗುತ್ತಿಲ್ಲ ಎಂಬ ಅಸಮಧಾನವಿದೆ. ಇದೀಗ ಚುನಾವಣಾ ಆಯೋಗದ ನೇಮಕಾತಿಯಲ್ಲೂ ಸುಪ್ರೀಂಕೋರ್ಟ್ ಪಾತ್ರ ಬಯಸುತ್ತಿದೆ ಎಂಬುದು ಸರಕಾರದ ಅಸಮಧಾನ ಹೆಚ್ಚಲು ಕಾರಣವಾಗಿದೆ. ಮತ್ತೊಂದೆಡೆ, ನ್ಯಾಯಾಧೀಶರ ನೇಮಕಾತಿಗೆ ಕೊಲಿಜಿಯಂ ವ್ಯವಸ್ಥೆಯೇ ಸೂಕ್ತ ಎಂಬ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಹೇಳಿದ್ದರೆ, ಬಾಹ್ಯ ಹಸ್ತಕ್ಷೇಪದಿಂದ ನ್ಯಾಯಾಂಗದ ರಕ್ಷಣೆ ಅಗತ್ಯ ಎಂದು ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದಾರೆ. ಈ ರೀತಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹೇಳುತ್ತಾ ಹೋದರೆ, ಕೊನೆಗೆ ಗೊಂದಲಕ್ಕೆ ಸಿಲುಕುವುದು ಶ್ರೀಸಾಮಾನ್ಯರು.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಮೂರೂ ಸಂಸ್ಥೆಗಳು ತಮ್ಮ ತಮ್ಮ ಲಕ್ಷ್ಮಣ ರೇಖೆಗಳನ್ನು ದಾಟಬಾರದು ಎಂದು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ಅದರ ಪರಿಣಾಮವೇ ಈ ರೀತಿಯ ಸಂಘರ್ಷಗಳು, ಬಹಿರಂಗವಾಗಿ ಹೇಳಿಕೆ- ಪ್ರತಿ ಹೇಳಿಕೆಗಳನ್ನು ನೀಡುವ ಬದಲು ನ್ಯಾಯಾಂಗ ಹಾಗೂ ಸರ್ಕಾರ ಪರಸ್ಪರ ಕುಳಿತು ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳಿತು. ಒಂದು ವಿಷಯಕ್ಕೆ ಪರಿಹಾರ ಸಿಕ್ಕಿಲ್ಲದ ಅಸಮಾಧಾನ ವಿವಿಧ ವಿಷಯಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಹೆಚ್ಚು ದಿನ ನಡೆಯಲು ಬಿಡಬಾರದು. ಈಗಾಗಲೇ ಕಳೆದೊಂದು ವರ್ಷದಿಂದ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ವಾಕ್ಸಮರ ಪದೇ ಪದೇ ವರದಿಯಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ. ಆದರೆ ಸಂವಿಧಾನದ ಆಧಾರ ಸ್ಥಂಭಗಳೇ ಜಟಾಪಟಿಯಲ್ಲಿ ತೊಡಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆ ಅಲ್ಲ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೦-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ