ನ್ಯಾಯಾಲಯದ ತೀರ್ಪಿನ ನಿರೀಕ್ಷೆ...

ನ್ಯಾಯಾಲಯದ ತೀರ್ಪಿನ ನಿರೀಕ್ಷೆ...

ದೀರ್ಘ ವಾದ ವಿವಾದಗಳ ನಂತರ ಹೈಕೋರ್ಟ್ ತ್ರಿಸದಸ್ಯ ಪೀಠದ ತೀರ್ಪು ಹಿಜಾಬ್ ಬಗ್ಗೆ ಹೀಗಿರಬೇಕು ಎಂಬ ನನ್ನ ವೈಯಕ್ತಿಕ ನಿರೀಕ್ಷೆ. ನ್ಯಾಯಾಲಯಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಅರಿವಿನೊಂದಿಗೆ...

1) ಕೋರ್ಟ್‌ ನೀಡುವ ಈ ತೀರ್ಪು ಈ ಶೈಕ್ಷಣಿಕ ವರ್ಷಕ್ಕೆ ಅನ್ವಯಿಸುವುದಿಲ್ಲ. ಹಿಜಾಬ್ ಅಥವಾ ಕೇಸರಿ ಶಾಲು ಏನೇ ಇರಲಿ ಈ ಬಾರಿ ಅವರವರ ವಸ್ತ್ರಕ್ಕಿಂತ ಶಿಕ್ಷಣ ಮತ್ತು ಪರೀಕ್ಷೆಗಳು ಮುಖ್ಯ. ಇನ್ನು ಸುಮಾರು ಎರಡು ತಿಂಗಳಲ್ಲಿ ಎಲ್ಲವೂ ಮುಗಿಯುತ್ತದೆ. ಅದರಿಂದ ಅಂತಹ ತೊಂದರೆ ಏನೂ ಇಲ್ಲ. ಆದ್ದರಿಂದ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಈ ಬಾರಿ ಅನುಮತಿ ಕೊಡಬೇಕು. ಈ ವಿಷಯ ದೊಡ್ಡ ವಿವಾದ ಮಾಡಿ ಅಂತರಾಷ್ಟ್ರೀಯವಾಗಿ ಕೆಟ್ಟ ಹೆಸರು ತಡೆಯಬೇಕು.

2) ಧರ್ಮ ನಿರಪೇಕ್ಷತೆ - ಧಾರ್ಮಿಕ ಸ್ವಾತಂತ್ರ್ಯ ಏನೇ ಇರಲಿ ಈ ಕ್ಷಣದ ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹಿಜಾಬ್ ಧರಿಸುವ ಅವಶ್ಯಕತೆ ಅಥವಾ ಅನಿವಾರ್ಯತೆ ಇಲ್ಲ. ರಕ್ಷಣೆ ಅಥವಾ ಸೌಂದರ್ಯ ಪ್ರದರ್ಶನ ಮುಂತಾದ ಯಾವುದೇ ಕಾರಣ ಒಪ್ಪುವಂತಹುದಲ್ಲ. ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆ ಕಾಪಾಡುವ ನಿಟ್ಟಿನಲ್ಲಿ ಹಿಜಾಬ್ ಒಂದು ಮೌಡ್ಯದ ಸಂಪ್ರದಾಯ ಅಷ್ಟೇ.

3) ಹಾಗೆಂದು ದಿಢೀರನೆ ಹಿಜಾಬ್ ನಿಷೇಧಿಸಬಾರದು. ಧರ್ಮದ ಆಚರಣೆಗಳು ಮನುಷ್ಯನ ರಕ್ತ ಮಾಂಸಗಳ ಸಮೇತ ಮೆದುಳಿನಲ್ಲಿ ಸೇರಿ ಹೋಗಿದೆ. ಅದರಲ್ಲೂ ಇಸ್ಲಾಂ ಧರ್ಮದಲ್ಲಿ ಇದು ಇನ್ನೂ ಆಳವಾಗಿದೆ. ಆ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಗತಿಪರ ಮುಸ್ಲಿಂ ಮುಖಂಡರು ಮತ್ತು ಚಿಂತಕರು ಸಾಧ್ಯವಾದಷ್ಟು ನಿರಂತರವಾಗಿ ಹಿಜಾಬ್ ಧರಿಸಲೇ ಬೇಕು ಎಂದು ಹಠ ಮಾಡುವ ಕೆಲವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕೌನ್ಸಿಲಿಂಗ್ ಮಾಡಿ ಅವರ ಮನವೊಲಿಕೆಗೆ ಪ್ರಯತ್ನಿಸಬೇಕು. ಅದೊಂದು ಮಧ್ಯಕಾಲೀನ ಯುಗದ ಆಚರಣೆ ಎಂದು ಅವರ ಗೆಳೆಯ ಗೆಳತಿಯರು ಸಹ ಹೇಳಬೇಕು. ಅಲ್ಲಿಯವರೆಗೂ ಅವರ ಶೈಕ್ಷಣಿಕ ಅಭ್ಯಾಸಕ್ಕೆ ಯಾವುದೇ ಅಡೆತಡೆ ಮಾಡಬಾರದು.

4) ಕೇವಲ ಹಿಜಾಬ್ ಮಾತ್ರವಲ್ಲ  ಹಿಂದೂ ಧರ್ಮದಲ್ಲಿ ಸಹ ಈ ರೀತಿಯ ಅನೇಕ ಮೌಡ್ಯ ಆಚರಣೆಗಳು ನಡೆಯುತ್ತಿವೆ. ಸಂವಿಧಾನದ ಮೂಲ ಆಶಯದಂತೆ ಇಲ್ಲಿನ ಎಲ್ಲಾ ಪ್ರಜೆಗಳಿಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಕರ್ತವ್ಯಗಳಿವೆ. ಹಾಗೆಯೇ ಧಾರ್ಮಿಕ ಸ್ವಾತಂತ್ರ್ಯವೂ ಇದೆ. ಹಾಗೆಂದು ಮೂಡ ನಂಬಿಕೆಗಳನ್ನು ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಹರಣದ ಆಚರಣೆಗಳನ್ನು ಯಾವುದೇ ಧರ್ಮ ಹೇಳಿದ್ದರೂ ಕಾಲಕ್ಕೆ ತಕ್ಕಂತೆ ಅದನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ವೈಚಾರಿಕ ಪ್ರಜ್ಞೆ ಭಾರತೀಯಲ್ಲಿ ಮೂಡುವಂತೆ ಮಾಡಿದಾಗ ಮಾತ್ರ ಭಾರತದ ನಿಜವಾದ ಅಭಿವೃದ್ಧಿ ಮತ್ತು ವಿಶ್ವಮಟ್ಟದ ಏಳಿಗೆ ಸಾಧ್ಯ. ಆ ನಿಟ್ಟಿನಲ್ಲಿ ಇದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

5) ಭಾರತದಲ್ಲಿನ ಎಲ್ಲಾ ಧರ್ಮಗಳ ಭಾರತೀಯ ಅನುಯಾಯಿಗಳೇ, ಸಂವಿಧಾನ ಎಂಬುದು ಧರ್ಮ ವಿರೋಧಿಯಲ್ಲ. ಅದು ಧರ್ಮದ ಮುಂದುವರಿದ ಭಾಗ. ಧರ್ಮದಲ್ಲಿನ ಹುಳುಕುಗಳನ್ನು ಸರಿಪಡಿಸಿ ಮಾನವೀಯ ಮೌಲ್ಯಗಳ ನಾಗರಿಕ ಲಕ್ಷಣಗಳ ಕ್ರಮಬದ್ಧ ಆಚರಣೆಯ ಶಿಸ್ತು ಬದ್ಧ ವ್ಯವಸ್ಥೆ. ಸಂವಿಧಾನವು ಎಂದಿಗೂ ಧರ್ಮಕ್ಕೆ ( ಒಳ್ಳೆಯತನ ) ಅಡ್ಡಿಪಡಿಸುವುದಿಲ್ಲ. ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ. ಜೊತೆಗೆ ಧರ್ಮದ ಸಂಪೂರ್ಣ ಅಂದ ಭಕ್ತಿಯ ಆಚರಣೆ ನಮ್ಮ ನಡುವಿನ ಪ್ರತ್ಯೇಕತೆಯನ್ನು ಹೆಚ್ಚಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತದೆ. ಸಂವಿಧಾನದ ಸಂಪೂರ್ಣ ಆಚರಣೆ ನಮ್ಮ ನಡುವೆ ಸಮಾನತೆಯನ್ನು ಮೂಡಿಸಿ‌ ಸೌಹಾರ್ದತೆಯನ್ನು ಬೆಳೆಸುತ್ತದೆ.

6) ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರೇ… ನಿಮ್ಮ ಕರ್ತವ್ಯ ನಿಮ್ಮ ನಿಮ್ಮ ಮತಗಳ ಅಫೀಮನ್ನು ಜನಗಳಿಗೆ ತಿನ್ನಿಸುವುದಲ್ಲ. ನಿಜವಾದ ಧರ್ಮದ ತಿರುಳನ್ನು ಜನರಿಗೆ ಮನವರಿಕೆ ಮಾಡಿ ಅದು ನಡವಳಿಕೆಯಾಗಿ ಪರಿವರ್ತಿಸುವುದು ಮತ್ತು ಈ ಕ್ಷಣದಲ್ಲಿ ಸಂವಿಧಾನದ ಆಶಯಗಳಿಗೆ ಬದ್ದರಾಗಿರುವಂತೆ ಜನರನ್ನು ಜಾಗೃತಗೊಳಿಸುವುದು. ಆಗ ಮಾತ್ರ ನಿಮ್ಮ ಧರ್ಮಗಳಿಗೆ ಒಂದು ಮರ್ಯಾದೆ ಮತ್ತು ಅಸ್ತಿತ್ವ. ಹಿಜಾಬ್ ನಿಯಂತ್ರಿಸುವುದು ಬಿಟ್ಟು ಅದಕ್ಕೆ ಪರ್ಯಾಯವಾಗಿ ಕೇಸರಿ ಶಾಲು ಧರಿಸಿ ಮತ್ತಷ್ಟು ವಿವಾದ ಹುಟ್ಟುಹಾಕುವ ಹಠಮಾರಿತನ ದೇಶದ ಹಿತಾಸಕ್ತಿಗೆ ಮಾರಕ ಎಂದು ತಿಳಿಯುವಷ್ಟು ಪ್ರಬುದ್ಧತೆ ಬೆಳೆಸಿಕೊಳ್ಳಿ.

7) ಆದ ಕಾರಣ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಸ್ವಲ್ಪ ಕಾಲ ಹಿಜಾಬ್ ಗೆ ಮಾನ್ಯತೆ ನೀಡುತ್ತೇವೆ. ಆದರೆ ಹಿಜಾಬ್ ಒಂದು ಮೂಢನಂಬಿಕೆ ಮತ್ತು ಮಹಿಳಾ ಸ್ವಾತಂತ್ರ್ಯ ವಿರೋಧಿ. ಇದನ್ನು ಸಾಧ್ಯವಾದಷ್ಟು ಬೇಗ ನಿರ್ಮೂಲನೆ ಮಾಡಲು ಸಂಬಂಧಿಸಿದ ಎಲ್ಲರೂ ಪ್ರಯತ್ನಿಸಬೇಕು ಎಂದು ಈ ಆದೇಶದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಶತಶತಮಾನಗಳಿಂದ ಈ ರೀತಿಯಲ್ಲಿ ಆಚರಣೆಯಲ್ಲಿದ್ದ ಅನೇಕ ಮೂಡ ನಂಬಿಕೆಯ ಮಹಿಳಾ ತಾರತಮ್ಯದ ಅನೇಕ ಸಂಪ್ರದಾಯಗಳನ್ನು ನಾವು ಮೆಟ್ಟಿ ನಿಂತು ಬದಲಾವಣೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

8) ಹಾಗೆಯೇ ಹಿಜಾಬ್ ಎಂಬ ತುಂಡು ಬಟ್ಟೆಯ ವಿಷಯವನ್ನು ಒಂದು ದೊಡ್ಡ ವಿವಾದವಾಗಿ ಬೆಳೆಸಿ ಸಾಕಷ್ಟು ಸಂಪನ್ಮೂಲಗಳ ನಾಶ, ಸಮಾಜದ ದೇಶದ ಗೌರವಕ್ಕೆ ಚ್ಯುತಿ ಉಂಟುಮಾಡಿದ ಅಜ್ಞಾನಿಗಳು ಧರ್ಮ ವಿರೋಧಿಗಳು ಮಾನವೀಯತೆಯ ವಿರೋಧಿಗಳು ಆದ ಆ ಗಲಭೆಗಳಲ್ಲಿ ಭಾಗವಹಿಸಿದ ಹಿಂದೂ ಮುಸ್ಲಿಂ ಮೂಲಭೂತವಾದಿಗಳು ಮತ್ತು ಈ ವಿವಾದವನ್ನು ಸರಿಯಾಗಿ ನಿರ್ವಹಿಸದ ಸರ್ಕಾರ ಹಾಗು ಈ ರಾಜಕೀಯ ವ್ಯವಸ್ಥೆಗೆ ಈ ಮೂಲಕ ಛೀಮಾರಿ ಹಾಕುತ್ತಾ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

9) ಕೊನೆಯದಾಗಿ.. ಯಾವುದೇ ಪೂರ್ವಾಗ್ರಹ ಭಾವದಿಂದ ‌ಈ ತೀರ್ಪನ್ನು ನೋಡದೆ ಸಮಾಜದ ಈ ಕ್ಷಣದ ಶಾಂತಿ ಸೌಹಾರ್ದದ ಸಮಗ್ರ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು. ಕೊರೋನಾ ಸಮಯದಲ್ಲಿ ‌ಮತ್ತು ವಿಶ್ವದಾದ್ಯಂತ ಮೂರನೇ ಮಹಾಯುದ್ಧದ ಕಾರ್ಮೋಡ ಕವಿದಿರುವಾಗ ಮನುಷ್ಯ ಅಸ್ತಿತ್ವಕ್ಕೆ ಅಪಾಯ ಕಾದಿರುವಾಗ ಇಡೀ ಪ್ರಕೃತಿಯೇ ವಿನಾಶದ ಅಂಚಿಗೆ ತಲುಪುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯರಾದ ನಾವು ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಿ ನಮ್ಮ ವಿನಾಶಕ್ಕೆ ನಾವೇ ಕಾರಣರಾಗುವ ಬದಲು ನಮ್ಮ ಅತ್ಯಂತ ಉತ್ತಮ ಬುದ್ದ ಶಕ್ತಿ ಮತ್ತು ವಿವೇಚನೆಯಿಂದ ವರ್ತಿಸಿ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಬೇಕಿದೆ.

ಆ ನಿಟ್ಟಿನಲ್ಲಿ ನ್ಯಾಯಾಧೀಶರಾದ ನಮ್ಮ ‌ಜವಾಬ್ದಾರಿ ಸಹ ಇದೆ ಎಂದು ನೆನಪು ಮಾಡಿಕೊಳ್ಳುತ್ತಾ.....ಎಲ್ಲರಿಗೂ ಶುಭವಾಗಲಿ.

(ಇದು‌ ವ್ಯಕ್ತಿಯೊಬ್ಬನ ಕಾಲ್ಪನಿಕ ತೀರ್ಪು. ಇದಕ್ಕೆ ಯಾವುದೇ ಮಾನ್ಯತೆ ಕೊಡಬೇಕಾಗಿಲ್ಲ. ಕೇವಲ ಮನಸ್ಸುಗಳ ಅಂತರಂಗದ ಚಳವಳಿಯ ಒಂದು ಭಾಗ ಮಾತ್ರ )

-ವಿವೇಕಾನಂದ ಹೆಚ್ ಕೆ, ಬೆಂಗಳೂರು

ಚಿತ್ರ ಕೃಪೆ; ಇಂಟರ್ನೆಟ್ ತಾಣ