ಪಂಚತಂತ್ರ - ಆಯ್ದ ಕತೆಗಳು

ಪಂಚತಂತ್ರ - ಆಯ್ದ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಪಂಡಿತ ವಿಷ್ಣು ಶರ್ಮ
ಪ್ರಕಾಶಕರು
ವಸಂತ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.70/-

ನಮ್ಮಲ್ಲಿ ಹಲವರಿಗೆ ಪಂಚತಂತ್ರದ ಕತೆಗಳು ಗೊತ್ತು. ಆದರೆ, “ಒಂದು ಪಂಚತಂತ್ರದ ಕತೆ ಹೇಳಿ” ಎಂದರೆ ಬಹುಪಾಲು ಜನರು ತಡವರಿಸುತ್ತಾರೆ. ಅಂಥವರೆಲ್ಲ ಪಂಚತಂತ್ರದ ಕತೆಗಳನ್ನು ಕಲಿತು, ಮಕ್ಕಳಿಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳಲು ಈ ಪುಸ್ತಕ ಸಹಾಯಕ. ಯಾಕೆಂದರೆ, ಇದರಲ್ಲಿರುವುದು 18 ಕತೆಗಳು ಮತ್ತು ಪ್ರತಿಯೊಂದು ಕತೆಗೆ ಒಂದು ಅಥವಾ ಎರಡು ಬಣ್ಣದ ಚಿತ್ರಗಳನ್ನು ಮುದ್ರಿಸಿರುವುದರಿಂದ ಕತೆಗಳನ್ನು ನೆನಪಿಟ್ಟುಕೊಳ್ಳಲು ಅನುಕೂಲ.

ಇಂಗ್ಲಿಷಿನಲ್ಲಿ ದೆಹಲಿಯ ಮನೋಜ್ ಪಬ್ಲಿಕೇಷನ್ಸ್ ಪ್ರಕಟಿಸಿದ ಈ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸಿದವರು ವಸಂತ ಪ್ರಕಾಶನ. ಈ ಕತೆಗಳ ಕನ್ನಡಾನುವಾದ ಚಿರಂಜೀವಿ ಅವರಿಂದ. ಇದರ ಪ್ರತಿಯೊಂದು ಕತೆಯ ಕೊನೆಯಲ್ಲಿ “ಕತೆಯ ನೀತಿ”ಯನ್ನು ಮುದ್ರಿಸಲಾಗಿದೆ. ಇದರಿಂದಾಗಿ, ಕತೆಗಳನ್ನು ಓದುವ ಅಥವಾ ಕೇಳುವ ಮಕ್ಕಳಿಗೆ ಜೀವನದ ನೀತಿಯೊಂದನ್ನು ಬಹುಕಾಲ ನೆನಪಿಟ್ಟುಕೊಳ್ಳಲು ಸಾಧ್ಯ.

ಇದರಲ್ಲಿನ ಕೆಲವು ಕತೆಗಳು ನನ್ನ ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿದ್ದ ಕಾರಣ ಅವು ಚೆನ್ನಾಗಿ ನೆನಪಿವೆ. ಇದರಿಂದ ಇಂತಹ ನೀತಿ ಕತೆಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸುವುದು ಅತ್ಯಗತ್ಯ ಎಂಬುದು ಸ್ಪಷ್ಟವಾಗುತ್ತದೆ.

ನಮ್ಮ ಮನೆಯಲ್ಲಿ “ಪಂಚತಂತ್ರ" ಪುಸ್ತಕವಿತ್ತು ಮತ್ತು ನಾನು ಅದನ್ನು ಓದಿದ್ದೆ. ಅದಾಗಿ ಸುಮಾರು ಅರುವತ್ತು ವರುಷಗಳ ನಂತರ ಈ ಪುಸ್ತಕದ ಕೆಲವು ಕತೆಗಳನ್ನು ಓದುವಾಗ ಅವು ಹೊಸತೆನಿಸಿದವು. ಇದಕ್ಕೆ, ಆ ಹಳೆಯ “ಪಂಚತಂತ್ರ" ಪುಸ್ತಕದಲ್ಲಿ ಪ್ರತಿಯೊಂದು ಕತೆಗೂ ಚಿತ್ರ ಇಲ್ಲದಿರುವುದೂ ಕಾರಣವಾಗಿರಬಹುದು ಅನಿಸಿತು.

ಇದರ ಮೊದಲ ಕತೆ: "ಗಿಡುಗ ಮತ್ತು ಕಾಗೆ”. ಕತೆಯ ಸಾರಾಂಶ: ಗಿಡುಗವು ಆಕಾಶದಿಂದ ಕೆಳಕ್ಕೆ ಬಂದೆರಗಿ ಮೊಲವೊಂದನ್ನು ಹೊತ್ತೊಯ್ದಿತು. ಅದನ್ನು ಕಂಡ ಕಾಗೆ ತಾನೂ ಅದನ್ನು ಅನುಕರಿಸಲು ನಿರ್ಧರಿಸಿತು. ಆಕಾಶದಲ್ಲಿ ಎತ್ತರಕ್ಕೆ ಹಾರಿದ ಕಾಗೆ, ರಭಸದಿಂದ ನೆಲದಲ್ಲಿದ್ದ ಮೊಲವೊಂದರ ಮೇಲೆ ಎಗರಿತು. ಆದರೆ, ಅದರ ಗುರಿ ತಪ್ಪಿ, ಕಾಗೆ ಕಲ್ಲೊಂದಕ್ಕೆ ಅಪ್ಪಳಿಸಿ, ತಲೆಯೊಡೆದು ಸತ್ತಿತು. ನೀತಿ: ಹುಚ್ಚುಹುಚ್ಚಾಗಿ ಇನ್ನೊಬ್ಬರನ್ನು ಯಾವಾಗಲೂ ಅನುಕರಿಸಬಾರದು.

ಇನ್ನೊಂದು ಪುಟ್ಟ ಕತೆ: “ಅಗಸ ಮತ್ತು ಕತ್ತೆ.” ಅಗಸನೊಬ್ಬ ಒಂದು ನಾಯಿ ಮತ್ತು ಒಂದು ಕತ್ತೆಯನ್ನು ಸಾಕುತ್ತಿದ್ದ. ನಾಯಿಯೆಂದರೆ ಅವನಿಗೆ ಬಹಳ ಪ್ರೀತಿ. ಅದು ಮನೆ ಕಾಯುತ್ತಿತ್ತು ಮತ್ತು ಅವನನ್ನು ಹಿಂಬಾಲಿಸುತ್ತಿತ್ತು. ಕೆಲವೊಮ್ಮೆ ನಾಯಿ ತನ್ನ ಮುಂದಿನ ಎರಡು ಕಾಲುಗಳನ್ನು ಎತ್ತಿ ಯಜಮಾನನ ಎದೆಯ ಮೇಲಿಡುತ್ತಿತ್ತು. ಆಗ ಅಗಸ ಅದರ ಬೆನ್ನು ಸವರುತ್ತಿದ್ದ. ಇದನ್ನೆಲ್ಲ ನೋಡುತ್ತಿದ್ದ ಕತ್ತೆಗೆ ಹೊಟ್ಟೆಯುರಿಯಿತು. "ನನ್ನದು ಎಂತಹ ದುರದೃಷ್ಟ. ನಾನು ದಿನದಿನವೂ ಮೂಟೆಗಟ್ಟಲೆ ಬಟ್ಟೆ ಹೊತ್ತರೂ ಧಣಿ ನನ್ನನ್ನು ಪ್ರೀತಿಸುವುದಿಲ್ಲ. ಇನ್ನ ಮೇಲೆ, ಆ ನಾಯಿ ಮಾಡಿದಂತೆ ಮಾಡಬೇಕು" ಎಂದು ಕತ್ತೆ ಯೋಚಿಸಿತು.

ಮರುದಿನ ಅಗಸ ಎದುರು ಬಂದಾಗ, ಕತ್ತೆ ಕೆಲವು ಸಲ ಕೆನೆಯಿತು; ಬಾಲ ಆಡಿಸಲು ಪ್ರಯತ್ನಿಸಿತು. ಅನಂತರ ತನ್ನ ಮುಂಗಾಲುಗಳನ್ನು ಎತ್ತಿ ಅಗಸನ ಎದೆಯ ಮೇಲಿಟ್ಟಿತು. ಇದನ್ನು ನೋಡಿ ಅಗಸನಿಗೆ ಹೆದರಿಕೆಯಾಯಿತು. ಕತ್ತೆ ಹುಚ್ಚು ಹಿಡಿದಿರಬಹುದು ಎನಿಸಿತು. ಆತ ಒಂದು ಕೋಲಿನಿಂದ ಕತ್ತೆಗೆ ಚೆನ್ನಾಗಿ ಹೊಡೆದ. ನೀತಿ: ಮತ್ಸರ ಹಾನಿಕರ.

ನಮಗೆ ಪಂಚತಂತ್ರದ ಹಲವು ಕತೆಗಳೂ ಅವುಗಳ ನೀತಿಗಳೂ ಗೊತ್ತಿರಬಹುದು. ಆದರೆ, ಅವನ್ನು ನಾವು ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದೇವೆ? ಎಷ್ಟರ ಮಟ್ಟಿಗೆ ನಮ್ಮ ವರ್ತನೆ ಬದಲಾಯಿಸಿಕೊಂಡಿದ್ದೇವೆ? ಈಗ ಆಗಾಗ ವರದಿಯಾಗುತ್ತಿರುವ "ಸೈಬರ್ ವಂಚನೆ” ಪ್ರಕರಣಗಳನ್ನು ಗಮನಿಸಿದರೆ, ನಾವು ಈ ಕತೆಗಳಿಂದ ಬಹಳಷ್ಟು ಕಲಿಯಲಿಕ್ಕಿದೆ ಅನಿಸುತ್ತದೆ, ಅಲ್ಲವೇ? ಉದಾಹರಣೆಗೆ, "ತೋಳ ಮತ್ತು ಗುಹೆ” ಕತೆಯಲ್ಲಿ, ತನ್ನ ಗುಹೆಯ ಎದುರು ಸಿಂಹದ ಹೆಜ್ಜೆ ಗುರುತುಗಳನ್ನು ಕಂಡ ತೋಳ ಜಾಗೃತವಾಗಿ, ಗುಹೆಯನ್ನು ಉದ್ದೇಶಿಸಿ ಮಾತನಾಡುತ್ತದೆ. ಆಗ ಗುಹೆಯ ಒಳಗಿದ್ದ ಸಿಂಹ ತೋಳದ ಪ್ರಶ್ನೆಗೆ ಉತ್ತರಿಸುತ್ತದೆ! ಹೀಗೆ ಗುಹೆಯೊಳಗೆ ಸಿಂಹವಿದೆಯೆಂದು ಖಚಿತವಾದ ತಕ್ಷಣವೇ ತೋಳ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳುತ್ತದೆ. ನಾವು ಮೋಸ ಹೋಗದಿರಬೇಕಾದರೆ, ನಿರಂತರ ಎಚ್ಚರದಿಂದ ಇರುವುದನ್ನು ಕಲಿಯಬೇಕು, ಅಲ್ಲವೇ?