ಪಂಚ'ಮ'ಗಳ ನಡುವೆ

ಪಂಚ'ಮ'ಗಳ ನಡುವೆ

ಪುಸ್ತಕದ ಲೇಖಕ/ಕವಿಯ ಹೆಸರು
ಸತ್ಯಕಾಮ
ಪ್ರಕಾಶಕರು
ಐಬಿಎಚ್ ಪ್ರಕಾಶನ, ರಾಮರಾವ್ ಲೇ ಔಟ್, ಬಿಎಸ್ ಕೆ ೩ನೇ ಸ್ಟೇಜ್, ಬೆಂಗಳೂರು-೫೬೦೦೮೫
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೦೬

'ಪಂಚಮಗಳ ನಡುವೆ' ಎಂಬ ಈ ಸತ್ಯಕಾಮರ ಕೃತಿಯ ವಿಷಯ ಬಹು ಚರ್ಚಿತ. ಸತ್ಯಕಾಮರೇ ತಮ್ಮ ಮುನ್ನುಡಿಯಲ್ಲಿ ಬರೆದ ಮಾತುಗಳನ್ನು ಓದಿದರೆ ನಿಮಗೆ ನಿಜಕ್ಕೂ ಕೃತಿಯ ಬಗ್ಗೆ ಕುತೂಹಲ ಮೂಡತೊಡಗುತ್ತದೆ. ‘ಅನುಭವಗಳು ತರಂಗಗಳಂತೆ ಚಲನೆ ನೇರ ನಿಟ್ಟಿನಲ್ಲಲ್ಲ' ಎಂದು ತಮ್ಮ ಮುನ್ನುಡಿಯನ್ನು ಪ್ರಾರಂಭಿಸುವ ಇವರು ಮುಂದುವರೆದು ಬರೆಯುತ್ತಾರೆ..."ನೀವು ಪುಟಗಳನ್ನು ತೆರೆದು ಓದುತ್ತಿರುವುದು ಒಂದು ಬದುಕನ್ನು. ಆ ಬದುಕಿನ ಹಿಂದೆ ಒಂದು ಪ್ರಾಮಾಣಿಕವಾದ ಅನುಭವ ಮಾತ್ರ ಇಲ್ಲ ; ಸಶಕ್ತವಾದ ವೈಜ್ಞಾನಿಕ ನೆಲಗಟ್ಟೂ ಇದೆ. ಇಲ್ಲಿಯ ಒಂದು ಮಾತು, ಕೃತಿ, ಅಸಂಭಾವ್ಯ ಅನಿಸಿದರೆ ಓದುಗ, ಇನ್ನೊಮ್ಮೆ ತನ್ನ ‘ಶಕ್ತಿ'ಯನ್ನು ಅಳೆದುಕೊಂಡರೆ ಸಾಕು.

ಗತಿಯು ಶಕ್ತಿಯ ಮೂಲ. ಗತಿ ಶೀಲತೆ ಶಕ್ತಿವಂತಿಕೆಯ ಗುರುತು. ‘ನಿರ್ಗತಿಕತೆ' ಅಶಕ್ತತೆಯ ಲಕ್ಷಣ! ತಂತ್ರ ಮನಸ್ಸಿನ ಗತಿಯನ್ನು ತೀವ್ರಗೊಳಿಸುತ್ತದೆ. ಗತಿಯ ತೀವ್ರತೆಯನ್ನು ವೇಗವೆಂದು ಗುರುತಿಸುತ್ತೇವೆ. ವೇಗ ಇಲ್ಲದೆ ಶಕ್ತಿ ಇಲ್ಲ. ಒಂದು ಅರ್ಥದಲ್ಲಿ ವೇಗವೇ ಶಕ್ತಿ !

ಮನಸ್ಸು ‘ಗತಿಗೆಟ್ಟರೆ', ನಿಂತು ಮಲೆತರೆ, ಬದುಕು ನಿಃಶಕ್ತವಾಗುತ್ತದೆ. ಅದು ಅದ್ಭುತ ವೇಗಕ್ಕೆ ಒಳಪಟ್ಟರೆ, ಆ ಚುಂಬಿತ ಶಕ್ತಿ ಪ್ರದರ್ಶನದ, ಉತ್ಪಾದನೆಯ ಕೇಂದ್ರವಾಗುತ್ತದೆ. ಮನಸ್ಸನ್ನು ಪ್ರಚಂಡ ವೇಗಕ್ಕೆ ಒಳಪಡಿಸಿ ಅಪಾರ ಶಕ್ತಿಯನ್ನು ಉತ್ಪಾದಿಸುವುದೇ ತಾಂತ್ರಿಕ ವೈಶಿಷ್ಟ್ಯ !

ತಂತ್ರ ಎಂಬುವುದೊಂದು ದೇವಾಲಯವಾದರೆ ಅದನ್ನು ಸುತ್ತಿ ಬಂದವ ಈ ಶಾಸನವನ್ನು ಓದುತ್ತಾನೆ. ‘ದೇವರನ್ನು ಕಡಿಮೆ ಒಪ್ಪಿದವ ಹೆಚ್ಚು ಸುಖಿ' ದುಡಿಯದವನ ಜತೆಗೆ ದೇವರ ಒಗೆತನವಿಲ್ಲ, ಮೌಲ್ಯಗಳು ಜೀವದ ನೆತ್ತರ ಕುಡಿಯುವ ಜಿಗಣೆಗಳಲ್ಲ.

ತಂತ್ರ ಅಸಭ್ಯರ ಆಚಾರ ಎಂದು ಮೂಗು ಮುರಿಯುವವರೂ ಇದ್ದಾರೆ. ತಂತ್ರವೊಂದೇ ಶಕ್ತಿ ಸಾಧನೆಯ ದಾರೆ ಎಂದು. ಅರ್ಹತೆ ಇರಲಿ ಬಿಡಲಿ ಲಂಪಟ ಮನೋಭಾವದಿಂದ ಅದರಲ್ಲಿ ಕಾಲಿಡುತ್ತಾರೆ. ಭಾರತೀಯ ದೃಷ್ಟಿಯಿಂದ ಅನೈತಿಕ, ಅಸಾಮಾಜಿಕ ಎನ್ನುವ ಆಚಾರಗಳಿಗೆಲ್ಲ ಮುಕ್ತ ಅವಕಾಶವಿದೆ. ಧೀರರು ಅದನ್ನು ಆಹ್ವಾನ ಎಂದು ಅಂಗೀಕರಿಸಿದರೆ ಲಂಪಟರು ಅದರ ಆಮಿಷಕ್ಕೆ ಪಕ್ಕಾಗುತ್ತಾರೆ.”

ಸತ್ಯಕಾಮರು ಒಂದು ರೀತಿಯಲ್ಲಿ ಋಷಿಯಂತೆ ಬಾಳಿ ಬದುಕಿದವರು. ಅವರ ಪುಸ್ತಕಗಳಲ್ಲಿ ನಮಗೆ ಅಲೌಕಿಕ ಜಗತ್ತಿನ ಪರಿಚಯವಾಗುತ್ತದೆ. ಸುಮಾರು ೧೭೦ ಪುಟಗಳ ಈ ಪುಸ್ತಕದ ಮುಖಪುಟವನ್ನು ಖ್ಯಾತ ಚಿತ್ರಕಾರ ಚಂದ್ರನಾಥ ಆಚಾರ್ಯ ಇವರು ರಚಿಸಿದ್ದಾರೆ.