ಪಂಚಮವೇದ

ಪಂಚಮವೇದ

ಪುಸ್ತಕದ ಲೇಖಕ/ಕವಿಯ ಹೆಸರು
ನಿರೂಪಣೆ: ಭಾರತಿ ಹೆಗಡೆ
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಹೊಸನಗರ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ ಬೆನ್ನುಡಿ “ಮಥಿಸುವ ಜೀವನಾನುಭವದ ನವನೀತ" ದಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…

“ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಂಡ ಕನಸನ್ನು ಛಲ ಬಿಡದೆ ನನಸು ಮಾಡುವುದೇ ಪಂಚಮವೇದದ ಸಾರ. ಇಲ್ಲಿ ನೋವಿದೆ, ನಲಿವಿದೆ, ಕತ್ತಲೆಯೂ ಇದೆ. ಆದರೆ ಆಶಾ ಕಿರಣದ ಬೆಳಕು ಹೊಮ್ಮುತ್ತಾ, ಆ ಬೆಳಕು ನೂರಾರು ಜನರಿಗೆ ಜೀವನೋಪಾಯದ ಮೆಟ್ಟಿಲಾಗುವ ಹೆಣ್ಣೊಬ್ಬಳ ಆತ್ಮಸ್ಥೈರ್ಯದ ಯಶೋಗಾಥೆ ಇದು. 

ಮೂವತ್ತೈದು ವರುಷಗಳ ದಾಂಪತ್ಯ ಜೀವನ ಕಷ್ಟ ಸುಖದ ನಡುವೆ ಒಮ್ಮೆ ಮುಳುಗುತ್ತಾ, ಇನ್ನೊಮ್ಮೆ ತೇಲುತ್ತಾ ನಡೆಯುವಾಗ, ವೇದಾ ಮನೋಹರ ಕಷ್ಟದಲ್ಲಿ ಇದ್ದರೂ ಅದನ್ನು ಗೆಲ್ಲುತ್ತಾ ಸಮಾಜಕ್ಕೆ ದಾರಿ ಬೆಳಕಾಗುವ ಅದಮ್ಯ ಚೇತನವಾಗಿ ಹೊಮ್ಮುವ ಪ್ರಕ್ರಿಯೆ ಅದ್ಭುತ. ಈ ಕೃತಿ ಒಂದು ರೀತಿಯಲ್ಲಿ ಜೀವನ ಚರಿತ್ರೆಯಾದರೆ ಇನ್ನೊಂದು ಮಗ್ಗುಲಲ್ಲಿ ಆತ್ಮಚರಿತ್ರೆಯಾಗಿದೆ. ವೇದಾ ಮನೋಹರ ಅವರ ನಿರೂಪಣೆಯಲ್ಲಿ ಭಾರತಿ ಹೆಗಡೆಯವರ ಸೃಜನ ಬರವಣಿಗೆ ಸೇರಿ ಅದೊಂದು ಜೀವನಗಾಥೆಯಾಗಿದೆ. ಮಥಿಸುವ ಜೀವನಾನುಭವದ ನವನೀತ ಒಂದು ವಿಶಿಷ್ಟ ಅನುಭವವನ್ನು ಕೊಡುತ್ತದೆ.

ವೇದಾ ಅಂತರ್ಜಾತಿಯ ವಿವಾಹವಾಗಿ ಆದರ್ಶವನ್ನು ಬಾಳಿದರೂ, ತಾನು ಅನುಭವಿಸಿದ ನೋವಿನಲ್ಲಿಯೂ ತನ್ನ ಸಾಧಕ ಗಂಡನಿಗೆ ಮಾರ್ಗದರ್ಶಕರು. ತಮ್ಮ ಮೂರು ದಶಕಗಳಿಗೂ ಮೀರಿದ ನಿರಂತರ ಹೋರಾಟದಲ್ಲಿ, ಹುಡುಕಾಟದಲ್ಲಿ ಅವರು ಕಂಡುಕೊಂಡ ನೆಮ್ಮದಿ ಶಾಂತಿ ಇತರರಿಗೆ ಅನುಕರಣೀಯವಾಗಿದೆ. ಭದ್ರಾವತಿಯ ಸಮೀಪ ಬಹು ಶ್ರಮದಿಂದ ಒಂದು ತೋಟ ಮಾಡಿ ಅವರು ಸಾವಯವ ಬೆಳೆಯನ್ನು ಬೆಳೆಯುವುದು, ಅಷ್ಟೇ ಅಲ್ಲ, ಅನೇಕ ಕನಸುಗಳನ್ನೂ ಬಿತ್ತಿ ಬೆಳೆಯುತ್ತಿದ್ದಾರೆ. ಕರ್ಮಶೀಲೆಯಾದ ವೇದಾ ಇತರರನ್ನು ಕಾರ್ಯತತ್ಪರರನ್ನಾಗಿ ಮಾಡಿ, ದುಡಿದು ಉಣ್ಣುವ ದಾರಿಯನ್ನು ತೋರಿಸುತ್ತಿದ್ದಾರೆ. ಈ ಆತ್ಮ-ಜೀವನ ಕಥೆಯನ್ನು ಓದುಗ ಸಹೃದಯರು ಪ್ರೀತಿಯಿಂದ ಸ್ವೀಕರಿಸಿ ಎದೆಗಪ್ಪಿಕೊಳ್ಳುತ್ತಾರೆ ಎಂಬುದು ನನ್ನ ಅಚಲ ವಿಶ್ವಾಸ ನಂಬಿಕೆ.

ನಿರೂಪಣಾ ಶೈಲಿ ಮನಮೋಹಕವಾಗಿದೆ. “ಬದುಕು ಎಲ್ಲಕ್ಕಿಂತ ದೊಡ್ದದು" ಎಂಬ ಜೀವನ ಪ್ರೀತಿಯನ್ನು ಸಾಹಿತ್ಯ ಲೋಕಕ್ಕೆ ಕೊಟ್ಟ ವೇದ ಮನೋಹರ ಅವರಿಗೂ, ನಿರೂಪಣೆ ಮಾಡಿದ ಭಾರತಿ ಹೆಗಡೆ ಅವರಿಗೂ ನನ್ನ ಅಭಿನಂದನೆಗಳು."