ಪಂಚಾಮೃತ (ಮಕ್ಕಳ ಕತೆಗಳು)

ಪಂಚಾಮೃತ (ಮಕ್ಕಳ ಕತೆಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ಬಿ.ಎಸ್. ರುಕ್ಕಮ್ಮ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.10/-

ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು.

ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ. ತನ್ನ ಹೊಲದಲ್ಲಿ ಬಾವಿ ತೋಡಲು ಹೊರಟ ಧನಪ್ಪನಿಗೆ ಗಣಪತಿಯ ಸಹಾಯ. ಇಬ್ಬರೂ ಹತ್ತಡಿ ಆಳದ ಬಾವಿ ತೋಡುತ್ತಾರೆ. ಅನಂತರ, ಮಳೆ ಬಂದರೆ ಬಾವಿಯಿಂದ ತೆಗೆದ ಮಣ್ಣೆಲ್ಲ ಕೊಚ್ಚಿ ಹೋಗುತ್ತದೆ ಎಂಬ ಆತಂಕ ಧನಪ್ಪನಿಗೆ. ಹಾಗಾಗಿ ಎರಡನೇ ಬಾವಿ ತೋಡಿ ಅದರಲ್ಲಿ ಮೊದಲನೆಯ ಬಾವಿಯ ಮಣ್ಣನ್ನು ತುಂಬಿಸುತ್ತಾರೆ. ಈಗ, ಎರಡನೇ ಬಾವಿಯ ಮಣ್ಣು ಮಳೆಗೆ ಕೊಚ್ಚಿ ಹೋಗುತ್ತದೆಂಬ ಆತಂಕ ಧನಪ್ಪನಿಗೆ. ಅವರು ಮೂರ್ಖತನದಿಂದ ಮೂರನೇ ಬಾವಿ ತೋಡುತ್ತಾರೆ!

“ಶ್ರೀಮಂತೆ ಆರಿಸಿಕೊಂಡ ಹುಡುಗಿ” ಎಂಬ ಎರಡನೆಯ ಕತೆಯಲ್ಲಿ ಸಿರಿವಂತ ಮಹಿಳೆಯೊಬ್ಬಳಿಂದ ಸೊಸೆಯ ಹುಡುಕಾಟ. ಅವಳು ಪಕ್ಕದ ಹಳ್ಳಿಯಲ್ಲಿ ತನ್ನ ಹುಡುಕಾಟ ಮುಂದುವರಿಸುತ್ತಾಳೆ. ಅಲ್ಲಿನ ಶಾನುಭಾಗರ ಮಗಳು, ಸಿರಿವಂತಳ ಷರತ್ತನ್ನು ಜಾಣತನದಿಂದ ಪೂರೈಸಿ, ಆಕೆಯ ಮನಗೆಲ್ಲುತ್ತಾಳೆ.  

ಮೂರನೇ ಕತೆ “ಮಳೆರಾಯನ ಗುಟ್ಟು”. ಅನಂತರದ ಕತೆ “ಪಂಚಾಮೃತ". ಇದು ಮಂಗಮ್ಮನ ಚತುರ ಮಗಳು ಚೆಂಗಮ್ಮ ಕಾಡಿನಲ್ಲಿ ಒಂದು ಕರಡಿಗೆ ಸಹಾಯ ಮಾಡುವ ಕತೆ. ಐದನೆಯ ಕತೆ “ಆಡಿನ ಆಟ". ಕುಳ್ಳ ಆಡು ಸೊಪ್ಪು ಸಿಗದಿದ್ದಾಗ, ಎತ್ತರದ ಜಿರಾಫೆಯನ್ನು ರೇಗಿಸಿ, ಸೊಪ್ಪು ಪಡೆಯುವ ಕತೆ.

“ಪೂರ್ಣಿಮಾ ಚಂದ್ರಲೋಕಕ್ಕೆ ಹೋದದ್ದು ಆರನೆಯ ಕತೆ. ಮುಂದಿನ ಕತೆ, "ಸಿಗಡಿ ಯಾಕೆ ಒಣಗಲಿಲ್ಲ?” ಎಂಬ ಪಂಜೆ ಮಂಗೇಶರಾಯರ ಸುಪ್ರಸಿದ್ಧ ಕತೆ.

ಎಂಟನೆಯ ಕತೆ ಪ.ವಿ. ಚಂದ್ರಶೇಖರ ಬರೆದ "ಮೇಲುದುರ್ಗದ ನೋಟ". ಇದು ಚಿತ್ರದುರ್ಗದ ಕೋಟೆಗೆ ಸಂಬಂಧಿಸಿದ ಹಲವಾರು ಚಾರಿತ್ರಿಕ ಮತ್ತು ಜಾನಪದ ಕತೆಗಳನ್ನು ಪೋಣಿಸಿರುವ ದೀರ್ಘ ಕಥನ. ಹಲವು ಮಕ್ಕಳೊಂದಿಗೆ ಚಿತ್ರದುರ್ಗದ ಕೋಟೆ ನೋಡಲು ಹೊರಟ ನಾರಾಯಣ ಕಾಕಪ್ಪ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಬೆಟ್ಟವೇರುತ್ತಾ, ಕತೆ ಹೇಳುತ್ತಾ ಸಾಗುತ್ತಾರೆ. ಚಿತ್ರದುರ್ಗ ಕೋಟೆಯ ನೀರಿನ ಆಸರೆಗಳ ಮಕ್ಕಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುವ ಪರಿ ಹೀಗಿದೆ: “ಊರಲ್ಲಿರೋದೇ ಸಂತೇಹೊಂಡ. ರಾಜಾ ಮದಕರಿ ನಾಯಕ ಬಹಳ ಬುದ್ಧಿವಂತೆ. ನಮ್ಮ ಸೀಮೆಗೆ ಮಳೆ ಬಹಳ ಕಡಿಮೆ. ಆದ್ದರಿಂದಲೇ ಇಲ್ಲಿ ದುರ್ಗದ ಮೇಲೆ ಬಿದ್ದ ನೀರು ಒಂದು ಹನಿಯೂ ಪೋಲಾಗದ ಹಾಗೆ ಏರ್ಪಾಡು ಮಾಡಿದ್ದಾನೆ. … ಬಿದ್ದ ಮಳೆ ನೀರೆಲ್ಲ ಗುಡ್ಡಗಳಿಂದ ಸುರಿದು ಮೊದಲು ಗೋಪಾಲಸ್ವಾಮಿ ಹೊಂಡಕ್ಕೆ ತುಂಬುತ್ತೆ. ಅದು ತುಂಬಿ ಉಳಿದ ನೀರು, ತಣ್ಣೀರದೊಣಿ ಮಾರ್ಗವಾಗಿ ಬರಿಗೇರಮ್ಮನ ಹೊಂಡಕ್ಕೆ ಬಂದು ಸೇರುತ್ತೆ. ಅದೂ ತುಂಬಿದ ಮೇಲೆ ನೀರು ಊರೊಳಗೇ ಹರಿದು ಸಂತೇಹೊಂಡಕ್ಕೆ ತುಂಬಿಕೊಳ್ಳುತ್ತೆ.” ಅನಂತರ, ಅಕ್ಕತಂಗಿಯರ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ, ಉಯ್ಯಾಲೆ ಸ್ತಂಭ, ಗಣಪತಿ ದೇವಸ್ಥಾನ, ಕಾಮನ ಹೊಂಡ ಇತ್ಯಾದಿಗಳನ್ನು ತೋರಿಸಿ, ಐತಿಹ್ಯಗಳನ್ನೆಲ್ಲ ತಿಳಿಸಿ, ನಿಧಾನವಾಗಿ ಬೆಟ್ಟವಿಳಿಯುತ್ತಾರೆ.

ಎನ್. ಪ್ರಹ್ಲಾದ ರಾವ ಬರೆದಿರುವ “ಮೀಂಚುಳ್ಳಿ" ಒಂಭತ್ತನೆಯ ಕತೆ. ಮಕ್ಕಳಿಗೆ ಹಕ್ಕಿಗಳ ಬಗ್ಗೆ ಕುತೂಹಲ ಮೂಡುವಂತೆ ಅವುಗಳ ವಿವರಗಳನ್ನು ಹೇಗೆ ತಿಳಿಸಬಹುದು ಎಂಬುದಕ್ಕೆ ಈ ಕತೆಯೊಂದು ಮಾದರಿ.

ಕೊನೆಯ ಕತೆ "ತೋಳ ಮತ್ತು ತುಂಟಿ”. ನಾಲ್ಕೂವರೆ ವರುಷ ವಯಸ್ಸಿನ ಪೋರಿ ದೀಪಿಕಾಳನ್ನು "ಹೇಳಿದ ಮಾತು ಕೇಳದಿದ್ದರೆ ಚಾಮುಂಡಿ ಬೆಟ್ಟದಿಂದ ಇಳಿದು ಬರುವ ತೋಳ ನಿನ್ನನ್ನು ಹೊತ್ತುಕೊಂಡು ಹೋಗುತ್ತದೆ” ಎಂದು ಅಮ್ಮ ಹೆದರಿಸುತ್ತಾಳೆ. ಆದರೆ ಆ ಪೋರಿ ಹೆದರೋದೇ ಇಲ್ಲ. ಅಮ್ಮ ಹೇಳಿದ ಕತೆಯನ್ನೇ ರೂಪಾಂತರಗೊಳಿಸಿ ಹೇಳಿ ನಕ್ಕು ಬಿಡುತ್ತಾಳೆ.