ಪಂಚಾಯಿತಿಗಳಲ್ಲಿ ಹಸ್ತಕ್ಷೇಪದಿಂದ ಅಧಿಕಾರ ವಿಕೇಂದ್ರೀಕರಣಕ್ಕೆ ಧಕ್ಕೆ

ಗ್ರಾಮ ಪಂಚಾಯತ್ ಗಳು ಸೋತು ಸೊರಗುತ್ತಿವೆ. ಸರಕಾರಗಳು ಇವುಗಳೊಂದಿಗೆ ನಡೆದುಕೊಳ್ಳುವ ರೀತಿ, ಇವುಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ರೀತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಇದನ್ನು ಸೂಚಿಸುತ್ತಿವೆ. ಮುಖ್ಯವಾಗಿ ಈಗ ನಡೆಯುತ್ತಿರುವುದು ಗ್ರಾಮ ಪಂಚಾಯತ್ ಗಳ ಆದಾಯ ಮೂಲವನ್ನು ಬತ್ತಿಸುತ್ತಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಗಳ ಹಸ್ತಕ್ಷೇಪದ ವೈಖರಿ. ಪಂಚಾಯತಿಗಳ ಆರ್ಥಿಕ ಶಕ್ತಿಯ ಮೂಲವಾದ ಹಕ್ಕು ಪತ್ರ, ಕಟ್ಟಡ ನಿರ್ಮಾಣ, ಶಾಲೆ, ಕೈಗಾರಿಕೆ, ತೆರಿಗೆ ನಿರ್ಧಾರಕ್ಕೆ ನಿರ್ಣಾಯಕವಾಗಿರುವ ಇ-ಸ್ವತ್ತು ಅಧಿಕಾರವನ್ನು ತಾ.ಪಂ., ಜಿ.ಪಂ. ಗಳಿಗೆ ಒಪ್ಪಿಸುವ ಪ್ರಸ್ತಾಪವಿದೆ. ಈ ಪ್ರಸ್ತಾಪಕ್ಕೇನೋ ಗ್ರಾ.ಪಂ. ಗಳು ತಿರುಗಿ ಬಿದ್ದಿವೆ. ಗ್ರಾಮದ ಜನರಿಗೆ ಮೂಲ ಸೌಕರ್ಯ ಒದಗಿಸುವ ಪಂಚಾಯಿತಿಗಳ ಸ್ವಾವಲಂಬನೆ ಹಾಗೂ ಸಬಲೀಕರಣಕ್ಕೆ ಇದು ದೊಡ್ದ ಧಕ್ಕೆ. ಈ ಪ್ರಸ್ತಾಪಕ್ಕೂ ಮುನ್ನವೇ ಗ್ರಾಮ ಪಂಚಾಯತಿಗಳ ಅನೇಕ ಅಧಿಕಾರಗಳಲ್ಲಿ ಮೇಲಧಿಕಾರಿಗಳು ಸಾಕಷ್ಟು ಸುತ್ತೋಲೆಗಳ ಮೂಲಕ ಈಗಾಗಲೇ ಹಸ್ತಕ್ಷೇಪ ಮಾಡಿದ್ದಾರೆ.
ಸ್ಥಳೀಯ ಜನರ ನಿಕಟ ಮತ್ತು ನೇರ ಸಂಬಂಧ ಹೊಂದಿರುವ ಗ್ರಾ.ಪಂ.ಸದಸ್ಯರಿಗೆ ಎಲ್ಲ ವಿವರಗಳು ತಿಳಿದಿರುವುದರಿಂದ, ಈ ಪ್ರಕ್ರಿಯೆ ಸುಲಭ, ಸರಳವಾಗಿರುತ್ತದೆ. ಇದು ಇನ್ನೂ ಮೇಲಕ್ಕೆ ಹೋದರೆ ಲಂಚ ರುಷುವತ್ತುಗಳು ತಾಂಡವವಾಡಲು ಪ್ರಾರಂಭವಾಗುತ್ತವೆ. ಎಲ್ಲ ಬಗೆಯ ಅಧಿಕಾರ ಕೇಂದ್ರೀಕರಣದಲ್ಲಿ ಆಗುವುದು ಇದೇ. ಇದಕ್ಕಾಗಿಯೇ ಅಧಿಕಾರ ವಿಕೇಂದ್ರಿಕರಣ ಪರಿಕಲ್ಪನೆ ಇರುವುದು. ಗ್ರಾ.ಪಂ. ಗಳು ೫೦ ಸಾವಿರ ರೂ.ನ ಬ್ಯಾಂಕ್ ಹಣ ಹಿಂತೆಗೆತಕ್ಕೂ ತಾ.ಪಂ. ಅನುಮತಿ ಪಡೆಯಬೇಕು ಎಂದರೆ ಏನರ್ಥ?
ಆಡಳಿತ ವಿಕೇಂದ್ರಿಕರಣದ ಪರಮೋನ್ನತ ಮಾದರಿ ಎಂದರೆ ನಮ್ಮ ಪಂಚಾಯತ್ ರಾಜ್ ವ್ಯವಸ್ಥೆ. ಗ್ರಾಮೀಣರ ಕೈಗಳಲ್ಲಿ ಅಧಿಕಾರವನ್ನು ತಂದುಕೊಟ್ಟಿರುವ ಇದು ಗಾಂಧೀಜಿಯವರ ಕನಸಿನ ಕೂಸು. ಸಂವಿಧಾನಕ್ಕೆ ೭೩ನೇ ತಿದ್ದುಪಡಿ ತಂದು, ಪಂಚಾಯತ್ ರಾಜ್ ಕಾಯಿದೆ-೧೯೯೩ ಜಾರಿಗೊಳಿಸಿ, ಆಡಳಿತದಲ್ಲಿ ವಿಕೇಂದ್ರಿಕರಣ ವ್ಯವಸ್ಥೆ ತರಲಾಗಿದೆ. ಗ್ರಾಮ ಪಂಚಾಯತ್ ಗಳ ಅಸ್ತಿತ್ವದ ಜೊತೆಗೆ ಸ್ಥಳೀಯ ಸಂಪನ್ಮೂಲಗಳಿಂದಲೇ ಸ್ಥಳೀಯ ಅಭಿವೃದ್ಧಿ ನಿರ್ಧರಿಸುವ ಅಧಿಕಾರವನ್ನು ಈ ಕಾಯಿದೆಯ ಸೆಕ್ಷನ್ ೫೮ರ ಅಡಿಯಲ್ಲಿ ನಾನಾ ಹೊಣೆಗಾರಿಕೆಗಳ ಮೂಲಕ ಜನಸಾಮಾನ್ಯರ ಪ್ರತಿನಿಧಿಗಳಿಗೆ ನೀಡಲಾಗಿದೆ. ಹೀಗಾಗಿ ಉತ್ತರದಾಯಿತ್ವ ಈಗ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರ ಮೇಲಿದೆ. ಆದರೆ ಅಧಿಕಾರವೆಲ್ಲಾ ಅಧಿಕಾರಿಗಳ ಕೈಯಲ್ಲಿದೆ ಎಂಬಂತಾಗಿದೆ. ಹೀಗಾದರೆ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಪರಿಕಲ್ಪನೆಯೇ ನಾಶವಾಗುತ್ತದೆ. ಗ್ರಾಮ ಗ್ರಾಮಕ್ಕೂ, ಮನೆ ಮನೆಗೂ ಪ್ರಜಾಪ್ರಭುತ್ವದ ಪ್ರಾತಿನಿಧ್ಯದ ಆಶಯವನ್ನು ತಲುಪಿಸುವ ಉದ್ದೇಶದಿಂದ, ಗ್ರಾಮಗಳ ಅಭಿವೃದ್ಧಿ ಅವುಗಳ ಕೈಯಲ್ಲೇ ಇರಬೇಕು ಎಂದು ಚಿಂತನೆಯಿಂದ ಆರಂಭವಾದುದು ಪಂಚಾಯತ್ ವ್ಯವಸ್ಥೆ. ಕಾಲಕಾಲಕ್ಕೆ ಇವುಗಳನ್ನು ಬಲಪಡಿಸುವ, ಹೆಚ್ಚಿನ ಅಧಿಕಾರವನ್ನು ಇವುಗಳಿಗೆ ಕೊಡುವ, ಹೆಚ್ಚಿನ ಅನುದಾನವನ್ನು ಕೊಡಮಾಡುವ, ಅವು ಮಾಡಿದ ಕೆಲಸಗಳನ್ನು ಮೆಚ್ಚಿ ಗುರುತಿಸಿ ಗೌರವಿಸುವ ಕೆಲಸ ಸರಕಾರದಿಂದಲೂ ಸಕ್ಷಮ ಪ್ರಾಧಿಕಾರಗಳಿಂದಲೂ ಆಗಬೇಕು. ಇತ್ತೀಚೆಗೆ ತಮ್ಮೂರನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡುವ ಕನಸಿನೊಂದಿಗೆ ಬಹಳಷ್ಟು ಯುವ ಸದಸ್ಯರು ಚುನಾಯಿತರಾಗಿ ಬಂದಿದ್ದಾರೆ. ಸರಕಾರ ಹೀಗೆ-ಎಲ್ಲದರಲ್ಲೂ ಮೂಗು ತೂರಿಸಿ ಪಂಚಾಯಿತಿ ಅಧಿಕಾರ ಮೊಟಕುಗೊಳಿಸಿದರೆ ಗ್ರಾಮೀಣ ಯುವಜನತೆ ನಿಸ್ಸಾಹಾಯಕವಾಗುತ್ತದೆ; ವ್ಯಗ್ರತೆಗೂ ಒಳಗಾಗಬಹುದು.
ಕೃಪೆ: ವಿಜಯ ಕರ್ನಾಟಕ - ಸಂಪಾದಕೀಯ - ದಿನಾಂಕ ೦೫-೦೧-೨೦೨೨