ಪಂಜರದ ಗಿಳಿ
ಒಳಗೊಳಗೆ ಮೌನದಲಿ ಕೊರಗುತಿದೆ
ಪಂಜರದ ಗಿಳಿ
ಒಡಲಾಳದ ನೋವುಗಳ ಅರುಹುತಿದೆ
ಪಂಜರದ ಗಿಳಿ
ಓವಣವ ತೋರಿಸುವರಿಲ್ಲದೆ
ಬಳಲಿ ಬೆಂಡಾಗಿದೆ
ಓಪಳನು ಅರಸುತ್ತ ಸೊರಗುತಿದೆ
ಪಂಜರದ ಗಿಳಿ
ಒಂಟಿಯಾಗಿ ಬಂಧನದಿ ಅಶ್ರುಧಾರೆ
ಅಹರ್ನಿಶಿ ಹರಿಸಿದೆ
ಒದ್ದಾಡಿ ಹಾರಾಡದೆ ತಿರುಗುತಿದೆ
ಪಂಜರದ ಗಿಳಿ
ಓಲೈಸುವ ಲೋಗರ ಪ್ರೀತಿಯನು
ದೂರ ಇರಿಸಿದೆ
ಓಘದಲಿ ಏಕಾಂತ ಬಯಸುತಿದೆ
ಪಂಜರದ ಗಿಳಿ
ಒಲವಿನ ನುಡಿಯನು ಅಭಿನವನು
ಹೇಳುತಿಹನು
ಒಂದೆ ಮನಸ್ಸಲ್ಲಿ ಕುಣಿಯುತಿದೆ
ಪಂಜರದ ಗಿಳಿ
-ಶಂಕರಾನಂದ ಹೆಬ್ಬಾಳ