ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೦
ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ.
‘ಜೋಗುಳ ಹಾಡು'
ಜೋಗುಳ ಹಾಡನ್ನು ಲಾಲಿಸು, ಜೋ ! ಜೋ!
ತೂಗುವೆ ತೊಟ್ಟಿಲ, ಮಲಗಿರು, ಜೋ ! ಜೋ !
ಸುಮಲತೆಗಳ ಪರಿಮಳವ ಬಿತ್ತರಿಸಿ
ಕಮಲದ ಕೋಮಲ ಗಂಧವ ಬೆರಸಿ,
ಮಂದ ಮಾರುತವು ಬೀಸುತ್ತಿರಲಿನಿಸು,
ತಂದೆ, ತಂದಿಹೆನೊಂದು ಮುದ್ದಿನ ಕನಸು.
ಮೊದಲೆವೆಗಳನು ಮುಕುಳಿಸೆನ್ನ ಸಿರಿಯೇ !
ತೊದಲನ್ನು ನಿಲ್ಲಿಸೆನ್ನಯ ಹೊನ್ನ ಮರಿಯೇ !
ಸದ್ದು ಮಾಡಲು ಬೇಡ ನೀ ಶಾಂತನನಿಸು !
ಕದ್ದು ತಂದಿಹೆನೊಂದು ಮುದ್ದಿನ ಕನಸು !
ರವಿ ಮುಳುಗಿಹನು, ಕಂದಿತು ಸಂಜೆಗಿಂಪು ;
ಸವಿಯಾಗಿ ಕಾಂಬುದು ಚಂದ್ರನ ಸೊಂಪು.
ನೊಂದಿಸು ನಿನ್ನಯ ಮಾಯೆಯ ಮುನಿಸು !
ತಂದೆನಿಗೋ, ಚಿಕ್ಕ ಮುದ್ದಿನ ಕನಸು !
ತನುಮನ ಧನವನರ್ಪಿಸಿ ಮೋದದಿಂದಾ
ವಿನಿಯೋಗಿಸುತ ಬಲು ಸಾಸಿಗನೆನಿಸು !
ಜನನ ಭೂಮಿಯ ಸೇವೆಯನು ಮಾಡೊ ಕಂದಾ !
ಜನುಮ ಎಂಬುದು ಪುಟ್ಟ ಮುದ್ದಿನ ಕನಸು.
ಮಲಗೊ! ವಿಶ್ರಮಿಸೆನ್ನ ಮೋಹದ ಗೊಂಬೆ !
ಮಲಗೊ ! ಗಲ್ಲವನೊತ್ತಿ ನಾ ಬೇಡಿಕೊಂಬೆ,
ರಂಗನಾಥನೆ ! ಸರ್ವದಾ ನೀ ಸಮನಿಸು,
ಮಂಗಳಕರವಾದ ಮುದ್ದಿನ ಕನಸು.
(‘ಆನಂದ' ಕವನ ಸಂಕಲನದಿಂದ ಸಂಗ್ರಹಿತ)