ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೩
ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ‘ಡೊಂಬರ ಚೆನ್ನೆ' ಎನ್ನುವ ದೀರ್ಘ ಕವಿತೆಯ ಕೊನೆಯ ಭಾಗವನ್ನು ಪ್ರಕಟ ಮಾಡಲಿದ್ದೇವೆ. ಈ ಮೂಲಕ ಪಂಜೆಯವರು ಬರೆದ ಕೆಲವು ಮಕ್ಕಳ ಪದ್ಯಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಿದ್ದೇವೆ. ಇದರೊಂದಿಗೆ ಈ ಸರಣಿ ಮುಕ್ತಾಯವಾಗುತ್ತದೆ. ಮುಂದಿನ ವಾರ ಹಳೆಯ ಕವಿತೆಗಳ ಸಂಗ್ರಹದೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ…
ಡೊಂಬರ ಚೆನ್ನೆ - ೩
ಒಡನೆ ಡೊಂಬನು ಡೋಲು ಬಡಿದನು,
ಬಡಿದು ಗುಡುಗುಡು ಗುಡುಗಿದಾ,
ಗುಡುಗಿ ಓಡಿದ, ಓಡಿ ತೋರಿದ
ಗಿಡುಗನನು ಗಳೆ ಗುಬ್ಬಿಗೆ.
ಹೀಗೆ ತೋರಿಸಿ ಮಾಯವಾದನು.
ಲಾಗದಲಿ ಕಳದಾಚೆಗೆ ಹೋಗಿ ಹೋದನು,
ಸನ್ನೆ ಮಾಡುತ ಕೈಗಳಿಂದಾ ಹುಡುಗಿಗೆ.
ಕಣ್ಣು ಕತ್ತಲೆಗೊಳಿಪ ಗಣೆಯಿಂ ಹೆಣ್ಣು ಧುಮುಕಿತು ಹೊಳೆಯಲಿ-
ಬಣ್ಣ ಕಿಡಿಯಲಿ ಬಿದ್ದು ಬಾನಿಂ ತಣ್ಣಗಾಗುವ ಬಿರುಸಿನೋಲ್.
ಎಲ್ಲಿ ? ಹೋ ! ಹೋ ! ಹೋಯ್ತು ! ಹೋಗಿರಿ !
ಎಲ್ಲಿ ಎಲ್ಲೆಂಬರಸಿನಾ
ತಲ್ಲಣದ ಕಟ್ಟಾಜ್ಞೆಗಾಗಲೆ
ಎಲ್ಲರೋಡಿದರ್ ಅರಸುತಾ.
ಆಳು ನಾಲ್ವರು ದಡಕೆ ಹಾಯ್ದರು,
ಆಳವಿಹ ಹೊಳೆ ನೀರಲಿ
ಆಳುವೇಳುವ ಇಬ್ಬರನು ತಮ್ ಆಳುವವನೆಡೆಗೊಯ್ದರು.
ಗದ್ದಿಗೆಯ ಬಳಿ ಕೆಡವಿದರು -ನೀರ್
ಮೆದ್ದ ಉದ್ದಿನ ತೊಗಲಿನಾ ಬಿದ್ದ ಮೋರೆಯ ನಿದ್ದೆಗಣ್ಣಿನ,
ಒದ್ದೆ ಕೂದಲ ಡೊಂಬನಾ.
“ದೇವ ಬಂಗರೆ ! ಕರೆವುದೆನ್ನನು,...
... ಸಾವು ... ಬಾಗಿಲು ತೆರೆದಿದೆ ! ... ಜೀವನಿಲ್ಲದು ; …
ಅರ್ಕೆ ಮಾಡುವೆ ; ಕಾವುದೆನ್ನಪರಾಧವಾ .....
“ಹಿಂದೆ ನಾಲ್ಕ್ -ಕೈ ವರ್ಷಗಳ ಕೆಳಗೊಂದು ಸಲ ನಾನಿಲ್ಲಿಗೆ
ಬಂದು ಗೈದಾಟಕೆ ಪಾದದ ತಂದೆ ತಂಗಿ ಸುನಂದೆಯು -”
ಎಂದು ನಿಲ್ಲಲು ಡೊಂಬನರೆನುಡಿ, “ಮುಂದೆ, ಮುಂದೆ" ನೆ ಬಂಗರು,
“ಮುಂದೆ ತಮ್ಮ ಸುನಂದೆ ... ಕಿರಿಮಗಳೊಂದಿಗರಮನೆ ... ಬಿಟ್ಟಳು.
“ಅಂದು ರತ್ನಾವತಿಗೆ ತುಂಬದು ಒಂದು ವರ್ಷವು, ಕೂಸಿನಾ
ಮುಂದು ಎಣಿಸದೆ, ನಿಂದೆ ಗಣಿಸದೆ... ಹಿಂದೆ ಬಂದಳು ಪಾಪಿಯಾ.
“ಸಂದವಿಂದಿಗೆ ವರ್ಷಗಳು ಹನ್ನೊಂದು, - ಸತ್ತು ಸುನಂದೆಯು,
ಅಂದಿನಿಂದಿದು ಕೋಗಿಲೆಯ ಮರಿ ಕಾಗೆ ನಾನೆನೆ ಆಯಿತು.
“ಇವಳೆ ರತ್ನಾವತಿಯು; ಮುಂಚಿತ ಇವಳ ಹೆಸರದು ರನ್ನೆಯು ;
ಇವಳೆ ಕೊಳೆ ಸೋಕದ ಸುಕನ್ಯೆಯು ; ಇವಳೆ ಡೊಂಬರ ಚೆನ್ನೆಯು.
“ಆರಿ ದೂರಕೆ ಅಲೆದ ಕಡಲಿನ ನೀರೆ ಕಡಲನೆ ಕೂಡಿತು, ....
... ಬೇರೆ ! ... ಹಾ ! ... ಹಾ !” ಎಂದು ಡೊಂಬನು ತೀರಿಸದೆ ಕಣ್ಮುಚ್ಚಿದಾ.
ಅಳಿದಡೊಂಬಗೆ ಉತ್ತರಕ್ರಿಯೆಗಳನು ಬಂಗರು ಮಾಡಿಸಿ,
ಗಳೆಯ ಡೊಂಬರ ಚೆನ್ನೆಯನು ಮದುವಳಿಗ ಕೈಯಲಿ ಹಿಡಿದನು.
ತನ್ನ ರಾಜ್ಯದ ಪಾಲು ಬಳುವಳಿಯನ್ನು ಕೊಟ್ಟನೆ ರನ್ನೆಗೆ.
ಚೆನ್ನೆ ಸಂತತಿಗಾಯ್ತು ಅದರಿಂ ಹೆಸರು ಡೊಂಬಾ ಹೆಗ್ಗಡೆ.
(ಮುಗಿಯಿತು)
-’ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನ