ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧

ಹಳೆಯ, ಅಪರೂಪದ ಕವಿಗಳು ಮತ್ತು ಅವರು ಬರೆದ ಕವನಗಳನ್ನು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಪ್ರಕಟಿಸುತ್ತಾ ಬಂದಿದ್ದು, ಈ ಮಾಲಿಕೆ ಕಳೆದ ವಾರಕ್ಕೆ ಮುಕ್ತಾಯಗೊಂಡಿದೆ. ಈ ವಾರದಿಂದ ಮಕ್ಕಳ ಕವಿ ಎಂದೇ ಖ್ಯಾತರಾಗಿದ್ದ ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳನ್ನು ಸಂಗ್ರಹಿಸಿ ನೀಡುತ್ತಿದ್ದೇವೆ. “ಪಂಜೆ ಮಂಗೇಶರಾಯರ ಮಕ್ಕಳ ಸಾಹಿತ್ಯ" ಎಂಬ ಕೃತಿಯ (ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು) ಕುರಿತಾದ ಪುಸ್ತಕ ಪರಿಚಯವು ‘ಸಂಪದ' ಜಾಲತಾಣದಲ್ಲಿ ಈಗಾಗಲೇ (ಅಗೋಸ್ಟ್ ೧೪, ೨೦೧೯) ಪ್ರಕಟವಾಗಿದೆ. ಈ ಕೃತಿಯನ್ನು ೧೯೭೩ರಲ್ಲಿ ಮುದ್ರಿಸಲಾಗಿದ್ದು, ಅವುಗಳು ಕ್ರಮೇಣ ಅಲಭ್ಯವಾದ ಕಾರಣ ಅಂಕಿತ ಪುಸ್ತಕ ಪ್ರಕಾಶನದವರು ೨೦೧೫ರಲ್ಲಿ ಮರು ಮುದ್ರಣ ಮಾಡಿದ್ದಾರೆ.
ಪಂಜೆ ಮಂಗೇಶರಾಯರು ಬರೆದ ಈ ಕವನಗಳು ಬಹಳ ಅಪರೂಪವಾದವುಗಳು. ಅವುಗಳ ಪರಿಚಯ ಈಗಿನ ಕಾಲದ ಮಕ್ಕಳಿಗೂ ತಿಳಿಯಪಡಿಸುವ ದೃಷ್ಟಿಯಿಂದ ಆ ಕವನ ಸಂಕಲನದ ಕವನಗಳನ್ನು ಒಂದೊಂದಾಗಿ ‘ಸಂಪದ' ದಲ್ಲಿ ಪ್ರಕಟಿಸಲಿದ್ದೇವೆ. “ಪಂಜೆಯವರು ಈ ಮಕ್ಕಳ ಪದ್ಯಗಳನ್ನು ರಚಿಸಿ ಸರಿಸುಮಾರು ನೂರು ವರ್ಷಗಳಾಗಿದ್ದರೂ ಇಂದಿಗೂ ಅವುಗಳ ತಾಜಾತನ ಮಾಸಿಲ್ಲ. ಕನ್ನಡದಲ್ಲಿ ಮಕ್ಕಳ ಪದ್ಯಗಳನ್ನು ಬರೆಯಲು ಯಾರೂ ಸಾಹಸ ಮಾಡದೇ ಇದ್ದಾಗ ಪಂಜೆಯವರು ಈ ಕೆಲಸ ಮಾಡಿ ಯಶಸ್ವಿಯಾದರು.” ಎಂಬುದು ಈ ಕೃತಿಯ ಪ್ರಕಾಶಕರ ಮಾತು. ಈ ಕವನಗಳಿಗೆ ರೇಖಾ ಚಿತ್ರಗಳನ್ನು ರಚಿಸಿ ಜೀವತುಂಬುವ ಕೆಲಸ ಮಾಡಿದ್ದಾರೆ ಶ್ರೀ ಬಿ ವಿ ರಾಮಮೂರ್ತಿಯವರು.
ಈ ಕೃತಿಯಲ್ಲಿ ೨೧ ಕವನಗಳು ಇವೆ. ಕೆಲವು ದೀರ್ಘವಾಗಿವೆ. ಈ ವಾರ ನಾವು ಪಂಜೆಯವರ ಎರಡು ಪುಟ್ಟ ಕವನಗಳನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇವೆ.
ಆಡಿನಾ ಮರೀ!
ಆಡಿನಾ ಮರೀ, ಆಡ ಬಾರಲೇ !
ಓಡ ಬೇಡಲೆ, ನೋಡಿ ನನ್ನನು!
ಅರಳಿ ಎಲೆಯನೂ, ಹಲಸಿನೆಲೆಯನೂ,
ಹುರುಳಿ ಕಡಲೆಯಾ, ಕಲಸಿ ಕೊಡುವೆನು.
ಮಾತನಾಡದೇ, ನನ್ನ ನೋಡದೆ,
ಏತಕೋಗುವೆ? ಆಡಿನಾ ಮಗೂ !
***
ಸೂರ್ಯೋದಯ
ಕೆಂಪಿನ ಓಕುಳಿ ಸ್ನಾನದಲಿ,
ಇಂಪಿನ ಕೋಗಿಲೆ ಗಾನದಲಿ,
ಬಾನಿನ ಗದ್ದಿಗೆ ಏರಿದನು,
ಭಾನುವು ಹೊಂದಲೆ ತೋರಿದನು.
ಆ ದಿನನಾಥನ ಮೂರುತಿಗೆ
ಆದವು ಹೂಗಳು ಆರತಿಗೆ,
ಕೋಳಿಯು ಕಹಳೆಯ ಊದಿದುದು,
ಗಾಳಿಯು ರಾಯಸ ಓದಿದುದು.
***
(ಎರಡೂ ಕವನಗಳು ‘ಕವಿ ಶಿಷ್ಯ' ಸಂಕಲನದಿಂದ ಆಯ್ದುಕೊಳ್ಳಲಾಗಿದೆ)