ಪಂಜೆಯವರ ಮಕ್ಕಳ ಪದ್ಯಗಳು (ಭಾಗ ೨)

ಪಂಜೆಯವರ ಮಕ್ಕಳ ಪದ್ಯಗಳು (ಭಾಗ ೨)

ಕಳೆದ ವಾರ ಪ್ರಾರಂಭಿಸಿದ ‘ಪಂಜೆಯವರ ಮಕ್ಕಳ ಪದ್ಯಗಳು' ಮಾಲಿಕೆಗೆ ಬಹಳ ಮೆಚ್ಚುಗೆಗಳು ಬಂದಿವೆ. ಬಹಳಷ್ಟು ಹಳೆಯದಾದ ಈ ಪದ್ಯಗಳು ಈಗ ಕಾಣಸಿಗುವುದೇ ಅಪರೂಪವಾಗಿದೆ. ಈ ವಾರ ನಾವು ಈ ಕೃತಿಯಿಂದ ಎರಡು ಪುಟ್ಟ ಮಕ್ಕಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಓದಿ ಅದರ ಸ್ವಾದವನ್ನು ಅನುಭವಿಸಿ, ಪ್ರತಿಕ್ರಿಯೆಯಲ್ಲಿ ಅಭಿಪ್ರಾಯ ತಿಳಿಸಿ…

ಚಂದ್ರನನ್ನು ತಾ !

ತಾರಮ್ಮಯ್ಯ, ತಂದು ತೋರಮ್ಮಯ್ಯ !

ದೂರದ ಬಾನೊಳು ಏರಿದ ಚಂದ್ರನ

ತಾರಮ್ಮಯ್ಯ ತಂದು ತೋರಮ್ಮಯ್ಯ !

 

ಹರಿಯುವ ನೀರಿನ ಪರಿಯ ಬಾನಿನ ಮೇಲೆ

ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು-ತಾರಮ್ಮಯ್ಯ

 

ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ 

ಕಣ್ಣಿಗೆ ಕಾಣುವ ಹುಣ್ಣಿಮೆ ಚಂದ್ರನ -ತಾರಮ್ಮಯ್ಯ 

 

ಹೊಳೆಯುವ ಬಾನಿನ ತಳದಲ್ಲಿ ಮೂಡುತ,

ಮುಳುಗುವ ಬೆಳ್ಳಿಯ ಗಳಿಗೆಯ ಬಟ್ಟಲನ್ನು -ತಾರಮ್ಮಯ್ಯ

 

ರಂಗನಾಥನ ಮನೆ ಅಂಗಳದಲಿ ಇದ್ದು,

ಕಂಗೊಳಿಸುವ ಚೆಲು ತಿಂಗಳ ದೀವಿಗೆ - ತಾರಮ್ಮಯ್ಯ

***

ಹಾವಿನ ಹಾಡು

ನಾಗರ ಹಾವೆ ! ಹಾವೊಳು ಹೂವೆ !

ಬಾಗಿಲ ಬಿಲದಲಿ ನಿನ್ನಯ ಠಾವೆ ?

ಕೈಗಳ ಮುಗಿವೆ, ಹಾಲನ್ನೀವೆ !

ಬಾ ಬಾ ಬಾ ಬಾ ಬಾ ಬಾ ಬಾ ಬಾ

 

ಹಳದಿಯ ಹೆಡೆಯನು ಬಿಚ್ಚೋ ಬೇಗಾ !

ಹೊಳಹಿನ ಹೊಂದಲೆ ತೂಗೋ ನಾಗಾ !

ಕೊಳಲನ್ನೂದುವೆ ಲಾಲಿಸು ರಾಗಾ,

ನೀ ನೀ ನೀ ನೀ ನೀ ನೀ ನೀ ನೀ

 

ಎಲೆ ನಾಗಣ್ಣಾ ! ಹೇಳೆಲೊ ನಿನ್ನಾ

ತಲೆಯಲಿ ರನ್ನವಿಹ ನಿಜವನ್ನಾ,

ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ

ತಾ ತಾ ತಾ ತಾ ತಾ ತಾ ತಾ ತಾ 

 

ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ,

ಎರಡಲೆ ನಾಲಗೆ ಇದ್ದರು ಸುಮ್ಮಗೆ 

ಎರಗುವೆ ನಿನಗೆ, ಈಗಲೆ ಹೊರಗೆ

ಪೋ ಪೋ ಪೋ ಪೋ ಪೋ ಪೋ ಪೋ ಪೋ

***

(ಎರಡೂ ಕವನಗಳನ್ನು ‘ಕವಿಶಿಷ್ಯ' ಸಂಕಲನದಿಂದ ಆಯ್ದುಕೊಳ್ಳಲಾಗಿದೆ)