ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೩

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೩

ಉದಯ ರಾಗ

ಮೂಡುವನು ರವಿ ಮೂಡುವನು ; ಕತ್ತಲೊಡನೆ ಜಗಳಾಡುವನು ;

ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.

 

ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು ;

ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು.

 

ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು ;

ತೆಂಗಿನ, ಕಂಗಿನ, ತಾಳೆಯ, ಬಾಳೆಯ ಅಂಗಕೆ ರಂಗನು ಮೆತ್ತುವನು .

 

ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು;

ಕೂಡಲೆ ಕೋಣೆಯ ಕತ್ತಲೆ ಕೊಳೆಯನು ತೊಳೆಯುವನು, ರವಿ ಹೊಳೆಯುವನು.

 

ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು, ಕಣ್ ಬಿಡಿಸುವನು; 

ಹುಲು, ಗಿಡ, ಹೂವಿಗೆ ಪರಿಪರಿ ಬಣ್ಣವ ಉಡಿಸುವನು, ಹನಿ ತೊಡಿಸುವನು.

 

ಏರುವನು ರವಿ, ಏರುವನು ; ಬಾನೊಳು ಸಣ್ಣಗೆ ತೋರುವನು ;

“ಏರಿದವನು ಚಿಕ್ಕನಿರಬೇಕೆಲೆ" ಎಂಬಾ ಮಾತನು ಸಾರುವನು.

***

ನಕ್ಷತ್ರ

ಮಿನುಗೆಲೆ, ಮಿನುಗೆಲೆ ನಕ್ಷತ್ರ !

ನನಗಿದು ಚೋದ್ಯವು ಬಹು ಚಿತ್ರ !

ಘನ ಗಗನದಿ ಬಲು ದೂರದಲಿ

ಮಿನುಗುವೆ ವಜ್ರಾಕಾರದಲಿ.

 

ತೊಳಗುವ ಸೂರ್ಯನು ಮುಳುಗುತಲೆ,

ಬೆಳಕದು ಕಾಣದು ಕಳೆಯುತಲೆ,

ಹೊಳಪದು ಕೊಡುತಿಹೆ ನನಗಂದು ;

ತಳತಳಿಸುವೆ ಇರುಳಲಿ ನಿಂದು ,

 

ಅಂದಾ ದಾರಿಗ ಕೆಂಗಿಡಿಗೆ

ವಂದಿಸಿ, ಹೋಗುವನಡಿಗಡಿಗೆ

ಕುಂದಲು ನಿನ್ನಯ ಮಿಣುಕು ಲವಂ

ಮುಂದಿನ ಹಾದಿಯ ಹಾಣನವಂ

 

ದೂರದ ಬಾನೊಳು ಹೊಂಚುತಿಹೆ ;

ಬಾರಿಗೆ ಬಾರಿಗೆ ಮಿಂಚುತಿಹೆ.

ತೋರುತ ತೋರದೆ ಮೂಡುತಿಹೆ,

ದಾರಿಗೆ ಹೊಳಪನು ಮಾಡುತಿಹೆ.

 

ನನಗರಿಯದೊಡೇಂ? ಇದು ಚಿತ್ರ !

ಮಿನುಗಲೆ ! ಮಿನುಗಲೆ ! ನಕ್ಷತ್ರ !

***

(ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು- ಕೃತಿಯಿಂದ ಆಯ್ದ ಕವನಗಳು)