ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೪

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೪

ಪಂಜೆ ಮಂಗೇಶರಾಯರ ಹಳೆಯದಾದ ಮಕ್ಕಳ ಪದ್ಯಗಳು ಇಂದೂ ಪ್ರಸ್ತುತವೇ. ಈ ಬಾರಿ ನಾವು ‘ಜೇಡನೂ ನೊಳವೂ’ ಎನ್ನುವ ಸೊಗಸಾದ ಮಕ್ಕಳ ಪದ್ಯವನ್ನು ಆರಿಸಿ ಪ್ರಕಟ ಮಾಡಿದ್ದೇವೆ.

ಜೇಡನೂ ನೊಳವೂ

ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ,

ಬಾನೊಳಗೆ ಹಾರಿ ಬಲು ದಣುವಾಯ್ತು ನಿನಗೆ.

ನೀನೊಮ್ಮೆ ಬಾ, ನನ್ನ ಹೊಸ ಮನೆಯ ನೋಡು ;

ಈ ನೂಲಿನಾ ಚಾಪೆಯಲಿ ಬಂದು ಕೂಡು “

 

ಆ ಮಾತಿಗಾ ನೊಳವು “ಎಲೆ ಜೇಡ, ಜೇಡ !

ಈ ಮನೆಯ ಉಪಚಾರ, ಹಾ ! ಬೇಡ ಬೇಡ !

ನೀ ಮಾಡಿದಾ ಚಾಪೆ ನನಗೊಂದು ದೂಪೆ,

ಆ ಮರದ ತೂತು ಮನೆ ಇದೆ, ಅಲ್ಲಿ ಪೋಪೆ !”

 

“ಎಲೆ ನೊಳವೆ ! ನಿನ್ನ ತಿರುಗಾಟವನು ನೋಡಿ,

ತಲೆ ತಿರುಗುತಿದೆ ನನಗೆ, ಬಾರೊ, ದಯಮಾಡಿ !

ಎಲೆಯ ಹಾಕಿರುವೆ, ನೀನುಂಡು ಸುಖಿಯಾಗು,

ಮಲಗು ಎಳೆ ಹಾಸಿನಲಿ, ಬಳಿಕೆದ್ದು ಹೋಗು.”

 

“ನಿನ್ನಲ್ಲಿ ಉಂಡವನು ಬೇರೆ ಬಾಳುವನೆ?

ನಿನ್ನಲ್ಲಿ ಮಲಗಿದವ ಮತ್ತೆ ಏಳುವನೆ?

ನಿನ್ನ ಕಥೆಯಂ ಹಿರಿಯರಿಂ ಕೇಳಿ ಬಲ್ಲೆ,

ನಿನ್ನಲ್ಲಿ ಬರಲೊಲ್ಲೆ, ನಾ ಬರಲೊಲ್ಲೆ."

 

“ಮರಿನೊಳವೆ ! ಮರಿನೊಳವೆ ! ನಮ್ಮೊಳಗೆ ನಂಟು

ಇರುವುದೆಂಬುದು ನಮಗೆ ಕೇಳಿ ಗೊತ್ತುಂಟು.

ಮಿರಮಿರನೆ ಮಿರುಗುವಾ ನೂಲಿಂದ ನೇದು

ಅರಿವೆ ಉಡುಗೊರೆ ಕೊಡಲು ನಾನಿರುವೆ ಕಾದು."

 

“ಕಾದುವವ ನಾ ಅರಿವೆ' ಎಂಬುದು ಸಹಜವು.

ನೇದ ಹೊಸ ಅರಿವೆ ಹೊದೆದರೆ ಸಾವು ನಿಜವು.

ಆದರವು ಸಾಕು, ಜೇಡನೆ ! ಸಾಕೆ"ನುತ್ತ,

ಹಾದಿ ಹಿಡಿದಾ ನೊಳದ ಮರಿ ಹೋದುದತ್ತ.

 

ಇತ್ತ ಜೇಡನು ಬಳಿಕ ತಿರುಗುತಿರುಗುತ್ತ,

ಕಿತ್ತು ತನ್ನಯ ಮೈಯ ಮಯಣ ಹೊಸೆಯುತ್ತ,

ಹೊತ್ತು ನೋಡಿತು ನೊಳವ ತಿನ್ನುವೆನೆನುತ್ತ,

ಮತ್ತೊಮ್ಮೆ ಕೂಗಿದುದು, ಬರಿದೆ ಹೊಗಳುತ್ತ.

 

“ಅರೆರೆ ನೊಳಮರಿ ! ಬೊಂಬೆ ! ಮೈಗಂಧ ನಿಂಬೆ !

ಹರಿ ನೀಲ ಕಣ್ಗೊಂಬೆ ನೋಡಿ ಸೊಗಗೊಂಬೆ !

ಗರಿ ಪಚ್ಚೆಯಲಿ ತುಂಬೆ, ಹಾ ಹಾ ! ಹೊಸ ತುಂಬೆ !

ಸ್ವರವು ಝೇನ್ -ಝೇನೆಂಬೆ, ಮಧುರವಿನಿತಿಂಬೆ."

 

ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ,

ಬೇಳೆ ಕಿವಿಯಲಿ ಮಾತು ನೊಳ ಉಬ್ಬಿತಂತೆ ;

ಆಳನೋಡದೆ ಮಡುವಿನಲಿ ಧುಮುಕುವಂತೆ

ಬೋಳು ತಲೆ ನೊಳವು ಬಲೆಯಲಿ ಹಾರಿತಂತೆ.

 

ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ

ಪಿಳ್ಳೆನೊಳ ಮೈಯೇರಿ ಮುಳ್ಳುಗಳನೂರಿ,

ಚಿಳ್ಳೆಂದು ವಿಷಕಾರಿ, ನೆತ್ತರನು ಹೀರಿ,

ಕೊಳ್ಳೆಹೊಡೆಯಲು ನೊಳವು ಸತ್ತಿತೈ ಚೀರಿ.

 

ಬಲೆ ಹೊಗದ ನೊಳವನ್ನು ಬರಿ ಹೊಗಳಿ ಕೊಂದಾ.

ಬಲು ಮೋಸದಾ ಜೇಡನೀ ಕಥೆಯಿದೆಂದಾ

ಕೊಲೆಗಾರರಾಡುವ ಮುಖಸ್ತುತಿಗಳಿಂದಾ

ಬಲಿ ಬೀಳ ಬೇಡಂಬುದನು ಕಲಿಯೊ, ಕಂದಾ.

(‘ಕವಿಶಿಷ್ಯ' ಸಂಕಲನದಿಂದ ಆಯ್ದ ಕವನ)