ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೬

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೬

ಈಗಾಗಲೇ ಪಂಜೆ ಮಂಗೇಶರಾಯರು ಮಕ್ಕಳಿಗಾಗಿಯೇ ಬರೆದ ಸೊಗಸಾದ ಹಲವಾರು ಪದ್ಯಗಳನ್ನು ನೀವು ಓದಿ ಆನಂದಿಸಿರುವಿರಿ. ಈ ವಾರ ನಾವು ‘ನಾಗಣ್ಣನ ಕನ್ನಡಕ' ಎನ್ನುವ ಮತ್ತೊಂದು ಸೊಗಸಾದ ಕವನವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ…

ನಾಗಣ್ಣನ ಕನ್ನಡಕ

“ಓಡಿ ಬನ್ನಿರಿ ! ಕೂಡಿ ಬನ್ನಿರಿ ! ನೋಡಿ ಬನ್ನಿರಿ ! ಗೆಳೆಯರೆ !

ನೋಡಿ ನಮ್ಮಯ ಕನ್ನಡಕಗಳ ! ಹಾಡಿ ಹೊಗಳಿರಿ, ಗೆಳೆಯರೆ !

 

“ಊರುಗನ್ನಡಿ ! ಉರುಟು ಕನ್ನಡಿ ! ದೂರನೋಟದ ಕನ್ನಡಿ !

ಓರೆ ಕಣ್ಣಿಗೆ ನೇರು ಕನ್ನಡಿ ! ಮೂರು ಚವುಲಕೆ ಕೊಡುವೆನು.

 

“ಹಸುರು ಹರಳಿದು ! ಹೊಸತು ಹರಳಿದು ! ಕೊಸರು ಕಾಸಿಗೆ ಕೊಡುವೆನು ;

ಬಿಸಿಲು ತಾಗದು, ಬೇನೆಯಾಗದು, ಪಿಸರು ಬಾರದು ಕಣ್ಣಿಗೆ.

 

“ಬಿಳಿಯ ಕನ್ನಡಿ ! ತಿಳಿಯ ಕನ್ನಡಿ !

ಕಳೆಯ ಬೇಡಿರಿ ಸಮಯವಾ ;

ಹಲವು ಜನಕಿದು ಭೂತ ಕನ್ನಡಿ !

ಬಲವ ಕೊಡುವುದು ಕಣ್ಣಿಗೆ !

 

“ಹಣ್ಣುಮುದುಕಗೆ ಚಿಣ್ಣ ಮಕ್ಕಳ

ಕಣ್ಣು ಕೊಡುವಾ ಕನ್ನಡಿ !

ಬಣ್ಣ ಬಣ್ಣದ ಕನ್ನಡಕಗಳು

ಬೆಣ್ಣೆಯಂದದಿ ತಣ್ಣಗೆ.

 

“ಅರಸು ಮೂಗಿನೊಳಗಿದ್ದು, ರಾಜ್ಯದ

ಪರೊಯ ನೋಡುವ ಕನ್ನಡಿ !

ಎರಡು ರೂಪೈ ಬೆಲೆಗೆ ನಿಮ್ಮನು

ದೊರೆಯ ಮಾಡುವ ಕನ್ನಡಿ !

 

“ಬರಹ ಓದದ ಪರೆಯ ಕಣ್ಣನು 

ತೆರೆದು ಕಲಿಸುವುದೆಲ್ಲವಾ !

 

ಅರವು, ಕನ್ನಡದಿರವು, ಇಂಗ್ಲಿಷ್

ಅರಿವು ಬರುವುದು ನಿಮಿಷದಿ !”

 

ಹೀಗೆ ಶ್ಯಾಮನು ಕೂಗಿ ಹೊಗಳುವ

ಸೋಗು ಮಾತನು ಕೇಳುತಾ,

ನಾಗನಪ್ಪನು ತೂಗಿ ತಲೆಯನು,

ಮೇಗೆ ಬಂದನು ಅಂಗಡಿಗೆ.

 

“ಒಳ್ಳೆ ಕನ್ನಡಿ ಬೇಕು ರಾಯರೆ,

ಕೊಳ್ಳಿರೈ ಸರಿ ಬೆಲೆಯನು !

 

ಹಳ್ಳಿ ಮಂದಿಗೆ ಕೊಡಲು ಬಾರದು

ಸುಳ್ಳು ಕನ್ನಡಿ” ಎಂದನು.

 

ಕಾಗದಗಳನು ಕೈಗೆ ಕೊಟ್ಟು,

“ಹೇಗೆ ಕಾಂಬುದು?” ಎಂದನು.

 

“ಆಗಲಾರದು,ತಾಗಲಾರದು"

ನಾಗನಪ್ಪನು ನುಡಿದನು;

 

ಬೇಗ ತೆಗೆದನು ; ಬೇರೆ ಕನ್ನಡಿ

ಬಾಗಿಸಿಟ್ಟನು ಶ್ಯಾಮನು.

 

“ತೋರಲಾರದು, ಸೇರಲಾರದು;

ನೀರು ಹನಿವುದು ಕಣ್ಣಿಲಿ,

ಬೇರೆ ಕನ್ನಡಿ ಬೇಗನೇ ಕೊಡಿ,

ಜಾರಿ ಬೀಳ್ವದು" ಎಂದನು.

 

ಮೂರು ಕನ್ನಡಿ, ಆರು ಕನ್ನಡಿ,

ನೂರು ಕನ್ನಡಿ ತೋರಿದಾ,

ಬಾರಿಬಾರಿಗೂ ನಾಗನೆಂದನು

“ತೋರದೈ ಕನ್ನಡಿಗಳು".

 

ಅದನು ತೆಗೆದನು, ಇದನು ತೆಗೆದನು, ಮುದುಕ ಗ್ರಹಕನ ಮೂಗಿನಾ

ತುದಿಯೊಳಗಿಟ್ಟನು ; ಒಡನೆ ಮುದುಕನು “ಮೊದಲಿನಂತೆಯೆ" ಎಂದನು.

“ಅರಿಕೆ ಮಾಡುವೆ, ಹಿರಿಯ ಅಯ್ಯಾ, ಧರಿಸಬಾರದು ಕೋಪವಾ ;

ಸರಿಯ ಕನ್ನಡಿ ದೊರೆವುದಿಲ್ಲ ... ಅ ... ಕುರುಡು ಉಂಟೇ ಕಣ್ಣಲಿ ?”

 

ಉರಿದು ಬಿದ್ದನು, ಮುದುಕನೆದ್ದನು - “ಹರಳು ಕಲ್ಲನು ಮಾರುವಾ

ಕುರುಡು ರಾಯರ ನೋಳ್ಪ ನಮ್ಮಯ ಎರಡು ಕಣ್ಗಳು ಸರಿ ಇದೆ?”

 

ಸಿಟ್ಟು ನುಡಿಯನು ಕೇಳಿ ಶ್ಯಾಮನು ದಟ್ಟ ಹರಳುಗಳೆರಡನು

ಇಟ್ಟು ಗ್ರಾಹಕನ ಕಣ್ಣ ಮುಂಗಡೆ, ಕೊಟ್ಟ ಕಾಗದ ಕೈಯಲಿ.

 

ಗುಡ್ಡ ಕುಂಬಳದಂತೆ ಬರೆದಿಹ ದೊಡ್ದ ಅಕ್ಷರ ಪತ್ರವಾ

ಅಡ್ಡ ಹಿಡಿದನು - “ಓದಿ, ಸ್ವಾಮೀ, ಅಡ್ಡಿಯಿಲ್ಲದೆ" ಎಂದನು.

 

“ಎಲೆಲೆ ರಾಯರೆ! ತೆಲುಗು ಕನ್ನಡ ಕಲಿಪ ಕನ್ನಡಿ ಬೇಕಿಲ್ವೆ !

ಬೆಲೆಯ ಕೊಡುವೆನು ; ಬೇಗ ತನ್ನಿರಿ, ಚೆಲುವ ಇಂಗ್ಲಿಷ್ ಕನ್ನಡಿ.

 

“ಓದು ಬರಹಗಳೆಮಗೆ ತಿಳಿಯದು, ಓದು ಬರಹವ ತೋರುವಾ

ಬೂದು ಕನ್ನಡಿ ಬೇಕು ರಾಯರೆ, ಬೀದಿಗೆಸೆವುದು ಮಿಕ್ಕವಾ”.

 

ಒರೆದ ಮಾತಿಗೆ ಮತ್ತೆ ಶ್ಯಾಮನು, “ಬರಹ ಕಲಿಸುವ ಕನ್ನಡಿ

ಹರಳು ನಮ್ಮಲ್ಲಿಲ್ಲ, ಸ್ವಾಮೀ, ತೆರಳಿ ಹಳ್ಳಿಯ ಸಾಲೆಗೆ !”

 

ಎಂದು ಶ್ಯಾಮನು ನುಡಿಯಲು ಮುಂದೆ ನಾಗನು “ಸಾಲೆಯೋಳ್

ಚೆಂದ ಕನ್ನಡಿ ಯಾವುದೆನೆ, “ನಗುತೆಂದನಾಗಲೆ ಶ್ಯಾಮನು -

 

“ಅಲ್ಲಿ ಕನ್ನಡಿ ದೊರಕುದಿಲ್ಲವು : ಅಲ್ಲಿ ‘ಕನ್ನಡ' ದೊರೆವುದು !

ಮೆಲ್ಲನಿದ ನೀವ್ ಕಲಿತುಕೊಂಡರೆ, ಎಲ್ಲ ತಾನೇ ಕಾಂಬುದು.”

 

ಹೀಗೆ ಶ್ಯಾಮನು ನುಡಿದ ಮಾತನು ನಾಗನಪ್ಪನು ಕೇಳುತಾ

ಬೇಗ ತನ್ನಯ ಮಕ್ಕಳನು ಲೇಸಾಗೆ ಕಳುಹಿದ ಸಾಲೆಗೆ.

 

(‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನ)