ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಸ್ಥಿರ ಪ್ರಯತ್ನ

ಮರಳಿ ಯತ್ನವ ಮಾಡು !

ಮರಳಿ ಯತ್ನವ ಮಾಡು !

ತೊರೆಯದಿರಲು ಮೊದಲು ಕೈ

ಗೂಡದಿರಲು

 

ಹಿರಿದು ಧೈರ್ಯವ ಹಾಳು !

ತೊರೆಯದಿರು, ತೊರೆಯದಿರು !

ಮರಳಿ ಯತ್ನವ ಮಾಡು,

ಸಿದ್ಧಿಸುವುದು.

 

ಒಂದು ಸಲ ಕೆಟ್ಟುಹೋ

ಯ್ತೆಂದು ನೀ ಅಂಜದಿರು

ಕುಂದಿಲ್ಲ. ಕೈಗೊಂಡ

-ದನಿತರಿಂದ

 

ನೊಂದು ಕೊಳ್ಳದೆ ಮರಳಿ

ಮುಂದೆ ಯತ್ನವ ಮಾಡು,

ಸಂದೇಹವಿಲ್ಲದದು

ಸಿದ್ಧಿಸುವುದು.

 

ಕಸವಿದು ಕಷ್ಟವೆಂ

ದಳುಕಿ ಬಿಡದಿರು, ಮಾಡು,

ಫಲಗಳನು ಕೊಡುವುದದು

ಕೊನೆಗೆ ನಿನಗೆ.

 

ಸುಲಭವಹದಾ ಕೆಲಸ

ಫಲಿಸುವುದು, ಹುಲಿಸುವುದು

ನೆಲೆಗೆಡದೆ ಯತ್ನವನು

ಮಾಡು, ಮಗುವೇ !

***

ನದಿ

“ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ?

ಒಳ್ಳೇದಾಗಿರುತೀಯೆ, ನೀನು?

ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ?

ಕಡೆಗೆ ಏನಾಗುವೆ, ನೀನು?”

 

“ಬೆಟ್ಟದಾ ಹೊಡೆಯಲ್ಲಿ ಹುಟ್ಟಿದೆ ಹನಿಯಾಗಿ ;

ತೊಟ್ಟಾದೆ ತಟುಕಾದೆ, ನಾನು.

ಬೆಟ್ಟಾದೆ, ಬೆರಳಾದೆ, ತೋಳಾದೆ, ತೊಡೆಯಾದೆ,

ಪುಟ್ಟ ತೋಡಾದೆನು ನಾನು.

 

“ಮಲೆಮರಗಳ ಮರೆಯಲ್ಲಿ ಮಲಗಿದೆನು ;

ಮೆಳೆ ಬಿದಿರೆಲೆಯಿಂದ ಬಂದಾ

ಬೆಳಕಿಗೆ ಎಚ್ಚೆತ್ತು ಹೊರಬಂದೆ ಹರಿದಾಡಿ,

ನಲಿದಾಡಿ ಸಂತೋಷದಿಂದಾ,

 

“ಆಡುತ್ತ, ಸುತ್ತಲು ನೋಡುತ್ತ, ತೊರೆಯನ್ನು

ಕೂಡುತ್ತ, ಓಡುತ್ತ ಬಂದೆ ;

ದೂಡುತ್ತ ಕಲ್ಲನ್ನು, ಮಾಡುತ್ತ ಗುಲ್ಲನು,

ಹಾಡುತ್ತ, ನೀಡುತ್ತ ಬಂದೆ.

 

“ಭಾರಿ ಎತ್ತರದಿಂದ ಹಾರಿದೆ ಹೆಸರಾಯ್ತು ;

‘ನೀರಿನ ಜೋರಿನ ಜೋಗು';

ಊರಿನ ಜನರನ್ನು ಕಿವುಡು ಮಾಡಿತು ನನ್ನ

ಭೋರನೆ ಕೂಗುವ ಕೂಗು.”

(‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನಗಳು)