ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಉದ್ಯಮ

ಬಿಡಬೇಡ ! ಕಬ್ಬಿಣದ ಮೊಳೆಯನ್ನು ಜಡಿಯೈ !

ಬಿಡಬೇಡ ! ಅಣಿಯಾ ತಲೆಗೊಂದು ಹೊಡಿಯೈ !

ಬಿಡಬೇಡ ! ಬಲದಿಂದ ಕಬ್ಬಿಣವ ಹಿಡಿಯೈ !

ಬಿಡಬೇಡ ! ಕಾದಿರಲು ಸಲೆಸಾಗ ಬಡಿಯೈ !

 

ಕೊಟ್ಟು ಮನವನು ಕೆಲಸಮಾಡು ಸರಿಯಾಗಿ,

ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ,

ಕಟ್ಟಿ ಕೈಗಳ ಮೇಲೆ ನೋಡುವವ ಹೇಗೆ

ಮುಟ್ಟುವವ ಬೆಟ್ಟದಡಿಯಿಂದದರ ಮೇಗೆ.

 

ಎಡವಿದರು ತಡವಿದರು ಮನಗುಂದ ಬೇಡ !

ಬಿಡುವುದೇ ಬಲೆ ಹೆಣೆವ ಯತ್ನವನು ಜೇಡ !

ತಡೆದು ಹೋಗದೆ ಬಿದ್ದು ಮಲಗುವವ ಮೂಢ !

ಇಡು ಹೆಜ್ಜೆ ನಡೆ ಮುಂದೆ, ನೆಲೆಸೇರು, ಗಾಢ !

***

ಚಿಕ್ಕಂದಿನ ನೆನಪುಗಳು

ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು ;

ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು ;

ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು ;

ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ.

 

ಅಂದು ಅಮ್ಮನ ಕಂಕುಳಲಿ ಆಡುತ್ತಿದ್ದೆ;

ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ

ಅಂದು ಪಾಠವು ಕಾಟವೆಂದು ತಿಳಿದಿದ್ದೆ,

ಅಂದು ನಾಚಿಕೆ ಲಜ್ಜೆಗಳನರಿಯದಿದ್ದೆ.

 

ಆಗ ಧರೆ ಕಾಣಿಸಿತು ಬಲು ಚಿಕ್ಕದಾಗಿ;

ಆ ಗಲಭೆ ಗುಲ್ಲು ಕೇಳಿಸಿತು ಸವಿಯಾಗಿ ;

ಆಗಸದ ಮಿಣುಕು ಗೋಲಿಯ ಹಿಡಿಯ ಹೋಗಿ,

ಆಗದಿರೆ ಅಳುತಿದ್ದೆ ಕೈನೆಗಹಿ ಕೂಗಿ,

 

ಬೆಟ್ಟ ತಲೆಯಲಿ ಕಂಡು ಹೊಳೆವ ಚಂದ್ರನನು,

ದಿಟ್ಟಿಸಿ ಅದರ ಸೊಬಗು ಸವಿಸೊಗಸುಗಳನು,

ತಟ್ಟನೆ ನುಡಿದೆ “ಅಲ್ಲಿ ನಾ ಹೋಗಲೇನು?

ಬಟ್ಟಲಂತಿಹ ಮಂಡಲದಲಿರುವುದೇನು?”

 

ಸಂಜೆಯಲಿ ನೀಲ ಪಡುಗಡಲು ನೋಡಿದೆನು,

ಅಂಜಲದರೊಡಲೊಳಗೆ ರವಿ ಹೋಗುವುದನು ;

ಮುಂಜಾನೆ ಮಿಂದು ಬಂದಾ ನೇಸರನ್ನು,

ರಂಜಿಸುತ ಮೂಡು ಬಾನೊಳು ಹೊಳೆವುದನ್ನು.

 

ಮೊದಲು ಭಜಿಸಿದೆನು ಈಶನನು ಸ್ತುತಿಗೈದು;

ತೊದಲು ನಾಲಿಗೆಯಲ್ಲಿ ತಾಯ್ನುಡಿಯ ಹಿಡಿದು,

ಅದೆ ಭಜನೆ ಇಂದಿರಲಿ - "ಸದ್ಭುದ್ಧಿಗಳನು

ಒದಗಿಸೈ ದೇವ ! ನಿನ್ನನೆ ಅನುಸರಿಪೆನು.”

 

ಎಲ್ಲಿ ಆ ಬಾಲ್ಯದಾ ಶುಭದಿನಗಳೆಲ್ಲಿ?

ಎಲ್ಲಿ ಆ ಸಂತೋಷ, ಸೌಖ್ಯ ಇನ್ನೆಲ್ಲಿ?

“ನಿಲ್ಲು, ಸರಿಹೋಗು" ಎಂದಾ ದೇವನೆಲ್ಲಿ?

ಇಲ್ಲ ಎಲ್ಲಿಯು ಹೊರತು ಈ ಸ್ಮರಣೆಯಲ್ಲಿ.

(‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನಗಳು)