ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೮
ಮಕ್ಕಳ ಸಾಹಿತಿ ಪಂಜೆ ಮಂಗೇಶರಾಯರ ‘ಸ್ವದೇಶಾಭಿಮಾನಿ' ಎನ್ನುವ ಕವನ ಸಂಕಲನದಿಂದ ಆಯ್ದ ಒಂದು ಅಪರೂಪದ ಕವನವನ್ನು ಹಾಗೂ ‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಒಂದು ಪುಟ್ಟ ಕವನವನ್ನು ಈ ವಾರ ಪ್ರಕಟ ಮಾಡಿದ್ದೇವೆ.
ಇಡು ಭಕ್ತಿ, ನಡೆ ಮುಂದೆ
ಅನುದಿನವು ಇಡು ಭಕ್ತಿಯನು ದೇವನಡಿಯಲ್ಲಿ
ಅನುಸರಿಸು ಸನ್ಮಾರ್ಗವನೆ ನಿತ್ಯ ಮುದದಿ.
ಎತ್ತಲುಂ ಕತ್ತಲೆಯು ಸುತ್ತಿಹುದು ದಾರಿಯನು
ಕಿತ್ತುಬಿಡು ಭಯವನ್ನು, ಎತ್ತು ಪೌರುಷವಾ.
ಅತ್ತಿತ್ತ ಕದಲದಿರು, ಚಿತ್ತವನು ಸ್ಥಿರಗೊಳಿಸು,
ಎತ್ತರದೊಳಿದೆ ತಾರೆ, ಉತ್ತಮದಿ ನಡಿಸಲ್.
ಕಡು ಭಯಂಕರವಾಗಿ, ನಡೆಯಲಸದಳವಾದ
ಕಡೆಗಾಣದಿಹ ಹಾದಿ ಹಿಡಿದು ನೀನಿರಲು,
ಒಡಲ ಬಲ ಲೆಕ್ಕಿಸದೆ, “ಬಡವಾದೆ, ನೊಂದೆ" ನದೆ
ಇಡು ಹೆಜ್ಜೆ, ನಡೆ ಮುಂದೆ, ಬಿಡು ಭೀತಿ ಭಯವಾ.
ಕೆಟ್ಟ ಕುಹಕೋಪಾಯ, ಕೆಟ್ಟ ತಂತ್ರಗಳನ್ನು
ಬಿಟ್ಟು ಬೆಳಕಿಗೆ ಅಂಜಿ, ಗುಟ್ಟಾಗಿರುವುದಂ,
ಬಟ್ಟೆ ತುದಿಯನು ಹೇಗೆ ಮುಟ್ಟಲಾಪುದೆ ನೋಡು !
ಕಟ್ಟಕಡೆಗಿರಲಿ ಜಯ ! ಪಟ್ಟಿರಲಿ ಸೋಲು !
ಇದೆ ಸುರಕ್ಷಿತ ಮಾರ್ಗ ! ಇದೆ ಸರಳ ಕಟ್ಟಳೆಯು !
ಇದೆ ಅಂತಃ ಶಾಂತಿಃ ! ಇದೆ ಮನೋಬಲವು !
ಇದೆ ಸತ್ಪಥವ ತೋರೆ ಉದಯಿಸಿದ ಧ್ರುವ ತಾರೆ
ಇದನೆ ಪಠಿಸೈ ನೀನು, ಇದನೆ ಜಪಿಸುತಿರು.
ಕೆಲರು ಬರಿ ಹೊಗಳುವರು ; ಕೆಲರು ಬರಿ ತೆಗಳುವರು;
ಕೆಲರು ಮತ್ಸರಿಸುವರು ; ಕೆಲರು ಮೆಚ್ಚಿವರು ;
ಹಲವರನು ಮೆಚ್ಚಿಸುವ ಕೆಲಸವೇತಕೆ ನಿನಗೆ?
ಒಲಿಸು ಹರಿಯನು ; ನಿನ್ನ ಕೆಲಸವನು ಸಲಿಸು.
(‘ಸ್ವದೇಶಾಭಿಮಾನಿ' ಕೃತಿಯಿಂದ)
***
ತೂಗುವೆ ತೊಟ್ಟಿಲ
ತೂಗುವೆ ತೊಟ್ಟಿಲ ಜೋಗುಳ ಹಾಡಿ,
ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ
ತುಂಬಿ ಪದಡಿಸಿತು ಎಸಳ ಹೂಗಳಲಿ,
ಗೊಂಬೆ ! ನಿನ್ನಯ ಹಣ್ಣಿನೆವೆ ಸೆರೆಗೊಳಲಿ,
ರೆಂಬೆ ಚಿಗುರೊಳಡಗಿತು ಪಿಕದುಲಿಯು,
ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು,
ಜಗದಮೇಲ್ ಮಲಗುವ ಮರಿಹಂಸದಂತೆ.
ಎಲೆಯೊಳಗಿಹ ಮಲ್ಲಿಗೆಯ ಮೊಗ್ಗಿನಂತೆ,
ಚೆಲುತೊಟ್ಟಿಲಲಿ ಮಲಗು ಅರಗಿಳಿಯೆ,
ತಲೆಗಿಂಬಿಗೀಶನ ಕೈ ನಿನ್ನ ಬಳಿಯೆ.
(‘ಕವಿಶಿಷ್ಯ' ಕವನ ಸಂಕಲನದಿಂದ)