ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೯

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೯

ಪಂಜೆಯವರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ಪುಟ್ಟ ಮಕ್ಕಳನ್ನು ಮಲಗಿಸಲು ಹಾಡುವ ಜೋಗುಳ ಪದಗಳನ್ನು ಪ್ರಕಟ ಮಾಡಲಿದ್ದೇವೆ. ಪಂಜೆ ಮಂಗೇಶರಾಯರು ಎರಡು ಜೋಗುಳ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ‘ಹಳೆಯ ಹಾಡು' ಎಂಬ ಸಂಕಲನದಲ್ಲೂ ಮತ್ತೊಂದು ‘ಆನಂದ' ಎನ್ನುವ ಸಂಕಲನದಲ್ಲೂ ಪ್ರಕಟವಾಗಿದೆ. ಒಂದು ಕವನವನ್ನು ಈ ವಾರವೂ, ಮತ್ತೊಂದನ್ನು ಮುಂದಿನವಾರವೂ ಪ್ರಕಟಿಸಲಾಗುವುದು.

ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು, 

ಕಂದ ಮುದ್ದನ ಅಚ್ಚ ನಿಡುಹಣೆಗೆ ಜೋ !

ಕಂದ ಮುದ್ದನ ಅಚ್ಚ ನಿಡುಹಣೆಗೆ ತಾಯ್ತರಳೆ

ಚಂದದಿಂ ಬೊಬ್ಬಿಟ್ಟ ಕುತ್ತುರಿಗೆ, ಜೋ !

 

ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,

ಬೇವು ಬೆಲ್ಲದ ಸವಿಗೆ ಸರಿಯಾಯ್ತು, ಜೋ !

ಬೇವು ಬೆಲ್ಲದ ಸವಿಯ ಪಡೆಯಿತುದಿಸಲು, ಮುದ್ದು

ಆ ಒಂದು ಗೊಡ್ಡು ಹೊಸ ಹಸುವಾಯ್ತು, ಜೋ !

 

ಜೊಲ್ಲ ಸೂಸುವ ಬಾಯನಲ್ಲಲ್ಲಿ ತಗಲಿಸುವ -

ನಲ್ಲಲ್ಲಿ ಅಮೃತಾಂಕ ಮೂಡಿತ್ತು, ಜೋ !

ಅಲ್ಲಲ್ಲಿ ಅಮೃತ ಮುದ್ರೆಯು ಮೂಡಿ, ಮೈಯೆಲ್ಲ

ಜಲ್ಲನೇ ನವಿರೆದ್ದು ನಿಂತಿತ್ತು, ಜೋ !

 

ಬಾಲನಾ ಲೀಲೆಯನು ಹೇಳಲಿನ್ನೇನು ನಾ

ಲೋಲ ಹಿಡಿ ಹಿಡಿದೆಳೆವ ಮುಂಗುರುಳ, ಜೋ !

ಲೋಲ ಹಿಡಿದಿಡಿದೆಳೆವ ಮುಂಗುರುಳ ಬಾಯೊಳಗೆ

ಲೀಲೆಯಿಂದಿಡುವ ಕಾಲ್ತುದಿ ಬೆರಳ, ಜೋ !

 

ನಿದ್ದೆ ಇಲ್ಲದೆ ಕಂದನೆದ್ದೆದ್ದು ಕುಳಿತಿಹನು,

ಗದ್ದರಿಸಿ ಗರ್ಜಿಪನು ಮನೆತುಂಬ, ಜೋ !

ಗದ್ದರಿಸಿ ಗರ್ಜಿಪನು ಮನೆತುಂಬ, ಕುಲಕೋಟಿ

ಉದ್ದರಿಸುವನು ತನ್ನುದಯದಿಂದ, ಜೋ !

 

ಪುಂಡನಾಟವ ನೋಡಿ ನಿಂದೆ ನಾ ಮರುಳಾಗಿ,

ಗಂಡನೂಟವು ಹೋಯ್ತು ಹಾಳಾಗಿ, ಜೋ !

ಗಂಡನೂಟವು ಹೋಯ್ತು ಹಾಳಾಗಿ, ಸಂಸಾರ

ಕಂಡು ಬಂತೀಗ ಬಲು ಸವಿಯಾಗಿ, ಜೋ !

 

ನಗುವುದೇತಕೆ ಕಂದ? ನಗಲು ನಾಣುವೆ ಚಂದ,

ಬಗಡ ! ಮಾತಾಡು ಹೃದಯಾನಂದ, ಜೋ !

ಬಗಡ ಮಾತಾಡಲಾ ಮುಗಿಯದೈ, ನಿನ್ನನ್ನು

ಅಗಿದವರು ಯಾರು ನುಡಿ, ಸುಖ ಕಂದ, ಜೋ !

('ಹಳೆಯ ಹಾಡು’ ಸಂಕಲನದಿಂದ ಆಯ್ದದ್ದು)