ಪಂಜೆ ಮಂಗೇಶರಾಯರ ನೆನಪಿನಲ್ಲಿ...

ಪಂಜೆ ಮಂಗೇಶರಾಯರ ನೆನಪಿನಲ್ಲಿ...

ನಾಗರಹಾವೆ ಹಾವೊಳು ಹೂವೆ

ಬಾಗಿಲ ಬಿಲದಲಿ ನಿನ್ನಯ ಠಾವೆ

ಕೈಗಳ ಮುಗಿವೆ ಹಾಲನ್ನೀವೆ

ಬಾ ಬಾ ಬಾ

ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಾಡು ಮರೆಯಲು ಸಾಧ್ಯವೇ? ಸಣ್ಣಕಥೆಗಳ ಜನಕ, ಶಿಶು ಸಾಹಿತಿ, ಶಾಲಾ ಅಧ್ಯಾಪಕ, ನವೋದಯ ಸಾಹಿತ್ಯ ಪ್ರಕಾರದಲ್ಲಿ ಕೆಲಸ ಮಾಡಿದವರು, ಹಿರಿಯ ಕವಿ ಸಾಹಿತಿಗಳೂ, ಪ್ರಾತ:ಸ್ಮರಣೀಯರೂ ಆದ ‘ಕವಿಶಿಷ್ಯ’ ಬಿರುದಾಂಕಿತ ಪಂಜೆ ಮಂಗೇಶರಾಯರ ಜನ್ಮದಿನದ (ಫೆಬ್ರವರಿ ೨೨) ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳೋಣ.

೨೨-೦೨-೧೮೭೪ ರಂದು ಪಂಜದಲ್ಲಿ ರಾಮಪ್ಪಯ್ಯ ಶಾಂತಾದುರ್ಗ ದಂಪತಿಗಳಿಗೆ ಜನಿಸಿದರು. ಮುಂದೆ ಪಂಜದ ಮನೆಯಲ್ಲಿ ಶ್ರೀಯುತರ ಪೂರ್ವಜರು ಮರಣ ಹೊಂದಿದಾಗ ನೇತ್ರಾವತಿ ನದಿ ತೀರದ ಬಂಟ್ವಾಳದಲ್ಲಿ ಬಂದು ನೆಲೆಸಿದರು. ವ್ಯವಸಾಯ ವೃತ್ತಿಯ ಮನೆಯಾಗಿತ್ತು. ಪ್ರಾಥಮಿಕ ವಿದ್ಯಾಭ್ಯಾಸ ಬಂಟ್ವಾಳದಲ್ಲಿ, ಅನಂತರ ಮಂಗಳೂರಿನಲ್ಲಿಯೂ ನಡೆಯಿತು. ಕೊಂಕಣಿ ಮನೆಮಾತು, ಪರಿಸರದಲ್ಲಿ ತುಳು ಭಾಷೆ, ಕನ್ನಡ ಪಂಡಿತರು, ಹೆಚ್ಚಿನ ವಿದ್ಯಾಭ್ಯಾಸ ಆಂಗ್ಲ ಭಾಷೆಯಲ್ಲಿ ಪಡೆದರು.

ಅಧ್ಯಾಪಕರಾಗಿ, ಶಾಲಾ ಇನ್ ಸ್ಪೆಕ್ಟರಾಗಿ, ತರಬೇತಿ ಶಾಲಾ ಅಧ್ಯಾಪಕರಾಗಿ, ಕರ್ತವ್ಯ ನಿರ್ವಹಿಸಿದರು. ಬೆನಗಲ್ ರಾಮರಾವ್ ಅವರ ತಂಗಿ‌ ಭವಾನಿ ಬಾಯಿ ಪತ್ನಿ. ಸಣ್ಣಕಥೆಗಳು, ಅನುವಾದ, ಜಾನಪದ ಅಧ್ಯಯನ, ಕಾವ್ಯ ರಚನೆ, ಸಂಪಾದಿತ ಕೃತಿ, ಕಾದಂಬರಿ, ಶಿಶು ಸಾಹಿತ್ಯ ಕಥೆ, ಶಿಶುಗೀತೆ, ಬಾಲಗೀತೆಗಳ ರಚನೆ, ಹರಟೆ, ಕಿರು ಕಾದಂಬರಿ, ಪತ್ತೇದಾರಿ, ಐತಿಹಾಸಿಕ ಕಥೆ, ಸಂಶೋಧನೆ ಎಲ್ಲಾ ಪ್ರಕಾರದಲ್ಲೂ ಕೈಯಾಡಿಸಿದವರು.'ಸತ್ಯ ದೀಪಿಕೆ' ಎನುವ ವಾರಪತ್ರಿಕೆಯಲ್ಲಿ ಹರಟೆ, ಕಥೆ, ಕವನ ಬರೆಯುತ್ತಿದ್ದರು.

ಕೊಡಗಿನಲ್ಲಿ ಕರ್ತವ್ಯದಲ್ಲಿದ್ದಾಗ ಅಲ್ಲಿಯ ಆಚಾರ-ವಿಚಾರಗಳನ್ನು ಸ್ವತ: ನೋಡಿ ಹುತ್ತರಿ ಹಾಡು ಬರೆದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಸಿಕಕವಿ, ಸಂವೇದನೆಯ ಮನೋಭಾವ, ಇತರರಿಗೆ ಗೌರವ ನೀಡುವುದು ಉತ್ತಮ ಗುಣಗಳನ್ನು ಹೊಂದಿದ ಹಮ್ಮು-ಬಿಮ್ಮುಗಳಿಲ್ಲದ ಸೀದಾ ಸಾದಾ ಕವಿ ಮಹಾಶಯರಂತೆ. ಶಬ್ದಮಣಿದರ್ಪಣ ಸಂಪಾದಿತ ಕೃತಿ. ಕವಿಶಿಷ್ಯ ಬಿರುದಾಂಕಿತರಾದ ಶ್ರೀಯುತರು ೨೪-೧೦-೧೯೩೭ರಂದು ಕನ್ನಡಮ್ಮನ ಸೇವೆಯನ್ನು ನಿಲ್ಲಿಸಿದರು. ಓರ್ವ ಸಹೃದಯಿ ಸಾಹಿತಿಯನ್ನು ಕರ್ನಾಟಕವು ಕಳೆದುಕೊಂಡು ಸಾಹಿತ್ಯಲೋಕ ಬಡವಾಯಿತು. ಅವರ ಜನ್ಮ ದಿನದಂದು ಒಂದೆರಡು ನುಡಿಗಳಿಂದ ಗೌರವ ಸಲ್ಲಿಸೋಣ.

-ರತ್ನಾ ಕೆ ಭಟ್,ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ