ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು
ಕನ್ನಡದ ಮಕ್ಕಳಿಗಾಗಿ ಕಥೆಗಳನ್ನು ಬರೆದ ಮೊದಲಿಗರಲ್ಲಿ ಪ್ರಮುಖರು ಪಂಜೆ ಮಂಗೇಶರಾಯರು. ೧೯೭೩ರಲ್ಲಿ ಮೊದಲ ಸಲ ಮುದ್ರಣವಾದ ಈ ಪುಸ್ತಕದ ಎರಡನೆಯ ಮುದ್ರಣವಾದದ್ದು ೨೦೧೫ರಲ್ಲಿ (೪೨ ವರುಷಗಳ ನಂತರ).
ಅವರು ಮಕ್ಕಳ ಕಥೆಗಳನ್ನು ಬರೆದು ಸುಮಾರು ನೂರು ವರುಷಗಳಾಗಿದ್ದರೂ ಇಂದಿಗೂ ಅವು ಚೇತೋಹಾರಿ. ಇದರಲ್ಲಿವೆ ೧೬ ಮಕ್ಕಳ ಕಥೆಗಳು. ಒಂದಕ್ಕಿಂತ ಒಂದು ಚಂದದ ಕತೆಗಳು. ಇಂಗ್ಲಿಷಿನ ಮಕ್ಕಳ ಕಥೆಗಳನ್ನು ಓದಿ ಬೆಳೆಯುತ್ತಿರುವ ಇಂದಿನ ತಲೆಮಾರಿನ ಕನ್ನಡದ ಮಕ್ಕಳು ಈ ಕಥೆಗಳನ್ನೊಮ್ಮೆ ಓದಬೇಕು. ಮಕ್ಕಳ ಕಲ್ಪನಾಲೋಕವನ್ನು ಅವು ಹೇಗೆ ವಿಸ್ತರಿಸುತ್ತವೆ ಎಂಬುದು ಅವನ್ನು ಓದಿ ಸವಿದಾಗಲೇ ಅರ್ಥವಾಗಲು ಸಾಧ್ಯ.
ನನ್ನ ತಲೆಮಾರಿನವರು ಪಂಜೆಯವರ ಕಥೆಗಳನ್ನು ಓದುತ್ತಲೇ ಬೆಳೆದವರು. ಯಾಕೆಂದರೆ, ಆಗ ಹಲವಾರು ವರುಷ ಪಂಜೆಯವರ ಮಕ್ಕಳ ಕಥೆಗಳು ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿ ಸೇರಿದ್ದವು. ಆದರೆ ೧೯೮೦ರ ನಂತರ, ಅವು ಪಠ್ಯಪುಸ್ತಕಗಳಿಂದ ಮರೆಯಾದಂತೆ, ಕನ್ನಡಿಗರೂ ನಿಧಾನವಾಗಿ ಪಂಜೆಯವರ ಕಥೆಗಳನ್ನು ಮರೆತರು. ಇದರಿಂದ ನಷ್ಟವಾದದ್ದು ಕಳೆದ ಎರಡು ತಲೆಮಾರಿನ ಕನ್ನಡದ ಮಕ್ಕಳಿಗೆ; ಕಾರಣವೇನೆಂದರೆ, ಪಠ್ಯಪುಸ್ತಕಗಳಲ್ಲಿಯೂ ಅವು ಇರಲಿಲ್ಲ ಮತ್ತು ಪಂಜೆಯವರ "ಮಕ್ಕಳ ಕಥೆಗಳು" ಪುಸ್ತಕ ಮಾರುಕಟ್ಟೆಯಲ್ಲಿಯೂ ಲಭ್ಯವಿರಲಿಲ್ಲ. ಆದ್ದರಿಂದ, ಕನ್ನಡ ಮನೆಮಾತಾಗಿರುವ ಹೆತ್ತವರೂ ಇವನ್ನು ಓದಬೇಕು. ತಾವು ಪಂಜೆಯವರ ಕಥೆಗಳ ಹೊಸ ಲೋಕಕ್ಕೆ ತೆರೆದು ಕೊಂಡಂತೆ, ತಮ್ಮ ಮಕ್ಕಳನ್ನೂ ಈ ಮನಮೋಹಕ ಕಥೆಗಳ ಲೋಕಕ್ಕೆ ಕರೆದೊಯ್ಯಬೇಕು. ಇದರಿಂದ ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲಣ ಪ್ರೀತಿ ಬೆಳೆಯಲು ಖಂಡಿತವಾಗಿ ಸಹಾಯ.
ಈ ಪುಸ್ತಕದಲ್ಲಿರುವ ಕಥೆಗಳು: (೧) ಅಮ್ಮನನ್ನು ಹೇಗೆ ಕೂಗಬೇಕು? (೨) ಮೂರು ಕರಡಿಗಳು (೩) ಹೇನು ಸತ್ತು ಕಾಗೆ ಬಡವಾಯಿತು (೪) ಇಲಿಗಳ ಥಕ್ಕಥೈ (೫) ಗುಡು ಗುಡು ಗುಮ್ಮತ ದೇವರು (೬) ಅರ್ಗಣೆ ಮುದ್ದೆ (೭) ಸಿಗಡಿ ಯಾಕೆ ಒಣಗಲಿಲ್ಲ (೮) ಹುಲಿಯೋ ಇಲಿಯೋ (೯) ಅಂಗಳ ದುಗ್ಗು (೧೦) ಮೆಣಸಿನ ಕಾಳಪ್ಪ (೧೧) ಕೊ-ಕ್ಕೊ-ಕ್ಕೋ-ಕೋಳಿ (೧೨) ಒಡ್ದನ ಓಟ (೧೩) ಸೋಮಾರಿ ಮಲ್ಲ (೧೪) ಹೊಟ್ಟೆಯೂ ಅವಯವಗಳೂ (೧೫) ಕೊಳಲ ಜೋಗಿ (೧೬) ಜೋಡು ನಕ್ಷತ್ರ
ಮಂಗಳೂರಿನ ಕೇಂದ್ರ ಸ್ಥಳವಾದ ಹಂಪನಕಟ್ಟೆಯ ಮುಖ್ಯ ರಸ್ತೆಯೊಂದರ ಹೆಸರು "ಪಂಜೆ ಮಂಗೇಶರಾವ್ ರಸ್ತೆ”. ಆದರೆ, ಜನರು ಅದನ್ನು ಕರೆಯುವುದು “ಪಿ. ಎಮ್. ರಸ್ತೆ” ಎಂಬುದಾಗಿ. ಶತಮಾನದ ಮುಂಚೆ ಕನ್ನಡದ ಮಕ್ಕಳಿಗಾಗಿ ಲವಲವಿಕೆಯ ಕವನಗಳನ್ನೂ ಕಥೆಗಳನ್ನೂ ಬರೆದು, ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಬೆಲೆಕಟ್ಟಲಾಗದ ಕೊಡುಗೆ ನೀಡಿದವರು ಪಂಜೆಯವರು. “ಕನ್ನಡ ರಾಜ್ಯೋತ್ಸವ”ದ ಈ ಹೊತ್ತಿನಲ್ಲಿ ಒಂದು ಸಲಹೆ. ಇಂದಿನಿಂದ ಅವರ ಹೆಸರಿನಲ್ಲಿರುವ ಆ ರಸ್ತೆಯನ್ನು ಉಲ್ಲೇಖಿಸುವಾಗ, ಅದರ ಹೆಸರನ್ನು ಸಂಪೂರ್ಣವಾಗಿ ಉಚ್ಚರಿಸಲು ಶುರು ಮಾಡೋಣ. ಇದರಿಂದ ಪಂಜೆ ಮಂಗೇಶರಾಯರ ಹೆಸರು ಮುಂದಿನ ತಲೆಮಾರಿನವರಲ್ಲಿಯೂ ಅಚ್ಚಳಿಯದೆ ಉಳಿಯಲು ಸಹಾಯ, ಅಲ್ಲವೇ?