ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು

ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಪಂಜೆ ಮಂಗೇಶರಾಯರು
ಪ್ರಕಾಶಕರು
ಅಂಕಿತ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ.50/-

ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು.

ಕನ್ನಡ ನಾಡಿನ ಹೆತ್ತವರ ಇಂಗ್ಲಿಷ್ ಮಾಧ್ಯಮದ ಮೋಹದಲ್ಲಿ, ಖಾಸಗಿ ಶಾಲೆಗಳ ಬಾಲವಾಡಿಗಳ ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ, ಬ್ರಿಟಿಷರು ತಮಗೆ ಬೇಕಾದ ಕಾರಕೂನರನ್ನು ರೂಪಿಸಲು ಆರಂಭಿಸಿದ "ಮೆಕಾಲೆ ಶಿಕ್ಷಣ ಪದ್ಧತಿ”ಯ ಅಂಧ ಅನುಸರಣೆಯಲ್ಲಿ, ಕ್ರಮೇಣ ಪಂಜೆಯವರ ಮಕ್ಕಳ ಪದ್ಯಗಳು ಕನ್ನಡಿಗರ ನೆನಪಿನಿಂದ ಮರೆಯಾದವು.

ಆ ಹೊತ್ತಿನಲ್ಲಿ, 2015ರಲ್ಲಿ, ಪ್ರಕಾಶಕರು ಪಂಜೆಯವರ ಮಕ್ಕಳ ಪದ್ಯಗಳ ಸಂಪುಟದ ಮರುಮುದ್ರಣ ಮಾಡಿರುವುದು ಸಂತೋಷದ ಸಂಗತಿ. ಇದರಿಂದಾಗಿ ಈಗಿನ ತಲೆಮಾರಿನ ಮಕ್ಕಳು ಪಂಜೆಯವರ ಪದ್ಯಗಳನ್ನು ಕಲಿತು ಬೆಳೆಯುವ ಅವಕಾಶ. ಹಳೆಯ ತಲೆಮಾರಿನವರಿಗೆ ಅವರ ಮನಸೂರೆಗೊಳ್ಳುವ ಪದ್ಯಗಳನ್ನು ಮತ್ತೆ ಆಸ್ವಾದಿಸುವ ಅವಕಾಶ.

“ಹಾವಿನ ಹಾಡು" ಎಂಬ ಸುಪ್ರಸಿದ್ಧ ಕವನದಲ್ಲಿ ಇರೋದು ನಾಲ್ಕು ಚೌಪದಿಗಳು. ಪ್ರತಿಯೊಂದು ಚೌಪದಿಯ ಕೊನೆಯ ಸಾಲಿನಲ್ಲಿ ಒಂದಕ್ಷರದ ಪದ ಎಂಟು ಸಲ ಪುನರಾವರ್ತನೆ: ಬಾ, ನೀ, ತಾ ಮತ್ತು ಪೋ.  ಅದನ್ನು ಹಾಡುವಾಗ ಅದು ಮಕ್ಕಳಲ್ಲಿ ತುಂಬುವ ಉತ್ಸಾಹವನ್ನು ನೋಡಿಯೇ ನಂಬಬೇಕು. ಅದರ ಮೊದಲ ಎರಡು ಚೌಪದಿಗಳು ಹೀಗಿವೆ:
ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ!
ಬಾ ಬಾ ಬಾ ಬಾ ಬಾ ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗಾ!
ಹೊಳಹಿನ ಹೊಂದಲೆ ತೂಗೋ ನಾಗಾ!
ಕೊಳಲನ್ನೂದುವೆ ಲಾಲಿಸು ರಾಗಾ,
ನೀ ನೀ ನೀ ನೀ ನೀ ನೀ ನೀ ನೀ

ಸೂರ್ಯೋದಯದ ಬಗ್ಗೆ ಅದೇ ಹೆಸರಿನ ಎರಡೇ ಚೌಪದಿಗಳ ಒಂದು ಪುಟ್ಟ ಪದ್ಯವನ್ನೂ, “ಉದಯ ರಾಗ” ಎಂಬ ಎಂಟು ದ್ವಿಪದಿಗಳ ಇನ್ನೊಂದು ಪದ್ಯವನ್ನೂ ಬರೆದಿದ್ದಾರೆ ಪಂಜೆಯವರು. “ಉದಯ ರಾಗ" ಪದ್ಯದ ಮೊದಲನೆಯ ಮತ್ತು ಕೊನೆಯ ದ್ವಿಪದಿಗಳು ಇಲ್ಲಿವೆ. ಇದು ಮಕ್ಕಳ ಪದ್ಯವಾದರೂ ಕೊನೆಯ ದ್ವಿಪದಿಯಲ್ಲಿ ಹಿತವಚನವೊಂದನ್ನು ಪದ್ಯದ ಓಘಕ್ಕೆ ತೊಡಕಾಗದಂತೆ ಹೇಗೆ ಹೆಣೆದಿದ್ದಾರೆ ನೋಡಿ:
ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.

ಏರುವನು, ರವಿ, ಏರುವನು; ಬಾನೊಳು ಸಣ್ಣಗೆ ತೋರುವನು;
“ಏರಿದವನು ಚಿಕ್ಕವನಿರಬೇಕೆಲೆ,” ಎಂಬಾ ಮಾತನು ಸಾರುವನು.

"ಜೇಡನೂ ನೊಳವೂ" ಪದ್ಯದಲ್ಲಿ ತನ್ನ ಬಲೆಯೊಳಗೆ ಬರಲು ನಿರಾಕರಿಸುವ ನೊಳವನ್ನು ಹೊಗಳಿ ಅಟ್ಟಕ್ಕೇರಿಸಿ, ಬಲೆಯೊಳಗೆ ಬರುವಂತೆ ಮಾಡಿ, ಕೊಂದು ತಿನ್ನುವ ಜೇಡನ ಪ್ರಕರಣವನ್ನು ಸರಳ ಪದಗಳಲ್ಲಿ ಚಂದವಾಗಿ ಚಿತ್ರಿಸಿದ್ದಾರೆ.

“ತೆಂಕಣ ಗಾಳಿಯಾಟ” ಪಂಜೆಯವರ ಇನ್ನೊಂದು ಸುಪ್ರಸಿದ್ಧ ಮಕ್ಕಳ ಪದ್ಯ. ಕನ್ನಡದಲ್ಲಿ ಹೀಗೂ ಪದ್ಯ ರೂಪಿಸಲು ಸಾಧ್ಯವೇ? ಎಂದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ ಈ ಪದ್ಯದ ಸೊಗಸನ್ನು ಹಾಡುತ್ತಾ ಅನುಭವಿಸುವುದೇ ಗಮ್ಮತ್ತು. “ಬರಲಿದೆ!" ಎಂದು ಶುರುವಾಗುವ ಪದ್ಯವು "ಬರುವುದು" “ಬರುತದೆ" ಎಂದು ಮುಂದುವರಿದು ಕೊನೆಗೆ  “ಬಂತೈ" ಎಂದು ಮುಗಿಯುದರ ನಡುವೆ ತೆಂಕಣ ಗಾಳಿಯ ವೇಗದ ಬೀಸು, ಅಬ್ಬರದ ನರ್ತನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಪ್ರಾಸಬದ್ಧ ಪದಗಳ ಮೆರವಣಿಗೆ ಇದರಲ್ಲಿದೆ. (ಇಲ್ಲಿರುವುದು ಮೊದಲ ಎರಡು ಮತ್ತು ಕೊನೆಯ ಭಾಗ ಮಾತ್ರ)

ಬರಲಿದೆ! ಅಹಹಾ! ದೂರದಿ ಬರಲಿದೆ -

ಬುಸುಗುಟ್ಟುವ ಪಾತಾಳದ ಹಾವೋ?
ಹಸಿವಿನ ಭೂತದ ಕೂಯುವ ಕೂವೋ?
ಹೊಸತಿದು! ಕಾಲನ ಕೋಣನ, ಓ! ಓ!
ಉಸುರಿನ ಸುಯ್ಯೋ? ಸೂಸೂಕರಿಸುತ,

ಬರುವುದು! ಬರಬರ ಭರದಲಿ ಬರುವುದು! -

ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ,
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ,
ಅಬ್ಬರದಲಿ ಭೋರ್-ಭೋರನೆ ಗುಮ್ಮಿಸಿ

ಬರುತದೆ! ಮೈತೋರದೆ ಬರುತದೆ, ಅದೆ!
…………
ಬಂತೈ ಬೀಸುತ, ಬೀಸುತ ಬಂತೈ!
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ! ಬಂತೈ! ಬಂತೈ! ಬಂತೈ!

ಪಂಜೆ ಮಂಗೇಶರಾಯರ ಮತ್ತೊಂದು ಸುಪ್ರಸಿದ್ಧ ಮಕ್ಕಳ ಪದ್ಯ “ಹುತ್ತರಿ ಹಾಡು. ಕೊಡವರ ಕ್ಷಾತ್ರತೇಜವನ್ನು ಅವರು ಬಣ್ಣಿಸುವ ಪರಿಯನ್ನು ಈ ಎಂಟು ಸಾಲುಗಳಲ್ಲಿ ಗಮನಿಸಿ:

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು,
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು,
ಸವರಿ ಆನೆಯ ಸೊಂಡಿಲಲಿ ರಣಕೊಂಬನಾರ್ ಭೋರ್ಗರೆದರೋ,
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ

ಅವರು ಸೋಲ್ ಸಾವರಿಯರು!
ಅವರೆ ಕಡುಗಲಿ ಗರಿಯರು!
ಅವರು ಕೊಡಗಿನ ಹಿರಿಯರು!

“ನಾಗಣ್ಣನ ಕನ್ನಡಕ” ಮತ್ತು “ಡೊಂಬರ ಚೆನ್ನೆ” ಪಂಜೆಯವರು ಬರೆದಿರುವ ದೀರ್ಘ ಮಕ್ಕಳ ಪದ್ಯಗಳು. “ಡೊಂಬರ ಚೆನ್ನೆ” ಪದ್ಯವನ್ನು ಓದುತ್ತಾ ಓದುತ್ತಾ ಕವನ ಮುಕ್ತಾಯವಾಗುತ್ತಿದ್ದಂತೆ ಭಾವಪರವಶರಾಗುತ್ತೇವೆ. ಮಕ್ಕಳ ಪದ್ಯದ ರೂಪದಲ್ಲಿ ಜಾನಪದ ಕಥನಗಳನ್ನು ಮನಮುಟ್ಟುವಂತೆ ಹೇಗೆ ಹೆಣೆಯಬಹುದು ಎಂಬುದಕ್ಕೊಂದು ಮಾದರಿ ಈ ಪದ್ಯ.