ಪಂಡಿಂಜೆವಾಳ್ಯ ಶಾಲೆ ಮತ್ತು ಮಾತೃ ಹೃದಯದ ಶಿಕ್ಷಕಿ

ಪಂಡಿಂಜೆವಾಳ್ಯ ಶಾಲೆ ಮತ್ತು ಮಾತೃ ಹೃದಯದ ಶಿಕ್ಷಕಿ

ಅತಿಥಿ ಶಿಕ್ಷಕಿಯಾಗಿ ಗೌರವ ಶಿಕ್ಷಕಿಯಾಗಿ ಮೂರು ಶಾಲೆಗಳಲ್ಲಿ ನಾನು ಕರ್ತವ್ಯ ನಿರ್ವಹಿಸಿದರೂ ಸಹ ನನ್ನ ಮೇಲೆ ಪ್ರಭಾವ ಬೀರಿ ನನ್ನಲಿ ತಾಳ್ಮೆ, ಸಹಾಯ ಮಾಡುವ ಗುಣ, ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುವ ಮಹತ್ತರ ಬದಲಾವಣೆಯನ್ನು ತಂದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಡಿಂಜೆವಾಳ್ಯ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಫ್ಲೇವಿಯಾ ಡಿಸೋಜ ರವರು. ಇವರು ದಿನಾಂಕ 2018 ರಂದು ಮೊದಲ ಬಾರಿಗೆ ಸರ್ಕಾರಿ ವೃತ್ತಿ ಜೀವನಕ್ಕೆ ಪಾದಾರ್ಪಣೆಯನ್ನು ಮಾಡಿದರು. ಆ ವೇಳೆ ನಾನು ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. ಮೂರು ಜನ ಅಕ್ಕನವರ ಮುದ್ದಿನ ತಂಗಿ ನಾನು. ನಾಲ್ಕನೇ ಅಕ್ಕನ ಸ್ಥಾನವನ್ನು ಕಂಡದ್ದು ಫ್ಲೇವಿಯಾ ಡಿಸೋಜ ಇವರಲ್ಲಿ. ಇವರು ನಮ್ಮ ಶಾಲೆಗೆ ಬಂದಾಗ ಮಕ್ಕಳು, ಪೋಷಕರು ತುಂಬಾ ಖುಷಿ ಪಟ್ಟರು. ಯಾಕೆಂದರೆ ಇವರು ತುಂಬಾ ಪ್ರತಿಭಾವಂತರು. ಹಾಡು, ನೃತ್ಯ, ನಾಟಕ, ಕವಿತೆಗಳನ್ನು, ಪ್ರಾರ್ಥನಾ ಗೀತೆಗಳನ್ನು ಬರೆಯುವುದರಲ್ಲಿ ಬಹಳ ಆಸಕ್ತಿ ಇರುವವರು. ಅಷ್ಟೇ ಅಲ್ಲದೆ ಉತ್ತಮ ಆಂಗ್ಲ ಭಾಷಾ ಶಿಕ್ಷಕಿ. ಇವರ ಆಂಗ್ಲ ಭಾಷೆಯ ಬೋಧನೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಪ್ರಾಥಮಿಕ ಶಾಲಾ ಶಿಕ್ಷಣದ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಹೈಸ್ಕೂಲ್ ನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನೇ ಪಡೆಯುವಂತೆ ಮಾಡಿತು. ಪ್ರತಿಯೊಂದು ಮಗುವಿನ ಪ್ರತಿಭೆಯನ್ನು ಗುರುತಿಸಿ ಸ್ವಂತ ಹಣದಿಂದ ಬಹುಮಾನ ಕೊಡಲು ಆರಂಭಿಸಿದರು. 

ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಜೊತೆಗೂಡಿ ಶಾಲಾ ಕೈತೋಟವನ್ನು ಮಾಡಿ ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಶಾಲೆಯಲ್ಲಿಯೇ ಬೆಳೆದರು. ಕೊರೋನ ಸಮಯದಲ್ಲಿ ಇವರು ಮಾಡಿದ ಸಹಾಯವನ್ನು ನಾನು, ನನ್ನ ಅಕ್ಕನ ಮಕ್ಕಳು, ನನ್ನ ವಿದ್ಯಾರ್ಥಿಗಳು ಮರೆಯುವಂತಿಲ್ಲ. ಟಿ.ವಿ ಯಲ್ಲಿ ಪಾಠಗಳು ನಡೆಯುತ್ತಿತ್ತು. ನನ್ನ ಅಕ್ಕನ ಮನೆಯಲ್ಲಿ ಟಿವಿ ಇಲ್ಲದ ವಿಚಾರ ತಿಳಿದು ಅವರ ಮನೆಯ ಹಳೆಯ ಟಿವಿಯನ್ನು ಕೊಟ್ಟರು. ಈ ಟಿವಿ ಇಂದಿಗೂ ಒಂದು ಬಾರಿಯೂ ಹಾಳಾಗಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಗೂಗಲ್ ಮೀಟ್ ನಲ್ಲಿ ಪಾಠ ಪ್ರವಚನಗಳು ಆದಾಗ ಮೊಬೈಲ್ ಇಲ್ಲದ ಬಡ ಮಕ್ಕಳ ಹೆತ್ತವರಿಗೆ ಮೊಬೈಲ್ ಕೊಟ್ಟರು. ವೈಯುಕ್ತಿಕವಾಗಿ ಕೊರೋನ ಸಮಯದಲ್ಲಿ ನನಗೆ ನೆರವನ್ನು ಮಾಡಿ ಕಷ್ಟದ ಸಮಯದಲ್ಲಿ ದೇವತೆಯಾಗಿ ಕಂಡರು. ಇವರ ಈ ಸಹಾಯವನ್ನು ನಾನು ಎಂದಿಗೂ ಮರೆಯುವಂತಿಲ್ಲ. 

ವಿದ್ಯಾಗಮದಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವ ಕೊಟ್ಟರು. ಕೊರೋನ ಸಮಯದಲ್ಲಿ ಮಕ್ಕಳ ದಿನಾಚರಣೆಗೆ ಮಕ್ಕಳಿಗೆ ಆನ್ಲೈನ್ ನಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಪ್ರತಿ ಮಗುವಿಗೂ ಮನೆ ಮನೆಗೆ ಹೋಗಿ ಬಹುಮಾನವನ್ನು ಸ್ವಂತ ಹಣದಿಂದ ಕೊಟ್ಟು ಸಂಭ್ರಮ ಪಟ್ಟರು. ತನ್ನ ಸಂಬಳದಲ್ಲಿ ಮೂರು ಸಾವಿರ ಹಣವನ್ನು ಗೌರವ ಶಿಕ್ಷಕರಿಗೆ ಕೊಡುತ್ತಿದ್ದರು. ಇಂಥ ಹೃದಯ ಹೆಚ್ಚಿನವರಿಗೆ ಇರಲಾರದು. ಮಕ್ಕಳಿಗೆ ಇವರು ಶಿಕ್ಷಕಿಯಲ್ಲ ಮಾತೃ ಹೃದಯದ ಮಮತೆಯ ಶಿಕ್ಷಕಿ. ಗೌರವ ಶಿಕ್ಷಕರಿಗೆ ಪ್ರೀತಿಯ ಸಹೋದರಿ. ಇವರು ಮಕ್ಕಳಿಗಾಗಿ 'ಕ್ರಿಯೆಟಿವ್ ಕಾರ್ನರ್' ಎಂಬ ಯೂಟ್ಯೂಬ್ ಚಾನೆಲ್ ಮಾಡಿ ಅದರಲ್ಲಿ ಮಕ್ಕಳಿಗಾಗಿ ಹಲವಾರು ಅಭಿನಯ ಗೀತೆ, ನಾಟಕ, ಮನೋರಂಜನೆಯ ಆಟಗಳು, ತಾವೇ ರಚಿಸಿ ಹಾಡಿದ ಪಾರ್ಥನಾ ಗೀತೆಗಳು ಇದರಲ್ಲಿ ಇದೆ. ಇಂದು ಈ ಚಾನೆಲ್ 9.75k ಜನ ಸಬ್ಸ್ಕ್ರಯಿಬ್ ಮಾಡಿದ್ದಾರೆ. ಈ ಚಾನೆಲ್ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ.

ಇವರ ವಿದ್ಯಾರ್ಥಿಗಳು ಯಾವುದೇ ಕಾರ್ಯಕ್ರಮದ ನಿರೂಪಣೆ, ನಾಟಕ, ಕನ್ನಡ ಇಂಗ್ಲಿಷ್ ಭಾಷಣವನ್ನು ಯಾವುದೇ ಭಯವಿಲ್ಲದೆ ಮಾಡುತ್ತಾರೆ. ಇಲ್ಲಿಯ ವಿದ್ಯಾರ್ಥಿಗಳು ಯಾವುದೇ ಆಂಗ್ಲ ಮಾಧ್ಯಮದ ಮಕ್ಕಳಿಗೆ ಕಡಿಮೆಯಿಲ್ಲ ಅನ್ನುವಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಮುಖ್ಯ ಶಿಕ್ಷಕಿಯಾಗಿದ್ದು ಎಲ್ಲಾ ಕೆಲಸ ಕಾರ್ಯಗಳ ಜೊತೆಗೆ ಇಂಗ್ಲಿಷ್ ಸ್ಪೋಕನ್ ತರಗತಿಯನ್ನೂ ಮಾಡುತ್ತಾರೆ. ಇಲ್ಲಿನ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದ ತನಕ ಭಾಗವಹಿಸಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಇಲ್ಲಿನ ಶಿಕ್ಷಕರು. ನಾನು ಅನಿವಾರ್ಯ ಕಾರಣದಿಂದ ಪಂಡಿಂಜೆವಾಳ್ಯ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಹೋಗುವ ಸಮಯದಲ್ಲಿ ನನಗೆ ಸರ್ಕಾರಿ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭವನ್ನು ಮಾಡುವಷ್ಟೇ ಅದ್ದೂರಿಯಾಗಿ ಇಲ್ಲಿನ ಶಿಕ್ಷಕರು ಪೋಷಕರು ಮಾಡಿದಾಗ ನನ್ನ ಕಣ್ಣಾಲಿಗಳು ತುಂಬಿ ಬಂದವು. ಇಂದು ನಾನು ಅತಿಥಿ ಶಿಕ್ಷಕಿಯಾಗಿ ಅಂಡಿಂಜೆ ಶಾಲೆಯಲ್ಲಿ ಇದ್ದರೂ ಇಲ್ಲಿನ ಶಿಕ್ಷಕರು ಸಹ ಅದೇ ರೀತಿಯ ಸಹಾಯವನ್ನು ಮಾಡುತ್ತಾರೆ. ನಮ್ಮ ಬೆಳವಣಿಗೆಗೆ ಕಾರಣವಾದ ಹಾಗೂ ಈಗ ಆಶ್ರಯವಾಗಿವ ಶಾಲೆಯನ್ನು ಯಾವತ್ತು  ಮರೆಯಲಾರದು. ಆ ನೆನಪುಗಳ ಹಾದಿಯಲ್ಲಿ ಒಂದು ಬಾರಿ ನನ್ನ ನೆಚ್ಚಿನ ಶಾಲೆಗೆ ಭೇಟಿ ಮಾಡುತ್ತೇನೆ. 

ಒಂದು ಬಾರಿ ಶಾಲೆಗೆ ಭೇಟಿ ಮಾಡಿದಾಗ ಒಂದು ವಿಶೇಷ ಚೇತನ ಮಗುವನ್ನು ಕಂಡೆ. ಆ ಮಗುವಿಗೆ ಚಪ್ಪಲಿ ಹಾಕೋಕೆ ಪೆನ್ಸಿಲ್ ಹಿಡಿಯೋಕೆ ಆಗುತ್ತಿರಲಿಲ್ಲ. ನಾನು ಮಾತನಾಡಿದಾಗ ಬರಿ ತಲೆ ಅಲ್ಲಾಡಿಸುತ್ತ ಇದ್ದ. ಮತ್ತೊಂದು ಬಾರಿ ನಾನು ಶಾಲೆಗೆ ಹೋದಾಗ ಅದೇ ಮಗು ತಾನೆ ಚಪ್ಪಲಿ ಹಾಕಿ ಶೌಚಾಲಯಕ್ಕೆ ಹೋಗಿ ಬರುತ್ತಿದ್ದ. ಟೀಚರ್ ನಿಮ್ಮ ಹುಡುಗ ತುಂಬಾ ಬದಲಾಗಿದ್ದಾನೆ ಎಂದಾಗ ಶಿಕ್ಷಕರು ಅವನ ನೋಟ್ಸ್ ಕಾಪಿ ಪುಸ್ತಕವನ್ನು ಅವನ ಬಳಿಯೇ ತರಲು ಹೇಳಿ ನನಗೆ ಕೊಡಲು ಹೇಳಿದರು. ಪುಸ್ತಕ ತೆರೆದು ನೋಡಿದಾಗ ನನಗೆ ಆಶ್ಚರ್ಯ. ಎಷ್ಟು ಮುದ್ದಾದ ದುಂಡು ದುಂಡು ಬರವಣಿಗೆ. ತಂದೆ ತಾಯಿ ಹೆಸರು ಶಾಲೆಯ ಹೆಸರು ಕನ್ನಡ ಇಂಗ್ಲಿಷ್ ನಲ್ಲಿ ಬರೆಯುವಷ್ಟು ಸಾಮರ್ಥ್ಯ ಹೊಂದಿದ್ದ. ಕಾಪಿ ಪುಸ್ತಕವಂತೂ ಮುತ್ತಿನ ಪದಗಳೇ ತುಂಬಿತ್ತು. ಕನ್ನಡದಲ್ಲಿ ನಾನು ಮಾತನಾಡಿದಾಗ ತುಸು ನಾಚುತ್ತಾ ಉತ್ತರಿಸಿದ. ಅವನಲ್ಲಿ ಶಿಕ್ಷಕರು ಸದಾ ಚೈತನ್ಯ ತುಂಬುತ್ತಾರೆ. ಅವನ ಜೊತೆ ಪ್ರೀತಿ ತಾಳ್ಮೆಯಿಂದ ಮಾತನಾಡಿದರೆ ಮಾತ್ರ ಕಲಿಕೆಯಲ್ಲಿ ಬಹಳ ಆಸಕ್ತಿ ತೋರಿಸುತ್ತಾನೆ ಎಂಬ ಶಿಕ್ಷಕರ ಮಾತಿಗೆ ತಲೆಯಾಡಿಸಿದೆ. 

ಅಬ್ಬಾ! ಎಷ್ಟೊಂದು ಬದಲಾವಣೆ ಆ ಮಗುವಿನಲ್ಲಿ. ಕ್ರಿಸ್ ಮಸ್ ಹಬ್ಬದ ಸಂಭ್ರಮ ಈ ಶಾಲೆಯಲ್ಲಿ ಬಹಳ ಬಹಳ ಜೋರು. ಟೀಚರ್ ಕಾರ್ ತಂದರೆ ಶಾಲಾ ಆಟದ ಮೈದಾನದಲ್ಲಿ ಮಕ್ಕಳ ಜೊತೆ ಒಂದು ಸುತ್ತು ಕರೆದುಕೊಂಡು ಹೋಗುತ್ತಾರೆ. ಇವರ ಈ ಗುಣಕ್ಕೆ ಇವರ ಮನೆಯವರ ಸಹಕಾರವೂ ಇರುವುದಕ್ಕೆ ಮೆಚ್ಚಬೇಕು. ಇಂತಹ ಮಾತೃ ಹೃದಯದ ಶಿಕ್ಷಕರು ಎಲ್ಲಾ ಶಾಲೆಗಳಲ್ಲಿ ಇರಲಿ ಎಂದು ಆಶಿಸುತ್ತೇನೆ. 

ನನ್ನ 

ದೇವತೆ                    

ನಿಮಗಿದೋ 

ನನ್ನ ವಂದನೆ

ಶಿಸ್ತಿನ ಶಿಕ್ಷಕಿ 

ನಮಗೆ ಕೊಟ್ಟ ದೇವ

ಪುಟ್ಟ ಮಕ್ಕಳ ಜೀವನ

ಶಿಸ್ತಿನಿಂದ ಆಯಿತು ಹಸನ

ಕಬ್ಬಿಣದ ಕಡಲೆ ಆಂಗ್ಲ ಭಾಷೆ

ನಿಮ್ಮಯ ಉಸಿರು ದ್ವೀತಿಯ ಭಾಷೆ

ನನಗೇಕೋ ನೀವು ಬಲು ಅಚ್ಚು ಮೆಚ್ಚು

ಪುರಸ್ಕಾರಗಳು ಸಿಗಲಿ ಹೆಚ್ಚು ಹೆಚ್ಚು

ನಿಮ್ಮಂತೆಯೇ ಕೀರ್ತಿಯನು ತರುವೆವು ನಾವು

ಕೊಡಲಾರೆವು ನಾವು ನಿಮಗೆಂದಿಗೂ ನೋವು.

ಚಿತ್ರ - ಬರಹ : ಕುಮಾರಿ ಸುನೀತಾ ವೇಣೂರು, ಬೆಳ್ತಂಗಡಿ