ಪಂಥಗಳಾಚೆಯ ಬದುಕು ; ಇಸಂ ಮುಕ್ತ ಜೀವನ

ಪಂಥಗಳಾಚೆಯ ಬದುಕು ; ಇಸಂ ಮುಕ್ತ ಜೀವನ

ದೀರ್ಘವಾದರೂ ಗಂಭೀರ ವಿಷಯ, ದಯವಿಟ್ಟು ಗೌರಿ ಹಬ್ಬದ ವಿರಾಮದಲ್ಲಿ ಸ್ವಲ್ಪ ಸಮಯ ನೀಡಿ... ಸಮಾಜ ಮಾನಸಿಕ ವಿಭಜನೆ ಆಗುವ ಮುನ್ನ ಎಚ್ಚರವಿರಲಿ, ನಾವೆಲ್ಲರೂ ಒಂದೇ ಬಳ್ಳಿಯ ಹೂಗಳು, ಒಂದೇ ದೋಣಿಯ ಪಯಣಿಗರು, ನಮ್ಮ ಅಜ್ಞಾನದಿಂದ ದೋಣಿ ಮುಳುಗದಿರಲಿ.

ಎಡಪಂಥೀಯರು, ಎಡಚರರು, ಅರ್ಬನ್ ನಕ್ಸಲರು ಇತ್ಯಾದಿ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕೇಳಿ ಬರುತ್ತಿವೆ. ಇವರು ಧರ್ಮ ವಿರೋಧಿಗಳು, ದೇಶದ್ರೋಹಿಗಳು, ಹಿಂಸಾವಾದಿಗಳು ಎಂಬ ಅರ್ಥದಲ್ಲಿ ಇದರ ವಿರುದ್ಧ ಚಿಂತನೆಯವರು ಮಾತನಾಡುತ್ತಿದ್ದಾರೆ. ಹಾಗೆಯೇ, ಬಲಪಂಥೀಯರು, ರೈಟ್ ವಿಂಗ್ ನವರು, ರಾಷ್ಟ್ರೀಯ ವಾದಿಗಳು, ಧರ್ಮ ರಕ್ಷಕರು ಮುಂತಾದ ಹೆಸರುಗಳಿಂದ ಕೆಲವರನ್ನು ಕರೆಯಲಾಗುತ್ತದೆ. ಇವರು ಕೋಮುವಾದಿಗಳು, ಗಲಭೆಕೋರರು, ವಿಭಜಕ ಮನಸ್ಥಿತಿಯವರು, ಮಾನವ ವಿರೋಧಿಗಳು, ಅಸಮಾನತೆಯ ಜನಕರು ಎಂದು ಅವರ ವಿರೋಧಿಗಳು ಹೇಳುತ್ತಾರೆ.

ಇದು ಖಂಡಿತ ತಪ್ಪು ಮತ್ತು ವಿಭಜನಾತ್ಮಕ ಮನಸ್ಥಿತಿ. ಈ ರೀತಿ ಯಾವುದೋ ಒಂದು ಸಿದ್ಧಾಂತದ ವಿರುದ್ಧ ದ್ವೇಷ ಕಾರುವುದು ಒಳ್ಳೆಯದಲ್ಲ. ಏಕೆಂದರೆ ಸಾಮಾನ್ಯವಾಗಿ ಧರ್ಮ, ಸಂಪ್ರದಾಯ, ಭಕ್ತಿ, ಮೌಢ್ಯ, ಯಥಾ ಸ್ಥಿತಿವಾದ ಇದನ್ನೇ ಬಹುತೇಕ ಶೇಕಡಾ ತೊಂಬತ್ತರಷ್ಟು ಜನ ಅನುಸರಿಸುತ್ತಾರೆ. ದೇವರು ಧರ್ಮದ ಆಚರಣೆಯಲ್ಲಿ ಸುಖ, ಸಂತೃಪ್ತಿ, ನೆಮ್ಮದಿ ಪಡುತ್ತಾರೆ. 

ಇಂತಹ ಸಂದರ್ಭದಲ್ಲಿ ಅದಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ಸಹಿಸಿಕೊಳ್ಳುವುದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಸೃಷ್ಟಿಯ ರಚನೆಯಲ್ಲಿ ಭಿನ್ನತೆಗಳಿಗೂ ಸದಾ ಅವಕಾಶವಿರುತ್ತದೆ. ಸತ್ಯದ ಅಥವಾ ವಾಸ್ತವದ ಧ್ವನಿಗಳು ಕಡಿಮೆ ಇದ್ದರೂ ಅದನ್ನು ತಿರಸ್ಕರಿಸಲಾಗುವುದಿಲ್ಲ, ತಿರಸ್ಕರಿಸಬಾರದು. ಅಪರಾಧ, ಕುತಂತ್ರ, ಷಡ್ಯಂತ್ರಗಳನ್ನು ಯಾವುದೇ ವ್ಯಕ್ತಿ, ಯಾವುದೇ ರೀತಿಯಲ್ಲಿ ಮಾಡಿದರು ಅದನ್ನು ಕಾನೂನು ವ್ಯಾಪ್ತಿಗೊಳಪಡಿಸಿ ಶಿಕ್ಷಿಸಬೇಕು ಮತ್ತು ಶಿಕ್ಷಿಸುವ ವ್ಯವಸ್ಥೆಯೂ ಇದೆ. 

ಹಾಗೆಂದು ವಾಸ್ತವವನ್ನು ನೇರವಾಗಿ ಪ್ರಶ್ನಿಸುವವರನ್ನು ಸಂಪೂರ್ಣ ನಾಶ ಮಾಡುವ ಪ್ರವೃತ್ತಿಯೇ ಅಪಾಯಕಾರಿ. ಒಂದು ಕಾಲದಲ್ಲಿ ಕಮ್ಯುನಿಸ್ಟ್ ಚಳುವಳಿ ಕೂಡ ಭಾರತ ಮತ್ತು ವಿಶ್ವದ ಅನೇಕ ಒಳ್ಳೆಯ ಬದಲಾವಣೆಗಳಿಗೆ ಕಾರಣವಾಗಿದೆ. ಇಂದು ಎಷ್ಟೋ ಕಾರ್ಮಿಕರು, ಉದ್ಯೋಗಿಗಳು, ಮಹಿಳೆಯರು ಒಂದಷ್ಟು ನೆಮ್ಮದಿಯಿಂದ ತಮ್ಮ ಹಕ್ಕುಗಳನ್ನು ಪಡೆದು ಜೀವಿಸುತ್ತಿದ್ದಾರೆ ಎಂದರೆ ನೂರಕ್ಕೆ ನೂರರಷ್ಟು ಕಮ್ಯುನಿಸ್ಟ್ ಚಳುವಳಿಯೂ ಕಾರಣ. ಅದನ್ನು ಯಾರೂ ಮರೆಯಬಾರದು.

ಇತ್ತೀಚಿನ ವರ್ಷಗಳಲ್ಲಿ ಕಮ್ಯುನಿಸ್ಟ್ ಚಳುವಳಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ನಿಜ. ಹಾಗೆಂದು ಅವರನ್ನು ಹೀನಾಯವಾಗಿ ಕಾಣುವುದಾಗಲಿ, ದ್ರೋಹಿಗಳಂತೆ ಪರಿಗಣಿಸುವುದಾಗಲಿ ಮಾಡುವುದು ಮಾನವತ್ವಕ್ಕೆ, ನಿಯತ್ತಿಗೆ ಬಗೆದ ದ್ರೋಹವಾಗುತ್ತದೆ. ಹಾಗೆಯೇ ಹಠಕ್ಕೆ ಬಿದ್ದು ಬಲಪಂಥೀಯರನ್ನು ಸಾರಾಸಗಟಾಗಿ ದ್ವೇಷಿಸುವುದು ಒಳ್ಳೆಯ ಲಕ್ಷಣವಲ್ಲ. ಅಲ್ಲಿಯೂ ಕಾಲದ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾದ ಕೆಲವು ಅನುಕೂಲಕರ ಅಂಶಗಳಿವೆ. ಅದೂ ಸಹ ಒಂದು ಸೈದ್ದಾಂತಿಕ ವಿಚಾರ ಸರಣಿ.

ಕೆಲವು ಜಾಗತೀಕರಣದ ಬೆಳವಣಿಗೆಯ ಪರಿಣಾಮವಾಗಿ  ಸಿದ್ಧಾಂತಗಳಿಗೆ ಆಯಾ ಕಾಲಕ್ಕೆ ತಕ್ಕಂತೆ ಒಂದಷ್ಟು ಹಿನ್ನಡೆ, ಇನ್ನೊಂದಷ್ಟು ಮುನ್ನಡೆ ಸಹಜವಾದದ್ದೇ. ಕಮ್ಯುನಿಸಂ ಕೂಡ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಮಾಡಿದ ಕೆಲವು ತಪ್ಪುಗಳಿಂದಾಗಿ ಮತ್ತು ಬದಲಾವಣೆ ಬಯಸದ ಹಠಮಾರಿತನದಿಂದಾಗಿ ಕುಸಿತ ಕಂಡಿರುವುದು ನಿಜ. ಹಾಗೆಂದು ಬಲಪಂಥೀಯವಾದವೇ ಶಾಶ್ವತವೇನು ಅಲ್ಲ. ಮುಂದಿನ ಕಾಲಘಟ್ಟದಲ್ಲಿ ಇದು ಸಹ ಕುಸಿಯಬಹುದು. ಆದ್ದರಿಂದ ಒಂದು ದೇಶದ ಪ್ರಜೆಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೆ ಇರಲಿ ಆದರೆ ದ್ವೇಷ, ಅಸೂಯೆಗಳು ಸರ್ವನಾಶದ ಹಂತಕ್ಕೆ ಹೋಗಬಾರದು. ಏಕೆಂದರೆ ಆ ವಿನಾಶದ ಅಗ್ನಿ ಜ್ವಾಲೆಯಲ್ಲಿ ಮತ್ತೆ ಮರು ಹುಟ್ಟು ಪಡೆಯುವ ಸಾಮರ್ಥ್ಯ ಎಡ ಮತ್ತು ಬಲ ಸಿದ್ದಾಂತಗಳಿಗೆ ಖಂಡಿತವಾಗಲೂ ಇದೆ. ಆದ್ದರಿಂದ ಒಬ್ಬರಿಗೊಬ್ಬರು ದ್ವೇಷಿಸುವುದು ಮೂರ್ಖತನದ ಪರಮಾವಧಿ.  ಯಾವುದೇ ವಿಷಯದಲ್ಲಿ ಸರಿ, ತಪ್ಪು, ಅಪರಾಧ ಇವು ಅಷ್ಟಕ್ಕೇ ಮಾತ್ರ ಸೀಮಿತವಾಗಿದ್ದು ಸಮುದಾಯಗಳನ್ನು, ಜಾತಿಗಳನ್ನು, ಧರ್ಮಗಳನ್ನು, ಸಿದ್ಧಾಂತವಾದಿಗಳನ್ನು ಟೀಕಿಸುವುದು ಎರಡು ಪಂಗಡದವರಿಗು ಒಳ್ಳೆಯದಲ್ಲ. 

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ