ಪಂದ್ಯ ಗೆದ್ದ ಬ್ರೆಜಿಲ್; ಮನ ಗೆದ್ದ ಉ.ಕೊರಿಯಾ
ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಬ್ರೆಜಿಲ್-ಉತ್ತರ ಕೊರಿಯಾ ನಡುವಿನ ಪಂದ್ಯವನ್ನು ನಿರೀಕ್ಷೆಯಂತೆ ಬ್ರೆಜಿಲ್ ಗೆದ್ದಿತು; ಆದರೆ, ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಆಟವಾಡಿ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಉ.ಕೊರಿಯಾ.
ಉ.ಕೊರಿಯಾ ತನ್ನ ಪೆನಾಲ್ಟಿ ಆವರಣದಲ್ಲಿ ನಾಲ್ಕು ಮಂದಿ ರಕ್ಷಣಾ ಆಟಗಾರರನ್ನು ಪರ್ಮನೆಂಟ್ ಎಂಬಂತೆ ನಿಲ್ಲಿಸಿದ್ದು ಮಾತ್ರವಲ್ಲ, ಬ್ರೆಜಿಲ್ ಆಟಗಾರರು ಚೆಂಡನ್ನು ಪೆನಾಲ್ಟಿ ಆವರಣದೊಳಕ್ಕೆ ತರುತ್ತಿದ್ದಂತೆಯೇ ಉ.ಕೊರಿಯಾದ ಬಹುತೇಕ ಎಲ್ಲ ಆಟಗಾರರೂ ಅಲ್ಲಿಗೆ ಧಾವಿಸಿ ಭದ್ರ ಕೋಟೆ ರಚಿಸಿಬಿಡುತ್ತಿದ್ದರು. ಈ ತಂತ್ರಗಾರಿಕೆಗೆ ಪಕ್ಕಾದ ಪ್ರಥಮ (ವಿಶ್ವ)ಶ್ರೇಯಾಂಕಿತ ಬ್ರೆಜಿಲ್ ೧೦೫ನೇ ಶ್ರೇಯಾಂಕಿತ (ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಟ್ಟಕಡೆಯ ಶ್ರೇಯಾಂಕಿತ) ಉ.ಕೊರಿಯಾ ವಿರುದ್ಧ ತನ್ನ ಖಾತೆ ತೆರೆಯಲು ಆಟದ ೫೫ನೇ ನಿಮಿಷದವರೆಗೆ ಸೆಣಸಬೇಕಾಯಿತು!
೫೫ನೇ ನಿಮಿಷದಲ್ಲಿ ಬ್ರೆಜಿಲ್ನ ಮೈಕಾನ್ ಮಿಂಚಿನ ವೇಗದಲ್ಲಿ ಚೆಂಡನ್ನು ಉ.ಕೊರಿಯಾ ಗೋಲ್ಕೀಪರನ ಎಡಭಾಗಕ್ಕೆ ಕೊಂಡೊಯ್ದು, ಗೋಲ್ಕೀಪರನ ಹಿಂಭಾಗದಿಂದ ಬಲೆಯೊಳಕ್ಕೆ ತೂರುವಂತೆ ಚೆಂಡನ್ನು ಒದೆಯುವ ಮೂಲಕ ತನ್ನ ತಂಡಕ್ಕೆ ಪ್ರಥಮ ಗೋಲು ತಂದಿತ್ತ. ಅನಂತರ ೭೨ನೇ ನಿಮಿಷದಲ್ಲಿ ಎಲಾನೊ ಹೆಚ್ಚು ಪ್ರಯಾಸವಿಲ್ಲದೆ ಚೆಂಡನ್ನು ಕೊಂಡೊಯ್ದು ಎರಡನೇ ಗೋಲು ದಾಖಲಿಸಿದ.
ಪಂದ್ಯದ ೮೯ನೇ ನಿಮಿಷದಲ್ಲಾದದ್ದು ಅನಿರೀಕ್ಷಿತ ಹಾಗೂ ರೋಚಕ ಬೆಳವಣಿಗೆ. ವಿಜಯದ ಗುಂಗಿನಲ್ಲಿದ್ದ ಬ್ರೆಜಿಲ್ನ ಆಟ ಸ್ವಲ್ಪ ಸಡಿಲವಾದದ್ದರ ಉಪಯೋಗ ಪಡೆದ ಉ.ಕೊರಿಯಾ ತಂಡವು ಚೆಂಡನ್ನು ಬ್ರೆಜಿಲ್ನ ಪೆನಾಲ್ಟಿ ಆವರಣದ ಬಳಿಗೆ ತರುವಲ್ಲಿ ಸಫಲವಾಯಿತು. ಅಲ್ಲಿದ್ದ ಅದರ ಮುನ್ನಡೆ ಆಟಗಾರ ಜಾಂಗ್ ತಾಯ್ ಸೆ ಚೆಂಡನ್ನು ಹೆಡ್ ಮಾಡಿ ಹಿಂದಕ್ಕೆ ಕಳಿಸಿ ಜಿ ಯುನ್ ನ್ಯಾಮ್ಗೆ ಪಾಸ್ ನೀಡಿದ. ಒಡನೆಯೇ ಜಿ ಯುನ್ ನ್ಯಾಮ್ ಚೆಂಡನ್ನು ಶರವೇಗದಲ್ಲಿ ಕೊಂಡೊಯ್ದು, ಏನಾಗುತ್ತಿದೆಯೆಂದು ಬ್ರೆಜಿಲ್ ತಂಡ ಅರಿಯುವ ಮೊದಲೇ ಗೋಲ್ ಪೆಟ್ಟಿಗೆಯೊಳಕ್ಕೆ ತೂರಿಸಿಬಿಟ್ಟ!
೨-೧ ಗೋಲುಗಳಿಂದ ಬ್ರೆಜಿಲ್ ಗೆದ್ದಿತಾದರೂ ಈ ಬಲಿಷ್ಠ ತಂಡದ ವಿರುದ್ಧ ಗೋಲು ಗಳಿಸಿದ ಖ್ಯಾತಿಗೆ ತಥಾಕಥಿತ ದುರ್ಬಲ ಉ.ಕೊರಿಯಾ ತಂಡ ಪಾತ್ರವಾಯುತು.
ಬ್ರೆಜಿಲ್ ತನ್ನ ಖ್ಯಾತಿಗೆ ತಕ್ಕ ಆಟವಾಡಲಿಲ್ಲ. ಯೂರೋಪಿಯನ್ ದಾಳಿಯ ಶೈಲಿಯನ್ನು ಅಳವಡಿಸಿಕೊಂಡಿದ್ದರಿಂದಲೋ ಏನೋ ಬ್ರೆಜಿಲ್ ತಂಡದಲ್ಲಿ ಎಂದಿನ (ಲ್ಯಾಟಿನ್ ಅಮೆರಿಕನ್ ಶೈಲಿಯ) ಕಲಾತ್ಮಕ ಆಟದ ಕೊರತೆ ಕಂಡುಬರುತ್ತಿತ್ತು. ಗೋಲ್ನತ್ತ ಬಾರಿಸಿದ ಹಲವು ಷಾಟ್ಗಳು ಗುರಿ ತಪ್ಪಿದವು. ಬ್ರೆಜಿಲ್ನಂಥ ನುರಿತ ತಂಡದಿಂದ ಸ್ವಲ್ಪ ಹೆಚ್ಚೆನ್ನುವಷ್ಟೇ ಆಫ್ಸೈಡ್ ಯತ್ನಗಳು ನಡೆದವು. ಮೊದಲೇ ಹೇಳಿದಂತೆ ಉ.ಕೊರಿಯಾದ ಭದ್ರಕೋಟೆಯೂ ಬ್ರೆಜಿಲ್ನ ಗೋಲ್ ಗಳಿಕೆಗೆ ಸಾಕಷ್ಟು ಅಡ್ಡಿಯಾಯಿತು. ಉ.ಕೊರಿಯಾ ತಂಡದಲ್ಲಿ ಮುನ್ನಡೆ ಆಟಗಾರ ಜಾಂಗ್ ತಾಯ್ ಸೆ ಮಾತ್ರ ಮಿಂಚಿನ ದಾಳಿ ನಡೆಸುತ್ತ ತನ್ನ ಇಡೀ ತಂಡದಲ್ಲೇ ಎದ್ದುತೋರುವಂಥ ಪ್ರತಿಭೆ ಪ್ರದರ್ಶಿಸಿದ. ಈತನ ನಿಖರ ಲೆಕ್ಕಾಚಾರದ ಪಾಸೇ ಜಿ ಯುನ್ ನ್ಯಾಮ್ಗೆ ಗೋಲ್ ಗಳಿಸಲು ನೆರವಾಯಿತಷ್ಟೆ. ಪಂದ್ಯಕ್ಕೆ ಮುನ್ನ ರಾಷ್ಟ್ರಗೀತೆ ನುಡಿಸಲ್ಪಡುತ್ತಿದ್ದಾಗ ಜಾಂಗ್ ಭಾವತುಂಬಿ ಕಣ್ಣೀರ್ಗರೆಯುತ್ತಿದ್ದ ದೃಶ್ಯ ಹೃದಯಸ್ಪರ್ಶಿಯಾಗಿತ್ತು. ತಾನಾಡುವ ಪ್ರತಿ ಪಂದ್ಯದ ಮೊದಲೂ ಜಾಂಗ್ ಇದೇ ರೀತಿ ಭಾವತುಂಬಿ ಅಶ್ರುಧಾರೆ ಹರಿಸುತ್ತಾನೆ.
ಬ್ರೆಜಿಲ್-ಉ.ಕೊರಿಯಾ ಪಂದ್ಯಕ್ಕೆ ಮುನ್ನ ನಡೆದ ಎರಡು ಪಂದ್ಯಗಳ ಬಗ್ಗೆ ಒಂದೊಂದು ಮಾತು.
ಗ್ರೂಪ್ ಹಂತದ ತನ್ನ ಮೊಟ್ಟಮೊದಲ ಪಂದ್ಯ ಡ್ರಾ ಆದರೆ ಯಾವುದಾದರೂ ತಂಡ ತೀವ್ರವಾಗಿ ದುಃಖಿಸುತ್ತದೆಯೇ? ಸ್ಲೊವಾಕಿಯಾ ತಂಡ ಮಾತ್ರ ನ್ಯೂಜಿಲ್ಯಾಂಡ್ ವಿರುದ್ಧ ೧-೧ ಗೋಲುಗಳ ಡ್ರಾ ಮಾಡಿಕೊಂಡೂ ತೀವ್ರವಾಗಿ ದುಃಖಿಸಿತು! ಕಾರಣವಿಷ್ಟೆ, ೩೪ನೇ (ವಿಶ್ವ)ಶ್ರೇಯಾಂಕದ ಸ್ಲೊವಾಕಿಯಾ ವಿರುದ್ಧ ೭೮ನೇ (ವಿಶ್ವ)ಶ್ರೇಯಾಂಕದ ನ್ಯೂಜಿಲ್ಯಾಂಡ್ ಗೋಲು ಗಳಿಸಿದ್ದು ೯೦+೩ನೇ ನಿಮಿಷದಲ್ಲಿ. ಅಂದರೆ, ಪಂದ್ಯ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ! ಕೈಗೆ ಬಂದ ಜಯದ ತುತ್ತು ಬಾಯಿಗಿಲ್ಲದಂತಾದಾಗ ಸ್ಲೊವಾಕಿಯಾಕ್ಕೆ ದುಃಖವಾಗದಿದ್ದೀತೆ? ಅದೇ ವೇಳೆ, ನ್ಯೂಜಿಲ್ಯಾಂಡ್ ಪಾಳಯದಲ್ಲಿ ಖುಷಿಗೆ ಎಲ್ಲೆಯೇ ಇರಲಿಲ್ಲ.
ಇನ್ನೊಂದು ಪಂದ್ಯದಲ್ಲಿ ಮೂರನೇ (ವಿಶ್ವ)ಶ್ರೇಯಾಂಕದ ಪೋರ್ಚುಗಲ್ ವಿರುದ್ಧ ೨೭ನೇ (ವಿಶ್ವ)ಶ್ರೇಯಾಂಕದ ಐವರಿ ಕೋಸ್ಟ್ ಗೋಲುರಹಿತ ಡ್ರಾ ಮಾಡಿಕೊಂಡದ್ದು (ಅದೂ ಕೂಡ, ಪಂದ್ಯದ ಸಿಂಹಪಾಲು ಸಮಯ ಡ್ರೊಗ್ಬಾ ಎಂಬ ಸಿಂಹವನ್ನು ಹೊರಗಿಟ್ಟು ಆಡಿಯೂ ಡ್ರಾ ಮಾಡಿಕೊಂಡದ್ದು) ಐವರಿ ಕೋಸ್ಟ್ನ ಅಪ್ರತಿಮ ಸಾಧನೆಯೇ ಸರಿ.
(ಈ ಎರಡು ಆಟಗಳ ಬಗ್ಗೆ ಇಂದಿನ ದಿನಪತ್ರಿಕೆಗಳಲ್ಲಿ ವಿವರವಾದ ವರದಿಗಳು ಲಭ್ಯವಿರುವುದರಿಂದ ನಾನು ವಿವರಗಳನ್ನಿಲ್ಲಿ ನೀಡುತ್ತಿಲ್ಲ.)
ನಿನ್ನೆಯ ಲೇಖನದಲ್ಲಿ ನಾನು ಉಲ್ಲೇಖಿಸಿರುವಂತೆ ಈ ಪಂದ್ಯಾವಳಿಯಲ್ಲಿ ಡ್ರಾ ಪರಂಪರೆ ಮುಂದುವರಿದಿರುವುದು ಗಮನಾರ್ಹ. ಕೆಲ ದಿನಗಳ ಬಿಡುವು ತೆಗೆದುಕೊಂಡು ಅನಂತರ ಮತ್ತೆ ವಿಶ್ವಕಪ್ ಪಂದ್ಯಗಳ ಬಗ್ಗೆ ಬರವಣಿಗೆ ಮುಂದುವರಿಸುತ್ತೇನೆ.