ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಪಂಪರಾಮಾಯಣ ಗೊತ್ತಾ? ಇಲ್ವ ಮುಂದೆ ಓದಿ
ಈ ಹಿಂದೆ 'ನಯಸೇನನ ಸಲೀಸಾದ ಸಾಲುಗಳು' ಎಂಬ ಬರಹಗಳನ್ನು ಕಂತುಗಳಾಗಿ ಸಂಪದದಲ್ಲಿ ಹಾಕಿದ್ದೆ. ಮತ್ತೆ ಹಿರಿಗನ್ನಡದ ಹುಚ್ಚು ಹೆಚ್ಚಾಗಿ ಬೇರೆ ಯಾವುದಾದರೂ ಹಿರಿಗನ್ನಡ ಕಬ್ಬವನ್ನು ಹುಡುಕುತ್ತಾ ಇದ್ದೆ. ನಾನು ಯಾವುದೆ ಹಳೆಗನ್ನಡ ಕಬ್ಬ ಓದುವಾಗ ಎಲ್ಲಾದರೂ ಅಚ್ಚಗನ್ನಡದ ಒರೆಗಳ ಬಳಕೆ ಯಾವ ತೆರ ಆಗಿದೆ ಅಂತ ನೋಡ್ತಾ ಇರ್ತೀನಿ. ಈ ರಾಮಾಯಣ, ಮಾಬಾರತ ಎಶ್ಟು ಮಂದಿ ಬರೆದಿದರೊ ಗೊತ್ತಿಲ್ಲ. ಇವನ್ನು ನೆಪ ಮಾಡಿಕೊಂಡು ಆಯ ಕಬ್ಬಿಗರು ಆವೊತ್ತಿನ ಕತೆಯನ್ನು ಹೇಳಿದ್ದಾರೆ ಅಂತ ಎಲ್ಲೊ ಕೇಳಿದ್ದೆ. ಹಾಗೆ ನೋಡುತ್ತಿದ್ದಾಗ ನಾಗಚಂದ್ರ ಕಬ್ಬಿಗ ನೆಗೞ್ದ 'ಪಂಪರಾಮಾಯಣಂ' / ಶ್ರೀರಾಮಚಂದ್ರಚರಿತಪುರಾಣಂ' ಕಣ್ಣಿಗೆ ಬಿತ್ತು. ನಾಗಚಂದ್ರ ಕನ್ನಡದ 'ಮೊದಲ್ಗಬ್ಬಿಗ'ಎಂದೇ ಹೆಸರಾಗಿರುವ ಪಂಪನ ಹೆಸರಿನಲ್ಲಿ ಕ್ರಿ.ಶ.1053ರಲ್ಲಿ ರಾಮಾಯಣ ಬರೆದಿರೋದು ತುಂಬಾ ಹುರುಪು ತುಂಬುವ ವಿಶ್ಯವೆ ಅಂತ ಅದನ್ನು ಹೊಕ್ಕು ಇನ್ನು ಕಣ್ಣಾಡಿಸಿದೆ. ನಾಗಚಂದ್ರನ ಒರೆವೆಡಗಿಗೆ(ಒರೆ+ಬೆಡಗು) ಮಾರುಹೋಗಿ ಇದನ್ನೆ ಒಂದು ಹಲವಿಡಿ(ಹಲ+ಬಿಡಿ)/ ಸರಣಿ ಮಾಡಬಾರದೇಕೆಂದು ಉಂಕಿಸಿ...
ಬಡಿಕೊಳೆ ಕಾಯುಂ ಪಣ್ಣುಂ
ತೊಡಂಬೆಪಱಿದುದಿರ್ವ ಮಾಳ್ಕೆಯಿಂ ಕಿಱಿವಿರಿಯ
ರ್ಮಡಿವರನುಕ್ರಮದಿಂ ಸಾ
ವೊಡರಿಸದೊಡರಿಸುವುದಲ್ತೆ ಕದಳೀಘಾತಂ
ಬಿಡಿಸಿದರೆ,
ಬಡಿಕೊಡೆ ಕಾಯುಂ ಪಣ್ಣುಂ ತೊಡಮ್ ಬೆಪಱಿದುದು ಇರ್ವ ಮಾಳ್ಕೆಯಿಂ ಕಿಱಿ ಹಿರಿಯರ್ ಮಡಿವರ್ ಅನುಕ್ರಮದಿಂ ಸಾವು ಒಡರಿಸದೊಡರಿಸುವುದು ಅಲ್ತೆ ಕದಳೀಘಾತಂ
ಹಣ್ಣು, ಕಾಯಿ ಬಿಟ್ಟಿರುವ ಸಸಿ/ಮರವನ್ನು ಬಡಿದರೆ ಹಣ್ಣು,ಕಾಯಿ ಎರಡೂ ತೊಡೆವುದು(ಕೆಳಗೆ ಬೀಳುವುದು/ಬೇರ್ಪಡುವುದು) ಹಾಗೆಯೆ ಗುಂಪುಸಾವಾದಾಗ ಮಾಳ್ಕೆಯಿಂದ ಹಿರಿಯ-ಕಿರಿಯರೆನ್ನದೆ ಎಲ್ಲರೂ ಒಬ್ಬೊಬ್ಬರಾಗಿ ಸಾವನ್ನಪ್ಪದೆ/ಸಾವನ್ನು ಕೂಡದೆ ಇರುವರೆ?
ಕದಳೀಘಾತ = ಸಾಮೂಹಿಕ ಸಾವು/ನಾಶ
ತೊಡಮ್ = ತೊಡೆ
ಒಡರಿಸು = ಹೊಂದು,ಕೂಡು
ಬೆಪಱಿ = ??
ಗಮನಿಕೆಗಳು:
೧) ಇಲ್ಲಿ 'ಬಡಿಕೊಳೆ' ಒರೆಯಲ್ಲಿ ಶರತ್ತಿನ ಪದಬಳಕೆಯಲ್ಲಿ 'ಬಡಿಕೊಡೆ' ಬದಲು 'ಬಡಿಕೊಳೆ' ಬಳಸಿರುವುದು ಕನ್ನಡದಲ್ಲಿ ಈಗಿರುವ ಹಲವು ಪದಗಳಲ್ಲಿ 'ಡ'ಕಾರವು ಹಿರಿಗನ್ನಡದಲ್ಲಿ 'ಳ'ಕಾರವಾಗಿತ್ತು ಅಂತ ತಿಳಿಯಬಹುದು.
ಮಾದರಿ : ಅ) ಹೊಸಗನ್ನಡದಲ್ಲಿ ಇನ್ನು 'ಕಾಳ್ಗಿಚ್ಚು'ಅಂತ ಹೇಳುವುದುಂಟು. ಕಾಡ್+ಕಿಚ್ಚು= ಕಾಡ್ಗಿಚ್ಚು ಆಗಬೇಕಿತ್ತು ಆದರೆ ಅದು 'ಕಾಳ್ಗಿಚ್ಚು' ಅಂತ ಉಳಿದಿರುವುದು ಹಿರಿಗನ್ನಡದ ಕುರುಹು ಅಂತ ಶಂಕರಬಟ್ಟರು ಒಂದು ಕಡೆ ಹೇಳಿದ್ದಾರೆ.
ಬ) ೧೨ ನೆ ನೂರೇಡಿನಲ್ಲಿ ಅಕ್ಕನವರು ಕೂಡ 'ಹಸಿವಾದೊಡೆ ಬಿಕ್ಶಾನ್ನಗಳುಂಟು' ಅಂತ ಬಳಸಿರುವುದುಂಟು. ಅಂದರೆ ೧೧ನೇ ನೂರೇಡಿನಿಂದ ೧೨ನೇ ನೂರೇಡಿಗೆ ಬರುವು ಹೊತ್ತಿಗೆ 'ಳ'ಕಾರವು 'ಡ'ಕಾರವಾಗಿತ್ತು ಅಂತ ಎಣಿಸಬಹುದು.
೨) ಸಾವು ಎನ್ನುವುದು ಯಾರಿಗೂ ಬೇದಬಾವ ಮಾಡಲ್ಲ ಅನ್ನುವುದನ್ನು ನಾಗಚಂದ್ರ ಕಾಯಿ,ಹಣ್ಣಿನ ಮೂಲಕ ಸಕ್ಕತ್ತಾಗಿ ಹೇಳಿದ್ದಾನೆ ಅನ್ನಿಸಿತು.