ಪಕ್ಷಗಳು ಪ್ರೌಢತೆಯಿಂದ ವರ್ತಿಸಲಿ

ಪಕ್ಷಗಳು ಪ್ರೌಢತೆಯಿಂದ ವರ್ತಿಸಲಿ

ರಾಜಕೀಯದಲ್ಲಿ ಎಲ್ಲವೂ ಸರಿ ಎಂಬ ಮನಸ್ಥಿತಿ ಒಂದಿದೆ. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಸಾಮಾಜಿಕ ಮೌಲ್ಯಗಳ ದೃಷ್ಟಿಯಲ್ಲಿ ಈ ರೀತಿ ರಾಜಕೀಯದಲ್ಲಿ ಮಾಡುವ ಎಲ್ಲ ಕೃತ್ಯಗಳಿಗೂ ಸಮ್ಮತಿಯಿಲ್ಲ. ಎದುರಾಳಿಗಳನ್ನು ಸೋಲಿಸಲು ಅಥವಾ ಸ್ಥೈರ್ಯಗೆಡಿಸಲು ಮಾಡುವ ತಂತ್ರಗಳಿಗೆ ಒಂದು ಮಿತಿಯವರೆಗೆ ಸಮಾಜಿಕ ಸಮ್ಮತಿ ಇದೆ. ಆದರೆ ಆ ಮಿತಿ ಯಾವುದು ಎಂಬುದನ್ನು ಆಯಾ ಕಾಲ, ಸಂದರ್ಭ, ಸನ್ನಿವೇಶಗಳೇ ನಿರ್ಧರಿಸುತ್ತವೆ. ಎದುರಾಳಿ ಪಕ್ಷದ ನಾಯಕರ ಅಥವಾ ಕಾರ್ಯಕ್ರಮಗಳನ್ನು ಕೆಡಿಸಲು ಯತ್ನಿಸುವುದು ಸಮ್ಮತಾರ್ಹ ಮಿತಿಯೊಳಗಿದ್ದರೆ ತಪ್ಪಲ್ಲ, ಆದರೂ ಪ್ರಚಾರಕ್ಕಾಗಿ ಹಾಕಿದ ಫ್ಲೆಕ್ಸ್ ಗಳನ್ನು ಹರಿಯುವುದು ಅಥವಾ ನಾಶ ಮಾಡುವಂತಹ ಕೀಳುಮಟ್ಟದ ಕೃತ್ಯಗಳು ಸ್ವೀಕಾರಾರ್ಹವಲ್ಲ. ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಪ್ರಚಾರದ ಫ್ಲೆಕ್ಸ್ ಗಳನ್ನು ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಹಾಕಲಾಗಿದೆ ಎಂಬ ಪ್ರಕರಣವೇ ಈಗ ಆಡಳಿತಾರೂಢ ಬಿಜೆಪಿ ಮತ್ತು ಎದುರಾಳಿ ಕಾಂಗ್ರೆಸ್ ಪಕ್ಷದ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಗಿದೆ. ಈ ಕೃತ್ಯ ಬಿಜೆಪಿಯದ್ದೇ ಎಂಬುದು ಕಾಂಗ್ರೆಸ್ ಆರೋಪವಾದರೆ, ಕಿಡಿಗೇಡಿಗಳು ಮಾಡಿದ ಕೃತ್ಯವನ್ನು ತನ್ನ ತಲೆ ಮೇಲೆ ಕಟ್ಟಲು ಹವಣಿಸಲಾಗುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಂತೂ ‘ನಾನು ಮನಸ್ಸು ಮಾಡಿದರೆ ಬಿಜೆಪಿಯ ಯಾವ ಕಾರ್ಯಕ್ರಮವನ್ನೂ ನಡೆಯಲು ಬಿಡುವುದಿಲ್ಲ' ಎಂಬಂತಹ ಹೇಳಿಕೆ ನೀಡಿದ್ದಾರೆ. ಇಂತಹ ಕೃತ್ಯಗಳನ್ನು ಯಾರೇ ಮಾಡಿರಲಿ, ಅದರಿಂದ ಯಾರಿಗೂ ಲಾಭವಿಲ್ಲ ಅಥವಾ ನಷ್ಟವೂ ಇಲ್ಲ. ಆಳುವ ನಾಯಕರು ಮತ್ತು ರಾಜಕೀಯ ಪಕ್ಷಗಳು ಗಂಭೀರವಾಗಿ ವರ್ತಿಸುವುದನ್ನು ಕಲಿಯಬೇಕು. ವೈಯಕ್ತಿಕ ತೇಜೋವಧೆ ಮಾಡುವುದು, ನಿಯಂತ್ರಣವಿಲ್ಲದೆ ನಾಲಿಗೆ ಹರಿಯಬಿಡುವುದು, ಕೆಸರೆರಚಾಟ- ಇಂಥವನ್ನೆಲ್ಲ ಬಿಟ್ಟು ಪ್ರೌಢ ರಾಜಕೀಯ ವರ್ತನೆಗಳನ್ನು ಅಳವಡಿಸಿಕೊಳ್ಳುವುದನ್ನು ಜನರು ಬಯಸುತ್ತಾರೆ ಎಂಬುದನ್ನು ಅರಿತುಕೊಂಡರೆ ಒಳ್ಳೆಯದು. ಜತೆಗೆ ಪ್ರಚಾರಕ್ಕಾಗಿ ಹಾಕುವ ಫ್ಲೆಕ್ಸ್ ಬಂಟಿಂಗ್ ಗಳನ್ನು ಕಾರ್ಯಕ್ರಮ ಮುಗಿದ ಕೂಡಲೇ ತೆರವುಗೊಳಿಸಿ, ಸಾರ್ವಜನಿಕ ಸ್ಥಳವನ್ನು ಸ್ವಚ್ಛಗೊಳಿಸುವ ಮಾದರಿ ನಡವಳಿಕೆಯನ್ನು ಪಕ್ಷಗಳು ಅಳವಡಿಕೊಳ್ಳಬೇಕು. 

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೩೦-೦೯-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ