ಪಕ್ಷಿಗಳಿಂದ ಹಣ್ಣಿನ ಬೆಳೆಗಳ ರಕ್ಷಣೆ.
ಬೇಸಿಗೆಯಲ್ಲಿ ಬಹುತೇಕ ಹಣ್ಣಿನ ಬೆಳೆಗಳಲ್ಲಿ ಫಸಲು ಇರುತ್ತದೆ. ಈ ಸಮಯದಲ್ಲಿ ಹಣ್ಣಿನ ಬೆಳೆಗಳನ್ನು ಭಕ್ಷಿಸಿ ಹಾಳು ಮಾಡುವ ಪಕ್ಷಿಗಳ ಕಾಟ ಅತ್ಯಧಿಕ. ಪಕ್ಷಿಗಳು ಬರೇ ಹಣ್ಣು ತಿನ್ನುವುದೇ ಅಲ್ಲದೆ ಅದನ್ನು ಗರಿಷ್ಟ ಪ್ರಮಾಣದಲ್ಲಿ ಹಾಳು ಸಹ ಮಾಡುತ್ತವೆ. ಇದರಿಂದ ಬೆಳೆಗಾರರಿಗೆ ಅಧಿಕ ನಷ್ಟ ಉಂಟಾಗುತ್ತದೆ.
ಈ ನಷ್ಟವನ್ನು ತಡೆಯಲು ಕೆಲವು ದಾಳಿಂಬೆ ಬೆಳೆಗಾರರು ಇಡೀ ಹೊಲಕ್ಕೆ ಬಲೆಯನ್ನು ಹೊದಿಸುತ್ತಾರೆ. ಅದೇ ರೀತಿಯಲ್ಲಿ ದ್ರಾಕ್ಷಿ ಬೆಳೆಗಾರರೂ ಸಹ ಬಲೆಯನ್ನು ಹೊದಿಸುತ್ತಾರೆ. ಬಲೆ ಹಾಕಿ ಕೊಡುವ ಕಾಂಟ್ರಾಕ್ಟ್ ಕೆಲಸದವರೇ ಇದ್ದಾರೆ. ಬಲೆ ಹಾಕುವುದರಿಂದ ದಂಶಕಗಳಾದ ಹಕ್ಕಿಗಳಿಂದ ಉಂಟಾಗುವ ಸುಮಾರು ೨೦% ಫಸಲು ಉಳಿಯುತ್ತದೆ ಎನ್ನುತ್ತಾರೆ ಬೆಳೆಗಾರರು. ಬಲೆ ಹಾಕುವ ಮೂಲಕ ಫಸಲು ಸಂರಕ್ಷಣೆ ಮಾಡುವ ವಿಧಾನ ದ್ರಾಕ್ಷಿ – ದಾಳಿಂಬೆ ಅಲ್ಲದೆ ಅಂಜೂರ ಬೆಳೆಗೂ ಇದೆ. ಅದೇ ರೀತಿಯಲ್ಲಿ ಕರಾವಳಿ ಮಲೆನಾಡಿನಲ್ಲಿ ಬೆಳೆಯಲ್ಪಡುವ ರಾಂಬುಟಾನ್ ಹಣ್ಣಿಗೂ ಸಹ ಬಲೆ ಹಾಕಿ ಹಕ್ಕಿಗಳಿಂದ ರಕ್ಷಣೆ ಪಡೆಯಲಾಗುತ್ತದೆ.
ದ್ರಾಕ್ಷಿ – ದಾಳಿಂಬೆ ಬೆಳೆಗಳಿಗೆ ಬಲೆ ಹಾಕುವ ಕೆಲಸವನ್ನು ಸರಳವಾಗಿಸಲು ಆ ಕೆಲಸ ಮಾಡುವವರು ಮೊದಲಾಗಿ ಅಲ್ಲಲ್ಲಿ ಗೂಟಗಳನ್ನು ಹುಗಿದು ಅದಕ್ಕೆ ಸರಿಗೆಯನ್ನು ಎಳೆಯುತ್ತಾರೆ.ಆ ಸರಿಗೆಯ ಮೇಲೆ ಬಲೆಯನ್ನು ಎಳೆದು ಕೆಲಸ ಸರಳ ಮಾಡಿಕೊಳ್ಳುತ್ತಾರೆ. ಆಗ ಮಿಡಿಗಳು ಉದುರುವುದು, ಬಳ್ಳಿ – ಗಿಡಗಳಿಗೆ ಹಾನಿಯಾಗುವುದು ತಪ್ಪುತ್ತದೆ. ಆದರೆ ಅಂಜೂರ, ರಾಂಬೂಟಾನ್, ವಾಟರ್ ಆಪಲ್ ಬೆಳೆಯುವವರು ಬಲೆ ಹಾಕುವುದು ತುಂಬಾ ಕಷ್ಟದ ಕೆಲಸ. ಹೆಚ್ಚಾಗಿ ಬೆಳೆಗಾರರು ಇಡೀ ಮರಕ್ಕೆ ಬಲೆಯನ್ನು ಎಳೆದು ಮುಚ್ಚುತ್ತಾರೆ. ಈ ಕೆಲಸವನ್ನು ಸರಳವಾಗಿಸಲು ಪ್ರತೀ ಮರದ ಸುತ್ತ ನಾಲ್ಕು ಗೂಟಗಳನ್ನು ಹುಗಿದು, ಅದರ ತುದಿ ಭಾಗಕ್ಕೆ ಸರಿಗೆಯನ್ನು ಕಟ್ಟಿ ಆ ಸರಿಗೆಯ ಮೇಲೆ ಬಲೆಯನ್ನು ಎಳೆಯುವುದು ಸುಲಭ. ಬಲೆ ಹಾಕಿ ಬೆಳೆ ಸಂರಕ್ಷಣೆ ಮಾಡುವುದರಿಂದ ೨೦- ೨೫ % ಹೆಚ್ಚಿನ ಫಸಲನ್ನು ಪಡೆಯಬಹುದು.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ