ಪಕ್ಷಿ ಸಂಕುಲ ಪರಿಸರ ಆರೋಗ್ಯಕ್ಕೆ ಕೈಗನ್ನಡಿ
ಧಾರವಾಡದಲ್ಲಿ ಇತ್ತೀಚೆಗೆ ನಾಲ್ಕಾರು ಕಡೆಗಳಲ್ಲಿ ‘ಹೈ-ಮಾಸ್ಟ್’ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅತ್ಯಂತ ಎತ್ತರದಲ್ಲಿ ತಲೆ ಎತ್ತಿ ನಾಲ್ಕೂ ದಿಕ್ಕುಗಳಲ್ಲಿ ಪ್ರಖರ ಬೆಳಕು ಬೀರುವ ಈ ಹೈ-ಮಾಸ್ಟ್ ಗಳು ಪಕ್ಷಿಗಳ ದೈನಂದಿನ ಬದುಕಿಗೆ- ವಿಷೇಶವಾಗಿ ರಾತ್ರಿಯ ವೇಳೆ ಪ್ರಾಣ ಘಾತಕವಾಗಿ ಪರಿಣಮಿಸಿವೆ.
ನಗರದ ಶಹರ ಪೊಲೀಸ್ ಠಾಣೆ, ವಿವೇಕಾನಂದ ವೃತ್ತ, ಆಲೂರು ವೆಂಕಟರಾವ್ ವೃತ್ತ, ಪ್ರೊ.ಆರ್ಮೆಂಡೊ ಮ್ಯಾನೇಜಿಸ್ ವೃತ್ತ, ಕರ್ನಾಟಕ ಕಾಲೇಜು ರಸ್ತೆ, ರೈಲ್ವೆ ನಿಲ್ದಾಣದ ಅಕ್ಕ-ಪಕ್ಕದಲ್ಲಿ ಸಾವಿರಾರು ಪಕ್ಷಿಗಳಿಗೆ ಆವಾಸ ಸ್ಥಾನಗಳಾಗಿ ನೂರಾರು ಮರಗಳಿವೆ. ನಿತ್ಯ ಅವುಗಳಲ್ಲಿ ಸಾವಿರಾರು ಗೂಡು ಕಟ್ಟಿಕೊಂಡು ಮರಿಗಳೊಂದಿಗೆ ವಾಸವಾಗಿವೆ.
ಗುಬ್ಬಿ, ಬುಲ್-ಬುಲ್, ಗಿಳಿ, ಬೆಳ್ಳಕ್ಕಿ, ಗೂಬೆಗಳು, ಬಾವಲಿಗಳು ಸೇರಿದಂತೆ ಮೈನಾ, ಪಾರಿವಾಳಗಳು ಹಾಗು ಕಾಗೆಗಳು ತರಹೇವಾರಿ ಗೂಡುಗಳನ್ನು ಕಟ್ಟಿಕೊಂಡು ವಾಸವಾಗಿವೆ. ಆದರೆ ಪ್ರತಿ ರಾತ್ರಿ ಹತ್ತಾರು ಪಕ್ಷಿಗಳು ಸತ್ತು ಗಿಡದ ಬುಡದಲ್ಲಿ ಬೀಳುತ್ತವೆ. ಇಡಿ ರಾತ್ರಿ ಹೈ-ಮಾಸ್ಟ್ ವಿದ್ಯುದೀಪಗಳು ಸೂಸುವ ಪ್ರಖರ ಬೆಳಕು ಈ ಪಕ್ಷಿಗಳಿಗೆ ಎರವಾಗಿದೆ. ಇಂತಹ ಯೋಜನೆಗಳನ್ನು ತಯಾರಿಸುವ ನಮ್ಮವರಿಗೆ ಸುತ್ತ-ಮುತ್ತಲಿನ ಪರಿಸರದ ಕುರಿತು ತುಸು ತಿಳಿವಳಿಕೆ ಇರಬೇಡವೆ?
ಹಕ್ಕಿಗಳ ಸ್ಥಿತಿ-ಗತಿ ನಮ್ಮ ಪರಿಸರದ ಆರೋಗ್ಯಕ್ಕೆ ಕೈಗನ್ನಡಿ. ಪರಿಸರದ ಸಮತೋಲನದಲ್ಲಿ ಎಲ್ಲ ಹಕ್ಕಿಗಳದ್ದು ಪಾತ್ರವಿದೆ. ಉದಾಹರಣೆಗೆ ಗೂಬೆಯನ್ನೆ ತೆಗೆದುಕೊಳ್ಳೋಣ. ಒಂದು ಜೋಡಿ ಗೂಬೆ ಹಾಗು ೬ ಮರಿಗಳು, ೫೦೦ ರಿಂದ ೬೦೦ ಇಲಿಗಳನ್ನು ತಮ್ಮ ಬೆಳವಣಿಗೆಯ ಹಂತದಲ್ಲಿಯೆ ಬೇಟೆಯಾಡಿ ಕೊಲ್ಲುತ್ತವೆ. ಮಾರಿಷಿಯಸ್ ನಲ್ಲಿ ಮಿಡತೆಗಳ ಹಾವಳಿಯನ್ನು ನಿಯಂತ್ರಿಸಲು ಭಾರತದಿಂದ ಮೈನಾ ಹಕ್ಕಿಗಳನ್ನು ಆಮದು ಮಾಡಿಕೊಂಡಿದ್ದು ಬಹುಶ: ನಮ್ಮವರ ಸ್ಮೃತಿಪಟಲದಲ್ಲಿ ಉಳಿದಿಲ್ಲ.
ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ಅಂಕೆ ಮೀರಿದ ಶಬ್ದ ಮಾಲಿನ್ಯದಿಂದಾಗಿ ಹಕ್ಕಿಗಳ ಇಂಪಾದ ಧ್ವನಿಯ ಸೊಲ್ಲಡಗಿದಂತಾಗಿದೆ. ನಗರ-ಪಟ್ಟಣಗಳಲ್ಲಿ ವಾಸಿಸುತ್ತಿರುವ ಹಕ್ಕಿಗಳು ತಮ್ಮದೇ ಆದ ಇಂಪಾದ ಧ್ವನಿಯಲ್ಲಿ ಪರಸ್ಪರ ಕೂಗಿ ಕರೆದಿದ್ದೂ ಸಹ ಕೇಳಿಸದಂತಾಗಿದೆ. ಈ ಬೆಳವಣಿಗೆಯಿಂದಾಗಿ ಹೆಚ್ಚು ನಷ್ಟ ಉಂಟಾಗಿದ್ದು ಮರಿಹಕ್ಕಿಗಳಿಗೆ. ತಾಯಿ ಹಾಗು ತಂದೆ ಹಕ್ಕಿಯ ಧ್ವನಿಯನ್ನು ಕೇಳಿ, ಅನುಕರಿಸಿ ತಮ್ಮ ಭಾಷೆ ಕಲಿಯಬೇಕಿದ್ದ ಮರಿಹಕ್ಕಿಗೆ ಟ್ಯೂಷನ್ ಅವಶ್ಯಕತೆ ಒದಗಿ ಬಂದಿದೆ!