ಪಕ್ಷಿ ಹಾಗು ಪರಿಸರ ಕೆಲ ಪರಿಹಾರೋಪಾಯಗಳು

ಪಕ್ಷಿ ಹಾಗು ಪರಿಸರ ಕೆಲ ಪರಿಹಾರೋಪಾಯಗಳು

ಬರಹ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಪಕ್ಷಿ ಸಂಕುಲಕ್ಕಾಗಿ ಮೀಸಲಿರಿಸಿ ನಿರ್ಮಿಸಲಾದ ‘ಚಿನ್ನದ ಬೆಳಸು’ ಹಣ್ಣಿನ ತೋಟವನ್ನು ಮಂಜೇಶ್ವರದ ಸಾವಯವ ಕೃಷಿ ತಜ್ನ ಡಾ.ಡಿ.ಸಿ.ಚೌಟ ಉದ್ಘಾತಿಸಿದ್ದಾರೆ. ೪ ಎಕರೆ ಜಮೀನಿನಲ್ಲಿ ೧೨ ವಿಧದ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ಈ ತೋಟದಲ್ಲಿ ಬೆಳೆದ ಹಣ್ಣುಗಳೆಲ್ಲ ಪಕ್ಷಿಗಳ ಆಹಾರಕ್ಕಾಗಿಯೇ ಬಳಕೆಯಾಗಲಿವೆ! ಈ ತೋಟದಲ್ಲಿ ಬೆಳೆದ ಹಣ್ಣುಗಳೆಲ್ಲ ದಾಳಿಂಬೆ, ಅಂಜೂರು, ಸೀತಫಲ, ಮಾವು, ಚೆರ್ರಿ, ನಿಂಬೆಹಣ್ಣು, ಬಾಳೆಗಿಡ ಮತ್ತು ಬಾರಿ ಹಣ್ಣಿನ ಗಿಡಗಳು ಸೇರಿದಂತೆ ಇತರೆ ಗಿಡಗಳನ್ನು ಬೆಳೆರ್ಸಲಾಗುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರವಾಗಲಿ ಮತ್ತು ಔಷಧಗಳನ್ನಾಗಲಿ ಬಳಸದೇ ಕೇವಲ ಜೈವಿಕ ಮತ್ತು ಸಾವಯವ ಗೊಬ್ಬರ ಮಾತ್ರ ಬಳಸಿ, ಬೆಳೆಸಿದ ಈ ಹಣ್ಣಿನ ತೋಟದ ಹಣ್ಣುಗಳನ್ನು ಮಾರಾಟ ಮಾಡಲಾಗುವುದಿಲ್ಲ. ಜೀವ ಸಂಕುಲದ ರಕ್ಷಣೆಗಾಗಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಪಕ್ಷಿಗಳನ್ನು ಆಕರ್ಷಿಸಲು ಈ ತೋಟ ಬೆಳೆಸಲಾಗುತ್ತಿದೆ. ಈ ತೋಟದ ಪಕ್ಕದಲ್ಲಿಯೇ ಒಂದು ಸಣ್ಣ ಕಾಲುವೆ ಹರಿಯುತ್ತಿದ್ದು ಇಲ್ಲಿಗೆ ಆಹಾರಕ್ಕಾಗಿ ಬರುವ ಪಕ್ಷಿಗಳಿಗೆ ನೀರು ಕುಡಿಯಲು ಸ್ವಹ ಅನುಕೂಲವಿದೆ. ಹಣ್ಣಿನ ಗಿಡಗಳನ್ನು ಬೆಳೆಸಲು ಕೊಳವೆ ಬಾವಿ ಹಾಕಿಸದೇ ಕೇವಲ ಒಂದು ಬಾವಿಯನ್ನು ತೋಡಲಾಗಿದೆ. ಈ ಬಾವಿಯಿಂದಲೇ ಗಿಡಗಳಿಗೆ ನೀರು ಹರಿಸಲಾಗುತ್ತಿದೆ. ವಿಶ್ವವಿದ್ಯಾಲಯದ ೭ ಜನ ಸಿಬ್ಬಂದಿ ತೋಟದ ಉಸ್ತುವಾರಿಗಿದ್ದಾರೆ. ಈ ರೀತಿ ಧಾರವಾಡದಲ್ಲಿ ಬೇಂದ್ರೆಯವರ ಸಾಧನಾಸ್ಫೂರ್ತಿಯ ಕೆರೆ ಸಾಧನಕೇರಿ ಹಾಗು ಕೆಲಗೇರಿಗಳ ಪಕ್ಕದಲ್ಲಿ ‘ಚಿನ್ನದ ಬೆಳೆಸು’ ತೋಟಗಳನ್ನು ನಿರ್ಮಿಸಲು ಅವಕಾಶವಿದೆ. ಪಕ್ಷಿ ಸಂಕುಲದ ಉಳಿವಿಗಾಗಿ ವಿದ್ಯಾನಗರಿಯಲ್ಲಿ ಇಂತಹ ಪ್ರಯತ್ನಕ್ಕೆ ಚಾಲನೆ ಸಿಕ್ಕರೆ? ಖ್ಯಾತ ಗ್ರಾಹಕ ತಜ್ನ, ಪರಿಸರವಾದಿ ಅಡ್ಡೂರು ಕೃಷ್ಣರಾವ್ ದಾಖಲಿಸುವಂತೆ- ಅನೇಕ ನಿರಾಶಾದಾಯಕ ಪ್ರಕರಣಗಳ ನಡುವೆಯೂ ಕೆಲ ಆಶಾದಾಯಕ ಸುದ್ದಿಗಳು ಹಕ್ಕಿಗಳ ಉಳಿವಿನ ಬಗ್ಗೆ ಭರವಸೆ ಮೂಡಿಸುತ್ತವೆ. ಉದಾಹರಣೆಗೆ ಮುಂಬೈದಂತಹ ನಗರಗಳಲ್ಲಿ ಪಾರಿವಾಳಗಳಿಗೆ ಕಾಳು ಎಸೆಯುವುದು ಹಲವರ ನಿತ್ಯದ ಪರಿಪಾಠವಾಗಿದೆ. ದೂರದ ರಾಜಸ್ಥಾನದಲ್ಲಿ ಹಕ್ಕಿಗಳ ಬದುಕುವ ಹಕ್ಕಿನ ರಕ್ಷಣೆಗಾಗಿ ಹಳ್ಳಿಗರು ಸದ್ದಿಲ್ಲದೇ ಕಾರ್ಯವೆಸಗುತ್ತಿದ್ದಾರೆ. ಅಲ್ಲಿಯ ಲಾಪೋಡಿಯಾ ಹಾಗು ಸುತ್ತ ಮುತ್ತಲಿನ ೭೦೦ ಹಳ್ಳಿಗಳಲ್ಲಿ ಲಕ್ಶ್ಮಣಸಿಂಗರ ಮುಂದಾಳುತ್ವದಲ್ಲಿ ಕಳೆದೊಂದು ದಶಕದಿಂದ ಜಲ ಸಂರಕ್ಷಣೆಯ ಕೆಲಸ ಸಹ ಪ್ರಚಾರವಿಲ್ಲದೇ ಸಾಗಿ ಬಂದಿದೆ. ನೆಲ-ಜಲ ಸಂರಕ್ಷಣೆಯ ತಜ್ನ ಶ್ರೀ ಪಡ್ರೆ ಪ್ರಕಾರ- ಲಾಪೋಡಿಯಾ ಹಾಗು ಇತರೆ ಹಳ್ಳಿಗಳಲ್ಲಿ ಹಲವಾರು ಕೆರೆಗಳಿಗೆ ಮರುಜೀವ ನೀಡಲಾಗಿದೆ. ತುಂಬಿನಿಂತ ಕೆರೆಗಳ ನೀರಿನಲ್ಲಿ ಹಕ್ಕಿಗಳಿಗೂ ಪಾಲಿದೆ ತಾನೆ? ಅಲ್ಲಿನ ಜನ ಇನ್ನೂ ಓಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೇಸಿಗೆಯಲ್ಲಿ ಹಕ್ಕಿಗಳಿಗೆ ಹಣ್ಣು, ಕಾಳು ಎಲ್ಲಿಂದ ಸಿಗಬೇಕು? ಅದಕ್ಕಾಗಿಯೇ ಅವರು ಹಕ್ಕಿಗಳಿಗಾಗಿಯೇ ಒಂದು ಗೋದಾಮು ಸ್ಥಾಪಿಸಿದ್ದಾರೆ. ಪ್ರತಿಯೊಂದು ಕುಟುಂಬವೂ ತನ್ನ ಬೆಳೆ ಕೊಯ್ದ ನಂತರ ಐದೈದು ಕಿಲೋ ಕಾಳು ದೇಣಿಗೆ ನೀಡಬೇಕು. ಇದು ಹಕ್ಕಿಗಳಿಗೆ ಮೀಸಲು! ಪರಿಸರ ಎಲ್ಲವನ್ನೂ ಸಹಿಸಿ ಕೊನೆಗೊಮ್ಮೆ ತಕ್ಕ ಉತ್ತರವನ್ನೇ ನೀಡುತ್ತದೆ. ಕೆಟ್ಟ ಮೇಲೆ ಬುಧ್ಧಿ ಬಂತು ಎನ್ನುವುದಕ್ಕಿಂತ ಪರಿಸರಕ್ಕೆ ಪೂರಕ ಹಾಗು ಪ್ರೇರಕ ಅಭಿವೃಧ್ಧಿ ತಂತ್ರಗಳತ್ತ ನಾವು ತುರ್ತಾಗಿ ಗಮನ ಹರಿಸಬೇಕು.