ಪಟಾಕಿ ದುರಂತಗಳ ತಡೆಗೆ ಅತ್ಯಂತ ಕಠಿಣ ಕ್ರಮ ಅಗತ್ಯ
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವಂತೆ ಒಂದರ ಹಿಂದೆ ಮತ್ತೊಂದರಂತೆ ಸಾಲು ಸಾಲು ಪಟಾಕಿ ದುರಂತಗಳು ವರದಿಯಾಗುತ್ತಿವೆ. ಅ.೭ರಂದು ಬೆಂಗಳೂರು ಹೊರವಲಯದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ೧೭ ಮಂದಿ ಬಲಿಯಾಗಿದ್ದಾರೆ. ಅದಾದ ಬಳಿಕ ತಮಿಳುನಾಡಿನಲ್ಲಿ ಸಂಭವಿಸಿದ ಪ್ರತ್ಯೇಕ ದುರ್ಘಟನೆಗಳಲ್ಲಿ ೨೩ ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕ, ತಮಿಳುನಾಡಿನಲ್ಲಿ ಈ ಒಂದು ತಿಂಗಳಿನಲ್ಲೇ ೪೦ ಮಂದಿ ಪಟಾಕಿಯಿಂದ ಪ್ರಾಣ ತೆತ್ತಿದ್ದಾರೆ. ಇವು ಕೆಲವು ನಿದರ್ಶನಗಳಷ್ಟೇ. ಇಂತಹ ಹಾಗೂ ಇದಕ್ಕಿಂತ ದೊಡ್ಡದಾದ ಪಟಾಕಿ ದುರಂತಗಳು ಕಾಲಕಾಲಕ್ಕೆ ದೇಶದಲ್ಲಿ ಘಟಿಸುತ್ತಲೇ ಇವೆ. ದೇಶದಲ್ಲಿ ಪಟಾಕಿ ಎಂಬುದು ೬೦೦೦ ಕೋಟಿ ರೂ. ಗೂ ಅಧಿಕ ಮೊತ್ತದ ಉದ್ಯಮ. ಇಂತಹ ದೊಡ್ಡ ಉದ್ಯಮದ ಬಗ್ಗೆ ಆಳುವ ಸರ್ಕಾರಗಳು ಹಾಗೂ ಅಧಿಕಾರ ವರ್ಗ ತಾಳಿಸುವ ಅಸೀಮಮನಿರ್ಲಕ್ಷ್ಯವನ್ನು ಪಟಾಕಿ ದುರ್ಘಟನೆಗಳು ಪದೇ ಪದೇ ಎತ್ತಿ ತೋರಿಸುತ್ತಿವೆ. ಸರ್ಕಾರಗಳು ಆ ಕ್ಷಣಕ್ಕೆ ಕಠಿಣ ಕ್ರಮದ ಮಾತುಗಳನ್ನು ಆಡಿದರೂ ಅದು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿಲ್ಲ ಎಂಬುದು ವಾಸ್ತವ. ಇದರಿಂದಾಗಿ ಅಮಾಯಕರು ತಮ್ಮ ಜೀವವನ್ನು ತ್ಯಜಿಸುವಂತಾಗಿರುವುದು ದುರ್ದೈವ.
ಪಟಾಕಿ ದುರಂತ ಜನರ ಪ್ರಾಣಕ್ಕೆ ಎರವಾಗಿರುವ ಹಿನ್ನಲೆ ದೆಹಲಿ ಮಾದರಿಯಲ್ಲಿ ಪಟಾಕಿ ನಿಷೇಧಿಸುವ ಕುರಿತು ಚಿಂತನೆ ನಡೆಸುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ದೆಹಲಿಯಲ್ಲಿ ವರ್ಷದ ಅಂತ್ಯಕ್ಕೆ ತಲೆದೋರುವ ವಾಯುಮಾಲಿನ್ಯದ ಕಾರಣಕ್ಕೆ ಪಟಾಕಿ ನಿಷೇಧಿಸಲಾಗಿದೆ. ಆದರೆ ಅದು ಯಾವ ವರ್ಷವೂ ಅಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದ ನಿದರ್ಶನವಿಲ್ಲ. ದೀಪಾವಳಿ ಅಥವಾ ಬೇರೆ ಉತ್ಸವದ ಸಂದರ್ಭದಲ್ಲಿ ಮನರಂಜನೆಗಾಗಿ ಸಿಡಿಸುವ ಪಟಾಕಿ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರಗಳು ಪಟಾಕಿ ಉದ್ಯಮಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ ಕ್ರಮಗಳನ್ನು ಜಾರಿಗೆ ತರುವ ಅವಶ್ಯವಿದೆ. ಈಗ ಇರುವ ನಿಯಮಗಳು ಕಾಗದದಲ್ಲಿವೆ. ಬೇರೆ ಬೇರೆ ಕಾರಣಗಳಿಂದಾಗಿ ಅವು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿಲ್ಲ. ಏಕೆ ಆ ರೀತಿ ಆಗಿದೆ ಎಂಬುದರ ಬಗ್ಗೆ ಗಮನಹರಿಸುವ ಜತೆಗೆ ತಜ್ಞರ ಸಮಿತಿ ರಚಿಸಿ ಇಂತಹ ದುರಂತಗಳನ್ನು ತಪ್ಪಿಸುವ ಸಂಬಂಧ ಸಲಹೆ ಪಡೆಯುವುದು ಸಮಯೋಜಿತ. ಈಗ ಸಂಭವಿಸುತ್ತಿರುವ ದುರಂತಗಳು ಸರ್ಕಾರಕ್ಕೆ ಪಾಠವಾಗಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳು ಘಟಿಸಿದಂತೆ ನೋಡಿಕೊಳ್ಳುವುದಕ್ಕೆ ದಾರಿಯಾಗಬೇಕು. ಈ ಬಾರಿಯೂ ನಿರ್ಲಕ್ಜ್ಶ ವಹಿಸಿದರೆ, ಇಂತಹ ದುರ್ಘಟನೆಗಳಿಗೆ ಕೊನೆಯೇ ಇಲ್ಲ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೯-೧೦-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ