ಪಠ್ಯ ಪ್ರಮಾದ (ಭಾಗ ೨)

ಪಠ್ಯ ಪ್ರಮಾದ (ಭಾಗ ೨)

ಕರ್ನಾಟಕದ ಇತಿಹಾಸದಲ್ಲಿ ಅತೀ ಹೆಚ್ಚು ಚರ್ಚೆಯಾಗಿ, ವಾದ-ವಿವಾದಕ್ಕೆ ಕಾರಣವಾದ ಪಠ್ಯ ಪ್ರಹಸನಕ್ಕೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಕಂದಾಯ ಸಚಿವ ಆರ್ ಅಶೋಕ್ ಸುದೀರ್ಘ ಸುದ್ದಿಗೋಷ್ಟಿ ನಡೆಸಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು. ಈ ಹಿಂದೆ ಪಠ್ಯದಲ್ಲಿ ಅವರಿಗೆ ಬೇಕಾದ ಅಜೆಂಡಾ ತುರುಕುತ್ತಿದ್ದರು. ಅವುಗಳನ್ನು ಹಾಗೇ ಬೋಧಿಸಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಪಠ್ಯ ಪರಿಷ್ಕರಣೆ ಚರ್ಚೆ ವಿಷಯವಾಗಿ ಹೊಮ್ಮಿರುವುದು ಒಳ್ಳೆಯದು ಎಂದು ಅಶೋಕ್ ಹೇಳಿದರು. ಕೆಲವು ಸಾಹಿತಿಗಳಿಗೆ ಹಿಂದೂ ಮಲಗಿದರೆ ದೇಶ ಮಲಗೀತು ಎಂಬ ಭಾವನೆಯಲ್ಲಿರುತ್ತಾರೆ. ಬರಗೂರು ಸಮಿತಿಯಿಂದ ಪಠ್ಯದಲ್ಲಿ ೧೫೦ ತಪ್ಪುಗಳಿದ್ದವು. ಇದೀಗ ಪರಿಷ್ಕರಿಸಿರುವ ಪಠ್ಯದಲ್ಲಿ ಕೇವಲ ಏಳು-ಎಂಟು ತಪ್ಪುಗಳಿವೆ. ಆದರೂ ಹಳೇ ಪಠ್ಯ ಮುಂದುವರಿಸಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಹೆಡಗೇವಾರ್ ಅವರ ಆದರ್ಶ ಪುರುಷ ಯಾರಾಗಬೇಕು ಎಂಬ ಲೇಖನ ಪಠ್ಯವಾಗಿರುವುದು ಈ ಬಾರಿಯ ಪಠ್ಯದ ವಿಶೇಷ. ಈ ಪಾಠದ ವಿಷಯಾಂಶವು ಹೆಡಗೇವಾರ್ ಅವರ ಕುರಿತಂತೆ ಇರುವ ವಿಷಯಾಂಶಗಳಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದು, ರಾಮ, ಕೃಷ್ಣ, ರಜಪೂತ, ಶಿವಾಜಿ ಇಷ್ಟವಾಗದ ಪದಗಳು. ಅದನ್ನು ತೆಗೆಯುವ ಪ್ರಯತ್ನವನ್ನು ಸಿದ್ಧರಾಮಯ್ಯ ಸರ್ಕಾರದಲ್ಲಿನ ಸಮಿತಿ ಮಾಡಿತ್ತು. ನಿರಂತರವಾಗಿ ಅಲ್ಪ ಸಂಖ್ಯಾತರ ಓಲೈಕೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಟೀಕಿಸಿದರು.

ಸಿದ್ಧರಾಮಯ್ಯನವರಿಗೆ ಟಿಪ್ಪು ಅಂದರೆ ಮೈಮೇಲೆ ಬರುತ್ತದೆ. ಮೈಸೂರು ಒಡೆಯರ್ ರನ್ನು ಕಡೆಗಣನೆ ಮಾಡಿದ್ದಾರೆ. ರಾಜವಂಶಕ್ಕೆ ಅವಮರ್ಯಾದೆ ಮಾಡಿದ್ದಾರೆ ಎಂದು ಟೀಕಿಸಿದ ಅವರು ಟಿಪ್ಪು ಬಗ್ಗೆ ಒಂದು ಪುಟ ಬರೆಯಬಹುದು. ಆತ ಮತಾಂತರ ಮಾಡಿ, ಹಿಂದುಗಳ ಮೇಲೆ ದೌರ್ಜನ್ಯ ಮಾಡಿದ್ದರೂ, ಕನ್ನಡದ ಮೇಲೆ ಅಭಿಮಾನವೇ ಇರಲಿಲ್ಲವಾದರೂ ಟಿಪ್ಪುವಿನ ಬಗ್ಗೆ ಆರು ಪುಟವಿದೆ ಎಂದರು.

ಪಠ್ಯದಲ್ಲಿ ಕುವೆಂಪು, ತಪ್ಪು ಯಾರದ್ದು? - ಕಾಗೇರಿ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ರಚನೆಯಾದ ಪಠ್ಯಗಳಲ್ಲಿ ಕುವೆಂಪು ರಚಿಸಿದ ಎಂಟು ಪದ್ಯ, ಗದ್ಯ ಇತ್ತು. ಈಗ ಬಹಳ ದೊಡ್ಡದಾಗಿ ಮಾತನಾಡುತ್ತಿರುವ ಸಿದ್ಧರಾಮಯ್ಯ ಅವಧಿಯಲ್ಲಿ ಎಂಟರಿಂದ ಏಳಕ್ಕೆ ಇಳಿಸಿದರು ಎಂದು ಆರ್ ಅಶೋಕ್ ಕುಟುಕಿದರು. ಕುವೆಂಪು ಅನಲೆಯನ್ನು ತೆಗೆದರು. ಕುವೆಂಪು ರಾಮಾಯಣ ದರ್ಶನಂನಲ್ಲಿ ವಿಭೀಷಣ ಪುತ್ರಿ ವಾತ್ಸಲ್ಯದ ಬಗ್ಗೆ ಇತ್ತು. ಅದನ್ನು ಕೈಬಿಟ್ಟು, ಅವರ ಪರಮ ಪ್ರೀತಿಯ ಈಗ ಪ್ರತಿಭಟಿಸುತ್ತಿರುವ ಹಂಸಲೇಖ ಪದ್ಯ ಸೇರಿಸಿದರು ಎಂದರು. ಯೋಗ, ಸಂಸ್ಕೃತಿ, ಭಾರತೀಯ ಪರಂಪರೆ ಕುರಿತ ಪಠ್ಯವನ್ನು ಸಿದ್ಧರಾಮಯ್ಯ ಸರ್ಕಾರ ಕೈಬಿಟ್ಟಿತು. ಅದು ಅವರಿಗೆ ಬೇಡವಾಗಿತ್ತು ಎಂದರು. ಕುವೆಂಪು ಅವರಿಗೆ ಈ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳುತ್ತಾರೆ. ಎಂಟು ಪದ್ಯ-ಗದ್ಯವಿದ್ದುದ್ದು ಏಳು ಮಾಡಿದ್ದು ಯಾರು? ನಮ್ಮ ಸರ್ಕಾರ ಇನ್ನೂ ಮೂರು ಸೇರಿಸಿದೆ. ಕುವೆಂಪು ವ್ಯಕ್ತಿ ಪರಿಚಯ ಇರುವ ನಾಲ್ಕನೇ ತರಗತಿ ಪಠ್ಯದಲ್ಲಿ ವಾಕ್ಯ ತಪ್ಪಾಗಿದೆ ಎಂದು ಟೀಕೆ ಬಂತು. ಸಂಬಂಧಿಸಿದ ಪಠ್ಯವು ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಹಾಗೇ ಇತ್ತು. ಆಗ ದನಿ ಎತ್ತದ ಸಾಹಿತಿಗಳು ಈಗ ದನಿ ಎತ್ತುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅಶೋಕ್ ತಿಳಿಸಿದ ಮಹತ್ವದ ಅಂಶಗಳು:

* ಮಹಾತ್ಮ ಗಾಂಧಿಯವರು ಭಾರತ - ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕೊಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಪ್ರಯೋಗಿಸಿದ್ದಲ್ಲದೇ ಮತೀಯ ಯುದ್ಧಗಳ ಕುರಿತಾದ ಅಂಶಗಳನ್ನು ತೆಗೆದುಹಾಕಲಾಗಿದೆ.

* ವೀರ ಶಿವಾಜಿಯನ್ನು ಕಡೆಗಣಿಸಲಾಯಿತು. ರಜಪೂತರ ಪಾಠವನ್ನೂ ಕೈಬಿಟ್ಟರು. ಪ್ರಥ್ವಿರಾಜ್ ಚೌಹಾಣ್ ಪಠ್ಯದಲ್ಲಿ ನಮ್ಮ ರಾಜರ ಔದಾರ್ಯ ನಮ್ಮ ಮಕ್ಕಳಿಗೆ ತಿಳಿಯಬಾರದು ಎಂಬಂತೆ ಪರಿಷ್ಕರಣೆ. 

* ರಾಷ್ಟ್ರಧ್ವಜ ಕುರಿತು ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ, ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು..ಗ಼ೀತೆ ತೆಗೆದಿದ್ದರು.

* ಮೈಸೂರು ನಗರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹರಡಿದೆ. ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಿ ಮೈಸೂರು ಮನೆತನದ ಅಧಿದೇವತೆ ಎಂಬ ಪ್ರಮುಖ ಅಂಶ ಕೈಬಿಡಲಾಗಿದೆ. 

* ದೇವಾಲಯ ಚಿತ್ರಗಳನ್ನು ಕೈಬಿಟ್ಟಿರುವುದು ಮಥುರಾ ಶ್ರೀಕೃಷ್ಣ ಮಂದಿರ ಮತ್ತು ಸೋಮನಾಥ ದೇವಾಲಯದ ಅಂಶ ಕೈಬಿಟ್ಟಿರುವುದು.

* ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿಹಾಕಲಾಗಿದೆ. ವಿಜಯನಗರ ಸಮ್ರಾಜ್ಯವು ಉದಯಗೊಂಡು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಣೆ ಮಾಡಿದರು. ಸಾಮ್ರಾಜ್ಯವು ಮೂರು ಶತಮಾನಗಳ ಕಾಲ ವೈಭವದಿಂದ ಮೆರೆಯಿತು ಎಂಬ ಸಾಲುಗಳಿಗೆ ಕತ್ತರಿ ಪ್ರಯೋಗ.

* ಭಾರತದ ಮಹಾರಾಜರ ಕಡೆಗಣನೆ, ದಿಲ್ಲಿ ಸುಲ್ತಾನರ ಕಾಲದ ಖಿಲ್ಜಿ ಅವಧಿಯ ಗುಲಾಮಗಿರಿ ಅಂಶ ಎಗರಿಸಿದರು. ಇನ್ನು ರಜಪೂತರ ಗುಣ ಧರ್ಮಗಳನ್ನು ಕೈಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. 

* ಸರ್ವಾಧಿಕಾರದಿಂದ ರಾಷ್ಟ್ರಪ್ರೀತಿ ಹೆಚ್ಚುತ್ತದೆ ಎಂಬ ಅಂಶವನ್ನು ಸಮಾಜ ವಿಜ್ಞಾನ ಪಾಠದಲ್ಲಿ ಸೇರಿಸಲಾಗಿದೆ. ಹಳೆಯ ಪಠ್ಯದ ಬಹಳಷ್ಟು ಪುಟಗಳಲ್ಲಿದ್ದ ಹಿಂದೂ ಪದ ಕೈಬಿಡಲಾಗಿದೆ. ಹಿಂದೂ ಮಹಾ ಸಾಗರ ಇರಬಾರದು ಎಂದು ಇಂಡಿಯನ್ ಓಷನ್ ಎಂದು ಬದಲಾಯಿಸಿದರು.

* ದೆಹಲಿ ಸುಲ್ತಾನರ ಪಾಠದಲ್ಲಿ ಧ್ವಂಸ ಮಾಡಿದ್ದರು ಎಂದಿತ್ತು. ದಾಳಿಯನ್ನು ಕಡೆಗಣಿಸಿ ಒಳ್ಳೆದಾಗಿದೆ ಎಂದು ಬಿಂಬಿಸಿದರು. 

* ೧೦ನೇ ತರಗತಿ ಕನ್ನಡ ಭಾಷೆ ಪುಸ್ತಕದಲ್ಲಿದ್ದ ಆದಿಕವಿ ಪಂಪ ಬರೆದಿರುವ 'ಎಮ್ಮನುಡಿಗೇಳ್' ಪಾಠವನ್ನು ಮಹಾಭಾರತದ ಕಥೆ ಎಂಬ ಕಾರಣಕ್ಕೆ ಕೈಬಿಡಲಾಗಿದೆ.

(ಮುಗಿಯಿತು) ಕೃಪೆ: ವಿಜಯವಾಣಿ ದಿ: ೨೪-೦೬-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ