ಪಡಿತರ ಚೀಟಿ ತಿದ್ದುಪಡಿ ದಿನಾಂಕ ವಿಸ್ತರಿಸಿ
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಮೂರು ದಿನ ಅವಕಾಶ ಕಲ್ಪಿಸಿ, ರಾಜ್ಯದ ವಿವಿದೆಡೆ ಜಿಲ್ಲಾವಾರು ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿತ್ತು. ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ, ಮದುವೆಯಾದವರ ಅಥವಾ ಮೃತರ ಹೆಸರು ತೆಗೆದು ಹಾಕುವುದು, ವಿಳಾಸ ಬದಲಾವಣೆ, ಹೆಸರಿನ ದೋಷ ಸರಿಪಡಿಸುವುದು ಸೇರಿದಂತೆ ಇತರ ತಪ್ಪುಗಳ ತಿದ್ದುಪಡಿಗೆ, ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಮತ್ತು ಗ್ರಾಮೀಣ ಭಾಗಗಳಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ಅವಕಾಶ ನೀಡಲಾಗಿತ್ತು. ಆದರೆ ತಿದ್ದುಪಡಿ ಕಾರ್ಯದ ಅವಧಿ ಮುಗಿದರೂ ಗ್ರಾಮ ಒನ್ ಕೇಂದ್ರಗಳಿಗೆ ಲಾಗಿನ ಐಡಿ ನೀಡದೇ ಇರುವುದರಿಂದ ಜನರು ಪರದಾಡುವಂತಾಗಿದೆ. ಪಡಿತರ ಚೀಟಿ ತಿದ್ದುಪಡಿ ಕೆಲಸಕ್ಕಾಗಿಯೇ ತಮ್ಮ ಕೆಲಸ ಕಾರ್ಯ ಬಿಟ್ಟು ಕೇಂದ್ರಕ್ಕೆ ಸತತ ಎರಡು ದಿನ ಕೇಂದ್ರಗಳಿಗೆ ಅಲೆದಾಡಿದ ಚೀಟಿದಾರರು, ಬಂದ ದಾರಿಗೆ ಸುಂಕವಿಲ್ಲವೆಂದು ಇಲಾಖೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿರುವ ಘಟನೆಗಳು ಬಹಳ ಕಡೆ ನಡೆದಿವೆ. ಬೇರೆ ಸಂದರ್ಭಗಳಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಎಂಬುದು ಸಾಮಾನ್ಯ. ಈಗ ತಿದ್ದುಪಡಿ ಸೇವೆಯೇ ಲಭ್ಯವಿಲ್ಲದಂತಾಗಿದೆ. ಮೂರು ದಿನ ತಿದ್ದುಪಡಿ ಅವಕಾಶ ಕೊಟ್ಟಿರುವ ಆಹಾರ ಇಲಾಖೆಯು ಅವಧಿ ಮುಗಿದರೂ ಸಮಸ್ಯೆಯನ್ನು ಬಗೆಹರಿಸದಿರುವುದು ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆ, ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಡಿತರ ಚೀಟಿ ಅತೀ ಅಗತ್ಯವಾಗಿದೆ. ಹಾಗಾಗಿ, ಇಲಾಖೆಯು ತಿದ್ದುಪಡಿ ದಿನಾಂಕವನ್ನು ವಿಸ್ತರಿಸಬೇಕು. ಇನ್ನು ತಿದ್ದುಪಡಿಗೆ ಯಾವೆಲ್ಲಾ ದಾಖಲೆಗಳು ಬೇಕು ಎಂಬ ಮಾಹಿತಿ ತಿಳಿಸುವ ನಾಮ ಫಲಕ ಅಥವಾ ಪೋಸ್ಟರ್ ಗಳನ್ನು ಅನೇಕ ಕಡೆ ಹಾಕಿಲ್ಲ. ಸರತಿ ಸಾಲಿನಲ್ಲಿ ನಿಂತು ತಿದ್ದುಪಡಿಗೆ ಹೋದಾಗ ಅಗತ್ಯ ದಾಖಲೆ ಕೇಳುತ್ತಿದ್ದಾರೆ. ಆ ದಾಖಲೆ ಇಲ್ಲ, ಈ ದಾಖಲೆ ಇಲ್ಲ ಎಂದು ಜನರನ್ನು ಅಲೆದಾಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಆದ್ದರಿಂದ ಕೇಂದ್ರದ ಬಳಿ ಅಗತ್ಯ ದಾಖಲೆಗಳ ಕುರಿತು ಮಾಹಿತಿ ತಿಳಿಸುವ ಪೋಸ್ಟರ್ ಅಳವಡಿಸಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೪-೧೦-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ