ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ
ರಾಜ್ಯದ ಪಡಿತರದಾರರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ವಿತರಣೆಗಾಗಿ ಕೆಲವು ತಿಂಗಳ ಹಿಂದೆಯಷ್ಟೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಈ ಮೂಲಕ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿ ಪಡಿತರದಾರರಿಗೆ ಕ್ಲಪ್ತ ಸಮಯಕ್ಕೆ ಸಮರ್ಪಕವಾಗಿ ಪಡಿತರ ವಿತರಣೆಯಾಗಲಿವೆ ಎಂಬ ನಿರೀಕ್ಷೆ ಈಗ ಮತ್ತೆ ಹುಸಿಯಾಗಿದೆ. ಕಳೆದೆರಡು ವಾರಗಳ ಹಿಂದೆಯಷ್ಟೇ ಇಲಾಖೆ ಅಳವಡಿಸಿಕೊಂಡಿರುವ ಹೊಸ ವ್ಯವಸ್ಥೆಯಲ್ಲೂ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು ಮತ್ತದೇ ‘ಸರ್ವರ್ ಡೌನ್' ರಾಗ ಪುನರಾವರ್ತನೆಗೊಳ್ಳತೊಡಗಿದೆ.
ಪಡಿತರ ಸೋರಿಕೆ ಮತ್ತು ಬೋಗಸ್ ಪಡಿತರ ಚೀಟಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಂಯೋಜಿಸಿ, ಬೆರಳಚ್ಚು ಧೃಡೀಕರಣ ವ್ಯವಸ್ಥೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೆ ತಂದಿತ್ತು. ಇಕೆವೈಸಿ ಪ್ರಕ್ರಿಯೆ ಮತ್ತು ಪಡಿತರವನ್ನು ಪಡೆಯಲು ಕಾರ್ಡ್ ದಾರರು ಬೆರಳಚ್ಚು ನೀಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸರಕಾರದ ವಿವಿಧ ಇಲಾಖೆಗಳಲ್ಲಿ ಬಳಸಲಾಗುತ್ತಿದ್ದ ರಾಷ್ಟ್ರೀಯ ಮಾಹಿತಿ ಕೇಂದ್ರದ ತಂತ್ರಾಂಶವನ್ನೇ ಅವಲಂಬಿಸಿದ್ದರಿಂದಾಗಿ ಸರ್ವರ್ ಸಮಸ್ಯೆ ವಿಪರೀತವಾಗಿತ್ತು. ಮಿತಿಮೀರಿದ ಒತ್ತಡದಿಂದಾಗಿ ‘ಸರ್ವರ್ ಡೌನ್' ಪ್ರತಿನಿತ್ಯದ ಸಮಸ್ಯೆಯಾಗಿ ಪಡಿತರ ಚೀಟಿದಾರರು ಸರಕಾರಕ್ಕೆ ಹಿಡಿಶಾಪ ಹಾಕುವಂತಾಗಿತ್ತು. ಅಲ್ಲದೆ ಈ ಗೊಂದಲ, ಅವ್ಯವಸ್ಥೆಯ ಪರಿಣಾಮ ಪಡಿತರದಾರರು ಮತ್ತು ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ನಡುವೆ ಸಂಘರ್ಷವೇರ್ಪಡುವ ಸನ್ನಿವೇಶಗಳೂ ಸೃಷ್ಟಿಯಾಗಿದ್ದವು. ಈ ಗೊಂದಲ, ಅವ್ಯವಸ್ಥೆಯ ಪರಿಣಾಮ ಪಡಿತರದಾರರು ಮತ್ತು ನ್ಯಾಯಬೆಲೆ ಅಂಗಡಿಯ ಸಿಬಂದಿ ನಡುವೆ ಸಂಘರ್ಷವೇರ್ಪಡುವ ಸನ್ನಿವೇಶಗಳೂ ಸೃಷ್ಟಿಯಾಗಿದ್ದವು. ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಇಲಾಖೆ ಕರ್ನಾಟಕ ರಾಜ್ಯ ಅಂಕಿ ಅಂಶಗಳ ಕೇಂದ್ರದ ಸಹಯೋಗದಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸಿ, ಪಡಿತರ ವಿತರಣೆಗೆ ವ್ಯವಸ್ಥೆ ಮಾಡಿತ್ತು. ಆರಂಭದ ದಿನಗಳಲ್ಲಿ ಎಲ್ಲ ಸಮಸ್ಯೆಗಳೂ ಸುಸೂತ್ರವಾಗಿ ಬಗೆಹರಿದಂತೆ ಕಂಡುಬಂದರೂ ಹಾಲಿ ತಿಂಗಳಲ್ಲಿ ಮತ್ತೆ ‘ಸರ್ವರ್ ಡೌನ್' ಸಮಸ್ಯೆ ಕಾಣಿಸಿಕೊಳ್ಳುವ ಮೂಲಕ ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ' ಎಂಬಂತಾಗಿದೆ. ತಿಂಗಳು ಮುಗಿಯಲು ಇನ್ನೇನು ಹತ್ತು ದಿನಗಳು ಮಾತ್ರ ಬಾಕಿ ಉಳಿದಿದ್ದು ಎಲ್ಲ ಪಡಿತರ ಚೀಟಿದಾರರಿಗೆ ಪಡಿತರ ಲಭಿಸುವುದು ಕಷ್ಟಸಾಧ್ಯವಾಗಿದೆ.
ಹೊಸ ತಂತ್ರಾಂಶದಲ್ಲಿ ಸಮಸ್ಯೆ ತಲೆದೋರಿ ವಾರ ಎರಡು ಕಳೆದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ಇಲಾಖೆಯ ಬೇಜವಾಬ್ದಾರಿತನಕ್ಕೆ ಪಡಿತರ ಚೀಟಿದಾರರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಇನ್ನು ಪಡಿತರ ಚೀಟಿ ತಿದ್ದುಪಡಿ, ಇಕೆವೈಸಿ ಸಹಿತ ಹಲವಾರು ಕೆಲಸ ಕಾರ್ಯಗಳಿಗೆ ಈ ಸರ್ವರ್ ಡೌನ್ ಸಮಸ್ಯೆ ಪಡಿತರ ಚೀಟಿದಾರರಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಕಾರ ಮತ್ತು ಜನಪ್ರತಿನಿಧಿಗಳಂತೂ ರಾಜಕೀಯ ತಿಕ್ಕಾಟವಷ್ಟೇ ನಮ್ಮ ಕರ್ತವ್ಯ ಎಂದು ಭಾವಿಸಿದಂತಿದ್ದರೆ, ಅಧಿಕಾರಿ ವರ್ಗ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಹೊಸ ತಂತ್ರಾಂಶದಲ್ಲಿ ಕೊಂಚ ಸಮಸ್ಯೆಯಾಗಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿದು ಪಡಿತರದಾರರಿಗೆ ಈ ಹಿಂದಿನಂತೆ ಸಮರ್ಪಕವಾಗಿ ಪಡಿತರ ವಿತರಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ತನೆಯನ್ನೇನೋ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಒಂದು ವೇಳೆ ಸದ್ಯ ಸಮಸ್ಯೆ ನಿವಾರಣೆಯಾದರೂ ಈ ತಿಂಗಳ ಪಡಿತರವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವುದು ಇಲಾಖೆಗೆ ಕಷ್ಟವಾಗಲಿದೆ. ಮುಂದಿನ ವಾರ ದೀಪಾವಳಿ ಹಬ್ಬ ಆರಂಭವಾಗಲಿದ್ದು ಜನಸಾಮಾನ್ಯರು ಅದರಲ್ಲೂ ಬಡವರು ಪಡಿತರವಿಲ್ಲದೆ ಹಬ್ಬ ಆಚರಿಸುವ ಅನಿವಾರ್ಯತೆಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಕೈಮೀರಿ ಹೋಗುವುದಕ್ಕೂ ಮುನ್ನ ಇಲಾಖೆ ಆದಷ್ಟು ಬೇಗ ತಂತ್ರಾಂಶದಲ್ಲಿನ ಲೋಪವನ್ನು ಸರಿಪಡಿಸಬೇಕು ಇಲ್ಲವೇ ಪಡಿತರ ವ್ಯವಸ್ಥೆಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೧-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ