ಪತಂಜಲಿಯ ಯೋಗ ಭಾಗ ೪

ಪತಂಜಲಿಯ ಯೋಗ ಭಾಗ ೪

ಬರಹ

ಪತಂಜಲಿಯ ಯೋಗ

ನಾಲ್ಕನೆಯ ಲೇಖನ

ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದ‍ರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ , ದೌ‍ರ್ಮನಸ್ಯ (ಮನಸ್ಸಿನ ಪರಿತಾಪ), ಅಂಗಮೇಜಯತ್ವ (ದೇಹದ ಚಲನೆ),ಶ್ವಾಸಪ್ರಶ್ವಾಸ (ಅಸಮವಾದ ಉಸಿರಾಟ).
ಇವುಗಳಲ್ಲಿ ಸಂಶಯ ಮತ್ತು ಭ್ರಾಂತಿದ‍ರ್ಶನದ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯವಿದೆ. ಸಂಶಯ ಯೋಗದ ಯಾವ ಸ್ಥಿತಿಯಲ್ಲಿದ್ದವರನ್ನೂ ಬಿಡುವುದಿಲ್ಲ. ಮುಖ್ಯವಾಗಿ ಯೋಗ ಮನಸ್ಸಿನ ಮೇಲೆ ನಡೆಸುವ ಪ್ರಯೋಗ-ಸ್ವಪ್ರಯೋಗ. ಉದಾಹರಣೆಗೆ ಅದು ಮಂಜು ಕವಿದ ಹಾದಿ ಎನ್ನಬಹುದು. ನಾವು ಯಾವಾಗ ಎಲ್ಲಿದ್ದೇವೆ ಎಂದು ತಿಳಿಯುವುದು ಕಠಿಣ. ಪ್ರಜ್ಞಾಪೂರ್ವಕವಾಗಿ ಅಭ್ಯಾಸ ವೈರಾಗ್ಯಗಳಲ್ಲಿ ವ‍ರ್ಷಗಟ್ಟಲೆ ನಿರತರಾದಾಗ ನಾವು ಯಾವುದಾದರೊಂದು ಸ್ಥಿತಿಯನ್ನು ತಲುಪುವವರೆಗೆ ನಾವು ಯೋಗದಲ್ಲಿ ಮುಂದುವರೆಯುತ್ತಿದ್ದೇವೆಯೇ ಎಂಬ ಅನುಮಾನ ಬಂದೇ ಬರುತ್ತದೆ. ಒಂದು ಸ್ಥಿತಿಯನ್ನು ತಲುಪುವ ಹಿಂದಿನ ದಿನ ಕೂಡ ಪ್ರಾರಂಭಿಕ ದಿನದ ಮನೋಸ್ಥಿತಿಯೇ ಇದ್ದಂತೆ ಅನಿಸುತ್ತದೆ.
ನಮ್ಮ ಮನಸ್ಸು ಅಭ್ಯಾಸ ವೈರಾಗ್ಯಗಳಲ್ಲಿ ಸ್ವಲ್ಪ ಮುಂದುವರೆದಲ್ಲಿ ಅದೇ ಮುಂದಿನ ಸ್ಥಿತಿ ಎನ್ನಿಸಬಹುದು. ಉದಾಹರಣೆಗೆ ಮನಸ್ಸನ್ನು ಒಂದು ಜಾಗದಲ್ಲಿ ನೆಲೆಗೊಳಿಸಲು ಸಾಧ್ಯವಾದಾಗ ಅದೇ ಸಮಾಧಿ ಎನಿಸಬಹುದು. ಮನಸ್ಸು ಸ್ವಲ್ಪ ತಿಳಿಯಾದಾಗ ನಮಗೆ ಸಂಪ್ರಜ್ಞಾತ ಸ್ಥಿತಿ ಉಂಟಾಯಿತು ಎಂದು ಭಾಸವಾಗಬಹುದು.
ಅಡ್ಡಿ-ಅಡಚಣೆಗಳ ನಿವಾರಣೆಗೆ ಯೋಗದ ಹಾದಿಯಲ್ಲಿ ನಡೆಯುವವರು ಕೆಳಕಂಡ ವಿಧಾನಗಳಲ್ಲಿ ತಮಗೆ ಸರಿಹೊಂದುವ ಒಂದನ್ನು ಆರಿಸಿ ಅದನ್ನೇ ಅಭ್ಯಾಸ ಮಾಡಬೇಕು.ಯೋ.ಸೂ.ಪಾದ೧. ಸೂತ್ರ.೩೨
ಸುಖಿಜನರಲ್ಲಿ ಸ್ನೇಹ, ದುಃಖಿತರಲ್ಲಿ ಕರುಣೆ, ಒಳ್ಳೆಯಜನರನ್ನು ಕಂಡರೆ ಸಂತೋಷ, ಕೆಟ್ಟವರಲ್ಲಿ ಉಪೇಕ್ಷೆ ಈ ಭಾವನೆಗಳನ್ನು ಬೆಳಸಿಕೊಳ್ಳುವುದರಿಂದ ಮನಸ್ಸು ಒಂದು ಹದಕ್ಕೆ ಬರುತ್ತದೆ. ಎಂದರೆ ನಮಗಿಂತ ಸುಖವಾಗಿರುವವರನ್ನು ಕಂಡಾಗ ಅಸೂಯೆಯಾಗಬಾರದು. ದುಃಖಿತರನ್ನು ನೋಡಿದಾಗ ಅನುಕಂಪ ಮೊಡಬೇಕೇ ವಿನಹಃ ಅಹಂಕಾರವಾಗಲೀ(ಸಾಮಾನ್ಯ ಮಾತಿನಲ್ಲಿ ಬರುವ ಕೊಬ್ಬು ಎಂದ‍‌ರ್ಥ), ಉಪೇಕ್ಷೆಯಾಗಲೀ ಇರಬಾರದು. ಕೆಟ್ಟವರನ್ನು ಕಂಡಾಗ ಮನದಲ್ಲಿ ದ್ವೇಷಭಾವ ಏಳಕೂಡದು.
ಸಮವಾದ ಶ್ವಾಸಪ್ರಶ್ವಾಸದಿಂದಲೂ ಸಾಧ್ಯ(ಪ್ರಾಣಾಯಾಮ).
ಮೊಗಿನ ತುದಿ, ಹಣೆಯ ಮಧ್ಯ ಹೀಗೆ ಕೆಲವು ಜಾಗಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿದಾಗ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಮನಸ್ಸಿನಲ್ಲಿ ಜ್ಯೋತಿ ಅಥವಾ ಆನಂದದ ಬಗ್ಗೆ ಧ್ಯಾನಿಸಿದಾಗ ಸಾಧ್ಯ.
ವಿರಾಗ ಅಥವಾ ವಿರಾಗಿಗಳ ಬಗ್ಗೆ ಅಭ್ಯಸಿಸುವುದರಿಂದ ಸಾಧ್ಯ.
ಕನಸು ಅಥವಾ ನಿದ್ರೆ ಇವುಗಳ ಬಗ್ಗೆ ಆಳವಾಗಿ ಚಿಂತಿಸುವುದರಿಂದಲೂ ಸಾಧ್ಯ.
ಅಥವಾ ಯಾವುದಾದರೂ ಒಂದು ಒಳ್ಳೆಯ ಆಲೋಚನೆಯಿಂದ ನಿಮ್ಮ ಮನಸ್ಸಿನಲ್ಲಿ ವೃತ್ತಿಗಳು ಏಳುವುದು ಕಡಿಮೆ ಮಾಡಲು ಸಾಧ್ಯವಾದಲ್ಲಿ ಅದನ್ನೇ ಮುಂದುವರಿಸಬಹುದು.
ಹೀಗೆ ಧೀ‍ರ್ಘ ಕಾಲ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮನಸ್ಸಿನಲ್ಲಿ ವೃತ್ತಿಗಳು ಏಳುವುದು ಕಡಿಮೆಯಾಗುತ್ತಾಬರುತ್ತದೆ. ಮನಸ್ಸು ಪಕ್ವವಾದಂತೆ ಹೊರಗಿನ ವೃತ್ತಿಗಳ ನಿಯಂತ್ರಣ ಸಾಧ್ಯವಾಗುತ್ತದೆ. ಅವುಗಳಿಂದ ಚಿತ್ತಕ್ಷೋಭೆಯುಂಟಾಗುವುದನ್ನು ತಡೆಯುವ ಶಕ್ತಿ ಬರುತ್ತದೆ. ಇದರಿಂದ ಹೊಸದಾಗಿ ಮನಸ್ಸಿನಲ್ಲಿ ಕ್ಲೇಷಗಳು ಉಂಟಾಗುವುದಿಲ್ಲ.
ಮನಸ್ಸಿನಲ್ಲಿ ವೃತ್ತಿಗಳು ಏಳುವುದರ ಮೇಲೆ ಸಂಪೂ‍ರ್ಣ ಹತೋಟಿಗೆ ಬಂದಾಗ ಆತ್ಮ ಸಚೇತನವಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೪೭
ಇದರಿಂದ ಋತಂಭರಾ ಎಂಬ ಪ್ರಜ್ಞಾಸ್ಥಿತಿ ಉಂಟಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೪೮
ಇದು ಸಾಮಾನ್ಯವಾಗಿ ಕಂಡು, ಕೇಳಿ ತಿಳಿದ ಜ್ಞಾನಕ್ಕಿಂತ ಭಿನ್ನವಾದುದು;ಎಂದರೆ ಜ್ಞಾನ ತಾನಾಗಿಯೇ- ಮನಸ್ಸು ಬುದ್ದಿ ಮತ್ತು ಅಹಂಕಾರಗಳ ನೆರವಿಲ್ಲದೆಯೇ, ಉದಯವಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೪೯
ಇದರಿಂದ ಹುಟ್ಟುವ ಸಂಸ್ಕಾರಗಳು ಸಾಮಾನ್ಯವಾಗಿ ಹುಟ್ಟುವ ಸಂಸ್ಕಾರಗಳನ್ನು ಪ್ರತಿಬಂಧಿಸುತ್ತದೆ.ಯೋ.ಸೂ.ಪಾದ೧. ಸೂತ್ರ.೫೦
ಮನಸ್ಸಿನಲ್ಲಿ ಹುಟ್ಟುವ ಪ್ರತಿಯೊಂದು ವೃತ್ತಿ ಸಹ ಒಂದೊಂದು ಸಂಸ್ಕಾರವನ್ನು ಮನದಲ್ಲಿ ಬಿಡುತ್ತದೆ. ಅದು ನೋವನ್ನುಂಟುಮಾಡುವ ಅಥವಾ ನೋವನ್ನುಂಟುಮಾಡದಿರುವ ಗುಣಗಳನ್ನು ಹೊಂದಿರುತ್ತದೆ. ಈ ಸಂಸ್ಕಾರಗಳು ಸ್ಮೃತಿಯ ಜೊತೆ ಸೇರಿ ಮನಸ್ಸಿನಲ್ಲಿ ಎಡಬಿಡದೆ ಆಲೋಚನಾ ತರಂಗಗಳನ್ನು ಎಬ್ಬಿಸುತ್ತಿರುತ್ತದೆ. ಮನಸ್ಸಿನ ಕ್ಲೇಷಗಳಿಗೆ ಕಾರಣವಾಗುತ್ತದೆ.
ಋತಂಭರಾ ಪ್ರಜ್ಞಾಸ್ಥಿತಿಯನ್ನೂ ನಿರೋಧಿಸಿದಾಗ ನಿ‍‍ರ್ಬೀಜ ಸಮಾಧಿಯಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೫೧

ಪತಂಜಲಿಯ ಪ್ರಥಮ ಸಮಾಧಿಪಾದದ ಮುಖ್ಯಸೂತ್ರಗಳನ್ನು ಯೋಗದಲ್ಲಿ ಪ್ರಾರಂಭಿಕ ಆಸಕ್ತಿ ಇರುವವರಿಗೆಂದು ಬರೆದ ಲೇಖನ.

ಆದರೆ ಮನಸ್ಸಿನಲ್ಲಿ ಕ್ಲೇಷಗಳು ಇರುವ ತನಕ ವೃತ್ತಿಗಳನ್ನು ಉತ್ಪಾದಿಸುತ್ತಿರುತ್ತವೆ. ಅವುಗಳನ್ನು ಹೇಗೆ ನಿಯಂತ್ರಿಸಿಬೇಕೆಂಬುದನ್ನು ಪತಂಜಲಿಯ ಎರಡನೆಯ ಸಾಧನ ಪಾದ ಹೇಳುತ್ತದೆ.

೨೩/೮/೦೫
ಮುಂದುವರೆಯುವುದು...