ಪತಂಜಲಿಯ ಯೋಗ

ಪತಂಜಲಿಯ ಯೋಗ

ಬರಹ

ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಸರಿಯಾಗಿ ಹೇಳಬೇಕೆಂದರೆ ಅದು ಯೋಗಾಸನ ಮಾತ್ರ. ಮನಸ್ಸಿನ ನಿಯಂತ್ರಣ ಹಾಗೂ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಮ್ಮಿಮಾಡಿ ಕೊನೆಗೆ ಅದರ ನಿರೊಧವೇ ಪತಂಜಲಿಯ ಯೋಗ. ಪತಂಜಲಿಯ ಯೋಗ ಸೂತ್ರಗಳಲ್ಲಿ ನಾಲ್ಕು ಪಾದಗಳಿವೆ.

೧ ಸಮಾಧಿ ಪಾದ -೫೧ ಸೂತ್ರಗಳು
೨ ಸಾಧನ ಪಾದ-೫೫ ಸೂತ್ರಗಳು
೩ ವೀಭೂತಿ ಪಾದ-೫೫ ಸೂತ್ರಗಳು
೪ ಕೈವಲ್ಯ ಪಾದ -೩೩/೩೪ ಸೂತ್ರಗಳು

ಪತಂಜಲಿಯ ಸೂತ್ರದಂತೆ 'ಯೋಗವೆಂದರೆ ಚಿತ್ತ ವೃತ್ತಿ ನಿರೋಧ.' ಯೋಗ.ಪಾದ೧. ಸೂತ್ರ.೧
ಇಲ್ಲಿ ಚಿತ್ತವೆಂದರೆ ಮನಸ್ಸು. ಮನಸ್ಸು ಚಂಚಲವೆಂಬುದನ್ನು ಎಲ್ಲರೂ ಬಲ್ಲರು. ಈ ಚಂಚಲ ಮನಸ್ಸನ್ನು ನಿಯಂತ್ರಿಸಿ ಕೊನೆಗೆ ವೃತ್ತಿಗಳೇ ಇಲ್ಲದಂತೆ ನಿರೋಧಿಸುವುದೇ ಯೋಗ. ಈ ವಾಕ್ಯದಲ್ಲಿ ನಿಯಂತ್ರಣ ಮತ್ತು ನಿರೋಧದ ಅರ್ಥವ್ಯಾಪ್ತಿಯನ್ನು ತಿಳಿಯುವುದು ಬಹು ಮುಖ್ಯ. ನಿಯಂತ್ರಣವೆಂದರೆ ಹಿಡಿತವೆಂಬ ಅರ್ಥವಿದ್ದರೂ ಇಲ್ಲಿ ಅದು ನಿರೋಧದ ಜೊತೆ ಸೇರಿರುವುದರಿಂದ ಪ್ರಜ್ಞಾವಸ್ಥೆಯಲ್ಲಿ ಮನಸ್ಸಿನಲ್ಲಿ ವೃತ್ತಿಗಳು ಏಳದಂತೆ ಮಾಡುವುದೇ ಯೋಗ ಎಂದು ಹೇಳಬಹುದು. ಅಪ್ರಜ್ಞಾವಸ್ಥೆಯಲ್ಲಿ ವೃತ್ತಿಗಳು ಏಳದಿರುವ ಸ್ಥಿತಿ ಇರಬಹುದು.ಆದರೆ ಆ ಸ್ಥಿತಿ ಯೋಗವಲ್ಲ. ಉದಾಹರಣೆಗೆ ಅರಿವಳಿಕೆ ಕೊಟ್ಟಾಗ ವೃತ್ತಿಗಳು ಏಳದಿರುವ ಸ್ಥಿತಿ ಇರಬಹುದು. ಕೆಲವೊಮ್ಮೆ ಕಾಹಿಲೆಯಿಂದ, ತಲೆಗೆ ಪೆಟ್ಟು ಬಿದ್ದಾಗ ವೃತ್ತಿಗಳು ಏಳದಿರಬಹುದು. ಇದಾವುದೂ ಯೋಗವಲ್ಲ.
ಪ್ರಜ್ಞಾವಸ್ಥೆಯಲ್ಲಿ ಮನಸ್ಸಿನಲ್ಲಿ ವೃತ್ತಿಗಳು ಏಳದಂತೆ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಏಳಬಹುದು. ಇದು ಖಂಡಿತಾ ಸಾಧ್ಯ. ನಿದ್ರೆಯಲ್ಲಿ ನಮ್ಮ ಮನಸ್ಸು ಎಲ್ಲಿರುತ್ತದೆ? ಏನು ಮಾಡುತ್ತಿರುತ್ತದೆ? ಯಾವುದೇ ಒಂದು ಅವಸ್ಥೆ(ಸ್ಥಿತಿ) ಅಪ್ರಜ್ಞಾವಸ್ಥೆಯಲ್ಲಿ ಆದರೆ ಅದನ್ನೇ ಪ್ರಜ್ಞಾವಸ್ಥೆಯಲ್ಲಿಯೂ ಮಾಡಲು ಸಾಧ್ಯ. ಯೋಗ ಆ ಹಾದಿಯನ್ನು ತೋರಿಸುತ್ತದೆ.
ಈ ಚಿತ್ತ ವೃತ್ತಿ ನಿರೋಧವನ್ನು ಯಾರು ಬೇಕಾದರೂ ಮಾಡಬಹುದೆ?
ಈ ಯೋಗದ ಹಾದಿಯಲ್ಲಿ ಎಲ್ಲರೂ ಮುಂದುವರೆಯಲು ಪ್ರಯತ್ನಿಸಬಹುದು. ಆದರೆ ಇದು ಅಂತರ್ಮುಖಿಗಳಿಗೆ ಸುಲಭವಾಗಿ ಮುಂದುವರೆಯುವ ಸಾಧ್ಯತೆ ಹೆಚ್ಚು. ಇಲ್ಲಿ ಸುಲಭವೆಂಬುದನ್ನು ಬಹಿರ್ಮುಖ ವ್ಯಕ್ತಿತ್ವವಿರುವವರೊಡನೆ ಹೋಲಿಸಿದಾಗ ಮಾತ್ರ ಹೇಳಬಹುದು. ಯೋಗದಲ್ಲಿ ಮುಂದುವರೆಯಲು ಸಾಧಾರಣವಾಗಿ ೭/೧೪/೨೧ ವರ್ಷಗಳು ಹಿಡಿಯುವುದು ಸಾಮಾನ್ಯ. ಆದ್ದರಿಂದ ದೃಢಮನಸ್ಸು ಹಾಗೂ ನಿರಂತರವಾಗಿ ಅಭ್ಯಾಸ ಮಾಡಬಲ್ಲ ಏಕಾಗ್ರತೆ ಇರುವವರು ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯಲು ಸಾಧ್ಯ.
೧೧-೮-೦೫
ಮುಂದುವರೆಯುವುದು...

ಆಸಕ್ತಿಯುಳ್ಳವರು ಕೆಳಕಂಡ ಪುಸ್ತುಕಗಳನ್ನು ಹೆಚ್ಚಿನ ಮಾಹಿತಿಗಾಗಿ ಓದಬಹುದು.
೧. ಯೋಗ ಮತ್ತು ಆಧ್ಯಾತ್ಮಿಕ ಸಾಧನೆ ಶ್ರೀರಾಮಕೃಷ್ಣ ಆಶ್ರಮ ಮೈಸೂರು ಇವರ ಪ್ರಕಟಣೆ

Yoga Philosophy of Patanjali
By: Swami Hariharananda Aranya
rendered into English by: P.N. Mukerji
ISBN: 0873957296