ಪತಿಯ ಅಗಲಿಕೆಯಿಂದಾಗಿ ಕೃಷಿಗಿಳಿದು ಗೆದ್ದ ಮಹಿಳೆಯರು

ಪತಿಯ ಅಗಲಿಕೆಯಿಂದಾಗಿ ಕೃಷಿಗಿಳಿದು ಗೆದ್ದ ಮಹಿಳೆಯರು

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕುರ್‍ಜಾದಿ ಗ್ರಾಮದ ಒಂದು ಪುಟ್ಟ ಮನೆ. ಅಲ್ಲಿ ಇಬ್ಬರು ಮಹಿಳೆಯರ ಗಹನವಾದ ಮಾತುಕತೆ: ಈ ವರುಷ ಹೊಲದಲ್ಲಿ ಯಾವುದೆಲ್ಲ ಬೀಜ ಬಿತ್ತಬೇಕು? ಮುಂದಿನ ವರುಷ ಏನೆಲ್ಲ ಬೆಳೆ ಬೆಳೆಯಬೇಕು?

ಅವರು ೪೧ ವರುಷ ವಯಸ್ಸಿನ ಉಜ್ವಲ ಪೇಟ್ಕರ್ ಮತ್ತು ಆಕೆಯ ಮೈದುನನ ಪತ್ನಿ ೪೫ ವರುಷದ ಉಷಾ ಪೇಟ್ಕರ್. ಈಗ ಬೇಸಾಯ ಅವರನ್ನು ಒಂದುಗೂಡಿಸಿದ್ದರೆ, ಕೆಲವೇ ವರುಷಗಳ ಮುಂಚೆ ಅವರನ್ನು ಒಂದುಗೂಡಿಸಿದ್ದು ಪತಿಯ ಅಗಲಿಕೆಯ ದುಃಖ. ಯಾಕೆಂದರೆ, ಅಣ್ಣತಮ್ಮಂದಿರಾದ ಇವರ ಗಂಡಂದಿರು, ತಮ್ಮ ಸಾಲದ ಹೊರೆಯಿಂದ ಪಾರಾಗುವ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆಗ ಇವರಿಬ್ಬರ ಬದುಕಿನಲ್ಲಿಯೂ ಕತ್ತಲು ಕವಿದಿತ್ತು. ಪತಿಯಂದಿರ ಸಾವಿನ ನೋವು, ಜೊತೆಗೆ ಪರ್ವತದಂತಹ ಸಮಸ್ಯೆಗಳು: ಮಕ್ಕಳ ವಿದ್ಯಾಭ್ಯಾಸ ಮತ್ತು ಪತಿಯಂದಿರ ಸಾಲ ತೀರಿಕೆ - ಇವು ಆಗ ಈ ಮಹಿಳೆಯರ ಆದ್ಯತೆ. ಆದರೆ ಮುಂದಿನ ದಾರಿ ಯಾವುದು?

ತನ್ನ ಪತಿ ಪ್ರಭಾಕರ ೨೦೦೨ರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದನ್ನು ನೆನೆಯುತ್ತ ಉಜ್ವಲ ಕಣ್ಣೀರಾಗುತ್ತಾರೆ, "ಆಗ  ನನ್ನ ಜಗತ್ತೇ ಕುಸಿದು ಬಿತ್ತು. ನನ್ನ ಇಬ್ಬರು ಮಕ್ಕಳೂ ಸಣ್ಣವರು. ಹಣದ ವ್ಯವಹಾರ ನನಗೆ ಗೊತ್ತಿರಲಿಲ್ಲ. ಗಂಡನ ಜಮೀನಿನ ವಿವರಗಳೂ ತಿಳಿದಿರಲಿಲ್ಲ. ಹೊಸದಾಗಿ ಬದುಕು ಆರಂಭಿಸಬೇಕಾಯಿತು."

ಗ್ರಾಮೀಣ ಮಹಿಳೆಯರು ಅತ್ಯಂತ ದಕ್ಷ ಕೆಲಸಗಾರರು ಎನ್ನುತ್ತದೆ ಭಾರತ ಸರಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ. ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದ ಶೇಕಡಾ ೧೬ ಒದಗಿಸುವ ಕೃಷಿ, ಹೆಚ್ಚೆಚ್ಚು ಮಹಿಳಾ ಕೇಂದ್ರಿತವಾಗುತ್ತಿದೆ. ಆದರೆ ಮಹಿಳೆಯರಿಗೆ ದಾರಿ ತೋರುವವರು ಯಾರು?

ಇಂತಹ ಸನ್ನಿವೇಶದಲ್ಲಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸುವ ಕಾರ್ಯಕ್ರಮಗಳು ಮುಖ್ಯವಾಗುತ್ತವೆ. ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ "ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನೆ" ಅಂತಹ ಒಂದು ಕಾರ್ಯಕ್ರಮ. ಕೃಷಿರಂಗದ ಸಂಕಟದಿಂದ ಕಂಗೆಟ್ಟ ಮಹಿಳೆಯರಿಗೆ ಮಾರ್ಗದರ್ಶನ ನೀಡಲಿಕ್ಕಾಗಿ ೨೦೦೮ರಲ್ಲಿ ಈ ಕಾರ್ಯಕ್ರಮದ ಆರಂಭ. ರೈತರ ಸರಣಿ ಆತ್ಮಹತ್ಯೆಯಿಂದ ನಲುಗಿದ ವಿದರ್ಭ ಪ್ರದೇಶದ ವಾರ್ಧಾ ಮತ್ತು ಯವತ್‍ಮಾಲ್ ಜಿಲ್ಲೆಗಳಲ್ಲಿ ಕಾರ್ಯಕ್ರಮ ಜ್ಯಾರಿ. ಸುಸ್ಥಿರ ಕೃಷಿ ಪದ್ಧತಿಗಳ ಮೂಲಕ ಕೃಷಿಕುಟುಂಬಗಳ ಪ್ರಗತಿ  ಈ ಕಾರ್ಯಕ್ರಮದ ಉದ್ದೇಶ. ಮಹಿಳೆಯರ ಸಬಲೀಕರಣದಿಂದಾಗಿ ಮಕ್ಕಳ ಪ್ರಗತಿಯಾಗುತ್ತದೆ ಎಂಬ ನಂಬಿಕೆ.

ಉಜ್ವಲ ಮತ್ತು ಉಷಾ ಈ ಕಾರ್ಯಕ್ರಮ ಸೇರಿಕೊಂಡರು. (ಅವರಂತೆಯೇ ೫೫ ಗ್ರಾಮಗಳಲ್ಲಿ ೮೬ ರೈತ ಮಹಿಳಾ ತಂಡಗಳಲ್ಲಿ ೧,೩೫೪ ಮಹಿಳೆಯರು ಜೊತೆಗೂಡಿದರು.) ಮೂರು ವರುಷಗಳ ನಂತರ ಈ ಕಾರ್ಯಕ್ರಮದ ಪ್ರಯೋಜನ ಎದ್ದು ಕಾಣುತ್ತಿದೆ. ಸುಮಾರು ೧೦೦ ಮಹಿಳೆಯರು ಸುಸ್ಥಿರ ಕೃಷಿಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾದ ಲಾಭ - ಕೃಷಿಯ ವೆಚ್ಚದಲ್ಲಿ ಉಳಿತಾಯ. ಹಾಗೆಯೇ ೨೫೦ ಮಹಿಳೆಯರು ಕೈತೋಟ ಬೆಳೆಸಿದ್ದಾರೆ. ಇದರಿಂದಾದ ಅನುಕೂಲ - ಬೇರೆಬೇರೆ ತರಕಾರಿಗಳು ಲಭ್ಯ.

ಎಲ್ಲದಕ್ಕಿಂತ ಮುಖ್ಯವಾಗಿ, ತಮ್ಮ ಕುಟುಂಬ ಹಾಗೂ ಕೃಷಿ ನಿರ್ವಹಣೆ ಬಗ್ಗೆ ನಿರ್ಧಾರಗಳನ್ನು ಈ ಮಹಿಳೆಯರೇ ತೆಗೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ, ತನ್ನ ಮಗಳನ್ನು  ನರ್ಸಿಂಗ್ ಕಾಲೇಜಿಗೆ ಸೇರಿಸಿದ್ದಾಳೆ ಉಜ್ವಲ. ಗಂಡನ ಸಾಲದಲ್ಲಿ ರೂಪಾಯಿ ಒಂದು ಲಕ್ಷ ಈಗಾಗಲೇ ಮರುಪಾವತಿಸಿದ್ದಾಳೆ. ತನ್ನ ಐದೆಕ್ರೆ ನೀರಾವರಿ ಹೊಲದಲ್ಲಿ ಹತ್ತಿ, ತೊಗರಿ, ಗೋಧಿ, ಮತ್ತು ಸೋಯಾಬೀನ್ ಬೆಳೆಸುತ್ತಿದ್ದಾಳೆ.

ಉಷಾ ತನ್ನ ಒಬ್ಬಳು ಮಗಳ ಮದುವೆ ಮಾಡಿದ್ದಾಳೆ. ಇನ್ನೊಬ್ಬಳು ಮಗಳನ್ನು ನರ್ಸಿಂಗ್ ತರಬೇತಿಗೆ ಸೇರಿಸಿದ್ದಾಳೆ. ಅವಳ ಇಬ್ಬರು ಗಂಡುಮಕ್ಕಳೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಫೆಬ್ರವರಿ ೨೦೦೬ರಲ್ಲಿ  ತನ್ನ ಪತಿ ಕವಡೋಜಿ ಆತ್ಮಹತ್ಯೆ ಮಾಡಿಕೊಂಡಾಗ ತತ್ತರಿಸಿದ್ದಳು ಆಕೆ. ಈಗ ಆತ್ಮವಿಶ್ವಾಸದಿಂದ ಹೇಳುತ್ತಾಳೆ, "ನನ್ನ ಗಂಡನ ೧,೬೦,೦೦೦ ರೂಪಾಯಿ ಸಾಲದಲ್ಲಿ ಬಹಳಷ್ಟು ತೀರಿಸಿದ್ದೇನೆ. ಈಗ ೨೫,೦೦೦ ರೂಪಾಯಿ ಮಾತ್ರ ಬಾಕಿ."

ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವು ಈಗ ಸಮಿತಿಗಳನ್ನು ರಚಿಸಿ, ಆಗಾಗ ಮಹಿಳೆಯರ ಸಭೆಗಳನ್ನು ಏರ್ಪಡಿಸುತ್ತಿದೆ. ಮಹಿಳೆಯರೊಳಗೆ ಅನುಭವ ವಿನಿಮಯಕ್ಕಾಗಿ ವರುಷಕ್ಕೊಮ್ಮೆ ಸಮ್ಮೇಳನಗಳನ್ನೂ ನಡೆಸುತ್ತಿದೆ. "ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಕಲಿಸುತ್ತಾಳೆ" ಎಂಬುದೇ ಇಲ್ಲಿ ಯಶಸ್ಸಿನ ಮಂತ್ರ.

ಈ ಕಾರ್ಯಕ್ರಮದ ಯಶಸ್ಸಿನಿಂದ ಪ್ರಭಾವಿತರಾಗಿ, ಕೇಂದ್ರ ವಿತ್ತ ಸಚಿವರು ೨೦೧೦ರಲ್ಲಿ ಮಹಿಳಾ ಕಿಸಾನ್ ಸಶಕ್ತೀಕರಣ ಪ್ರಾಯೋಜನೆಗೆ ರೂಪಾಯಿ ೧೦೦ ಕೋಟಿ ಧನ ಸಹಾಯ ಒದಗಿಸಿದರು. ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಜನವರಿ ೨೦೧೨ರಿಂದ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ವಿಸ್ತರಿಸಿದೆ. ಮಹಾರಾಷ್ಟ್ರ, ಕೇರಳ, ಬಿಹರ, ಮಧ್ಯಪ್ರದೇಶ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ೧೦ ಸರ್ಕಾರೇತರ ಸಂಸ್ಥೆಗಳ ಮೂಲಕ ಈ ಕಾರ್ಯಕ್ರಮ ಜ್ಯಾರಿಯಾಗುತ್ತಿದೆ. ವಿಧವೆಯರು ಹಾಗೂ ದುರ್ಬಲ ವರ್ಗಗಳಿಗೆ ಸೇರಿದ ಹೆಚ್ಚೆಚ್ಚು ಮಹಿಳೆಯರು ಇಂತಹ ಕಾರ್ಯಕ್ರಮಗಳಿಂದಾಗಿ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವಂತಾಗಲಿ. 

Comments

Submitted by venkatesh Fri, 02/08/2013 - 08:33

ಇಲ್ಲಿ ಒಂದು ವಿಚಾರವನ್ನು ಸೇರಿಸಲು ಇಚ್ಛಿಸುತ್ತೇನೆ. ಪತಿಯ ಕಳೆದುಕೊಳ್ಳುವಿಕೆ, ತನ್ಮೂಲಕ ವಿಯೋಗ ಒಂದು ವಿವರಿಸಲಾಗ ಯಾರೊಂದಿಗೂ ಪೂರ್ತಿಯಾಗಿ ಹಂಚಿಕೊಳ್ಳಲಾಗದ ವಿಷಾದ ಸನ್ನಿವೇಶ. ಇದು ಪತ್ನಿಯ ವಿಯೊಗಕ್ಕೂ ಸಂಬಂಧಿಸಿದ್ದು. 'ಬ್ರಿಟನ್ ನ ಸಾಮ್ರಾಜ್ಞಿ ವಿಕ್ಟೋರಿಯ' ಇಂಥದ್ದೆ ಒಂದು ದಾರುಣ ವಿಯೋಗಕ್ಕೆ ಒಳಗಾಗುತ್ತಾಳೆ. ಆಕೆ ಇನ್ನೂ ಹರೆಯದಲ್ಲಿರುವಾಗಲೇ ಪತಿ 'ಅಲ್ಬರ್ಟ್ 'ಮರಣಿಸುತ್ತಾನೆ. ಆಕೆ ಧೃತಿಗೆಟ್ಟು ಜೀವಸಲೂ ಇಚ್ಛಿಸದೇ ತಮ್ಮ ಇಡೀ ಜೀವನವನ್ನು ಕಣ್ಣೀರಿನಲ್ಲೆ ಕೈತೊಳೆಯುವ ಕಥೆ, ಬಹುಶಃ ಬಹಳ ಜನರಿಗೆ ಗೊತ್ತಿಲ್ಲ. ಕಪ್ಪು ಬಟ್ಟೆಯಲ್ಲಿ ಆಕೆ ಕಳೆದ ವರ್ಷಗಳು ಅದೆಷ್ಟೋ ! ೬೩ ವರ್ಷಗಳ ದೀರ್ಘ ಕಾಲದಲ್ಲಿ ಆಕೆ ಪಟ್ಟ ಮಾನಸಿಕ ಯಾತನೆ ಎಷ್ಟಿರಬಹುದು ? ಆದರೆ ಬ್ರಿಟಿಷ್ ಜನರಿಗೋ ರಾಜ-ರಾಣಿಯರ ಪ್ರಭುತ್ವವಿಲ್ಲದೆ ಒಂದು ಹೆಜ್ಜೆಯನ್ನೂ ಇದಲಾರದಷ್ಟು ಮಾನಸಿಕ ಸ್ಥಿತಿಯನ್ನು ಹೊಂದಿದವರು. ಬೆಂಜಮಿನ್ ಡಿಸ್ರೇಲಿ, ಎಂಬ ಪ್ರಾಮಾಣಿಕ ಪ್ರಧಾನಿ, ಮತ್ತಿತರ ಆಪ್ತ ರಾಜಕೀಯ ಪಟುಗಳು ಆಕೆಯ ಸಹಾಯಕ್ಕೆ ಟೊಂಕ ಕಟ್ಟಿ ನಿಂತು ಎಲ್ಲವನ್ನೂ ಸಂಭಾಳಿಸಿಕೊಂಡು ಸಾಗುತ್ತಾರೆ. ಇದು ಕಥೆ. ಪತಿ ವಿಯೋಗ ಯಾರಿಗಾದರೂ ತಲೆನೋವಿನ ಸಂಗತಿಯೇ ಅಲ್ಲವೇ ಅಥವಾ ಪತ್ನಿ ವಿಯೋಗ ಸಹಿತ !
Submitted by Manjunatha D G Fri, 02/08/2013 - 19:17

ನಿಜಕ್ಕೂ ಉತ್ತಮ‌ ಲೇಖನ. ಸಾಲದ‌ ಹೊರೆ ಹೊರಲಾರದೆ ತತ್ತರಿಸುವಾಗಲೇ ಸರಕಾರ‌ ಹೊರೆ ಇಳಿಸಿಬಿಡಬೇಕು ಅಥವ‌ ಹೊರೆಯಾಗುವ೦ತಹ‌ ಸಾಲ‌ ಮಾಡದ೦ತೆ ನೋಡಿಕೊಳ್ಳ‌ ಬೇಕು. ಸಾಲ‌ ಮಾತ್ರ‌ ಕೃಷಿರಂಗದ‌ ಉನ್ನತಿ ಸಾದಿಸಬಲ್ಲದೆನ್ನುವುದು ಸರಿಯಲ್ಲ‌. ಕೃಷಿಯಲ್ಲಿ ಗ್ರಾಮೀಣ‌ ಮಹಿಳೆಯರ‌ ಪಾತ್ರ‌ ಅಪಾರ‌... ಗ್ರಾಮೀಣ‌ ಮಹಿಳೆಯರ‌ ಏಳಿಗೆಯೇ ದೇಶದ‌ ಏಳಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ‌..
Submitted by Shobha Kaduvalli Fri, 02/08/2013 - 19:22

In reply to by Manjunatha D G

ಅಷ್ಟೇ ಅಲ್ಲ‌... ಪರಿಶ್ರಮಕ್ಕೆ ತಕ್ಕ‌ ಬೆಲೆ ಸಿಗುವoತಾಗಬೇಕು. ಶ್ರಮಿಕನ‌ ಬೆವರಿನ‌ ಬೆಲೆ ಮಧ್ಯವರ್ತಿಗಳ‌ ಪಾಲಾಗದoತೆ ನೋಡಿಕೊಳ್ಳಬೇಕು.
Submitted by makara Thu, 02/14/2013 - 18:22

ಕೃಷ್ಣರಾವ್ ಸರ್, ನಿಮ್ಮ ಲೇಖನದಿಂದ ಎರಡು ವಿಷಯಗಳು ಮನದಟ್ಟಾದವು. ಅದೇನೆಂದರೆ ಸುಸ್ಥಿರ ಕೃಷಿಯಿಂದ ರೈತನಿಗೆ ವ್ಯವಸಾಯವೆನ್ನುವುದು ನಷ್ಟದಾಯಕ ಉದ್ಯಮವಾಗಲಾರದು ಮತ್ತು ಅದು ಕುಟುಂಬದ ಸುಸ್ಥಿರತೆಯನ್ನೂ ಕಾಪಾಡುತ್ತದೆ. ಉತ್ತಮ ಮಾಹಿತಿ ಒದಗಿಸುವ ಲೇಖನಕ್ಕೆ ಧನ್ಯವಾದಗಳು.