ಪತ್ರಕರ್ತನ ಪಯಣ

ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ ಕಾಕಡೆ ಮತ್ತು ಡಾ. ಬಿ.ಕೆ.ರವಿ ಅವರು ಲಕ್ಷ್ಮಣ ಕೊಡಸೆ ಅವರ ಬಗ್ಗೆ ಅಭಿಪ್ರಾಯಗಳನು ತಿಳಿಸಿದ್ದಾರೆ. “ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲಿರಿ! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ ಚಿಂತನಶೀಲತೆಯಿಂದ, ಕಳಕಳಿ-ಕಾಳಜಿಯಿಂದ, ಕರ್ತವ್ಯ ನಿಷ್ಠೆಯಿಂದ ಮಾಡಿರುವ ಸೇವೆ ಅನುಪಮವಾದುದು.” ಇದು -ಪ್ರೊ. ಓಂಕಾರ ಕಾಕಡೆ, ವಿಜಯಪುರ ಇವರ ಮಾತುಗಳು.
'ಸಾಪ್ತಾಹಿಕಗಳು ಸಮಾಜದ ಜ್ಞಾನ ಬಿಂದುಗಳು' ಎಂಬುದನ್ನು ತೋರಿಸಿಕೊಟ್ಟ ಖ್ಯಾತಿ ಇವರದ್ದಾಗಿದೆ. ಇವರ ಮುಂದಾಳತ್ವದಲ್ಲಿ ಹೊರಬರುತ್ತಿದ್ದ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ 'ಜ್ಞಾನದ ಕಣಜ' ಆಗಿತ್ತು. 'ಪ್ರಜಾವಾಣಿ' ದಿನಪತ್ರಿಕೆ ಜನರ ನಾಡಿಮಿಡಿತವಾಗಲು ಅಹರ್ನಿಶಿ ದುಡಿದವರಲ್ಲಿ ಇವರು ಪ್ರಮುಖರು. ಅಷ್ಟೇ ಅಲ್ಲ, ಮಾಧ್ಯಮದ ಬೆಳವಣಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಪ್ಪಟ ಪತ್ರಕರ್ತರಿವರು.” ಎಂದಿದ್ದಾರೆ ಕೊಪ್ಪಳ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಬಿ ಕೆ. ರವಿ.
ಪತ್ರಕರ್ತನ ಪಯಣಕ್ಕೆ ಮುನ್ನುಡಿ ಬರೆದಿದ್ದಾರೆ ‘ಪುಸ್ತಕ ಮನೆ’ ಖ್ಯಾತಿಯ ಹರಿಹರಪ್ರಿಯ. ಪುಸ್ತಕದಲ್ಲಿನ ಒಂದು ಅಧ್ಯಾಯ ನಿಮ್ಮ ಓದಿಗಾಗಿ… “ಕುವೆಂಪು ಅಂತೆಯೇ ನೀನು ಕೂಡ, ಮಲೆನಾಡಿನ ಮಡಿಲಿನಿಂದ ಎದ್ದು ಬಂದ ಕುರುಹು ಪುಟಪುಟದಲ್ಲಿಯೂ ಕಾಣುತ್ತದೆ. ಹೀಗಾಗಿ, ಕುವೆಂಪು ಮಲೆನಾಡುಗಳ ಗುಣಸ್ವಭಾವಗಳು ಹೆಜ್ಜೆಹೆಜ್ಜೆಗೆ ನಿನ್ನನ್ನು ಅಟ್ಟಾಡುವುದು ಸಹಜ. ಸಂಕೋಚ, ಸಾಹಸ, ಸ್ವಾಭಿಮಾನಗಳು ಮಾನಸಿಕ, ದೈಹಿಕವಾಗಿಯೂ ಎದೆಗೆ ಗುದ್ದಿನಂತೆ ದಾಖಲಾಗುತ್ತ ಹೋಗುತ್ತವೆ. ಅದಕ್ಕೆ, ನನ್ನನ್ನು ಇಡೀ ಪುಸ್ತಕದಲ್ಲಿ ಒಂದು ಘಟನೆ, ಕೇವಲ, ನಿನ್ನ ಮೇಲೆ ಮಾತ್ರವಲ್ಲ, ಗಾಢವಾಗಿ ಕಾಡಿದ ಪತ್ರಿಕಾ ಮಾಧ್ಯಮ, ಅದರಲ್ಲಿಯೂ ಪ್ರಜಾವಾಣಿಯಂತಹ ಜನಪರ ದನಿಯಾದ ಮಾಧ್ಯಮದಲ್ಲಿ ಏನೇನು ಸಂಭವಿಸುತ್ತ ಬಂದಿತ್ತು ಎಂಬುದು ಸಾಂಸ್ಕೃತಿಕ ಮಂದಿಗೆ ತಿಳಿಯಬೇಕಾಗಿದೆ ಎಂದು ಇಲ್ಲಿ ಮೊದಲಿಗೇ ಕೊಡಬಯಸುತ್ತಿರುವೆ:
'ಪ್ರಜಾವಾಣಿ ಪತ್ರಿಕೆಗೆ ಸೇರಿದ ಮೇಲೆ ಅದು ನನಗೆ ನಾಲ್ಕನೆಯ ವರ್ಗಾವಣೆ. ಸಿಬ್ಬಂದಿಯ ವರ್ಗಾವಣೆಗೆ ನಿರ್ದಿಷ್ಟ ನೀತಿ ನಿಯಮಗಳೇನೂ ಇರಲಿಲ್ಲ. ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಅಧಿಕಾರಿಗಳು, ನೌಕರರಿಗೆ ಸಂಬಂಧಿಸಿದಂತೆ ವರ್ಗಾವಣೆಯಲ್ಲಿ ಅನ್ಯಾಯ ಅಕ್ರಮಗಳಾದ ಸಂದರ್ಭದಲ್ಲಿ ವರದಿ ಬರೆದು ಸಾರ್ವಜನಿಕರ, ಸರ್ಕಾರದ ಗಮನಕ್ಕೆ ತಂದು ಅದನ್ನು ಸರಿಪಡಿಸುವ ಸಾಮಾಜಿಕ ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಪತ್ರಿಕಾ ಸಂಸ್ಥೆಯಲ್ಲಿ ಆಗುತ್ತಿದ್ದ ವರ್ಗಾವಣೆಗಳಲ್ಲಿ ಅನ್ಯಾಯಗಳಾಗುತ್ತಿದ್ದರೂ ಅದನ್ನು ಪ್ರಶ್ನಿಸುವ ವ್ಯವಸ್ಥೆಯೇ ಇಲ್ಲದ ಕಾರಣ ನಾನು ಕಲಬುರ್ಗಿಗೆ ಹೋಗುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲೇ ಬೇಕಿತ್ತು. ನನ್ನನ್ನು ಮೈಸೂರಿನಿಂದ ಎರಡು ವರ್ಷಕ್ಕೆ ಮೊದಲೇ ಬೆಂಗಳೂರಿಗೆ ಕರೆತಂದಾಗ ರಂಗನಾಥರಾವ್ ಹಿರಿತನದ ನೆಪವನ್ನಾದರೂ ಹೇಳಿದ್ದರು. ಈ ಸಲ ಅಂಥದ್ದೇನನ್ನೂ ಹೇಳದೆ ವರ್ಗಾವಣೆ ಆದೇಶವನ್ನು ತಮ್ಮ ಚೇಂಬರಿಗೆ ಕರೆದು ನೀಡಿದರು. ನನ್ನನ್ನು ಮತ್ತೆ ಕಲಬುರ್ಗಿಗೆ ಏಕೆ ವರ್ಗ ಮಾಡಿದಿರಿ ಎಂದು ನಾನು ಪ್ರಶ್ನೆ ಮಾಡಬಹುದೆಂಬ ಅಳುಕು ಅವರಲ್ಲಿ ಇತ್ತೇನೋ. ಅದರಿಂದಲೇ ಜೊತೆಗೆ ಸಹ ಸಂಪಾದಕರಾಗಿದ್ದ ಕೆ. ಶ್ರೀಧರ ಆಚಾರ್ ಮತ್ತು ಸುದ್ದಿ ಸಂಪಾದಕರಾಗಿದ್ದ ರಾಜಾ ಶೈಲೇಶ್ ಚಂದ್ರ ಗುಪ್ತ ಅವರನ್ನು ತಮ್ಮ ಚೇಂಬರಿನಲ್ಲಿ ಕೂರಿಸಿಕೊಂಡಿದ್ದರು. ವರ್ಗಾವಣೆ ಪತ ಸ್ವೀಕರಿಸಿ ಯಾವ ಪ್ರತಿಕ್ರಿಯೆಯನ್ನು ನೀಡದೆ ಡೆಸ್ಲಿಗೆ ಬಂದೆ. ಸಹೋದ್ಯೋಗಿ ಅಟ್ಟೂರು ರಾಜಶೇಖರ್ 'ಯಾಕೆ ಸಾರ್ ಈಚೆಗಷ್ಟೇ ಮೈಸೂರಿನಿಂದ ನಿಮ್ಮನ್ನು ಇಲ್ಲಿಗೆ ವರ್ಗ ಮಾಡಿದ್ದರು. ಮತ್ತೆ ಕಲಬುರ್ಗಿಗೆ ಯಾಕೆ ಮಾಡಿದ್ದಾರೆ?' ಎಂದು ಕಕ್ಕುಲತೆಯಿಂದ ವಿಚಾರಿಸಿದರು. ನನ್ನೊಂದಿಗೆ ಒಂದೇ ದಿನ ಪ್ರಜಾವಾಣಿ ಸೇರಿದ್ದ ಡಿ.ವಿ.ರಾಜಶೇಖರ, ಇ.ವಿ.ಸತ್ಯನಾರಾಯಣ ಮತ್ತು ಶಿವಾಜಿ ಗಣೇಶನ್ ಅವರನ್ನು ಮೂರು ಸಲ ವರ್ಗ ಮಾಡಲಾಗಿತ್ತು. ಚೌಡೇಗೌಡ ಬೀಡನಹಳ್ಳಿಯವರನ್ನು ಒಮ್ಮೆಯೂ ವರ್ಗ ಮಾಡಲಿಲ್ಲ. ನನ್ನ ನಂತರ ಸೇರಿದ್ದ ಎಂ.ಎ.ಪೊನ್ನಪ್ಪ ಅವರನ್ನು ಒಮ್ಮೆಯೂ ಎಲ್ಲಿಗೂ ವರ್ಗ ಮಾಡಲಿಲ್ಲ. ಹುಬ್ಬಳ್ಳಿ, ಮೈಸೂರಿನಲ್ಲಿ ಕೆಲಸ ಮಾಡಿ ಬಂದ ನನಗೆ ಮತ್ತೆ ಕಲಬುರ್ಗಿಗೆ ಏಕೆ ವರ್ಗ ಮಾಡಲಾಯಿತು? ಎಂಬ ಪ್ರಶ್ನೆಗೆ ಕೆಲವು ದಿನಗಳ ಹಿಂದೆ ನಡೆದಿದ್ದ ವರಿಷ್ಠರ ಸಭೆಯಲ್ಲಿ ಆಡಿದ್ದ ಮಾತು ಕಾರಣ ಆಗಿರಬೇಕು ಎಂಬ ಚರ್ಚೆ ಸಂಪಾದಕೀಯ ವಿಭಾಗದಲ್ಲಿ ಗುಸುಗುಸು ರೂಪದಲ್ಲಿ ನಡೆಯುತ್ತಿತ್ತು. ರಂಗನಾಥರಾವ್ ಸೇಡಿನ ಕ್ರಮವಾಗಿ ಬೇಕೆಂತಲೇ ನನ್ನನ್ನು ಕಲಬುರ್ಗಿಗೆ ಶಿಕ್ಷಾರೂಪದಲ್ಲಿ ವರ್ಗ ಮಾಡಿಸಿದ್ದಾರೆ ಎಂಬ ಸಂಶಯ ನನ್ನ ಗೆಳೆಯರ ವಲಯದಲ್ಲಿತ್ತು. ಅದನ್ನು ಬದಲಿಸುವುದು ಹೇಗೆ ಎಂಬುದು ನನಗೆ ಪ್ರಶ್ನೆಯಾಯಿತು.” ಮುಂದಿನ ಘಟನೆಗಳನ್ನು ಲಕ್ಷ್ಮಣ ಕೊಡಸೆ ಅವರ ಪುಸ್ತಕದಲ್ಲೇ ಓದಬೇಕು. ೨೮೪ ಪುಟಗಳು ನಿಮ್ಮ ಓದಿನ ರೋಚಕತೆಗೆ ಧಕ್ಕೆ ತರಲಾರವು ಎನ್ನುವುದು ಬರಹಗಾರನ ಅನಿಸಿಕೆ.