ಪತ್ರಗಳು

ಪತ್ರಗಳು

ಬರಹ

"ಮೈಲ್" ಎಂದಾಕ್ಷಣ ನಮ್ಮ ನೆನಪಿಗೆ ಬರುವುದು "ಇ-ಮೈಲ್", ನನ್ನಂತೆಯೆ ಸ್ವಲ್ಪ ಹಳೆಯ ಕಾಲದವರಾದರೆ "ಆ-ಮೈಲ್" ಕೂಡಾ ನೆನಪಿಗೆ ಬರಬಹುದು! ನಾನು ಈಗ ಹೇಳ ಹೊರಟಿರುವುದು ಅದೇ "ಆ-ಮೈಲ್" ಬಗ್ಗೆ. ಅಚ್ಚ ಕನ್ನಡದಲ್ಲಿ ಪತ್ರಗಳು ಎಂದರೆ ನಿಮಗೆ ನಾನು ಹೇಳ ಹೊರಟಿರುವ ಆ-ಮೈಲ್ನ ಸುಳಿವು ಸಿಗಬಹುದು.

ತಿಳಿ ನೀಲಿ ಬಣ್ಣದ "ಅಂತರ್ದೇಶೀಯ ಪತ್ರ", ಹಳದಿ ಬಣ್ಣದ "ಪೋಸ್ಟ್ ಕಾರ್ಡ್", ಕಾವಿ ಬಣ್ಣದ್ದೋ, ಖಾಕಿ ಬಣ್ಣದ್ದೋ, ಇಲ್ಲ ಹಲವು ವರ್ಣ ಸಂಯೋಜನೆಗಳ "ಪೋಸ್ಟ್ ಕವರ್"ಎಂಬಿತ್ಯಾದಿ ಹಲವು ಬಗೆಯ ವೈವಿಧ್ಯತೆಯಿಂದ ಕೂಡಿದ ಸಂದೇಶವಾಹಕಗಳು. ಈ ಮೇಲೆ ಹೇಳಿದ ಬರೀ ಪತ್ರಗಳಿಗೆ ಸಂದೇಶವಾಹಕಗಳು ಎಂದು ಕರೆದದ್ದನ್ನು ನೀವು ಆಕ್ಷೇಪಿಸಬಹುದೋ ಎನೋ, ಪತ್ರಕ್ಕೆ ಕಾಲುಂಟೆ, ರೆಕ್ಕೆ ಉಂಟೆ ಎಂದು ಪ್ರಶ್ನೆಗಳನ್ನು ಕೇಳಿ ನನ್ನನ್ನು ಪೇಚಿಗೆ ಸಿಲುಕಿಸಬಹುದು.ಆದರೆ ಈ ಹಲವು ಬಗೆಯ ಪತ್ರಗಳೊಂದಿಗೆ ಅವನ್ನು ವಿವಿಧೆಡೆಗೆ ಸಾಗಿಸುವ ಅಂಚೆಯವರನ್ನೂ ಸೇರಿಸಿ, ಈ ಶಬ್ದ ಪ್ರಯೋಗಿಸಿದ್ದಾದರೆ ನೀವು ಆಕ್ಷೇಪಿಸಲಾರಿರಿ.

ಅಂತರ್ದೇಶೀಯ ಪತ್ರ ತಿಳಿ ನೀಲಿ ಬಣ್ಣದ, ಎರಡು ಪುಟಗಳಷ್ಟು ವಿಸ್ತಾರವಾಗಿರುವ, ಬಲ ಮೇಲು ತುದಿಯಲ್ಲಿ ಮುಖಬೆಲೆಯೊಂದಿಗೆ ಭಾರತ ಸರಕಾರದ ಮೊಹರುಳ್ಳ ಪತ್ರದ ಒಂದು ಮಾದರಿ. ಎರಡು ಪುಟಗಳಲ್ಲಿ ಅರ್ಧ ಪುಟವನ್ನು "ಗೆ" ಹಾಗೂ "ಇಂದ" ಬರೆಯಲು ಅನುಕೂಲವಾಗುವಂತೆ ತಯಾರಿಸಲಾಗಿರುತ್ತದೆ. ಇಲ್ಲಿ "ಗೆ" ಎಂದರೆ ನಾವು ಯಾರಿಗೆ ಪತ್ರ ಕಳುಹಿಸಲು ನಿರ್ಧರಿಸಿದ್ದೇವೆಯೋ ಅವರ ವಿಳಾಸ ಹಾಗೂ "ಇಂದ" ಎನ್ನುವುದು ನಮ್ಮ ವಿಳಾಸ ಎಂಬುದನ್ನು ಗಮನದಲ್ಲಿರಿಸಬೇಕು. ಅಂದರೆ ಸುಮಾರು ಒಂದುವರೆ ಪುಟಗಳಷ್ಟು ವಿಸ್ತಾರವಾದ ಹಾಳೆಯಲ್ಲಿ ನಿಮಗನ್ನಿಸಿದ್ದನ್ನು ಬರೆಯಬಹುದಾಗಿದೆ. ಸುಮಾರು ಒಂದುವರೆ ಎಂದು ಹೇಳಲು ಕಾರಣ ಇದೆ, ಈ ಪತ್ರದ ಬಲ ಹಾಗೂ ಕೆಳಗಡೆಯಲ್ಲಿ ಒಂದು ಸೆ.ಮಿ.ನಷ್ಟು ವಿಸ್ತರಣೆ ಇದ್ದು, ಪತ್ರ ಬರೆದ ನಂತರ ಅಂಟು ಹಾಕಿ, ನಿಮ್ಮ ಬರಹವನ್ನು ಯಾರೂ ನೋಡದಂತೆ ಮಾಡುವ ವ್ಯವಸ್ಥೆ ಇದೆ. ನೀವು ಜಾಣರಾದಲ್ಲಿ ಅದರಲ್ಲಿಯೂ ಕೂಡ ನಿಮ್ಮ ಬರಹವನ್ನು ತುರುಕಬಹುದು. ಇದರ ಬೆಲೆ ನಾನು ಶಾಲೆಗೆ ಹೋಗುವ ವೇಳೆಯಲ್ಲಿ ೭೫ ಪೈಸೆ ಇದ್ದು, ಕಾಲೇಜು ಬಿಟ್ಟು ಪತ್ರ ಬರೆಯುವುದನ್ನೂ ಬಿಡುವ ವೇಳೆಯಲ್ಲಿ ೨ ರೂಪಾಯಿಗಳಾಗಿತ್ತು. ನಿಮಗೆ ಇ-ಮೈಲ್ ಮಾಡಲು ತಿಳಿಯದೇ ಇದ್ದು, ನಿಮ್ಮ ಮಕ್ಕಳೋ ಮರಿ ಮಕ್ಕಳೋ ಅಪಹಾಸ್ಯ ಮಾಡಿದಾಗ, ಹೊಸದಾಗಿ ತಂದಿರುವ ಅಂತರ್ದೇಶೀಯ ಪತ್ರ ಅವರ ಕೈಗಿತ್ತು, ಮಡಿಸಿ ಅಂಟು ಹಾಕಲು ಹೇಳಿ, ಅವರನ್ನು ಪೇಚಿಗೆ ಸಿಲುಕಿಸಿ ನಿಮ್ಮ ಸೇಡನ್ನು ತೀರಿಸಿಕೊಳ್ಳಬಹುದು. ಈ ಪತ್ರವನ್ನು ಮಡಿಸುವುದೂ ಒಂದು ವಿದ್ಯೆ, ಸುಮ್ಮನೆ ಕಂಪ್ಯೂಟರಿನ ಕೀ-ಪ್ಯಾಡ್ ಮೇಲೋ, ಮೌಸ್ನ ಮೇಲೋ ಕೈಯಾಡಿಸಿದಷ್ಟು ಸುಲಭವಾಗಿ ಇದು ಕರಗತವಾಗಲಾರದು.

ಪೋಸ್ಟ್ ಕಾರ್ಡ್ನ್ನ ಬಡವರ ಸಂದೇಶವಾಹಕ ಎಂದರೆ ತಪ್ಪಾಗಲಾರದು. ಚುಟುಕಾದ ಸಂದೇಶವನ್ನು ಕಡಿಮೆ ವೆಚ್ಚದಲ್ಲಿ ತಲುಪಿಸುವ ಸೌಲಭ್ಯ, ನನಗೆ ತಿಳಿದಂತೆ ೧೫ ಪೈಸೆ ಇದ್ದ ಇದರ ಬೆಲೆ ಮುಂದೆ ೨೫ ಪೈಸೆಯಾಗಿತ್ತು. ಇನ್ನು ಇದರ ಗುಣ ಲಕ್ಷಣದ ಬಗ್ಗೆ ತಿಳಿದುಕೊಳ್ಳೋಣ, ಸಾಧಾರಣವಾಗಿ ತಿಳಿ ಹಳದಿ ಬಣ್ಣದ, ೪/೬ ಅಳತೆಯ, ರಟ್ಟಿನಷ್ಟು ಅಲ್ಲದಿದ್ದರೂ ಸ್ವಲ್ಪ ಗಡುಸಾದ ಪತ್ರದ ಇನ್ನೊಂದು ಮಾದರಿ. ಇದರ ಒಂದು ಮುಖವನ್ನು ಸರಿಯಾದ ಎರಡು ಭಾಗಗಳಾಗಿ ವಿಂಗಡಿಸಿ, ಬಲ ಭಾಗದಲ್ಲಿ ಅಂತರ್ದೇಶೀಯ ಪತ್ರದಂತೆ ಮುಖಬೆಲೆ ಹಾಗೂ "ಗೆ" ಬರೆಯಲು ಅವಕಾಶವಿದ್ದರೆ, ಎಡ ಭಾಗದ ಖಾಲಿ ಜಾಗವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ "ಇಂದ" ಬರೆಯಲೋ ಅಥವಾ ಸಂದೇಶ ಬರೆಯಲೋ ಉಪಯೋಗಿಸಬಹುದು. ನೀವು ಯಾರಿಗಾದರೂ ಆಗಿಂದಾಗ್ಗೆ ಪತ್ರ ಬರೆಯುವವರಾಗಿದ್ದು, ನಿಮ್ಮ ಕೈ ಬರಹದಿಂದಲೇ ನಿಮ್ಮನ್ನು ಗುರುತಿಸಬಹುದಾದ ಸಂದರ್ಭ ಇರುವುದರಿಂದ, "ಇಂದ" ಬರೆಯುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ಆದುದರಿಂದ ಪೋಸ್ಟ್ ಕಾರ್ಡ್ನ್ನ ಚುಟುಕಾದ ಸಂದೇಶ ಕಳುಹಿಸಲೋ, ಬಾನುಲಿ, ಟಿ.ವಿ. ಮುಂತಾದ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುರಭಿಯಂತಹ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಲೋ ಬಳಸಬಹುದು. ಪೋಸ್ಟ್ ಕಾರ್ಡ್ನ್ನ ಕಡಿಮೆ ಬೆಲೆಗೆ ಒದಗಿಸಿ ಕೈ ಸುಟ್ಟುಕೊಂಡ ಸರಕಾರ ಪ್ರಶ್ನೋತ್ತರ ಕಳುಹಿಸುವ ಕಾರ್ಡ್ನು ಬೆರೆಯೇ ಆಗಿ ವಿಂಗಡಿಸಿ ಅದರ ಬೆಲೆಯನ್ನು ಏರಿಸಿದ್ದಾರೆ.ಇದರ ಒಂದು ಅನಾನುಕೂಲ ಏನೆಂದರೆ ಅಂತರ್ದೇಶೀಯ ಪತ್ರ ಮತ್ತು ಪೋಸ್ಟ್ ಕವರ್ನಲ್ಲಿಯಂತೆ ಗೌಪ್ಯ ವಿಷಯವನ್ನು ಕಳುಹಿಸಲು ಸಾಧ್ಯವಿಲ್ಲದಿರುವುದು. ಇನ್ನು ಅಂತರ್ದೇಶೀಯ ಪತ್ರ ಹಾಗೂ ಪೊಸ್ಟ್ ಕಾರ್ಡ್ಗಳಲ್ಲಿನ ಒಂದು ಸಾಮ್ಯತೆ ತಿಳಿಸಿ ಮುಂದಿನ ವಿಷಯಕ್ಕೆ ಹೋಗಬಹುದು. ಕೆಲವೊಮ್ಮೆ ಸರಕಾರದ ಸಂದೇಶ ಜನರಿಗೆ ಸುಲಭವಾಗಿ ತಲುಪುವ ಉದ್ದೇಶದಿಂದ, "ಸಾಕ್ಷರತೆ", "ಕುಟುಂಬ ಕಲ್ಯಾಣ" ಮೊದಲಾದ ವಿಷಯಕ್ಕೆ ಸಂಬಂಧಿಸಿದ ಮುದ್ರಿತ ಬರಹವನ್ನೂ ಇವುಗಳಲ್ಲಿ ಕಾಣಬಹುದು.

ಇನ್ನುಳಿದದ್ದು ಪೋಸ್ಟ್ ಕವರ್, ಇದಕ್ಕೆ ಕನ್ನಡದಲ್ಲಿ ಲಕೋಟೆ ಎಂದರೆ ತಪ್ಪಾಗಲಾರದು. ಕತೆ, ಕವನ ಮೊದಲಾದ ಬರಹವನ್ನು ಸಂಪಾದಕರಿಗೆ ಕಳುಹಿಸುವ ಸಲುವಾಗಿಯೋ, ಮದುವೆಯ ಸಂದರ್ಭದಲ್ಲಿ ಹುಡುಗ ಹುಡುಗಿಯ ಜಾತಕ ವಿನಿಮಯ ಮಾಡಿಕೊಳ್ಳಲೋ, ಒಟ್ಟಿನಲ್ಲಿ ಅಂತರ್ದೇಶೀಯ ಪತ್ರ ಹಾಗೂ ಪೋಸ್ಟ್ ಕಾರ್ಡ್ನಲ್ಲಿ ನಿಮ್ಮ ಸಂದೇಶ ಹಿಡಿಸಲಾರದ ಪಕ್ಷದಲ್ಲಿ ಅಥವಾ ಕೆಲವು ದಾಖಲೆಗಳನ್ನು ನಿಮ್ಮ ಸಂದೇಶದೊಂದಿಗೆ ಕಳುಹಿಸಬೇಕಾದ ಸಂದರ್ಭದಲ್ಲಿ ಇದನ್ನು ಬಳಸಬಹುದು. ಸರಕಾರಿ ಮುದ್ರಿತ ಲಕೋಟೆ ೪/೬ ಅಳತೆಯಲ್ಲಿದ್ದು ನಿಮ್ಮ ವ್ಯವಹಾರಕ್ಕೆ ಅದು ಅನಾನುಕೂಲವಾಗಿ ತೋರಿದ ಪಕ್ಷದಲ್ಲಿ, ಖಾಸಗಿ ಲಕೋಟೆ ಕೊಂಡು ಅದಕ್ಕೆ ಅಂಚೆ ಚೀಟಿ ಅಂಟಿಸುವ ಅನುಕೂಲತೆ ಇದೆ. ಸರಕಾರಿ ಲಕೋಟೆಯಲ್ಲಿ ಮುಖಬೆಲೆ ಬಲ ಮೇಲ್ತುದಿಯಲ್ಲಿ ಇದ್ದರೆ, ಖಾಸಗಿ ಲಕೋಟೆಗೆ ಅದೇ ಜಾಗದಲ್ಲಿ ಅಂಚೆ ಚೀಟಿ ಅಂಟಿಸಬಹುದು. ಅಂಚೆ ಚೀಟಿಯ ಕೆಳಗೆ "ಗೆ" ಹಾಗೂ ಎಡ ಕೆಳ ತುದಿಯಲ್ಲಿ "ಇಂದ" ಬರೆಯಬಹುದು.

ಲಕೋಟೆಯ ಇನ್ನೊಂದು ವರ್ಗದಡಿ "ಆಮಂತ್ರಣ ಪತ್ರ" ಹಾಗೂ "ಶುಭಾಷಯ ಪತ್ರ" ಸೇರಿಸಬಹುದು. ದೂರದ ಬಂಧು ಮಿತ್ರರಿಗೆ ವಿಶೇಷ ಕಾರ್ಯಕ್ರಮಗಳಿಗೆ ಆಮಂತ್ರಿಸುವುದೋ, ಹಬ್ಬ ಹರಿದಿನಗಳಂದು ಶುಭಾಶಯ ತಿಳಿಸುವುದೋ,ಇದರ ಉಪಯೋಗ.ಎರಡೂ ಬಗೆಯ ಪತ್ರಗಳು ಸರಕಾರೀ ಲಕೋಟೆಯ ಬದಲು ಪ್ರತ್ಯೇಕವಾದ ಲಕೋಟೆ ಬಳಸುವುದರಿಂದ ಅಂಚೆ ಚೀಟಿಯನ್ನು ಮೇಲೆ ಹೇಳಿದಂತೆ ಲಗತ್ತಿಸಬೇಕು. ಇದಕ್ಕೆ ಅಂಟನ್ನು ಅಂಟಿಸದೆ ಲಕೋಟೆಯ ಮೆಲ್ತುದಿಯ ಮಧ್ಯ ಭಾಗದಲ್ಲಿ "ತೆರದ ಅಂಚೆ" ಎಂದು ನಮೂದಿಸಿದರೆ ಸಾಧಾರಣ ಬೆಲೆ, ಇಲ್ಲವಾದಲ್ಲಿ ಅದರ ಬೆಲೆ ಕಟ್ಟುವ ನಿರ್ಧಾರ ಅಂಚೆ ಕಛೇರಿಗೆ ಬಿಟ್ಟಿದ್ದು. ಲಕೋಟೆಯ ಬೆಲೆ ನನಗೆ ತಿಳಿವು ಬಂದಾಗ ೧ ರೂಪಾಯಿ ಇದ್ದು, ನಾನು ಇ-ಮೈಲ್ನಿಂದ ಶುಭಾಷಯ ಪತ್ರ ಕಳುಹಿಸಲು ಕಲಿತ ವೇಳೆಗೆ ೫ ರೂಪಾಯಿಯಾಗಿತ್ತು. ಇನ್ನು "ತೆರೆದ ಅಂಚೆಯ" ಸ್ಠಾನದಲ್ಲಿ "ರಿಜಿಸ್ಟರ್ಡ್ ಪೊಸ್ಟ್" ಮತ್ತು "ಸ್ಪೀಡ್ ಪೋಸ್ಟ್" ಎಂಬ ವಿಶೇಷಣವನ್ನೂ ಕೆಲವೊಮ್ಮೆ ನೋಡಬಹುದು. "ರಿಜಿಸ್ಟರ್ಡ್ ಪೊಸ್ಟ್" ಎಂದರೆ "ಗೆ"ಗೆ ಕಳುಹಿಸಿದ ಪತ್ರವನ್ನು ಅವನ ಕೈಗೇ ಒಪ್ಪಿಸಿ ಅವನಿಂದ ಮರುಪತ್ರ ಪಡೆಯುವ ವ್ಯವಸ್ಥೆ. ಇದೇ ವ್ಯವಸ್ಥೆ "ಸ್ಪೀಡ್ ಪೋಸ್ಟ್"ನಲ್ಲೂ ಇದೆಯಾದರೂ ಇದು ಉಳಿದ ಪತ್ರಗಳಿಗಿಂತ ತ್ವರಿತವಾಗಿ ಎಂದರೆ, ಸಾಮಾನ್ಯ ಪತ್ರ ತಲುಪಲು ಸುಮಾರು ೭ ದಿನ ತೆಗೆದುಕೊಂಡರೆ ಅದೇ ಪತ್ರ "ಸ್ಪೀಡ್ ಪೋಸ್ಟ್" ಮೂಲಕ ಒಂದೇ ವಾರದಲ್ಲಿ ತಲುಪಬಲ್ಲದು! ಇವೆರಡೂ ಮೌಲ್ಯವರ್ಧಿತ ಸೇವೆಗಳಾದುದರಿಂದ, ಪತ್ರದ ತೂಕ ಹಾಗೂ ದೂರವನ್ನವಲಂಬಭಿಸಿ ಬೆಲೆ ನಿರ್ಧರಿಸಲಾಗುತ್ತದೆ.

ಮೇಲೆ ತಿಳಿಸಿದ ಎಲ್ಲಾ ಬಗೆಯ ಪತ್ರಗಳನ್ನೂ (ರಿಜಿಸ್ಟರ್ಡ್ ಪೊಸ್ಟ್, ಸ್ಪೀಡ್ ಪೋಸ್ಟ್ ಹೊರತಾಗಿ) ಅಂಚೆ ಪೆಟ್ಟಿಗೆ ಎಂಬ ಕೆಂಪು ಬಣ್ಣದ, ಕಪ್ಪು ಟೊಪ್ಪಿಯ ಡಬ್ಬದೊಳಗೆ ಹಾಕುವುದು ನಮ್ಮ ಕರ್ತವ್ಯ ಎಂದೂ, ಅದನ್ನು ಸರಿಯಾದ "ಗೆ"ಗೆ ಕಳುಹಿಸುವುದು ಅಂಚೆಕಛೇರಿಯವರ ಕೆಲಸವೆಂದೂ ತಿಳಿದುಕೊಂಡರೆ ಸಾಕು. ಬರೀ ಇಷ್ಟೇ ಅಲ್ಲದೆ "ಮನಿ ಆರ್ಡರ್", "ವಿ.ಪಿ.ಪಿ" ಹಾಗೂ "ಟೆಲಿಗ್ರಾಂ" ಕೂಡ ಅಂಚೆಯವರು ಒದಗಿಸುವ ಇತರ ಬಗೆಯ ಪತ್ರದ ಮಾದರಿಯ ಸಾಲಿಗೆ ಸೇರಿಸಬಹುದಾಗಿದೆ. ಮೊದಲೆರಡನ್ನು ಹಣ ಕಳುಹಿಸಲೂ, ಕೊನೆಯದ್ದನ್ನು ತುರ್ತು ಸಂದೇಶ ಕಳುಹಿಸಲು ಉಪಯೋಗಿಸುತ್ತಿದ್ದರೆಂದು ಹಿರಿಯರಿಂದ ಕೇಳಿ ತಿಳಿದ ನೆನಪು.

ಕೆಲವೊಮ್ಮೆ ಯಾರಾದರೂ ನನ್ನ ಬಳಿ ಯಾವುದಾದರೂ ವಿಷಯ ಹಂಚಿಕೊಳ್ಳುತ್ತಿದ್ದರೆ, ಕೊನೇಯಲ್ಲಿ ಇವನು ಇದನ್ನೆಲ್ಲಾ ನನಗೆ ಏಕೆ ಹೇಳುತ್ತಿದ್ದಾನೆ ಎಂಬ ಪ್ರಶ್ನೆ ಮೂಡುತ್ತದೆ. ಅಂತೆಯೇ ಈ ಮೇಲಿನ ಬರಹ ಓದಿ ನಿಮಗೆ ಹಾಗೆಯೇ ಅನಿಸಿರಬಹುದು. ಆದರೆ ನಾನು ಇಷ್ಟೆಲ್ಲಾ ಬರೆಯಲು ಕಾರಣವಿಲ್ಲದಿಲ್ಲ! ಕೋಟದಿಂದ ಚಿಕ್ಕಮಗಳೂರಿಗೂ, ಚಿಕ್ಕಮಗಳೂರಿನಿಂದ ಬೆಂಗಳೂರಿಗೂ, ಬೆಂಗಳೂರಿನಿಂದ ಮೈಸೂರಿಗೂ, ಮೈಸೂರಿನಿಂದ ಮತ್ತೆ ಬೆಂಗಳೂರಿಗೆ ನನ್ನ ಜೊತೆ ಪ್ರಯಾಣಿಸಿದ ನನ್ನ ಹಳೇಯ "ಸೂಟ್ ಕೇಸ್" ಇದಕ್ಕೆಲ್ಲಾ ಕಾರಣ. ನಿನ್ನೆ ಒಂದು ರೀತಿಯ ಕುತೂಹಲ ಹುಟ್ಟಿ ಅದನ್ನು ತೆಗೆದು ನೋಡಿದಾಗ ಸುಮಾರು ನೂರಕ್ಕೂ ಮಿಕ್ಕ, ನನ್ನ ೧೦ ವರ್ಷಗಳ ಇದೇ ಪತ್ರಗಳ ಸಂಗ್ರಹ. ಇದನ್ನು ಓದುತ್ತ ನನ್ನ ವಿದ್ಯಾರ್ಥಿ ಜೀವನ, ಕಾಲೇಜು ಜೀವನ, ಕೆಲಸಕ್ಕೆ ಸೇರಿದ್ದ ಆರಂಭದ ದಿನಗಳು ಮತ್ತೆ ನೆನಪಿಗೆ ಬಂದವು. ಅಂಚೆ ಕಛೇರಿ ಈ ಪತ್ರಗಳ ಸೌಲಭ್ಯವನ್ನು ಕೊನೆಗಾಣಿಸುವುದರೊಳಗಾಗಿ ನನಗೆ ಪತ್ರ ಕಳುಹಿಸುತ್ತಿದ್ದ ಕೆಲವರಿಗಾದರೂ ಮತ್ತೆ ಪತ್ರ ಕಳುಹಿಸಬೇಕೆಂಬ ಆಸೆಯಾಗುತ್ತಿದೆ, ಅದಕ್ಕೇ ಇಂದಿನಿಂದಲೇ ಅವರಿಗೆಲ್ಲಾ ಕರೆ ಮಾಡಿ ವಿಳಾಸ ತಿಳಿದುಕೊಳ್ಳುತ್ತಿದ್ದೇನೆ. ಇದನ್ನು ನನ್ನ ಹುಚ್ಚುತನ ಎಂದು ನೀವು ನಕ್ಕರೂ ಚಿಂತೆಯಿಲ್ಲ, ನನ್ನ ಹುಚ್ಚುತನದಿಂದ ಇತರರಿಗೆ ಕೆಡುಕಾಗದೆ ಇದ್ದರಾಯಿತು.