ಪತ್ರಿಕಾ ವಿತರರಿಗೂ ವಿಮೆ ನೀಡಿ
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ೨ ಲಕ್ಷ ರೂ. ಜೀವವಿಮೆ, ೨ ಲಕ್ಷ ರೂ. ಅಪಘಾತ ಪರಿಹಾರ ವಿಮೆ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯ ಸರಕಾರ ಅಸಂಘಟಿಕ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಫುಡ್ ಡೆಲಿವರಿ ಮಾಡುವವರು, ಇ- ಕಾಮರ್ಸ್ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ನಿಜಕ್ಕೂ ಅಭಯ ಕಲ್ಪಿಸಿದಂತಾಗಿದೆ.
ಗ್ರಾಹಕರಿಗೆ ಸೇವೆ ಒದಗಿಸುವ ಅತಿವೇಗದಲ್ಲಿ ವಾಹನ ಚಲಾಯಿಸಿಕೊಂಡು, ಕರ್ತವ್ಯ ನಿರ್ವಹಿಸುವ ಈ ವರ್ಗದ ನೌಕರರು ವೃತ್ತಿಯಲ್ಲಿ ಹೆಚ್ಚಿನ ಒತ್ತಡ ಅನುಭವಿಸುತ್ತಿರುತ್ತಾರೆ. ವಾಹನ ಚಲಾಯಿಸುತ್ತಲೇ ವೃತ್ತಿ ಬದುಕಿನ ಬಂಡಿಯನ್ನು ಮುನ್ನಡೆಸುವುದು ಇವರಿಗೆ ಅನಿವಾರ್ಯವೂ ಹೌದು. ಇಂಥ ಸಂದರ್ಭದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದರೆ ವಿಮಾ ಸೌಲಭ್ಯ ಅವರ ಕೈಹಿಡಿಯಲಿದೆ ಎಂಬುದು ಸರಕಾರದ ಕಾಳಜಿ. ನಿಜಕ್ಕೂ ಇದು ಶ್ಲಾಘನೀಯ ಹೆಜ್ಜೆ.
ಹಾಗೆಯೇ, ಈ ಗಿಗ್ ಕಾರ್ಮಿಕರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮನೆ ಬಾಗಿಲಿಗೆ ದಿನಪತ್ರಿಕೆ ವಿತರಿಸುವ ಪತ್ರಿಕಾ ವಿತರಕರು, ಹಾಲು ಹಾಕುವವರನ್ನೂ ಸರಕಾರ ಗುರುತಿಸಬೇಕಿದೆ. ಪತ್ರಿಕಾ ವಿತರಕರು, ಹಾಲು ಹಾಕುವವರ ಕೆಲಸವೂ ಸಹ ಫುಡ್ ಡೆಲಿವರಿ ನೌಕರಂತೆಯೇ ಹೆಚ್ಚಿನ ಸವಾಲನ್ನು ಹೊಂದಿದೆ. ಗಡಿಯಾರದ ವಿರುದ್ಧ ಇವರ ವೃತ್ತಿಯ ಚಲನೆಯಿರುತ್ತದೆ. ಮಳೆಯಿರಲಿ, ಚಳಿಯಿರಲಿ, ಇವರ ಕೆಲಸಗಳು ಸೂರ್ಯೋದಯಕ್ಕೂ ಪೂರ್ವದಲ್ಲಿಯೇ ಆರಂಭಗೊಳ್ಳುತ್ತದೆ. ಪತ್ರಿಕೆಯನ್ನು ಬೆಳಿಗ್ಗೆ ೬ ರಿಂದ ೭ಗಂಟೆಯೊಳಗೆ ಮನೆ ಬಾಗಿಲಿಗೆ ತಲುಪಿಸುವುದೇ ಇವರ ಬಹುಮುಖ್ಯ ಸವಾಲು. ಹಾಗೆಯೇ ಹಾಲನ್ನು ಕೂಡ ಬೆಳಿಗ್ಗಿನ ಸೂಕ್ತ ಸಮಯದಲ್ಲಿ ಮನೆಗೆ ತಲುಪಿಸುವ ಹೊಣೆಗಾರಿಕೆ ಸಣ್ಣದೇನಲ್ಲ. ಕೌಟುಂಬಿಕ, ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಲೇ ಇವರು ಸೈನಿಕರಂತೆ ನಿತ್ಯವೂ ಸೇವೆ ಸಲ್ಲಿಸುತ್ತಿರುತ್ತಾರೆ. ಸರಕಾರ ಇವರ ಶ್ರಮವನ್ನು ಗುರುತಿಸುವುದು ಕೂಡ ಅತಿಮುಖ್ಯ.
ಸದಭಿರುಚಿಯ ಸುದ್ದಿಗಳನ್ನು ಹೊತ್ತು ಕೊರೊನಾ ಕಾಲಘಟ್ಟದಲ್ಲಿ ಒಂದು ದಿನವೂ ವಿರಮಿಸದೆ ದಿನಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸಿದ್ದ ಪತ್ರಿಕಾ ವಿತರಕರು ಹಾಗೂ ಹಾಲು ಪೂರೈಕೆ ಮಾಡುವವರನ್ನು ಸಹ ಸರಕಾರ ‘ಕೋವಿಡ್ ವಾರಿಯರ್' ಎಂದೇ ಗುರುತಿಸಿತ್ತು. ಜೀವದ ಹಂಗು ತೊರೆದು ಇವರು ಸಲ್ಲಿಸಿದ ಸೇವೆಗೆ ಜನ ಸಮುದಾಯದಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಈ ಅಸಂಘಟಿತ ಕಾರ್ಮಿಕರಿಗೆ ಪತ್ರಿಕಾ ಸಂಸ್ಥೆಗಳು ನೀಡುವ ಸಂಭಾವನೆ ಹೊರತಾಗಿ ಬೇರಾವ ಸೌಲಭ್ಯಗಳೂ ಇಲ್ಲ. ನಸುಕಿನ ವಾತಾವರಣದಲ್ಲಿ ಧಾವಂತದಲ್ಲಿ ಕೆಲಸ ಮಾಡುವಾಗ ಆರೋಗ್ಯ ಹದಗೆಟ್ಟರೆ, ಆಕಸ್ಮಿಕ ಅಪಘಾತ ಸಂಭವಿಸಿದರೆ ಆರೋಗ್ಯ ಭದ್ರತೆ ಪಡೆಯಲು ಸೂಕ್ತ ವ್ಯವಸ್ಥೆಗಳೂ ಇಲ್ಲ. ಗಿಗ್ ಕಾರ್ಮಿಕರ ಜೊತೆಗೆ ಸರಕಾರ ಪತ್ರಿಕಾ ವಿತರಕರನ್ನೂ ಹಾಲು ಮಾರುವವರನ್ನೂ ಪರಿಗಣಿಸಿ, ವಿಮಾ ಸೌಲಭ್ಯ ವಿಸ್ತರಿಸಬೇಕಿದೆ. ಈ ಮೂಲಕ ಇವರಿಗೆ ಸಾಮಾಜಿಕ ಭದ್ರತಾ ಗ್ಯಾರಂಟಿ ಕಲ್ಪಿಸಬೇಕಿದೆ.
-ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೩-೦೯-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ