ಪತ್ರಿಕೆಗೆ ಬರೆಯೋದು ಹೇಗೆ?

ಪತ್ರಿಕೆಗೆ ಬರೆಯೋದು ಹೇಗೆ?

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ : ವಿನಾಯಕ ಕೋಡ್ಸರ
ಪ್ರಕಾಶಕರು
ಮಿಥಿಲಾ ಪ್ರಕಾಶನ, ರಾಜಾಜಿನಗರ, ಬೆಂಗಳೂರು -೧೦
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೧೫

ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ್ಲ. ಯಾವ ರೀತಿಯ ಬರಹ, ಯಾವ ಪತ್ರಿಕೆಯ ಯಾವ ಪುರವಣಿಗೆ ಸೂಕ್ತ ಎನ್ನುವ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬ ಲೇಖಕರು ಹೊಂದಿರುವುದು ಅಗತ್ಯ. ಇದರ ಜೊತೆಗೆ ಲೇಖನಗಳಲ್ಲಿನ ಪದಗಳ ಮಿತಿಯನ್ನು ಗಮನಿಸುವುದು ಅತ್ಯಂತ ಅಗತ್ಯ. ಬಹಳಷ್ಟು ಬರಹಗಾರರು ಹೊಂದಿರುವ ಹಲವಾರು ಸಂಶಯಗಳನ್ನು ದೂರ ಮಾಡಲು ಖುದ್ದು ಪತ್ರಕರ್ತರಾಗಿರುವ ವಿನಾಯಕ ಕೋಡ್ಸರ ಇವರು ಸೊಗಸಾದ ಒಂದು ಪುಸ್ತಕವನ್ನು ಹಲವು ಲೇಖಕರ ಬರಹಗಳೊಂದಿಗೆ ಸಂಪಾದಿಸಿ ಹೊರತಂದಿದ್ದಾರೆ.

ಪತ್ರಕರ್ತರಾದ ರವಿ ಹೆಗಡೆ ಹಾಗೂ ಪ್ರಾಧ್ಯಾಪಕರಾದ ನಿರಂಜನ ವಾನಳ್ಳಿ ಇವರ ಬೆನ್ನುಡಿ ಈ ಪುಸ್ತಕದಲ್ಲಿದೆ. ರವಿ ಹೆಗಡೆ ಅವರ ಅಭಿಪ್ರಾಯದಂತೆ “ಪತ್ರಿಕೆಗಳಿಗೆ ಬರೆಯುವುದನ್ನು ಇವರಿಗೆಲ್ಲ ಕಲಿಸಿಕೊಡುವುದು ಹೇಗೆ? ಎಂಬುದು ಸಂಪಾದಕರ ಗೋಳು. “ಈ ಸಂಪಾದಕರಿಗೆ ಸರಿಹೋಗುವಂತೆ ಬರೆಯುವುದಾದರೂ ಹೇಗೆ? ಎಂಬುದು ಬರೆಯಲು ಆಸಕ್ತರಾಗಿರುವವರ ಅಳಲು.

ಯುವ ಮಿತ್ರ, ಪತ್ರಕರ್ತ ವಿನಾಯಕ ಕೋಡ್ಸರ, ಈ ಎರಡೂ ಪ್ರಶ್ನೆಗಳಿಗೂ ಒಂದೇ ಪುಸ್ತಕದಲ್ಲಿ ಉತ್ತರಿಸಿದ್ದಾರೆ. ‘ಪತ್ರಿಕೆಗಳಿಗೆ ಬರೆಯೋದು ಹೇಗೆ?’ ಎಂಬ ಪ್ರಾಕ್ಟಿಕಲ್ ಪಾಠಗಳ ಸಂಕಲನವನ್ನು ಇವರು ಹೊರತರುತ್ತಿರುವುದು ನಿಜಕ್ಕೂ ಉಪಯುಕ್ತ ಎನ್ನುವುದು ನನ್ನ ಅಭಿಪ್ರಾಯ. ಬೇರೆ ಬೇರೆ ಪತ್ರಿಕೆಗಳ ಪುರವಣಿ ವಿಭಾಗದ ಉಸ್ತುವಾರಿ ಹೊತ್ತಿರುವವರು, ಪತ್ರಿಕಾ ಬರಹಗಾರಿಕೆಯಲ್ಲಿ ಸೈ ಎನಿಸಿಕೊಂಡ ಅನುಭವಿ ಫ್ರೀಲಾನ್ಸ್ ಪತ್ರಕರ್ತರು ಈ ಪುಸ್ತಕದಲ್ಲಿ ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪುರವಣಿ ಬರಹಗಾರಿಕೆಯ ಪಠ್ಯಪುಸ್ತಕ ಇದು. ಹೊಸದಾಗಿ ಫ್ರೀಲಾನ್ಸ್ ಬರಹಗಾರರಾಗ ಬಯಸುವವರಿಗೆ ಬೈಬಲ್ ಇದು. ಈಗಾಗಲೇ ಫ್ರೀಲಾನ್ಸ್ ಬರಹಗಾರರಾದವರೂ ತಮ್ಮ ಬರಹವನ್ನು ಇನ್ನಷ್ಟು ಚೆಂದಗಾಣಿಸಿಕೊಳ್ಳಲು ಫೇರ್ ನೆಸ್ ಕ್ರೀಂ ಇದು. ಪತ್ರಿಕೆಯಲ್ಲೇ ಕೆಲಸ ಮಾಡುತ್ತಿರುವ ಕಿರಿಯ ಉದ್ಯೋಗಿಗಳಿಗೆ ಟಿಪ್ಸ್ ನೀಡುವ ‘ಹಿರಿಯ ಸಹೋದ್ಯೋಗಿ' ಇದು.” ಎಂದಿದ್ದಾರೆ.

ಪ್ರಾಧ್ಯಾಪಕರಾದ ಡಾ.ನಿರಂಜನ ವಾನಳ್ಳಿ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರೊಂದು ಸೊಗಸಾದ ಮಾತಿನಿಂದ ತಮ್ಮ ಮುನ್ನುಡಿಯನ್ನು ಆರಂಭಿಸಿದ್ದಾರೆ. “ಬರೆಯುವವರು ಬೆಳೆಯುವುದಿಲ್ಲ, ಬೆಳೆಯುವವರು ಬರೆಯೋದಿಲ್ಲ- ಇದು ಕನ್ನಡದಲ್ಲಿ ‘ಕೃಷಿಕರ ಕೈಗೆ ಲೇಖನಿ'ಎಂಬ ಆಂದೋಲನ ಆರಂಭಗೊಂಡಾಗ ಕೇಳಿ ಬಂದ ಮಾತು. ಕೃಷಿಕರು ಬರೆಯದೇ, ಭೂಮಿಗೆ ಇಳಿದು ಅಭ್ಯಾಸವಿಲ್ಲದವರೇ ಕೃಷಿಯ ಬಗ್ಗೆ ಗುತ್ತಿಗೆ ತೆಗೆದುಕೊಂಡಂತೆ ಬರೆಯುವುದರಿಂದ ಆಗುವ ಅನಾಹುತದ ಬಗ್ಗೆ ಈ ಮಾತು ಬೆಳಕು ಚೆಲ್ಲುವಂತಿತ್ತು. ಅದಾಗಿ ಕಾವೇರಿ-ಕೃಷ್ಣೆಗಳಲ್ಲಿ ಬಹಳ ನೀರು ಹರಿದಿದೆ. ಆದರೆ ಪರಿಸ್ಥಿತಿ ಮಾತ್ರ ಬಹಳ ಬದಲಾದಂತಿಲ್ಲ. ಇಂದಿಗೂ ಕನ್ನಡದಲ್ಲಿ ಕೃಷಿಯ ಬಗ್ಗೆ ಹೆಚ್ಚು ಬರೆಯುವವರು ಕೈ ಕೆಸರಾಗದವರೇ !

ತಮಾಷೆಯೆಂದರೆ ಒಟ್ಟೂ ಪತ್ರಿಕೋದ್ಯಮದ ಬಗೆಗೂ ಈ ಮಾತು ಒಪ್ಪುತ್ತದೆ. ‘ಕಲಿಸುವವರು ಬರೆಯುವುದಿಲ್ಲ, ಬರೆಯುವವರು ಕಲಿಸುವುದಿಲ್ಲ' ಎಂಬ ಮಾತೂ ಇದೆ. ಇಂದಿಗೆ ರಾಜ್ಯದಲ್ಲಿರುವ ನೂರಾರು ಪತ್ರಿಕೋದ್ಯಮದ ಮೇಷ್ಟ್ರುಗಳ ಪೈಕಿ ಬರೆಯುವವರು ಎಷ್ಟು ಜನ ಲೆಕ್ಕ ಹಾಕಬೇಕು..." ಎನ್ನುತ್ತಾರೆ. ಇದು ನೂರಕ್ಕೆ ನೂರು ಸತ್ಯವಾದ ಮಾತು. ಪತ್ರಿಕೋದ್ಯಮದಲ್ಲಿರುವವರಿಗೆ ಬರವಣಿಗೆ ಅನಿವಾರ್ಯ. ಅದರಲ್ಲೂ ದಿನ ಪತ್ರಿಕೆಯವರಿಗೆ ಅದೊಂದು ಅನಿವಾರ್ಯ ಕರ್ಮ. ಪ್ರತೀದಿನ ಪತ್ರಿಕೆಯ ಪುಟ ತುಂಬಿಸಲೇ ಬೇಕು. ಏನು ಬರೆಯಬೇಕು? ಏನು ಬರೆದರೆ ಓದುಗರಿಗೆ ರುಚಿಸುತ್ತದೆ ಎಂಬುವುದನ್ನು ತಿಳಿದವನೇ ಜಾಣ ಪತ್ರಕರ್ತ ಅಥವಾ ಬರಹಗಾರ.

ಪುಸ್ತಕದ ಸಂಪಾದಕರಾದ ವಿನಾಯಕ ಕೋಡ್ಸರ ಅವರು ತಮ್ಮ ಮಾತಾದ ‘ಹೀಗೊಂದು ಆಲೋಚನೆ ಬಂದಿದ್ದು ಯಾಕೆಂದರೆ..." ಅನ್ನುತ್ತಾ ತಮ್ಮ ಮನದಾಳದ ಮಾತುಗಳನ್ನು ಬರೆದಿದ್ದಾರೆ. ಹಲವಾರು ಪತ್ರಕರ್ತರು ಹಾಗೂ ಹವ್ಯಾಸಿ ಬರಹಗಾರರು ಇವರ ಈ ಸಾಹಸಕ್ಕೆ ಬೆನ್ನೆಲುಬಾಗಿದ್ದಾರೆ. ಶಿವಾನಂದ ಕಳವೆ, ಮಾವೆಂಸ ಪ್ರಸಾದ್, ಜಯದೇವ್ ಪ್ರಸಾದ್ ಮೊಳೆಯಾರ್, ನವೀನ್ ಸಾಗರ್, ಟಿ ಜಿ ಶ್ರೀನಿಧಿ, ರೋಹಿತ್ ಚಕ್ರತೀರ್ಥ, ಶ್ರೀವತ್ಸ ಜೋಶಿ ಮೊದಲಾದವರು ತಮ್ಮ ಬರಹಗಳಿಂದ ಈ ಪುಸ್ತಕದ ಪುಟಗಳನ್ನು ಶ್ರೀಮಂತವಾಗಿಸಿದ್ದಾರೆ. 

ಪತ್ರಿಕೆಯ ಪರಿವಿಡಿಯಲ್ಲಿ ಸುಮಾರು ೨೧ ಅಧ್ಯಾಯಗಳಿವೆ. ಕೊನೆಯ ಅಧ್ಯಾಯದಲ್ಲಿ ಪುಸ್ತಕಕ್ಕಾಗಿ ಬರೆದ ಲೇಖಕರ ಚುಟುಕಾದ ಪರಿಚಯ ಇದೆ. ಮುಖಪುಟ ಹಾಗೂ ಪ್ರತೀ ಅಧ್ಯಾಯಕ್ಕೆ ಕಲಾವಿದ ಸತೀಶ್ ಬಾಬು ಅವರ ಸುಂದರ ರೇಖಾ ಚಿತ್ರವಿದೆ. ಸುಮಾರು ನೂರು ಪುಟಗಳ ಈ ಪುಸ್ತಕವನ್ನು ವಿನಾಯಕ ಕೋಡ್ಸರ ಅವರು ಪತ್ರಕರ್ತರ ಸ್ಪೂರ್ತಿಯಾದ ಲೇಖಕ ನಾಗೇಶ್ ಹೆಗಡೆ ಇವರಿಗೆ ಅರ್ಪಿಸಿದ್ದಾರೆ. ಬರವಣಿಗೆಯಲ್ಲಿ ಅಂಬೆಕಾಲಿಡುತ್ತಿರುವವರಿಗೆ ಮಾತ್ರವಲ್ಲದೇ ಈಗಾಗಲೇ ಸಾಕಷ್ಟು ಬರೆದವರಿಗೆ, ಬರೆಯುತ್ತಿರುವವರಿಗೆ ಉತ್ತಮ ಗೈಡ್ ಆಗಬಲ್ಲ ಪುಸ್ತಕ ಇದು.