ಪತ್ರಿಕೋದ್ಯಮ ಪಲ್ಲವಿ

ಪತ್ರಿಕೋದ್ಯಮ ಪಲ್ಲವಿ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು - ೫೬೦೦೦೪
ಪುಸ್ತಕದ ಬೆಲೆ
ರೂ. ೧೫೦.೦೦ ಮುದ್ರಣ : ೨೦೧೦

ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ ಪುಸ್ತಕಗಳು ಕೆಲವೇ ಕೆಲವು. ಇಂಗ್ಲೀಷ್ ಪುಸ್ತಕಗಳಲ್ಲಿ ವಿದೇಶಿ ಸರಕುಗಳೇ ಹೆಚ್ಚು. ಭಾರತದ ಸಂದರ್ಭದಲ್ಲಿ ಬರೆದ ಕೃತಿಗಳೂ ಹೆಚ್ಚಿಲ್ಲ. ಇದು ಪತ್ರಿಕೋದ್ಯಮದ ಮೇಷ್ಟು-ವಿದ್ಯಾರ್ಥಿಗಳಿಗೆ ಕೊರತೆಯೇ. ಈ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಕೃತಿಯಿದು. ಇದು ಪಠ್ಯದ ಎಲ್ಲ ಆಶಯಗಳನ್ನು ಒಳಗೊಂಡಿದ್ದರೂ, ನಿರೂಪಣೆ ಹಾಗೂ ಶೈಲಿಯಿಂದ ಭಿನ್ನವಾಗಿ ನಿಲ್ಲುತ್ತದೆ, ಸಂದೇಹ ಬೇಡ'.

ನಿಜಕ್ಕೂ ಪತ್ರಿಕೋದ್ಯಮದಲ್ಲಿ ಅಪಾರ ಅನುಭವವಿರುವ ಲೇಖಕರು ಈ ಪುಸ್ತಕ ಬರೆದಿರುವುದರಿಂದ ನಿರೀಕ್ಷೆಗಳು ಅಪಾರ ಇರುತ್ತವೆ. ಅವುಗಳನ್ನು ಬಹಳಷ್ಟು ಈಡೇರಿಸಲು ಪ್ರಯತ್ನಿಸಿದ್ದಾರೆ. ಪುಸ್ತಕ ಓದಿ ಪತ್ರಕರ್ತನಾಗಲು ಸಾಧ್ಯವೇ? ಮತ್ತು ಇದು ಸರಿಯೇ? ಎಂಬುದು ಹಲವಾರು ಜನರ ಸಂಶಯವಿದೆ. ಆದನ್ನೆಲ್ಲಾ ಪರಿಹರಿಸಲು ವಿಶ್ವೇಶ್ವರ ಭಟ್ ಅವರು ಬಹಳ ಪ್ರಯತ್ನ ಪಟ್ಟಿದ್ದಾರೆ. ಪ್ರತಿಯೊಂದು ವಿಷಯಗಳನ್ನು ಉದಾಹರಣೆಯ ಮೂಲಕ ವಿವರಿಸಿರುವುದರಿಂದ ನೆನಪಿನಲ್ಲಿಡಲು ಬಹಳ ಸುಲಭ. ಓದುಗರ ಪತ್ರ, ಸುದ್ದಿಯೆಂಬ ಭೃಂಗದ ಬೆನ್ನೇರಿ, ವರದಿ ರಚನೆ, ಭಾಷಣದ ವರದಿಗಾರಿಕೆ, ಫಾಲೋ ಅಪ್ ವರದಿ, ವರದಿಗಾರ: ಪತ್ರಿಕೆಯ ಆಂಟೆನಾ, ಪತ್ರಿಕಾ ಗೋಷ್ಟಿ, ನಿಧನ ವಾರ್ತೆ, ಪತ್ರಿಕಾ ನೀತಿ ಸಂಹಿತೆ, ಫೋಟೋಗೆ ಅಕ್ಷರಗಳ ಫ್ರೇಮ್, ಪದ: ಮನುಕುಲದ ಅದ್ಭುತ ಆವಿಷ್ಕಾರ.. ಹೀಗೆ ಹತ್ತು ಹಲವಾರು ವಿಷಯಗಳು ಈ ಪುಸ್ತಕದಲ್ಲಿ ಅಡಗಿವೆ.

ಲೇಖಕರು ಬರೆದ ಕೊನೆಯ ಅಧ್ಯಾಯವಾದ ವಿಶ್ವವನ್ನೇ ನಲುಗಿಸಿದ ಆ ಒಂದು ಪದ.. ತುಂಬಾನೇ ಕುತೂಹಲಕಾರಿಯಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ದೇಶದ ಎರಡು ನಗರಗಳ ಮೇಲೆ ಬಾಂಬ್ ಬೀಳಲು ಕಾರಣವಾದ ಆ ಒಂದು ಪದದ ಬಗ್ಗೆ ಲೇಖಕರು ಬರೆದಿದ್ದಾರೆ. ಜಪಾನ್ ದೇಶದ ವಿರುದ್ಧ ಫೋಟ್ಸ್ ಡ್ಯಾಮ್ ನಲ್ಲಿ ಆಗಿನ ಸಮಯಕ್ಕೆ ವಿಶ್ವ ನಾಯಕರಾಗಿದ್ದ ಚರ್ಚಿಲ್, ಟ್ರುಮನ್ ಮತ್ತು ಸ್ಟಾಲಿನ್ ಮೊದಲಾದವರು ಒಂದು ಘೋಷಣೆ ಮಾಡಿದರು. ‘ಜಪಾನ್ ಶರಣಾಗಬೇಕು ಅಥವಾ ಪರಿಸ್ಥಿತಿ ಎದುರಿಸಬೇಕು' ಎಂದು. ಜಪಾನ್ ಈ ವಿಷಯದ ಮೇಲೆ ಸಂಪುಟ ಸಭೆ ಸೇರಿ ಒಂದೇ ಒಂದು ಪದದ ನಿರ್ಣಯ ತೆಗೆದುಕೊಂಡಿತು, ಆ ಪದವೇ ‘ಮೊಕುಸಟ್ಸು'. ಈ ಪದಕ್ಕೆ ಎರಡು ಅರ್ಥಗಳಿವೆ. ಒಂದು, ‘ನಾವು ಪರಿಶೀಲಿಸುತ್ತೇವೆ’ ಮತ್ತೊಂದು ‘ನಾವು ತಿರಸ್ಕರಿಸುತ್ತೇವೆ’. ಪತ್ರಿಕಾ ವರದಿಗಾರನೋರ್ವ ಈ ಪದದ ಎರಡನೇ ಅರ್ಥವನ್ನು ಪ್ರಕಟಿಸಿದ. ಈ ಕಾರಣದಿಂದ ವಿಶ್ವನಾಯಕರ ಕಣ್ಣು ಕೆಂಪಾಗಿ ಪುಟ್ಟ ದೇಶವಾದ ಜಪಾನ್ ಮೇಲೆ ಎರಡು ಅಣುಬಾಂಬ್ ಹಾಕಿಯೇ ಬಿಟ್ಟರು. ಸಾವಿರಾರು ಜನ ಸತ್ತು, ಲಕ್ಷಾಂತರ ಜನ ಅಂಗವಿಕಲರಾದರು. ಇದೆಲ್ಲಾ ಆದದ್ದು ಒಂದು ಪದದ ಅರ್ಥವನ್ನು ತಪ್ಪಾಗಿ ಕಲ್ಪನೆ ಮಾಡಿದ್ದಕ್ಕೆ. ಇಂತಹ ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ. ಚೀನಾದಲ್ಲಿ ಕೋಕಾ ಕೋಲಾ ವನ್ನು ಜನರು ಮೆಚ್ಚದೇ ಇರಲು ಕಾರಣವೆಂದರೆ ಚೀನೀ ಭಾಷೆಯಲ್ಲಿ ಕೋಕಾ ಕೋಲಾ ಎಂದರೆ ‘ಬಾಲದ ಕಪ್ಪೆಯನ್ನು ತಿನ್ನು' ಎಂದು ಅರ್ಥ ಅಂತೆ. ಹಾಗೆಯೇ ‘ನೋವಾ’ ಎಂಬ ಕಾರು ಸ್ಪೇನ್ ಮಾರುಕಟ್ಟೆಯಲ್ಲಿ ಕ್ಲಿಕ್ ಆಗಲೇ ಇಲ್ಲ. ಕಾರಣವೇನೆಂದರೆ ಸ್ಪಾನಿಷ್ ಭಾಷೆಯಲ್ಲಿ ನೋವಾ ಅಂದರೆ ‘ಚಲಿಸುವುದಿಲ್ಲ' ಎಂದರ್ಥವಂತೆ. ಚಲಿಸದೇ ಇರುವ ಕಾರು ಯಾರಿಗೆ ಬೇಕು ಅಲ್ಲವಾ?

ಹೀಗೆ ಉತ್ತಮ ಸ್ವಾರಸ್ಯಕರವಾದ ಅನೇಕ ಅಧ್ಯಾಯಗಳು ಈ ಪುಸ್ತಕದಲ್ಲಿ ಇದೆ. ಸುಮಾರು ೨೩೦ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಲೇಖಕರು ಅವರ ಗೆಳೆಯ ನಾರಾಯಣ ಗಂಭೀರ ಅವರಿಗೆ ಅರ್ಪಿಸಿದ್ದಾರೆ.