ಪತ್ರೊಡೆ

ಪತ್ರೊಡೆ

ತುಳುನಾಡಿನ ವಿಶೇಷ ಖಾದ್ಯಗಳಲ್ಲಿ ಇದು ಕೂಡ ಒಂದು. ನಮ್ಮ ಸುತ್ತಮುತ್ತಲಿನ ಪ್ರಕೃತಿಯು ಔಷಧಿಯ ಗುಣಗಳನ್ನು ಹೊಂದಿರುವುದು 
ನಮಗೆ ತಿಳಿದೇ ಇದೆ.ತುಂಬೆ ಗಿಡದಿಂದ ಹಿಡಿದು ಆಲದ ಮರದವರೆಗೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ 
ಉಪಯೋಗಿಸುವಂತವುಗಳಾಗಿವೆ. ಹಾಗೆಯೇ ಕಾಡು ಕೆಸುವಿನ ಎಲೆ. ಇದನ್ನು ತುಳುವರ ಆಟಿ ತಿಂಗಳಿನಲ್ಲಿ ಹೆಚ್ಚಾಗಿ ಆಟಿ ಅಮಾವಾಸ್ಯೆಯ
 ದಿನದಂದು ಹಾಲೆಮರದ ತೊಗಡೆಯಲ್ಲಿ ತಯಾರಿಸಿದ ಕಷಾಯವನ್ನು ಕುಡಿಯುವುದರ ಜೊತೆಗೆ, ಕಾಡು ಕೆಸುವಿನ ಎಲೆಯಿಂದ 
ಪತ್ರೊಡೆ ತಯಾರಿಸಿ ತಿನ್ನುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ತುಳುನಾಡಿನಲ್ಲಿ ಆಚಾರ-ವಿಚಾರದೊಂದಿಗೆ ಈ ಮಾಟ,ಮಂತ್ರದಂತ ಋಣಾತ್ಮಕ ವಿಚಾರಗಳು ಕೂಡ ನಡೆದು ಬಂದಿದೆ.ಅದರಲ್ಲಿ ಈ ಕೈವಿಷ ಅನ್ನೋದು ಒಂದು. ಹೆಚ್ಚಿನವರ ತಿಳುವಳಿಕೆ 
ಇದು ಮಾಟ ಮಂತ್ರದ ಮೂಲಕ ಆಗುವಂತದ್ದು ಎಂದು. ಇದು ಮೂಲನಂಬಿಕೆಯೋ ಅಥವಾ ಮೂಢನಂಬಿಕೆಯೋ ನನಗೆ ತಿಳಿಯದು.
ಆದರೆ ಅದನ್ನು ಹೊರತುಪಡಿಸಿ ಕೈವಿಷ ಅನ್ನೋದು ಬೇರೆ ವಸ್ತುಗಳಿಂದ ಉಂಟಾಗುತ್ತದೆ. ನಮ್ಮ ದೇಹದಲ್ಲಿರುವ ಕೂದಲು ಮತ್ತು ಉಗುರು 
ಇವೆರಡು ವಿಷಯುಕ್ತವಾಗಿರುವಂತವುಗಳು. ಹಾಗೆಯೇ ಬೆಕ್ಕು ಮತ್ತು ನಾಯಿಯ ಕೂದಲುಗಳು ಕೂಡ ವಿಷಯುಕ್ತವಾಗಿವೆ. ಇಂತಹ 
ವಸ್ತುಗಳು ನಾವು ತಿನ್ನುವ ಆಹಾರದಲ್ಲಿ ಸೇರಿಕೊಂಡು ಹೊಟ್ಟೆಯೊಳಗೆ ಸೇರಿಕೊಳ್ಳುತ್ತವೆ. ಇದರಿಂದ ಅನಾರೋಗ್ಯ ಉಂಟಾಗುತ್ತದೆ.

ಆದ್ದರಿಂದಲೇ ನಮ್ಮ ಹಿರಿಯರು ಕೂದಲು,ಉಗುರುಗಳನ್ನು ನಾವು ವಾಸಿಸುವ ವಾತಾವರಣದಲ್ಲಿ ಬಿಸಾಡಬಾರದು.ನಾಯಿ,ಬೆಕ್ಕನ್ನು 
ಮುಟ್ಟಿದರೆ ಚೆನ್ನಾಗಿ ಕೈ ತೊಳೆಯಬೇಕು ಅನ್ನುತ್ತಾರೆ. ಇವುಗಳಿಂದ ಆಗುವ ಸಮಸ್ಯೆಯನ್ನು ನಿವಾರಿಸಲು ಈ ರೀತಿಯ ಔಷಧಿಗಳನ್ನು ಉಪಯೋಗಿಸುತ್ತಾರೆ.ಹಾಲೆಮರದ ತೊಗಟೆಯ ಕಷಾಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ,
 ಕಾಡು ಕೆಸುವಿನ ಎಲೆ ನಮ್ಮ ದೇಹದಲ್ಲಿ ಸೇರಿಕೊಂಡ ವಿಷಯುಕ್ತ ವಸ್ತುಗಳನ್ನು ತೆಗೆದು ಹಾಕಿ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕರಿಸುತ್ತದೆ. ಈ ಖಾದ್ಯ ತಯಾರಿಸುವಾಗ ಹುಳಿಯನ್ನು ಹೆಚ್ಚಾಗಿ ಬಳಸಿರಿ.ಯಾಕೆಂದರೆ ಕೆಸುವಿನ ಸೊಪ್ಪು ತುರಿಕೆಯ ಗುಣವನ್ನು ಹೊಂದಿದೆ. ಹುಳಿಯನ್ನು 
ಹೆಚ್ಚು ಹಾಕುವುದರಿಂದ ತುರಿಕೆಯ ಅಂಶ ಕಡಿಮೆಯಾಗುತ್ತದೆ.ಆದ್ದರಿಂದ ಇಂತಹ ಪದ್ಧತಿಗಳನ್ನು ಅಲ್ಲಗಳೆಯದೆ ಉಳಿಸುವಲ್ಲಿ ಪ್ರತಿಯೊಬ್ಬರೂ 
ಪ್ರಯತ್ನಿಸಬೇಕು.ಗಿಡ ಮೂಲಿಕೆಗಳಿಂದ ತಯಾರಿಸಿದ ಯಾವುದೇ ಔಷಧಿಯು ನಮ್ಮ ಆರೋಗ್ಯಕ್ಕೆ ಪೂರಕವಾಗಿವೆ.