ಪತ್ರ ಚಳವಳಿ…

ಪತ್ರ ಚಳವಳಿ…

ದಯವಿಟ್ಟು ಎಲ್ಲರೂ ಈ ಮಾದರಿಯನ್ನು ಅನುಸರಿಸಿ ಪತ್ರ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾನ್ಯ ರಾಷ್ಟ್ರಪತಿಗಳನ್ನು ಪ್ರೀತಿ ಪೂರ್ವಕವಾಗಿ ಆಗ್ರಹಿಸಿ.

ಇವರಿಗೆ,

ಶ್ರೀಮತಿ ದ್ರೌಪದಿ ಮುರ್ಮು,

ಗೌರವಾನ್ವಿತ ರಾಷ್ಟ್ರಪತಿಗಳು,

ಭಾರತ ಸರ್ಕಾರ,

ರಾಷ್ಟ್ರಪತಿ ಭವನ,

ನವದೆಹಲಿ- 110011.

ದಿನಾಂಕ : 27/07/2023

ವಿಷಯ : ಮಣಿಪುರದ ಹಿಂಸಾತ್ಮಕ ಘಟನೆಗಳನ್ನು ನಿಲ್ಲಿಸಿ ಅಲ್ಲಿ ‌ಶಾಂತಿ ಸ್ಥಾಪಿಸಲು ತಕ್ಷಣ ಮಧ್ಯಪ್ರವೇಶಿಸಲು ಆಗ್ರಹ ಪೂರ್ವಕ ಮನವಿ.

ಗೌರವಾನ್ವಿತ ರಾಷ್ಟ್ರಪತಿಗಳೇ,

ಭಾರತದ ಪೂರ್ವಾಂಚಲದ ಸಪ್ತ ಸೋದರಿಯ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ಸತತವಾಗಿ " ನಾಗರಿಕ ಯುದ್ಧ " ನಡೆಯುತ್ತಿರುವುದು  ನಿಮ್ಮ ಗಮನದಲ್ಲಿದೆ ಎಂದು ಭಾವಿಸುತ್ತಾ..

ಬುದ್ದ ಹುಟ್ಟಿದ ನಾಡಿನಲ್ಲಿ, ಗಾಂಧಿ ಬದುಕಿದ ನೆಲದಲ್ಲಿ, ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಒಂದು ಸಣ್ಣ ರಾಜ್ಯದ ಹಿಂಸೆಯನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಅತ್ಯಂತ ವಿಷಾದನೀಯ ಸಂಗತಿ. ಈಗಾಗಲೇ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ವಿಶ್ವದ ಗಮನ ಸೆಳೆದು ಇತ್ತೀಚೆಗಷ್ಟೇ ಯುರೋಪಿಯನ್ ಒಕ್ಕೂಟದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.

ಅಮೆರಿಕ ದೇಶ ಕಳವಳ ವ್ಯಕ್ತಪಡಿಸಿದೆ. ಅನೇಕ ಮಣಿಪುರದ ಮಾಜಿ ಸೈನ್ಯಾಧಿಕಾರಿಗಳು, ಕ್ರೀಡಾಪಟುಗಳು, ಸಾಮಾಜಿಕ ಹೋರಾಟಗಾರರು ಮತ್ತು ಸಾಮಾನ್ಯ ಜನ ತಮ್ಮನ್ನು ಅನಾಥರನ್ನಾಗಿ ಮಾಡಲಾಗಿದೆ ಎಂದು ವಿವಿಧ ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಈ ಬಗ್ಗೆ ಕೆಲವು ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿವೆ.

ದೇಶದ ಪರಮೋಚ್ಚ ಸ್ಥಾನದಲ್ಲಿ ಇರುವ ಮಾನ್ಯ ರಾಷ್ಟ್ರಪತಿಗಳಾದ ತಾವು ಇಷ್ಟೊಂದು ಬರ್ಬರ ಹಿಂಸೆಯನ್ನು ಮೌನವಾಗಿ ವೀಕ್ಷಿಸುತ್ತಾ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಒಕ್ಕೂಟ ವ್ಯವಸ್ಥೆ ಹಿತಾಸಕ್ತಿಯ ದೃಷ್ಟಿಯಿಂದ ಸಮರ್ಥನೀಯವಲ್ಲ.‌ ಮಹಿಳೆಯರು ಮತ್ತು ಮಕ್ಕಳಿಗೆ ಇದರಿಂದ ಸರಿಪಡಿಸಲಾಗದ ಅನಾಹುತವಾಗುವುದು ನಿಶ್ಚಿತ. ನೀವು‌ ಸಹ ಒಬ್ಬ ಬುಡಕಟ್ಟು ಮಹಿಳೆ ಎಂಬುದನ್ನು ಮರೆಯದಿರಿ. ಹಿಂದಿನ ಅನೇಕ ಈ ರೀತಿಯ ಹಿಂಸಾತ್ಮಕ ಘರ್ಷಣೆಗಳ ಸಂದರ್ಭದಲ್ಲಿ ಆಗಿನ ಸರ್ಕಾರಗಳ ವಿಫಲತೆಯ ಬಗ್ಗೆ ದೂರುವ ನಾವು  ಈಗ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಘಟನೆಗಳಿಗೆ ಕುರುಡಾಗಿರುವುದು ಅಕ್ಷಮ್ಯವಾಗುತ್ತದೆ.

ಅಮಾಯಕರ ಸಾವು ಹಿಂಸೆ ದರೋಡೆ ತಡೆಯಲು ವಿಫಲವಾದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವರದಿ ತರಿಸಿಕೊಂಡು ಅಥವಾ ವೀಕ್ಷಕರನ್ನು ಕಳುಹಿಸಿ ತಮ್ಮ ಪರಮಾಧಿಕಾರ ಬಳಸಿ ತಕ್ಷಣ ಕ್ರಮ ಕೈಗೊಳ್ಳಲು ಆದೇಶಿಸಬೇಕು ಮತ್ತು ತಮ್ಮ ದೈನಂದಿನ ಕೆಲಸಗಳಲ್ಲಿ ಈ ವಿಷಯಕ್ಕೆ ಮೊದಲ ಆದ್ಯತೆ ನೀಡಬೇಕು. ಯಾವುದೇ ರಾಜಕೀಯ ಹಿತಾಸಕ್ತಿಯ ಒಳಸಂಚಿಗೆ ಬಲಿಯಾಗದೆ ಭಾರತದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುತ್ತೀರಿ ಎಂಬ ಭರವಸೆಯೊಂದಿಗೆ,

ಗೌರವಪೂರ್ವಕ ವಂದನೆಗಳು.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ