ಪದವಿ ತರಗತಿಗಳಲ್ಲಿ ಕನ್ನಡ ಶಿಕ್ಶಣ

ಪದವಿ ತರಗತಿಗಳಲ್ಲಿ ಕನ್ನಡ ಶಿಕ್ಶಣ

ಬರಹ

ಕನ್ನಡವನ್ನು ಕಲಿತವರಿಗೆ, ಕಲಿಸುವವರಿಗೆ ಮತ್ತು ಇತರ ಆಸಕ್ತರಾದವರಿಗೆಂದು ಈ ಲೇಖನವನ್ನು ಇಲ್ಲಿ ಹಾಕಿದ್ದೇನೆ. ಪ್ರತಿಕ್ರಿಯೆಗಳಿಗೆ ಸ್ವಾಗತ.

ಪದವಿ ತರಗತಿಗಳಲ್ಲಿ ಭಾಷಾಶಿಕ್ಷಣ: ಕನ್ನಡ

ಈ ಬರವಣಿಗೆಯು , ಈ ಪುಸ್ತಕದಲ್ಲಿ ಇದೇ ವಿಷಯವನ್ನು ಕುರಿತಂತೆ ಬಂದಿರುವ ಇತರ ಲೇಖನಗಳ ಜೊತೆಯಲ್ಲಿ ಇರುತ್ತದೆ ಮತ್ತು ಅವುಗಳಿಗಿಂತ ಬೇರೆಯಾಗಿರುತ್ತದೆ. ಏಕೆಂದರೆ , ಕರ್ನಾಟಕದಲ್ಲಿಪದವಿ ತರಗತಿಗಳಲ್ಲಿ ಕನ್ನಡವನ್ನು ಓದುವ ಎಲ್ಲ ಹುಡುಗ-ಹುಡುಗಿಯರಿಗೂ ಕನ್ನಡವನ್ನುಮಾತನಾಡಲು ಬರುತ್ತದೆ. ಓದಲು ಮತ್ತು ಬರೆಯಲು ತಕ್ಕ ಮಟ್ಟಿಗೆ ಬರುತ್ತದೆ. ಆದರೆ , ಪಠ್ಯಪುಸ್ತಕಗಳನ್ನು ಬಿಟ್ಟರೆ , ಬೇರೆ ಏನನ್ನಾದರೂ ಅವರು ಓದುತ್ತಾರೆಯೇ , ಬರೆಯುತ್ತಾರೆಯೇ ? ಏನನ್ನು ಓದುತ್ತಾರೆ/ಬರೆಯುತ್ತಾರೆ ಎಂಬ ಪ್ರಶ್ನೆಗಳಿಗೆ ಸಂತೋಷಕರವಾದ ಉತ್ತರ ಸಿಕ್ಕುವುದಿಲ್ಲ. ನಮ್ಮ ಕಲಿಸುವಿಕೆಯು , ಭಾಷೆಯನ್ನು ಬಳಸುವ ಶಕ್ತಿಯನ್ನು ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸದೆ ಇದ್ದರೆ , ಅಥವಾಎಲ್ಲೋ ಅಲ್ಪ-ಸ್ವಲ್ಪ ಬೆಳೆಸಿದರೆ ನಮ್ಮ ಕೆಲಸದಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆಯುನನ್ನನ್ನು ಮೂವತ್ತಾರು ವರ್ಷಗಳಿಂದಲೂ ಕಾಡುತ್ತಿದೆ. ಇದಕ್ಕೆ ಉತ್ತರವನ್ನು ಹುಡುಕುವ , ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಈ ದಾರಿಯಲ್ಲಿ ಈ ಲೇಖನವು ಒಂದು ಪುಟ್ಟ ಹೆಜ್ಜೆ.

ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ನಮ್ಮ ಕನ್ನಡ ತರಗತಿಗಳ ಸ್ವರೂಪವು ಬದಲಾಗಿದೆ. ಅಲ್ಲಿ ಕಲಿಯಲೆಂದು ಬರುತ್ತಿರುವವರು , ನಮ್ಮ ಸಮಾಜದ ಬೇರೆ , ಬೇರೆಜಾತಿಗಳಿಗೆ ಸೇರಿದವರು. ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಮಾತನಾಡುವ ಬೇರೆ ಬೇರೆಕನ್ನಡವನ್ನು ಬಳಸುವವರು. ಓದುಬರಹದ ಅವಕಾಶವನ್ನೇ ಪಡೆಯದ ಕುಟುಂಬಗಳಿಂದ ಬಂದವರು.ಹೆಣ್ಣುಮಕ್ಕಳು , ಹಳ್ಳಿಗಳಿಂದ ಬಂದವರು ಬಹಳ ಜನ ಇದ್ದಾರೆ. ಇವರೆಲ್ಲರಿಗೂ ಶಾಲೆ-ಕಾಲೇಜುಗಳ ಮೆಟ್ಟಿಲು ಹತ್ತಿದ ಕೂಡಲೇ ಒಂದು ಸಮಸ್ಯೆಯು ಕಾಡುತ್ತದೆ. ತಾವು ಮನೆಯಲ್ಲಿ , ಬೀದಿಯಲ್ಲಿ ಬಳಸುವ ಕನ್ನಡಕ್ಕೂ ಇಲ್ಲಿ ಓದಬೇಕಾದ-ಬರೆಯಬೇಕಾದ ಕನ್ನಡಕ್ಕೂ ಬಹಳ ಅಂತರವಿದೆ ಎನ್ನುವುದು ಸಮಸ್ಯೆಯ ಮೊದಲ ಭಾಗ. ತಮ್ಮ ಕನ್ನಡ ಸರಿಯಲ್ಲ , ಪುಸ್ತಕಗಳಲ್ಲಿ ಇರುವ ಶಿಷ್ಟ ಕನ್ನಡ ಮಾತ್ರ ಸರಿ ಎನ್ನುವ ಉಪದೇಶವು ಎರಡನೆಯ ಭಾಗ. ಇದರಿಂದ ಅವರಲ್ಲಿ ಕೀಳರಿಮೆ ಮೂಡುತ್ತದೆ. ಮಾತನಾಡುವುದು , ಬರೆಯುವುದು ಬೇಡ ಎನ್ನಿಸಿಬಿಡುತ್ತದೆ. ಹೀಗಾಗಿ , ಮೊದಲೇಅರೆಮೂಕರಾದವರು ಸಂಪೂರ್ಣವಾಗಿ ಮೂಕರಾಗುತ್ತಾರೆ. ಹೇಗೋ ಪರೀಕ್ಷೆಯಲ್ಲಿ ಪಾಸಾಗಿ ಈಓದು-ಬರೆಹಗಳಿಗೆ ಶರಣು ಹೊಡೆಯೋಣ ಎಂಬ ತೀರ್ಮಾನಕ್ಕೆ ಬರುತ್ತಾರೆ. ಹೀಗೆ , ಸಮಾನತೆಯನ್ನು ತರಬೇಕಾದ ಶಿಕ್ಷಣವು ವ್ಯತ್ಯಾಸ ಹಾಗೂ ಭೇದ ಭಾವಗಳಿಗೆ ಕಾರಣವಾಗುತ್ತದೆ.

ಹೀಗೆಂದ ಮಾತ್ರಕ್ಕೆ , ಎಲ್ಲರಿಗೂ ಸಮಾನವಾದ ಬರವಣಿಗೆಯ ಭಾಷೆಯೊಂದು ಇರಬಾರದು , ಅದನ್ನು ಕಲಿಯಬಾರದು ಎಂದು ಅರ್ಥವಲ್ಲ. ಏಕೆಂದರೆ , ಭಾಷೆಯಿರುವುದು ಕೇವಲ ದಿನ ನಿತ್ಯದ ಅನುಭವಗಳ ಬಗ್ಗೆ ಮಾತನಾಡಲೆಂದಲ್ಲ. ನಾವು ಅನೇಕ ವಿಚಾರಗಳನ್ನು ಕುರಿತು ಆಲೋಚಿಸಬೇಕಾಗುತ್ತದೆ. ಸಾಹಿತ್ಯ ಮಾತ್ರವಲ್ಲ , ನಾವು ಕಲಿಯುವ ಇತರ ವಿಷಯಗಳಲ್ಲಿಯೂ ಇಂತಹ ಅನೇಕ ಅನಿಸಿಕೆಗಳು , ಪರಿಕಲ್ಪನೆಗಳು (ಐಡಿಯಾ ಮತ್ತು ಕಾನ್ಸೆಪ್ಟ್) ಇರುತ್ತವೆ.ಇವುಗಳನ್ನು ಅರಿಯಲು ಮತ್ತು ಇವುಗಳ ಬಗ್ಗೆ ತಿಳಿಸಲು ನಮಗೆ ಈಗಾಗಲೇ ಇರುವ ಭಾಷೆಯಶಕ್ತಿಯನ್ನು ಜಾಸ್ತಿಮಾಡಿಕೊಳ್ಳಬೇಕು. ನಮ್ಮ ಅನಂತರದ ಬದುಕಿನಲ್ಲಿಯೂ ಆ ಶಕ್ತಿಯನ್ನುಬಳಸುವಂತೆ ಆಗಬೇಕು. ಈಗ ಇದು ಆಗುತ್ತಿಲ್ಲ. ಒಂದು ವೇಳೆ ಆದರೂ ಕಾಲೇಜಿನಲ್ಲಿಕಲಿಸುತ್ತಿರುವ ಕನ್ನಡದಿಂದ ಆಗುತ್ತಿಲ್ಲ. ಇದು ಏಕೆ ಹೀಗೆ ಎಂದು ತಿಳಿಯಲು ನಾನುಪ್ರಯತ್ನಿಸುತ್ತೇನೆ.

ಮೊದಲನೆಯದಾಗಿನಾವು ಶಿಷ್ಟ ಭಾಷೆಯ ಬಳಕೆ ಮತ್ತು ದಬ್ಬಾಳಿಕೆಗಳ ನಡುವಿನ ಅಂತರವನ್ನುತಿಳಿದುಕೊಳ್ಳಬೇಕು. ನಮ್ಮ ತರಗತಿಗಳಲ್ಲಿ ಬರವಣಿಗೆಯ "ತಪ್ಪು-ಸರಿ"ಗಳಿಗೆ ಅಗತ್ಯಕ್ಕಿಂತಹೆಚ್ಚು ಮಹತ್ವವನ್ನು ನೀಡುತ್ತೇವೆ. ವಿದ್ಯಾರ್ಥಿಗಳ ಕಲ್ಪನಾಶಕ್ತಿ , ಅಲೋಚನಾ ಶಕ್ತಿ , ವಿಚಾರಶಕ್ತಿ ಮತ್ತು ಗ್ರಹಿಕೆಗಳಿಗಿಂತ ತಪ್ಪಿಲ್ಲದ ಕನ್ನಡವನ್ನು ಬರೆಯುವುದೇ ಮುಖ್ಯವಾಗಿಬಿಡುತ್ತದೆ. ಬರವಣಿಗೆಯ ಕನ್ನಡದಲ್ಲಿ , ಇಂಗ್ಲಿಷನ್ನುಬಳಸುವುದು ತಪ್ಪಾಗುತ್ತದೆ ಆದರೆ ಸಂಸ್ಕೃತವನ್ನು ಬಳಸುವುದು ಪಾಂಡಿತ್ಯದ ಪ್ರೌಢಿಮೆಯಗುರುತಾಗುತ್ತದೆ. ಹೀಗೆ ತಿಳಿಯಲು ಸರಿಯಾದ ಕಾರಣವೇನೂ ಇಲ್ಲ. ಸಂಸ್ಕೃತದ ಸುಭದ್ರಹಿನ್ನೆಲೆ ಇರುವವರು ಇಂತಹ ನಿಯಮಗಳನ್ನು ಮಾಡಿದರೆನ್ನುವುದು ಸ್ಪಷ್ಟವಾಗಿಯೇ ಇದೆ.ಇಂಗ್ಲಿಷಿನಿಂದ ತರ್ಜುಮೆ ಮಾಡುವುದೆಂದರೆ , ಇಂಗ್ಲಿಷ್ ಬದಲುಸಂಸ್ಕೃತಪದಗಳನ್ನು ಬಳಸುವುದೇ ಆಗಿಬಿಡುತ್ತದೆ. ಕನ್ನಡದ ಜಾಯಮಾನಕ್ಕೆ ಒಗ್ಗುವ ಹಳಗನ್ನಡಅಥವಾ ನಡುಗನ್ನಡ ಪದಗಳ ಕಡೆಗೂ ನಮ್ಮ ಗಮನ ಹರಿಯುವುದಿಲ್ಲ. ಅಷ್ಟೇ ಅಲ್ಲ , ಇಂಗ್ಲಿಷಿನಪದಗಳನ್ನು ತೆಗೆದುಕೊಳ್ಳುವಾಗ ಮಾಡುವಂತೆ ಕನ್ನಡದ ರಚನೆಗೆ ಸೂಕ್ತವಾದ ಬದಲಾವಣೆಗಳನ್ನೂಮಾಡಿಕೊಳ್ಳುವುದಿಲ್ಲ. (ಹಾಸ್ಪಿಟಲ್ -ಆಸ್ಪತ್ರೆ) ಹಿಂದೊಮ್ಮೆ ಆಗುತ್ತಿದ್ದಂತೆ ತದ್ಭವಪದಗಳ ರಚನೆಯಾಗುವುದು ಕಡಿಮೆಯಾಗಿದೆ. ಸರ್ಕಾರೀಭಾಷೆಯಲ್ಲಂತೂ ಸಂಸ್ಕೃತ ಪದಗಳು ಹಿಂದಿಯಬಾಗಿಲಿನ ಮೂಲಕ ಒಳಗೆ ನುಸುಳುತ್ತಿವೆ. (ಅಭಿಯಂತ್ರ , ಆರಕ್ಷಕ) ಇಂಥ ಸನ್ನಿವೇಶದಲ್ಲಿ , ನಾವುಕನ್ನಡ ಅಧ್ಯಾಪಕರು ಯಾವುದಕ್ಕೆ ಒತ್ತು ಕೊಡಬೇಕೆಂದು ಯೋಚಿಸಬೇಕು. ಬರವಣಿಗೆಗೆಅಗತ್ಯವಾದ ಭಾಷೆಯು ಕಲಿಕೆ ಮತ್ತು ಬಳಕೆ ಎಂಬ ಎರಡೂ ಹಂತಗಳಲ್ಲಿ ಎಲ್ಲರಿಗೂ ತಲುಪುವಂತೆಇರಬೇಕು ಎನ್ನುವುದೇ ನಾವು ಗಮನಿಸಬೇಕಾದ ವಿಷಯ.

ನಮ್ಮ ಬಳಿ ಕಲಿಯುವವರಲ್ಲಿ , ಎಲ್ಲ ವಿಷಯಗಳನ್ನೂ ಕನ್ನಡದ ಮೂಲಕ ಕಲಿತವರು ಹಲವರಾದರೆ , ಇಂಗ್ಲಿಷ್ಮೂಲಕ ಕಲಿಯುವವರು ಕೆಲವರು. ಬೆಂಗಳೂರಿನಲ್ಲಿ ಅನೇಕರು ಇಂಗ್ಲಿಷಿನಲ್ಲಿ ಕಲಿತುಕನ್ನಡದಲ್ಲಿ ಉತ್ತರ ಬರೆಯುತ್ತಾರೆ. ಅವರು ಸಾಮಾನ್ಯ ಮಟ್ಟದ ಗೈಡುಗಳಿಗಿಂತ ಸ್ವಲ್ಪವೇಉತ್ತಮವಾದ ಪಠ್ಯಪುಸ್ತಕಗಳನ್ನು ಬಳಸುತ್ತಾರೆ. ಆದರೆ ಅವರಿಗೂ ತಮ್ಮ ಆಯ್ಕೆಯ ವಿಷಯವನ್ನುಕುರಿತು ಕನ್ನಡದಲ್ಲಿ ಅಲೋಚಿಸುವ , ಬರೆಯುವ ಅವಕಾಶವಾಗಲೀ ಅಗತ್ಯವಾಗಲೀ ಉಂಟಾಗುವುದಿಲ್ಲ. ನಮ್ಮ ತರಗತಿಗಳಲ್ಲಿ ನಾವು ಈ ಸಂಗತಿಗಳ ಕಡೆಗೆ ಗಮನಹರಿಸುವದು ಬಹಳ ಕಡಿಮೆ.

ಕಾಲೇಜಿನತರಗತಿಗಳಲ್ಲಿ ಸಾಹಿತ್ಯಕ್ಕೆ ಭಾಷೆಗಿಂತ ಹೆಚ್ಚಿನ ಮಹತ್ವ ಸಿಕ್ಕಿರುವುದು ಬಹಳ ದೊಡ್ಡಸಮಸ್ಯೆಯೆಂದು ನನಗೆ ತೋರುತ್ತದೆ. ಸಾಹಿತ್ಯವು ಸಮಾಜ ಮತ್ತು ಜೀವನದ ಬಗ್ಗೆ ಅನೇಕಸಂಗತಿಗಳನ್ನು ತಿಳಿಸುವುದಾದರೂ ಮುಖ್ಯವಾಗಿ ಅದೊಂದು ಕಲೆ. ಸಂಗೀತದಿಂದ ಶಿಲ್ಪದವರೆಗಿನಅನೇಕ ಕಲೆಗಳಲ್ಲಿ ಅದೂ ಒಂದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಅದರಲ್ಲಿ ಬಹಳ ಆಸಕ್ತಿಹುಟ್ಟಬೇಕೆಂದು ನಾವು ತಿಳಿಯುವುದೇ ತಪ್ಪು. ಹಾಗೆ ಹುಟ್ಟುವುದಿಲ್ಲ ಎನ್ನುವುದುನಮಗೆಲ್ಲ ಗೊತ್ತಿರುವ ಗುಟ್ಟು. ನೂರರಲ್ಲಿ ಒಬ್ಬರಾದರೂ ಸಾಹಿತ್ಯದ ಗಂಭೀರ ಓದುಗರಾಗಿಬೆಳೆಯುವುದಿಲ್ಲ. ಅಷ್ಟೇಕೆ , ಎಷ್ಟೋ ಸಲ ಕಾಲೇಜುಗಳಲ್ಲಿ ಕನ್ನಡ ಕಲಿಸುವನಾವೇ ಸಾಹಿತ್ಯವನ್ನು ವಿಶೇಷವಾಗಿ ಓದುವುದಿಲ್ಲ. ಅದು ನಮಗೆ ಒಂದು ಕಸುಬು ಮಾತ್ರ.ಆದ್ದರಿಂದ ಕೆಲವರಿಗೆ ಮಾತ್ರ ಆಸಕ್ತಿ ಇರಬಹುದಾದ ಸಾಹಿತ್ಯವನ್ನು , ಎಲ್ಲರೂಕಲಿಯಬೇಕೆಂದು ಹಟ ಹಿಡಿದು ಕೊನೆಗೆ ಯಾರಿಗೂ ಕಲಿಸದಿರುವುದು ನಮ್ಮ ತರಗತಿಗಳ ದುರಂತ.ಹೀಗೆ ಸಾಹಿತ್ಯಕ್ಕೆ ಕೊಡುವ ಅತಿ ಗಮನದಿಂದ ಭಾಷೆಯ ಕಲಿಕೆಯು ಹಿಂದೆ ಬೀಳುತ್ತದೆ.

ಯಾಕೆಂದರೆ , ನಮ್ಮ ಪಾಠಗಳಲ್ಲಿ ಸಾಕಷ್ಟು ಭಾಗ ಹಳಗನ್ನಡ ಮತ್ತು ನಡುಗನ್ನಡಗಳಿಗೆ ಮೀಸಲಾಗಿರುತ್ತದೆ. ಪಂಪ , ರನ್ನ , ವಡ್ಡಾರಾಧನೆಗಳನ್ನು ಓದಿ ನಮ್ಮ ಕಾಲದಲ್ಲಿ ಬಳಸಬೇಕಾದ ಕನ್ನಡವನ್ನು ಕಲಿಯುವುದು ಎಷ್ಟರ ಮಟ್ಟಿಗೆ ಸಾಧ್ಯ ? ಆ ಪಠ್ಯಗಳ ಆಶಯಗಳಿಗೂ ನಮ್ಮ ಇಂದಿನ ಬದುಕಿಗೂ ಸಂಬಂಧಗಳನ್ನು ಹುಡುಕದೆ , ಕೇವಲ ಅದರ ಸಾರಾಂಶ , ಪಾತ್ರಚಿತ್ರಣಗಳನ್ನು ಹೇಳಿಕೊಡುವುದರಿಂದ ಆಗುವ ಪ್ರಯೋಜನವಾದರೂ ಏನು ? ಹಾಗೆ ನೋಡಿದರೆ , ನಾಡಿನಲ್ಲಿನೂರಕ್ಕೆ ತೊಂಬತ್ತರಷ್ಟು ಜನರು ರಚಿಸಿದ ಹಾಗೂ ಅರ್ಥ ಮಾಡಿಕೊಳ್ಳಬಹುದಾದ ಜನಪದಸಾಹಿತ್ಯಕ್ಕೆ ನಮ್ಮ ಪಠ್ಯಪುಸ್ತಕಗಳಲ್ಲಿ ಸಿಕ್ಕಿರುವ ಜಾಗ ಬಹಳ ಕಡಿಮೆ. ಅನೇಕಮೇಷ್ಟರುಗಳೇ ಅದರಲ್ಲಿ ಪಾಠ ಮಾಡುವುದು ಏನಿದೆ ಎಂದು ಕೇಳುವುದನ್ನು ನಾನು ಬಲ್ಲೆ.

ಭಾಷೆಯನ್ನು ಕಲಿಸುವುದರ ಮುಖ್ಯ ಉದ್ದೇಶವು , ಅದನ್ನು ಬಳಸಲು ನೆರವಾಗುವುದರಲ್ಲಿದೆ. ನಮ್ಮ ಹುಡುಗರು ಕಾಲೇಜಿಗೆ ಬರಲಿ , ಬಿಡಲಿ ಕನ್ನಡದಲ್ಲಿ ಮಾತನಾಡುತ್ತಿದ್ದರು , ಮಾತನಾಡುತ್ತಾರೆ. ಹಾಗೆ ಮಾಡುವುದು , ಉಳಿದವರೊಂದಿಗೆ ಸಂಭಾಷಣೆ ಮಾಡುವಾಗಲೇ ಹೊರತು , ವೇದಿಕೆಯ ಮೇಲೆ ನಿಂತು ಬಾಷಣ ಮಾಡುವುದರಲ್ಲಿ ಅಲ್ಲ. ನಮ್ಮ ತರಗತಿಗಳಲ್ಲಿ , ಅವರಿಗೆಮಾತನಾಡುವ ಅವಕಾಶವಾಗಲೀ ತರಬೇತಿಯಾಗಲೀ ಸಿಗುವುದಿಲ್ಲ. ಬರೆಯುವ ಅಭ್ಯಾಸವು ಪದವಿ ಪಡೆದಮರುಕ್ಷಣದಲ್ಲಿಯೇ ನಿಂತುಹೋಗುತ್ತದೆ. ಒಂದು ವೇಳೆ ಕನ್ನಡವನ್ನು ಬಳಸಲೇ ಬೇಕಾದ ಕೆಲಸವುಸಿಕ್ಕರೂ ಅಲ್ಲಿ ಹೇಗೆ , ಏನು ಬರೆಯಬೇಕು ಎನ್ನುವುದನ್ನು ಹೊಸದಾಗಿಯೇ ಕಲಿಯಬೇಕಾಗುತ್ತದೆ. ಬದಲಾಗಿ , ಅವರು ನಿಜವಾಗಿಯೂ ಕನ್ನಡ ಬರವಣಿಗೆಯನ್ನು ಮುಂದುವರಿಸಬೇಕಾದರೆ , ಅವರು ಚೆನ್ನಾಗಿಬಲ್ಲ , ಕೆಲಸ ಮಾಡುತ್ತಿರುವ ವಿಷಯವನ್ನು ಕನ್ನಡದಲ್ಲಿ ಬರೆಯುವ ಅವಕಾಶ ಸಿಗಬೇಕು. ಈ ಮಾತು ಒಬ್ಬ ರೈತ , ನೇಕಾರ , ಎಂಜಿನಿಯರ್ ಎಲ್ಲರಿಗೂ ಅನ್ವಯಿಸುತ್ತದೆ. ಇಂದಿನ ವೃತ್ತಪತ್ರಿಕೆಗಳು ಮತ್ತು ಮಾಧ್ಯಮಗಳು ಇದಕ್ಕೆ ಅವಕಾಶವನ್ನೂ ಕೊಡುತ್ತವೆ. ಇವರು ಯಾರೂ ಸಾಹಿತಿಗಳಲ್ಲ , ಆಗಬೇಕಾಗಿಯೂ ಇಲ್ಲ. ಆದರೆ , ಪದವಿಯನ್ನು ಪಡೆದು , ಕನ್ನಡವನ್ನು ಕಲಿತದ್ದಕ್ಕೆ ತಮಗೆ ತಿಳಿದಿರುವ ವಿಷಯವನ್ನು ಕುರಿತು ಕನ್ನಡದಲ್ಲಿ ಬರೆಯುವುದು ಮತ್ತು ಮಾತನಾಡುವುದು ಅವರಿಗೆ ಸಾಧ್ಯವಾಗಬೇಕು. ಇದು ನಮ್ಮ ಗುರಿ , ಬಹಳ ಮುಖ್ಯವಾದ ಗುರಿ. ಕನ್ನಡದಲ್ಲಿ ಬರೆಯುವುದು ಸಾಹಿತಿಗಳ ಮತ್ತು ಕನ್ನಡ ಮೇಷ್ಟ್ರುಗಳ ಕೆಲಸ ಎಂಬ ತಪ್ಪು ತಿಳಿವಳಿಕೆಯು ದೂರವಾಗಬೇಕು.

ಇದರ ಜೊತೆಗೆ ನಾವು ನಮ್ಮ ಶಾಲೆ ಕಾಲೇಜುಗಳಲ್ಲಿ ವ್ಯಾಕರಣ , ಛಂದಸ್ಸು ಮತ್ತು ಅಲಂಕಾರ ಮುಂತಾದ ವಿಷಯಗಳಿಗೆ ಅತಿ ಹೆಚ್ಚಿನ ಮಹತ್ವ ಸಿಗುತ್ತಿದೆ. ಯಾರೂ ಕೂಡ ವ್ಯಾಕರಣ ಓದಿ , ಮಾತು ಕಲಿಯುವುದಿಲ್ಲ. ಛಂದಸ್ಸು-ಅಲಂಕಾರ ಓದಿ ಕಥೆ , ಕವಿತೆ ಬರೆಯುವುದಿಲ್ಲ. ವಾಸ್ತವವಾಗಿ , ಹೆಚ್ಚುಹೆಚ್ಚಾಗಿ ಓದುವುದರಿಂದ , ಬೇರೆಯವರ ಮಾತುಗಳನ್ನು ಕೇಳಿ ನಾವೂ ಮಾತನಾಡುವುದರಿಂದ ಹಾಗೂ ಬರೆಯುವುದರಿಂದ ಮಾತು , ಓದು , ಬರೆಹ ಬರುತ್ತವೆ. ಬಳಕೆಯೊಂದೇ ಕಲಿಯುವ ದಾರಿ. ಬಾಯಿಪಾಠ ಮಾಡಿ , ಪರೀಕ್ಷೆಯಲ್ಲಿ ಬರೆದು ಪಾಸಾಗಿ ಮರೆಯುವುದರಿಂದ ಅಲ್ಲ. ಇಷ್ಟಕ್ಕೂ ನಾವು ಕಲಿಸುತ್ತಿರುವ ವ್ಯಾಕರಣ , ಛಂದಸ್ಸು , ಅಲಂಕಾರಗಳು , ದ್ರಾವಿಡಭಾಷೆಯಾದ ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಅವು ಸಂಸ್ಕೃತದ ಅಂಗಿಯಅಳತೆಗೆ ತಕ್ಕಂತೆ ಕನ್ನಡದ ಮೈಯನ್ನು ಮಾರ್ಪಡಿಸಲು ಪ್ರಯತ್ನಿಸುತ್ತವೆ. ಆದ್ದರಿಂದಲೇ ಡಾ || ಡಿ.ಎನ್.ಶಂಕರಭಟ್ ಅವರು "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಎಂಬ ಬಹಳ ಒಳ್ಳೆಯಪುಸ್ತಕವನ್ನು ಬರೆದಿದ್ದಾರೆ. ಅದರ ಸಂಗಡವೇ ಓದಬೇಕಾದ ಇನ್ನೊಂದು ಪುಸ್ತಕ , ಅವರೇ ಬರೆದಿರುವ "ಕನ್ನಡ ಬರಹವನ್ನು ಸರಿಪಡಿಸೋಣ" ಎನ್ನುವುದು. ಅವರು ಹೇಳುವ ಈ ಕೆಳಗಿನ ಮಾತುಗಳನ್ನು ನಾವೆಲ್ಲ ಗಮನಿಸಬೇಕು:

" ಕನ್ನಡಬರಹ ಸಂಸ್ಕೃತದ ಹಾದಿಯನ್ನು ಹಿಡಿಯದ ಹಾಗಾಗಬೇಕಾದಲ್ಲಿ ನಾವು ಬೇರೆಯೇ ಪರಿಹಾರವನ್ನುಕಂಡುಕೊಳ್ಳಬೇಕಾಗಿದೆ. ಈ ಪರಿಹಾರ ಎಂಥದು ಎಂಬುದನ್ನು ನಮಗೆ ಈಗಾಗಲೇ ವಚನಕಾರರು ಮತ್ತುದಾಸರು ತೋರಿಸಿಕೊಟ್ಟಿದ್ದಾರೆ. ಬರಹದ ಮೇಲೆ ಮಡಿವಂತಿಕೆಯನ್ನು ಹೊರಿಸಹೋಗದೆ , ಜೀವಂತಿಕೆಯನ್ನುತುಂಬುವುದರ ಮೂಲಕ ಅದು ಎಲ್ಲರಿಗೂ ಬೇಕಾಗುವ ಹಾಗೆ ಮಾಡಬಹುದು. ........ ಈಸಂಧಿಕಾಲದಲ್ಲಿ ನಮ್ಮ ಸಮಾಜ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆಕನ್ನಡ ಬರಹದ ಅಳಿವು ಇಲ್ಲವೇ ಉಳಿವು ಅವಲಂಬಿಸಿದೆ ಎಂದು ನನಗೆ ತೋರುತ್ತದೆ. "(ಡಿ.ಎನ್. ಶಂಕರ ಭಟ್ , " ಕನ್ನಡ ಬರಹವನ್ನು ಸರಿಪಡಿಸೋಣ" , ೨೦೦೫ , ಪುಟ ೬)

ಇವರುಹೇಳುವ ವಿಚಾರಗಳನ್ನು ಬೇರೆ ಬೇರೆ ತರಗತಿಗಳಲ್ಲಿ ಕನ್ನಡ ಕಲಿಸುವ ಎಲ್ಲರೂತಿಳಿದುಕೊಳ್ಳಬೇಕು. ಅದರ ಬಗ್ಗೆ ಆಲೋಚಿಸಬೇಕು. ಅದರಲ್ಲಿಯೂ ಶಾಲೆಗಳಲ್ಲಿ ಕಲಿಸುವಮೇಷ್ಟರುಗಳನ್ನು ` ತಯಾರು ' ಮಾಡುವ ಕಾಲೇಜು ಅಧ್ಯಾಪಕರು ಇನ್ನಷ್ಟು ಹೆಚ್ಚಾಗಿ ಯೋಚಿಸಬೇಕು.

ಪದವಿ ತರಗತಿಗಳಲ್ಲಿ ಕನ್ನಡ ಕಲಿಯುವವರ ಎರಡು ವಿಶೇಷ ಗುಂಪುಗಳಿವೆ. ಮೊದಲನೆಯದು ಐಚ್ಛಿಕ ಕನ್ನಡ ಕಲಿಯುವವರ ಗುಂಪು ಮತ್ತು ಎರಡನೆಯದು ಟಿ.ಸಿ.ಎಚ್. ಮತ್ತುಬಿ.ಈಡಿ. ತರಗತಿಗಳಲ್ಲಿ ಕಲಿಯುವ ಭಾವೀ ಮೇಷ್ಟರುಗಳ ಗುಂಪು. ಇಲ್ಲಿ ಕೆಲವು ಬೇರೆ ಬಗೆಯಸಮಸ್ಯೆಗಳಿವೆ. ಸಾಹಿತ್ಯವನ್ನು ಯಾರಿಗೆ , ಎಷ್ಟು , ಹೇಗೆ ಮತ್ತು ಯಾಕೆ ಕಲಿಸಬೇಕು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಇಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ , ಸಾಹಿತ್ಯವನ್ನಲ್ಲಭಾಷೆಯನ್ನು ಹೇಗೆ ಕಲಿಸಬೇಕು ಎನ್ನುವುದು ಇಲ್ಲಿಯೇ ತೀರ್ಮಾನವಾಗಬೇಕು. ನಮ್ಮ ಸಾಹಿತ್ಯದಪರಂಪರೆಯ ತಿಳಿವಳಿಕೆ ಮಾತ್ರವಲ್ಲ ಅದರ ಬಹುಮುಖತೆ ಕೂಡ ಅವರಿಗೆ ತಿಳಿಯಬೇಕು. ನಮ್ಮಹಳ್ಳಿಯ ಜನ , ಹೆಣ್ಣುಮಕ್ಕಳು ಮತ್ತು ದಲಿತರು ನೂರಾರು ವರ್ಷಗಳಿಂದ ಬಹಳಒಳ್ಳೆಯ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಅದನ್ನು ನಾವು ಬೇರೆ ಬೇರೆ ಕಾರಣಗಳಿಗಾಗಿನಿರ್ಲಕ್ಷ್ಯ ಮಾಡಿದ್ದೇವೆ. ಇನ್ನು ಮೇಲಾದರೂ ಕನ್ನಡ ಅಧ್ಯಾಪಕರ ಸಮುದಾಯವು ಅದರ ಕಡೆಗೆಗಮನ ಹರಿಸಬೇಕು.

ಇನ್ನು ಮುಂದೆ , ನಮ್ಮ ಪದವಿ ತರಗತಿಗಳಲ್ಲಿ ಕನ್ನಡ ಕಲಿಸುವಾಗ , ಇಡಬಹುದಾದ ಕೆಲವು ಹೊಸ ಹೆಜ್ಜೆಗಳನ್ನು ಹೇಳಲು ಪ್ರಯತ್ನಿಸಿದ್ದೇನೆ. ಹಾಗೆಂದರೆ , ನಾನೇಹೊಸ ವಿಷಯಗಳನ್ನು ಹೇಳುತ್ತಿರುವೆನೆಂದು ಅರ್ಥವಲ್ಲ. ಒಟ್ಟು ಸಮುದಾಯಗಳಲ್ಲಿ ಅನೇಕಗೆಳೆಯರು ನಡೆಸಿರುವ ಆಲೋಚನೆಗಳು ಹಾಗೂ ಮಾಡುತ್ತಿರುವ ಕೆಲಸಗಳನ್ನು ನಾನು ಆದಷ್ಟುಚಿಕ್ಕದಾಗಿ ಸಂಗ್ರಹಿಸುತ್ತಿದ್ದೇನೆ.

೧. ಇಂದಿನನಮ್ಮ ತರಗತಿಗಳು ಬಹುಮಟ್ಟಿಗೆ ಅಧ್ಯಾಪಕಕೇಂದ್ರಿತವಾಗಿವೆ. ಅಲ್ಲಿ ಮೇಷ್ಟರುಗಳುಮಾತನಾಡುತ್ತಾರೆ. ಉಳಿದವರು ಕೇಳುತ್ತಾರೆ ಅಥವಾ ಕೇಳುವುದಿಲ್ಲ. ಹುಡುಗರು ಮಾತನಾಡಿದರೆಅದು ಗಲಾಟೆ ಇಲ್ಲವೇ ಅಧಿಕಪ್ರಸಂಗ ಎನ್ನಿಸಿಕೊಳ್ಳುತ್ತದೆ. ನಿಜವಾಗಿ ನಮ್ಮ ತರಗತಿಗಳಮಧ್ಯದಲ್ಲಿ ವಿದ್ಯಾರ್ಥಿಗಳು ಇರಬೇಕು. ನಾವಲ್ಲ. ನೂರಾರು ಜನ ಇರುವ ತರಗತಿಗಳಲ್ಲಿ ಎಲ್ಲವಿದ್ಯಾರ್ಥಿಗಳೂ ಪ್ರತಿದಿನವೂ ಮಾತನಾಡಲು ಆಗುವುದಿಲ್ಲ. ಆದರೆ ನಮ್ಮ ಪಾಠವು ಅವರನ್ನುಯೋಚನೆ ಮಾಡಲು ಪ್ರಚೋದಿಸಬೇಕು. "ಮೇಷ್ಟ್ರು ಕೂಡ ತಪ್ಪಿರಬಹುದು , ಅವರುಹೇಳಿದ್ದನ್ನು ನಮ್ಮ ಅನುಭವಗಳಿಗೆ ತಾಳೆಮಾಡಿ ನೋಡೋಣ" ಎಂಬ ತಿಳಿವಳಿಕೆ ಅವರಿಗೆ ಬಂದರೆಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ. ಅವರ ಅಂತಹ ಭಿನ್ನಾಭಿಪ್ರಾಯಗಳಿಗೆತರಗತಿಯಲ್ಲಿ ಹಾಗೂ ಪರೀಕ್ಷೆಗಳಲ್ಲಿ ಬೆಲೆ ಸಿಗಬೇಕು. ಡಿಕ್ಟೇಷನ್ ತಪ್ಪಾದರೂ ಉತ್ತರಸರಿ ಇರಬಹುದು ಎಂಬ ಎಚ್ಚರ ನಮ್ಮಲ್ಲಿ ಯಾವಾಗಲೂ ಇರಬೇಕು. ಚಿಕ್ಕ ಪುಟ್ಟತರಗತಿಗಳಲ್ಲಂತೂ ಅವರಿಗೆ ಧಾರಾಳವಾಗಿ ಮಾತನಾಡುವ ಅವಕಾಶ ಸಿಗಬೇಕು.

೨. ನಮ್ಮತರಗತಿಗಳಲ್ಲಿ ಹಾಗೂ ಪಠ್ಯವಸ್ತುವಿನಲ್ಲಿ ಸಾಹಿತ್ಯದ ಪ್ರಮಾಣ ಕಡಿಮೆಯಾಗಬೇಕು. ಯಾವಬಗೆಯ ಸಾಹಿತ್ಯ ಎಷ್ಟು ಬೇಕು ಎನ್ನುವುದನ್ನು ಕುರಿತು ಚರ್ಚೆ ನಡೆಯಬೇಕು. ಬದಲಾಗಿವಿಜ್ಞಾನ , ಸಮಾಜ ವಿಜ್ಞಾನಗಳು ಮತ್ತು ವಾಣಿಜ್ಯದ ವಿದ್ಯಾರ್ಥಿಗಳಿಗೆ ಅವರವರ ಆಯ್ಕೆಯ ವಿಷಯಗಳನ್ನು ಕುರಿತು ಮಾತನಾಡುವ , ಪಾಠಮಾಡುವಹಾಗೂ ಬರೆಯುವ ಶಕ್ತಿ ಅವರಿಗೆ ಬರುವಂತೆ ಮಾಡುವುದು ನಮ್ಮ ಮುಖ್ಯಗುರಿಯಾಗಬೇಕು.ಇದಕ್ಕಾಗಿ ಬೇರೆಬೇರೆ ಬಗೆಯ ಪಠ್ಯಗಳನ್ನು ತಯಾರು ಮಾಡಬೇಕು. ಎಂದರೆ ಚರಿತ್ರೆ , ರಸಾಯನಶಾಸ್ತ್ರಮತ್ತು ಮನಶ್ಶಾಸ್ತ್ರಗಳ ವಿದ್ಯಾರ್ಥಿಗಳು ತಮಗೆ ಅಗತ್ಯವಾದ ಹಲವು ವಿಷಯಗಳನ್ನು ಕನ್ನಡತರಗತಿಗಳಲ್ಲಿ ಕಲಿಯಬೇಕು. ಪರೀಕ್ಷೆಗಳಲ್ಲಿ ಅದರ ಬಗ್ಗೆ ಪ್ರಶ್ನೆಗಳಿರಬೇಕು.ಉದಾಹರಣೆಗೆ ಮೂರು ವರ್ಷಗಳ ಕಾಲ ರಾಜ್ಯಶಾಸ್ತ್ರವನ್ನು ಕಲಿತಿರುವ ಹುಡುಗರಿಗೆಪ್ರಜಾಪ್ರಭುತ್ವದ ಬಗ್ಗೆ ಮೂರು ಪುಟಗಳನ್ನು ಬರೆಯುವುದು ಮಕ್ಕಳಾಟವಾಗಬೇಕು.

೩. ನಮ್ಮಕ್ಲಾಸುಗಳಲ್ಲಿ ಪಾಠಕೇಳುವ ಹುಡುಗ ಹುಡುಗಿಯರಿಗೆ ಓದುವ ಹುಚ್ಚು ಹಿಡಿಯುವಂತೆ ಮಾಡುವುದುನಮ್ಮ ಮುಖ್ಯ ಕೆಲಸ. ಎಲ್ಲಕ್ಕೂ ಮೊದಲು ನಮಗೆ ಆ ಹುಚ್ಚಿರಬೇಕು. ಓದುವುದು ಎಂದರೆ ಒಂದುಹೊರೆಯಲ್ಲ , ಅದು ನಮ್ಮ ಮನಸ್ಸುಗಳನ್ನು ಅರಳಿಸುವ , ನಮಗೆಸಂತೋಷ ಕೊಡುವುದು ಕೆಲಸ ಎಂದು ನಮ್ಮ ವಿದ್ಯಾರ್ಥಿಗಳಿಗೆ ಅವರು ತಾವಾಗಿಯೇಓದತೊಡಗುತ್ತಾರೆ. ಬದುಕಿರುವ ತನಕ ಆ ಆಭ್ಯಾಸವನ್ನು ಕಾಪಾಡಿಕೊಳ್ಳುತ್ತಾರೆ. ಹಿಂದಿನಕಾಲದಲ್ಲಿ ಲೋಅರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದವರು ಓದುವಷ್ಟನ್ನೂ ನಮ್ಮಸ್ನಾತಕೋತ್ತರ ಪದವೀಧರರು ಓದದಿದ್ದರೆ ಎಂತಹ ಅನ್ಯಾಯ ಅಲ್ಲವೇ ?? ಆದರೆ ಹಾಗೆ ಅಗಿರುವುದೇ ಸತ್ಯ. ಇದು ನನ್ನ ಮನಸ್ಸಿಗೆ ತುಂಬಾ ನೋವನ್ನು ತಂದಿದೆ. ಪರಿಹಾರದ ಬಗ್ಗೆ ನಾವೆಲ್ಲರೂ ಯೋಚಿಸಬೇಕು.

೪. ಅವರಿಗೆ ಎಳ್ಳುಕಾಳಿನಷ್ಟೂ ಕೀಳರಿಮೆ ಹುಟ್ಟದಂತೆ , ಬರವಣಿಗೆಯ ಭಾಷೆಯನ್ನು ಕಲಿಸಲು ನಮಗೆ ಸಾಧ್ಯವಾಗಬೇಕು. ನಿಜ , ಮಾತನಾಡುವ ಭಾಷೆಗೂ ವ್ಯತ್ಯಾಸ ಇದೆ , ಇರಬೇಕು. ಆದರೆ ಒಂದು ಇನ್ನೊಂದರ ಕೂಸು. ಅವು ಶತ್ರುಗಳಲ್ಲ. ಕೊನೆಗೂ , ಕಣ್ಣಿಗೆಕಾಣದ ಇತರ ಇಂದ್ರಿಯಗಳಿಗೂ ಸಿಲುಕದ ವಿಚಾರಗಳ ಬಗ್ಗೆ ಆಲೋಚಿಸುವ ಶಕ್ತಿ ನಮ್ಮವಿದ್ಯಾರ್ಥಿಗಳಿಗೆ ಇರುತ್ತದೆ. ಅದನ್ನು ನಾವು ಒತ್ತಾಸೆಕೊಟ್ಟು ಚೆನ್ನಾಗಿ ಬೆಳೆಸಬೇಕು.ಇದು ನಮ್ಮ ಎದುರಿಗೆ ಇರುವ ಗುರಿ ಮತ್ತು ಸವಾಲು.

೫. ಕನ್ನಡ ಪಾಠ ಮಾಡುವಾಗ ಇನ್ನೊಂದು ಮುಖ್ಯ ಸಂಗತಿ ಇದೆ. ನಾವು ಕವಿತೆ , ಕಥೆ , ಕಾದಂಬರಿ ಅಥವಾ ನಾಟಕದ ವಸ್ತುವಿನ ಬಗ್ಗೆ ಹೆಚ್ಚಾಗಿ ಮಾತನಾಡಬೇಕೋ ಅಥವಾ ಆಕೃತಿಮತ್ತು ಭಾಷಿಕ ವಿವರಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಕಲಿಸಬೇಕೋ ಎನ್ನುವುದೇ ಆಪ್ರಶ್ನೆ. ಸಾಹಿತ್ಯದಲ್ಲಿ ಭಾಷೆಯನ್ನು ಬಳಸುವ ಬಗೆಯ ವಿಶೇಷ ಲಕ್ಷಣಗಳನ್ನು ತಿಳಿಸುವುದುನಮ್ಮ ಕೆಲಸವೇ. ಅದರ ಸಂಗಡವೇ ನಮ್ಮ ವಿದ್ಯಾರ್ಥಿಗಳ ಇಂದಿನ ಜೀವನಕ್ಕೂ ಇರುವ ಸಂಬಂಧಗಳಕಡೆಗೆ ಅವರ ಗಮನ ಸೆಳೆಯುವುದೂ ನಮ್ಮ ಕೆಲಸವೇ. ಕೊನೆಗೂ ಸಾಹಿತ್ಯವು ಜೀವನ ಮತ್ತುಸಮಾಜಗಳಿಗೆ ಕರೆದೊಯ್ಯುವ ಬಾಗಿಲು ಎನ್ನುವ ಸತ್ಯವು ಅವರಿಗೆ ತಿಳಿಯಬೇಕು. ಸಹಜವಾಗಿತಮಗೆ ಬರದೆ ಇರಬಹುದಾದ ಅನುಭವಗಳು , ಸಾಹಿತ್ಯದಲ್ಲಿ ಬಹಳ ವಿಶಿಷ್ಟವಾದ ರೀತಿಯಲ್ಲಿ ತಮ್ಮದಾಗುತ್ತವೆ ಎಂಬ ತಿಳಿವಳಿಕೆ ಅವರಲ್ಲಿ ಮೂಡುವುದು ಬಹಳ ಮುಖ್ಯ.

ಆಗ ಮಾತ್ರವೇ ನಮ್ಮ ಬದುಕು ಕನ್ನಡವಾಗುವ ಹಾದಿಯಲ್ಲಿ ನಾವು ಮುಂದೆಹೋಗಲು ಸಾಧ್ಯ ಆಗುತ್ತದೆ. ಅದಕ್ಕೆ ರಾಜಕೀಯ , ಸಾಮಾಜಿಕ ಮತ್ತು ಆರ್ಥಿಕ ಅಡಚಣೆಗಳು ಇರಬಹುದು. ಅದೆಲ್ಲವನ್ನೂ ನೆಪವಾಗಿಟ್ಟುಕೊಂಡು ನಮ್ಮ ಕೆಲಸವನ್ನು ಮಾಡದೆ ಹೋಗುವುದು ಸರಿಯಲ್ಲ.

೨೨-೧೨-೨೦೦೫