ಪದಾಘಾತದ ಮೂಲಕ ವಿದ್ಯುತ್

ಪದಾಘಾತದ ಮೂಲಕ ವಿದ್ಯುತ್

ಪದಾಘಾತದ ಮೂಲಕ ವಿದ್ಯುತ್

ಲಂಡನ್ ಒಲಿಂಪಿಕ್ ಸ್ಟೇಡಿಯಮ್‌ನಿಂದ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ಪ್ರವೇಶಿಸಲು ಹಾದು ಹೋಗಬೇಕಾದ ದಾರಿಯಲ್ಲಿ ಅಳವಡಿಸಿದ ನೆಲಹಾಸಿನ ಹೊದಿಕೆಗಳನ್ನು ಮೆಟ್ಟಿದಾಗ,ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಲಾಗಿದೆ.ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣ ಎಷ್ಟೆಂದರೆ,ಅದು ಇಡೀ ಮಾಲ್‌ನ ವಿದ್ಯುತ್ತಿನ ಬೇಡಿಕೆಯ ಅರ್ಧದಷ್ಟನ್ನಾದರೂ ಪೂರೈಸಬಲ್ಲುದು ಎನ್ನುವುದು ಅಂದಾಜು.ಬರೇ ಇಪ್ಪತ್ತು ಹಾಸುಗಳ ಮೂಲಕ ಇಷ್ಟು ವಿದ್ಯುತ್ ಉತ್ಪಾದಿಸಬಹುದು ಎನ್ನುವುದು ಅಂದಾಜು.ಪೇವ್‌ಜನ್ ಎಂದು ಈ ವ್ಯವಸ್ಥೆಗೆ ಹೆಸರಿಸಲಾಗಿದೆ.ಲೌರೆನ್ಸ್ ಕೆಂಬಲ್ ಕುಕ್ ಎನ್ನುವ ವಿದ್ಯಾರ್ಥಿ ತನ್ನ ಅಂತಿಮ ವರ್ಷದ ಪ್ರಾಜೆಕ್ಟಿನಲ್ಲಿ ರೂಪಿಸಿದ ಮಾದರಿಯನ್ನು ಒಲಿಂಪಿಕ್ ಕ್ರೀಡಾಂಗಣದಲ್ಲಿ ಬಳಸಲಾಗಿದೆ.

-------------------------------

ಡೆನಿಸ್ ರಿಚೀ:ಸಿ ಭಾಷೆಯ ,ಯುನಿಕ್ಸ್ ಜನಕ ಇನ್ನಿಲ್ಲ

ಕಳೆದವಾರವಷ್ಟೇ ಸ್ತೀವ್ ಜಾಬ್ಸ್ ಅವರನ್ನು ಕಳೆದುಕೊಂಡು ಬಡವಾಗಿರುವ ತಂತ್ರಜ್ಞಾನ ಕ್ಷೇತ್ರಕ್ಕೆ ವಾರದಲ್ಲೇ ಮತ್ತೊಂದು ಹೊಡೆತವಾಗಿ ಬಂದದ್ದು ಡೆನಿಸ್ ರಿಚಿ ಅವರ ಮರಣವಾರ್ತೆ.ಸ್ಟೀವ್ ಜಾಬ್ಸ್ ಮರಣ ಸುದ್ದಿ ಮಾಡಿದ ಹಾಗೆ ಡೆನಿಸ್ ಮರಣ ಪತ್ರಿಕೆಗಳ ಗಮನ ಸೆಳೆದಿಲ್ಲ.ಆದರೆ ಈ ಮಾಂತ್ರಿಕ ಸಿ ಭಾಷೆಯ ಜನಕನೆಂದೇ ಪ್ರಖ್ಯಾತ.ಸಿ ಕಂಪ್ಯೂಟರ್ ಭಾಷೆಯನ್ನು ಅಭಿವೃದ್ಧಿ ಪಡಿಸಿದ್ದಷ್ಟೇ ಅಲ್ಲದೆ,ಅದರ ಬಗ್ಗೆ ಅತ್ಯಂತ ಉಪಯುಕ್ತ ಪುಸ್ತಕ ಬರೆದದದ್ದರಲ್ಲೂ ಡೆನಿಸ್ ಕೈವಾಡವಿದೆ.ಸಿ ಇಂಗ್ಲೀಷ್ ಹೋಲುವ ಭಾಷೆಯಾದರೂ,ಅದನ್ನು ತಳಮಟ್ಟದ ಪ್ರೊಗ್ರಾಮಿಂಗ್‌ಗೂ ಬಳಸಲು ಅನುಕೂಲತೆಯಿದೆ.ಸಿ ಭಾಷೆಯನ್ನೇ ಬಳಸಿ,ಯುನಿಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ,ಡೆನಿಸ್ ರಿಚಿ,ಯುನಿಕ್ಸ್ ಜನಕನೆಂದೂ ಖ್ಯಾತರಾದರು.ಯುನಿಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಬೆಲ್ ಲ್ಯಾಬ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.ಆದರೆ ಬೆಲ್ ಲ್ಯಾಬ್‌ನವರು,ಈ ಆಪರೇಟಿಂಗ್ ವ್ಯವಸ್ಥೆಯ ಸಾಲುಗಳನ್ನು ಬಹಿರಂಗ ಪಡಿಸಿ,ಮುಕ್ತ ತಂತ್ರಾಂಶಕ್ಕೆ ಮುನ್ನುಡಿ ಬರೆದರು.ಸ್ಟೀವ್ ಜಾಬ್ಸ್,ತಮ್ಮ ಆಪಲ್ ಕಂಪ್ಯೂಟರಿನಲ್ಲಿ ಬಳಸಿದ ಮ್ಯಾಕ್ ಆಪರೇಟಿಂಗ್ ವ್ಯವಸ್ಥೆಯಿರಲಿ,ಲಿನಸ್ ತೋವ್ರಾಲ್ಡ್ ಅಭಿವೃದ್ಧಿ ಪಡಿಸಿದ,ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆಯಿರಲಿ ಅದರ ತಿರುಳು,ಡೆನಿಸ್ ಅವರ ಯುನಿಕ್ಸ್ ಆಪರೇಟಿಂಗ್ ವ್ಯವಸ್ಥೆ ಎಂದರೆ,ಅದರ ಮಹತ್ತ್ವ ಅರಿವಾದೀತು.ನಂತರ ಬಂದ ಭಾಷೆಗಳಾದ ಸಿ++ ಅನ್ನೂ,ಡೆನಿಸ್ ಅವರ ಸಿ ಭಾಷೆಯಿಂದಲೇ ಮುಂದುವರಿಸಿದ್ದಾಗಿದೆ.ಜಾವಾ,ಈಗಿನ ಪೈಥಾನ್,ರೂಬಿ ಯಾವುದೇ ಭಾಷೆಯಲ್ಲಿ ಸಿಯ ಕೈವಾಡವೇ ಇದೆ.ಅಂತರ್ಜಾಲದ ಸರ್ವರ್‌ಗಳು,ಬ್ರೌಸರುಗಳು ಇವೆಲ್ಲವನ್ನು ಸಿಯಲ್ಲೆ ರಚಿಸಿರುವುದೇ ಹೆಚ್ಚು.ಇದನ್ನೆಲ್ಲಾ ಗಮನಿಸಿದರೆ,ಡೆನಿಸ್ ರಿಚಿ ಅವರು ಯಾವ ಮಟ್ಟಿನ ತಂತ್ರಜ್ಞ ಎನ್ನುವುದು ಸ್ಪಷ್ಟವಾಗುತ್ತದೆ.

----------------------------

ಸುದ್ದಿ ಮಾಡಿದ ವಿನ್ಯಾಸ

ಸ್ಟೀವ್ ಜಾಬ್ ಅವರಿಗೆ ಗೌರವ ಸೂಚಿಸಲು ಆಪಲ್ ಕಂಪೆನಿಯ ಲೊಗೋ ಸೇಬನ್ನು ಅನ್ನು ಉಪಾಯವಾಗಿ ಬಳಸಲು ತೀರ್ಮಾನಿಸಿದ ಜೊನಾಥನ್ ಮಾರ್ಕ್,ಎನ್ನುವ ಹಾಂಕಾಂಂಗಿನ ವಿದ್ಯಾರ್ಥಿ ಅದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟರು.ಸ್ಟೀವ್ ಜಾಬ್ಸ್ ಅವರ ಮರಣದೊಂದಿಗೆ,ಅವರ ಗ್ರಾಫಿಕ್ ವಿನ್ಯಾಸ ಜನರ ಗಮನ ಸೆಳೆದು ಸುದ್ದಿ ಮಾಡಿತು.ಜೊನಾತನ್ ಅವರು ತಮ್ಮ ವಿನ್ಯಾಸವನ್ನು ಹೋಲುವ ಇತರ ಕಲಾವಿದರ ಚಿತ್ರಗಳು ಇಲ್ಲವಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಪ್ರಯತ್ನಿಸಿದ್ದರು ಕೂಡಾ.ಈ ನಡುವೆ ಕ್ರಿಸ್ ತೊರ್ನ್‍ಲೀ ಎನ್ನುವ ಗ್ರಾಫಿಕ್ ಕಲಾವಿದ ಇಂತಹುದ್ದೇ ವಿನ್ಯಾಸವನ್ನು ಬಹು ಹಿಂದೆಯೇ ರಚಿಸಿದ್ದೆನೆಂದು ಹೇಳಿಕೊಂಡಾಗ,ವಿವಾದ ಸೃಷ್ಟಿಯಾಯಿತು.ಆದರೆ ಅಂತರ್ಜಾಲದಲ್ಲಿ ಇಂತಹ ಸಾಧ್ಯತೆಗಳು ಇದ್ದೇ ಇರುತ್ತವೆ.ಕಲಾವಿದರ ಸ್ವಂತ ರಚನೆಗಳಲ್ಲಿ ಹೋಲಿಕೆ ಕಾಣಿಸುವುದು ಸ್ವಾಭಾವಿಕ ಮತ್ತು ಸಾಧ್ಯ ಕೂಡಾ.

 --------------------------



ಟೆಲಿಕಾಮ್‌ಮ್ಯಾಪ್:ಸೇವೆ ಹೇಗಿದೆ?

ಪ್ರತಿ ಪ್ರದೇಶದಲ್ಲೂ ಹಲವು ಟೆಲಿಕಾಂ ಕಂಪೆನಿಗಳು ತ್ರೀಜಿ,ಟುಜಿ ಸೇವೆ ನೀಡುತ್ತವೆ.ಅವುಗಳ ಸೇವಾಗುಣಮಟ್ಟ ಹೇಗಿದೆ,ಗ್ರಾಹಕರು ತಮ್ಮ ನೆಟ್‌ವರ್ಕ್‌ಗಳ ಬಗ್ಗೆ ಎಂತಹ ಅನಿಸಿಕೆ ಹೊಂದಿದ್ದಾರೆ ಎನ್ನುವುದನ್ನು ಇತರರ ಜತೆ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸಲು ಟೆಲಿಕಾಂ‌ಮ್ಯಾಪ್ www.telecommap.com ಅಂತರ್ಜಾಲ ತಾಣವು ಕ್ರಮ ಕೈಗೊಂಡಿದೆ.ಬಳಕೆದಾರರು ಟ್ವಿಟರ್,ಮಿಂಚಂಚೆ ಅಥವಾ ಅಂತರ್ಜಾಲತಾಣದ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿಸಿದ್ದು ಜನರು ಇದರ ಉಪಯೋಗ ಪಡೆಯಲು ಮುಕ್ತವಾಗಿಸಿದ್ದಾರೆ.ಸೇವಾದಾತೃಗಳಿಗೂ ಗ್ರಾಹಕರು ತಮ್ಮ ಸೇವೆಯ ಬಗ್ಗೆ ಏನೆನ್ನುತ್ತಿದ್ದಾರೆ ಎನ್ನುವುದು ತಿಳಿಯುವುದು ಸಾಧ್ಯ.ಇದರಿಂದ ಅವರು ತಮ್ಮ ಸೇವಾಗುಣಮಟ್ಟವನ್ನು ಉತ್ತಮ ಪಡಿಸಲು ಪ್ರಯತ್ನಿಸಬಹುದು.ಗ್ರಾಹಕರು ಸೇವೆಯನ್ನು ರೇಟ್ ಮಾಡಿದೊಡನೆ ಅದು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುವುದರಿಂದ ಇದು ಕ್ಷಣಕ್ಷಣಕ್ಕೂ ಬದಲಾಗುವ ನಕ್ಷೆಯನ್ನು ಹೊಂದಿದೆ.

-------------------------------------------

ಗೂಗಲ್ ಬಜ್:ಸಮಾಧಿ?

ಗೂಗಲ್ ಪ್ಲಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಸುಮಾರು ನಲುವತ್ತು ದಶಲಕ್ಷ ಬಳಕೆದಾರರು ಇದರಲ್ಲಿ ಸದಸ್ಯತ್ವ ಹೊಂದಿದ್ದಾರೆ.ಗೂಗಲ್ ಸಾಮಾಜಿಕ ಜಾಲತಾಣಗಳ ಬಳಕೆದಾರರ ಮನಗೆಲ್ಲುವ ಯತ್ನದಲ್ಲಿ ಈ ಹಿಂದೆ ಬಜ್ ಎನ್ನುವ ಸೆವೆಯನ್ನು ಆರಂಭಿಸಿತ್ತು.ಜಿಮೇಲ್ ಒಟ್ಟಿಗೆ ಥಳಕು ಹಾಕಿ ಶುರುವಾದ ಸೇವೆಗೆ ಅಂತಹ ಉತ್ಸಾಹದ ಪ್ರತಿಕ್ರಿಯೆಯೇನೂ ಬರಲಿಲ್ಲ.ಈಗ ಅದು ಕುಂಟುತ್ತಾ ಸಾಗುತ್ತಿದೆ.ಗೂಗಲ್ ಬಜ್ ಸೇವೆಯನ್ನು ನಿಲ್ಲಿಸಿ,ಗೂಗಲ್ ಪ್ಲಸ್ ಮೇಲೆ ಗಮನ ಕೇಂದ್ರೀಕರಿಸುವ ಬಗ್ಗೆ ಗೂಗಲ್ ಗಂಭೀರವಾಗಿ ಚಿಂತಿಸುತ್ತಿದೆ ಎಂಬ ಸೂಚನೆಗಳು ದೊರಕುತ್ತಿವೆ.ಗೂಗಲ್ ಪ್ಲಸ್ ಕ್ಲಿಕ್ ಆಗುತ್ತದೆ ಎನ್ನುವ ಭರವಸೆಯನ್ನು ಗುಗಲ್ ಸಿಇಓ ಲ್ಯಾರಿ ಪೇಜ್ ಹೊಂದಿದ್ದಾರಂತೆ.ಫೇಸ್‌ಬುಕ್‌ಗೆ ಸ್ಪರ್ಧೆ ನೀಡಲು ಗೂಗಲ್ ಪ್ಲಸ್‌ಗೆ ಮಾತ್ರಾ ಸಾಧ್ಯವಾಗಬಹುದು ಎನ್ನುವುದು ಅವರ ಲೆಕ್ಕಾಚಾರ.ಬಳಕೆದಾರರು,ಅಲ್ಲಲ್ಲಿ ಹಂಚಿಹೊಗುವುದನ್ನು ತಡೆಯಲು ಬಜ್ ಅಂತಹ ಸೇವೆಗೆ ಅಂತ್ಯ ಹಾಡಲು ಬಯಸಿರುವ ಗೂಗಲ್,ತನ್ನ ತೀರ್ಮಾನವನ್ನು ಯಾವಾಗ ಅನುಷ್ಠಾನಕ್ಕೆ ತರುತ್ತದೆ ಎನ್ನುವುದು ಸ್ಪಷ್ಟವಿಲ್ಲ.

---------------------------------------------------------- 

ತುಷಾರ:ವಾರ್ಷಿಕ  ಚಂದಾ ಗೆಲ್ಲಿ!

ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.

*ಸಿ ಕಂಪ್ಯೂಟರ್ ಭಾಷೆಯ ಮಹತ್ವವೇನು?

(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS51 ನಮೂದಿಸಿ.)

ಕಳೆದ ವಾರದ ಬಹುಮಾನಿತ ಉತ್ತರ:

*ಸೈಬರ್ ಬ್ರೌಸಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಲಭ್ಯವಿರುವ ಉಚಿತ ತಂತ್ರಾಂಶ ಕ್ಲಿಂಕ್.http://www.clinck.inಬಹುಮಾನ ವಿಜೇತರು ಪವನ್ ಪಡುಬಿದ್ರಿ.ಅಭಿನಂದನೆಗಳು.

*ಅಶೋಕ್‌ಕುಮಾರ್ ಎ