ಪದ್ದಣ ಮನೋರಮೆ

ಪದ್ದಣ ಮನೋರಮೆ

ಪುಸ್ತಕದ ಲೇಖಕ/ಕವಿಯ ಹೆಸರು
ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು
ಆಕೃತಿ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು…

“ಆಧುನಿಕ ಕನ್ನಡ ಸಾಹಿತ್ಯದ ಅರುಣೋದಯ ಕಾಲದಲ್ಲಿ ಹುಟ್ಟಿದ ರಮ್ಯ ದಾಂಪತ್ಯದ ತುಣುಕೊಂದು ಮುದ್ದಣ ಮನೋರಮೆಯರ ಸಲ್ಲಾಪದಲ್ಲಿ ಸಿಗುತ್ತದೆ. ಮುದ್ದಣ, ಆಧುನಿಕ‌ ಕನ್ನಡ ಸಾಹಿತ್ಯದ ಮುಂಗೋಳಿಯೆಂದೇ ಹೆಸರಾಗಿದ್ದಾನೆ. ಪ್ರಾರಂಭದ ಹಂತದಲ್ಲಿಯೇ ಇಂತಹ ಒಂದು ಆಧುನಿಕವೆನ್ನಬಹುದಾದ ರಸಧಾರೆಯೊಂದು ಸೃಷ್ಟಿಯಾಗಿರುವುದು‌ ಆಶ್ಚರ್ಯಕರವಾದುದು. ಮುದ್ದಣನ ಹೆಂಡತಿಯ ಪಾತ್ರದಲ್ಲಿರುವ ಮನೋರಮೆ ಒಬ್ಬ ಕಾಲ್ಪನಿಕ ವ್ಯಕ್ತಿ. ಬುದ್ಧಿವಂತಿಕೆ, ಕೌಶಲ, ತಾರ್ಕಿಕ ನಿಲುವು, ಹಸನಾದ ಹಾಸ್ಯ, ಬೌದ್ಧಿಕ ಶ್ರೇಷ್ಠತೆಗೆ ನಯವಾಗಿ ಪೆಟ್ಟು ಕೊಡುವ ಜಾಣ್ಮೆ ಇವು ಆ ಕಾಲದಲ್ಲಿಯೇ ಹುಟ್ಟಿದುದು ಮಹಿಳಾಪರ ವಕಾಲತ್ತಿಗೆ ಒಂದು ರೀತಿಯ ಪುಷ್ಠಿಯನ್ನು ಕೊಡುತ್ತದೆ. ಅಲ್ಲದೆ ಅಲ್ಲಿಯವರೆಗೆ ಕೇವಲ ಕಾಲೊರೆಸಾಗಿದ್ದ ಹೆಣ್ಣು ಗಂಡನ ಸರಿಸಮಾನವಾಗಿ ನಿಂತು ಮಾತನಾಡುವ ಅನುರೂಪ ದಾಂಪತ್ಯದ ಕಲ್ಪನೆಯ ಸುಳಿವನ್ನೂ ಕೊಡುತ್ತದೆ. ರತ್ನಾಕರವರ್ಣಿಯ 'ಭರತೇಶ ವೈಭವ' ಕಾವ್ಯದಲ್ಲಿಕೂಡ ಕುಸುಮಾಜಿಯೊಡನೆ ರಮ್ಯವಾದ ಸಂವಾದಕ್ಕೆಂದೇ ಮೀಸಲಾದ ಇಂತಹ ಒಂದೆರೆಡು ಸಂಧಿಗಳಿವೆ.

ದ್ರೌಪದಿ ಮುಂತಾದಂತಹ ಕೆಲವು ಪ್ರಾಚೀನ ಕಾವ್ಯಗಳಲ್ಲಿನ ಪಾತ್ರಗಳನ್ನು ಬಿಟ್ಟರೆ ಹೆಣ್ಣು ಎರಡನೆಯ ದರ್ಜೆಯವಳೇ. ಹೆಣ್ಣಿನ ಆತ್ಮಪ್ರತ್ಯಯದ ಧ್ವನಿ ಕೇಳಲು ನಾವು ಅಕ್ಕನವರೆಗೆ ಕಾಯಬೇಕಾಯಿತು.( ವೇದಕಾಲೀನ ಋಷಿಕೆಯರನ್ನು ಹೊರತು ಪಡಿಸಿದರೆ) ಆಧುನಿಕ ಸಾಹಿತ್ಯದವರೆಗೆ ಹೆಣ್ಣಿನ ಈ ರೀತಿಯ ಪಾತ್ರಗಳ ಗೈರುಹಾಜರು ಗಮನಾರ್ಹವಾಗಿ ಕಾಣಿಸುತ್ತದೆ. ಮುದ್ದಣ ಮನೋರಮೆಯ ಸಲ್ಲಾಪಗಳು ಮೇಲ್ನೋಟಕ್ಕೆ ಗಂಡ ಹೆಂಡಿರ ಸಲ್ಲಾಪಗಳಾದರೂ ಕಾವ್ಯ ಹಾಗೂ ಸಹೃದಯರ ನಡುವಿನ ಅನೇಕ ಸೈದ್ಧಾಂತಿಕ ಪ್ರಶ್ನೆಗಳನ್ನು ಎತ್ತುತ್ತದೆ. ಇದನ್ನೆಲ್ಲಾ ಹೇಳುವುದಕ್ಕೆ ಕಾರಣ ಶಾಲಿನಿಯವರ 'ಪದ್ದಣ್ಣನ ಮನೋರಮೆ', 'ಮುದ್ದಣ ಮನೋರಮೆಯ' ಘಮಲನ್ನು ಹೊಂದಿದೆ ಎನ್ನುವುದು.

ಇವುಗಳನ್ನು ಕಥೆಗಳೆಂದು ಹೇಳುವುದಕ್ಕಿಂತ ಲಘುಪ್ರಸಂಗಗಳೆಂದು ಕರೆಯಬಹುದು.ಈ ಪ್ರಸಂಗಳು ಅನೇಕ ಕಡೆ ಕಥೆಯ ಅಂಶಗಳನ್ನು ಒಳಗೊಂಡ ಸಲ್ಲಾಪಗಳೂ ಆಗಿವೆ. ಇವು ನಮ್ಮ ಬದುಕಿನ ಸುತ್ತಮುತ್ತ ಘಟಿಸುವ ೨೩ ಪ್ರಸಂಗಗಳು . ಇಲ್ಲಿ ಮುದ್ದಣನಂತೆ ಪದ್ದಣನೂ ಕೇಳುಗ. ಕೆಲವು ಕಡೆ ನೇಪಥ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಧಾರಿ. ಇಲ್ಲಿ ಮಾತನಾಡುವುದೆಲ್ಲಾ ಮನೋರಮೆಯೇ. ಇದಕ್ಕೆ ವ್ಯತಿರಿಕ್ತವಾದ ಕಾಲವೊಂದಿತ್ತು. ಈಗ ಕಾಲ ಒಂದು ಚಕ್ರವನ್ನು ಮುಗಿಸಿದಂತೆ ಕಾಣುತ್ತದೆ. ಹೆಣ್ಣು ಮಾತನಾಡುತ್ತಿದ್ದಾಳೆ! ಗಂಡು ಕೇಳುತ್ತಿದ್ದಾನೆ. ಕೆಲವು ಕಡೆಯಲ್ಲಿ ಅವನ ಪೂರ್ವಗ್ರಹವೂ ಬಯಲಾಗಿದೆ, ಮಾತ್ರವಲ್ಲ ಮನುಷ್ಯ ಸಂಬಂಧಗಳ, ಸಾಮಾನ್ಯ ನಂಬಿಕೆ,‌ಮೌಲ್ಯಗಳ ಪೂರ್ವಗ್ರಹಗಳೂ ಬಯಲಾಗಿವೆ. ಈ ಪ್ರಸಂಗಗಳು ಗಂಭೀರವಾದ ಭಾಷೆಯಲ್ಲಿ ಮಹತ್ತರವಾದ ಸಂದೇಶಗಳನ್ನು ಸಾರುವ ಬಿಗಿಹುಬ್ಬುಗಂಟಿನ ಬರಹಗಳಲ್ಲ. ಲಘುವಾದ, ಕಚುಗುಳಿ ಇಡುವಂತಹ, ಲಹರಿಯಂತಹ ಬರಹಗಳು.

ಹೆಣ್ಣು ಹೇಗೆ ಕಾಣಬೇಕು ಎಂಬ ಸಿದ್ಧವಾದ ಸಾಮಾಜಿಕ ಗ್ರಹಿಕೆಯನ್ನು ಒಡೆಯುತ್ತವೆ. ಹೆಣ್ಣಿಗೆ ತನ್ನ ಬಗ್ಗೆಯೇ ಇರುವ ಭ್ರಮೆ, ಪ್ರೇಮದ ಕನಸು, ದಾಂಪತ್ಯದ ಹೊಂದಾಣಿಕೆ, ಸಂಸಾರದ ಹೊಣೆ, ಮನೆಯಾಚೆಯ ದುಡಿಮೆಯ ದ್ವಂದ್ವಗಳು, ಮಕ್ಕಳ ಜವಾಬ್ದಾರಿ,‌ ಬಂಜೆತನ, ತಾಯ್ತನದ ಸಂಕೀರ್ಣತೆ, ಗಂಡಿನಿಂದ ಮೋಸಹೋಗುವುದು ಮುಂತಾದ ಹತ್ತು ಹಲವು ವಿಷಯಗಳ ಸುತ್ತ ಸುತ್ತುತ್ತವೆ. ಇದು ವಿದ್ಯನ್ಮಾನದ ಕಾಲವಾದ್ದರಿಂದ ಮೊಬೈಲ್, ವಾಟ್ಸಾಪ್, ಫೇಸ್ ಬುಕ್, ಮೆಸೆಂಜರ್, ಇಂಟರ್ನೆಟ್ ಮೂಲಕವೇ ಇಲ್ಲಿನ ಪ್ರಸಂಗಗಳು ಚಲಿಸುವುದರಿಂದ ಇವು ಈ ಕಾಲದ ನಡೆಯನ್ನೂ ದಾಖಲಿಸುತ್ತವೆ.

ಈ ಪ್ರಸಂಗಗಳ ಆಕರ್ಷಕ ಅಂಶವೆಂದರೆ ಎಲ್ಲಿಯೂ ಇವು ಖಿನ್ನತೆಗೆ ಜಾರುವುದಿಲ್ಲ. ಅಂತಹ ಸಂದರ್ಭಗಳು ಬಂದರೂ ಅವುಗಳನ್ನು ಒಂದು ಇತ್ಯಾತ್ಮಕ ನೆಲೆಗೆ ಲೇಖಕಿ ಕೊಂಡೊಯ್ಯುವುದು ಅವರ ಆರೋಗ್ಯಕರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಉದಾಹರಣೆಗೆ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಬದುಕುಳಿಯುವ ಮಹಿಳೆಗೆ ನಿರೂಪಕಿ ಆತ್ಮಹತ್ಯೆಯೊಂದೇ ಮಾರ್ಗವಲ್ಲ ಎಂದು ಬುದ್ಧಿ ಹೇಳಿ ಮಹಿಳಾ ಸಂಘಟನೆಗಳಿಗೆ ಅವಳನ್ನು ಪರಿಚಯಿಸಿ ಅವಳನ್ನು ಬದುಕಿ ಸಾಧಿಸುವಂತೆ, ಇದ್ದು ಜೈಸುವಂತೆ (ಕಂಡವರ ಮನೆ ಕತೆ) ಪ್ರೋತ್ಸಾಹಿಸುವುದು, ಅವಳು ಕೃತಜ್ಞತಾಪೂರ್ವಕ ಕಣ್ಣೀರು ಹರಿಸುವುದು ನಿದರ್ಶನವಾಗಿದೆ.

ಈ ಪ್ರಸಂಗಗಳಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ, ನಿರೂಪಕಿ ಇಲ್ಲಿ ತಾನು ಕಪ್ಪು, ದಪ್ಪ ಎಂದು ತನ್ನನ್ನು ತಾನೇ ಅಪಹಾಸ್ಯ ಮಾಡಿಕೊಳ್ಳುವುದು, (ಫ್ರೀ ಬ್ಯೂಟಿ ಟಿಪ್ಸ್). ಮಾಲ್ ಒಂದರಲ್ಲಿ ಷಾಪಿಂಗ್ ಮಾಡಲು ಹೋದಾಗ ತಾನೇ ಕಳ್ಳತನದ ಆರೋಪವನ್ನು ಎದುರಿಸುವುದು( ವಿಂಡೋ ಷಾಪಿಂಗ್) ತನ್ನ ಬಗ್ಗೆ ತಾನೇ ಕಟ್ಟಿಕೊಂಡ ಇಮೇಜನ್ನು ಒಡೆಯುವ ಸಾಧನವಾಗಿ ಕಾಣುತ್ತದೆ. ಗಂಡ ಹೆಂಡಿರ ಅನುನಯ, ಪ್ರೀತಿಗೆ ಹೊರಗಿನ ಬಾಹ್ಯಾಡಂಬರ ಮುಖ್ಯವಲ್ಲ ಎಂಬ ನೆಲೆಗೆ ತಲುಪುವುದು ಇಲ್ಲಿ ಬಹಳ ಮುಖ್ಯವಾದ ಸಂಗತಿ. ಲೇಖಕಿ ಗಮನಿಸಿರುವ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ನಾಯಿಗಳ ಸಮಾಜದಲ್ಲೂ ಹೆಣ್ಣುನಾಯಿಗೆ ತಿರಸ್ಕೃತ ಸ್ಥಾನವಿರುವುದು( ನಾಯಿ ಹೆಣ್ಣಾದ್ರೆ ತಪ್ಪಾ?).

ಹೀಗೆ ಅನೇಕ ಪ್ರಗತಿಪರ ವಿಚಾರಗಳನ್ನು ಹೊಂದಿರುವ ಈ ಲಘು ಪ್ರಸಂಗಗಳು ಬಹಳ ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಶಾಲಿನಿಯವರ ಈ ವೈಚಾರಿಕ ದೃಷ್ಟಿಕೋನ ಇನ್ನೂ ಹರಿತಗೊಂಡು ಮುಂದಿನ ಮಹತ್ವದ ಬರಹಗಳಿಗೆ ಕಾರಣವಾಗಲಿ, 'ವಿದಗ್ಧ ಮನೋರಮೆಯೊಬ್ಬಳು' ಉದಯಿಸಲಿ ಎಂದು ಹಾರೈಸುತ್ತೇನೆ.”