ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೨)

ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೨)

ಹಿಂದಿನ ಕಂತಿನಲ್ಲಿ ನೀವು ಈಗಾಗಲೇ ಇಬ್ಬರು ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳ ಬಗ್ಗೆ ತಿಳಿದುಕೊಂಡಿರುವಿರಿ. ಇನ್ನಷ್ಟು ಇಂತಹ ತೆರೆಮರೆಯ ಸಾಧಕರ ಪುಟ್ಟ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಹೇಮಚಂದ್ ಮಾಂಜಿ: ಛತ್ತೀಸಗಢದ ನಾರಾಯಣಪುರ ಗ್ರಾಮದ ಹೇಮಚಂದ್ ಮಾಂಜಿ ಕಳೆದ ಐದು ದಶಕಗಳಿಂದ ಪಾರಂಪರಿಕ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ೧೫ ನೇ ವಯಸ್ಸಿಗೆ ಅವರು ಪ್ರಾರಂಭಿಸಿದ ಈ ಗಿಡ ಮೂಲಿಕೆಗಳ ಔಷಧ ನೀಡುವ ಕಾರ್ಯದ ಖ್ಯಾತಿಯು ದೇಶದಾದ್ಯಂತ ಹಬ್ಬಿದೆ. ಸುಮಾರು ೨೦-೨೫ ಗಿಡ ಮೂಲಿಕೆಗಳನ್ನು ಬಳಸಿ ಇವರು ನೀಡುವ ಔಷಧಿಯು ಹಲವಾರು ಕಾಯಿಲೆಗಳಿಗೆ ರಾಮಬಾಣ ಎಂಬ ಪ್ರತೀತಿ ಇದೆ. ಮಾಂಜಿ ಅವರು ವೈದ್ಯ ವೃತ್ತಿ ಮಾಡಬಾರದು ಎಂದು ಅವರ ಗ್ರಾಮದಲ್ಲಿ ನಕ್ಸಲರು ಕರಪತ್ರ ಹಂಚಿದ್ದರಂತೆ. ಈ ಬೆದರಿಕೆಗಳಿಗೆ ಅಂಜದೇ, ಯಾವುದೇ ಅಪಪ್ರಚಾರಗಳಿಗೆ ಹೆದರದೇ ತಮ್ಮ ಪಾರಂಪರಿಕ ವೈದ್ಯ ವೃತ್ತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಮಾಂಜಿ ಅವರು ಮಾಡುವ ಸೇವೆಗೆ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ. ಗ್ರಾಮಸ್ಥರ ಅಭಿಮಾನ ಹಾಗೂ ಕೃತಜ್ಞತೆಗೆ ಪಾತ್ರರಾಗಿರುವ ಇವರ ಖ್ಯಾತಿಯನ್ನು ಗಮನಿಸಿ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.(ಚಿತ್ರ ೧)

ಜೋರ್ಡಾನ್ ಲೆಪ್ಜಾ: ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನ ಮಾಂಗನ್ ಗ್ರಾಮದ ಜೋರ್ಡಾನ್ ಲೆಪ್ಜಾ ಸಾಂಪ್ರದಾಯಿಕ ಬಿದಿರಿನ ಟೋಪಿಗಳನ್ನು ತಯಾರಿಸುವ ಕುಶಲಕರ್ಮಿ. ಲೆಪ್ಜಾ ಬುಡಕಟ್ಟು ಜನಾಂಗದವರ ಪುರಾತನ ಕಲೆಯಾದ ಬಿದಿರು ಹೆಣೆಯುವ ಕಲೆಯನ್ನು ಕಲಿತು ಈಗಿನ ತಲೆಮಾರಿಗೆ ವರ್ಗಾಯಿಸುವ ಮಾರ್ಗದಲ್ಲಿದ್ದಾರೆ ಜೋರ್ಡಾನ್. ಪೂರ್ವ ಭಾರತದ ಹೆಮ್ಮೆಯ ಬಿದಿರು ಟೋಪಿಯು ಕೇವಲ ಬಿಸಿಲಿನಿಂದ ರಕ್ಷಣೆ ಮಾತ್ರವಲ್ಲದೇ ನಮ್ಮ ಸಂಸ್ಕೃತಿಯನ್ನು ರಕ್ಷಿಸಲೂ ಸಹಕಾರಿ ಎನ್ನುತ್ತಾರೆ ಜೋರ್ಡಾನ್. ಪಾಶ್ಚಾತ್ಯ ಸಂಸ್ಕೃತಿಯನ್ನು ತ್ಯಜಿಸಿ ಭಾರತೀಯ ಅದರಲ್ಲೂ ತಮ್ಮ ಲೆಪ್ಜಾ ಬುಡಕಟ್ಟು ಜನಾಂಗದ ಕಲೆಗೆ ಹೊಸ ಆಯಾಮ ಕಲ್ಪಿಸಿದ ಜೋರ್ಡಾನ್ ಲೆಪ್ಜಾ ಅವರಿಗೆ ಅರ್ಹವಾಗಿಯೇ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. (ಚಿತ್ರ ೨)

ಕಾಮಾಚಿ ಚೆಲ್ಲಮ್ಮಾಳ್: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ವಾಸಿಸುವ ‘ಎಳನೀರಿನ ಅಮ್ಮ'ಎಂದೇ ಖ್ಯಾತಿ ಪಡೆದ ಕಾಮಾಚಿ ಚೆಲ್ಲಮ್ಮಾಳ್ ಅವರಿಗೆ ಕೇಂದ್ರ ಸರಕಾರದ ಅಧಿಕಾರಿಗಳಿಂದ ಪದ್ಮಶ್ರೀ ಪ್ರಶಸ್ತಿ ಬಗ್ಗೆ ಕರೆ ಬಂದಾಗ ಅವರು ಅದನ್ನು ಸುಳ್ಳು ಕರೆ ಎಂದೇ ಭಾವಿಸಿದ್ದರಂತೆ. ನಂತರ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ತಿಳಿದ ಬಳಿಕವಷ್ಟೇ ಚೆಲ್ಲಮ್ಮಾಳ್ ನಿಜವೆಂದು ನಂಬಿದರು. ಸುಮಾರು ಹತ್ತು ಎಕರೆ ತೋಟದಲ್ಲಿ ಮಾದರಿ ತೆಂಗು ಕೃಷಿಯನ್ನು ಮಾಡುವ ಈ ಕೃಷಿಕ ಮಹಿಳೆ ತಮ್ಮ ರಾಸಾಯನಿಕ ರಹಿತ ಕೃಷಿಗಾಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ತೆಂಗು ತೋಟದಲ್ಲಿ ತಮ್ಮ ಪೂರ್ವಜರು ಕಂಡುಕೊಂಡ ಪರಿಸರ ಸ್ನೇಹಿ ವಿಧಾನಗಳನ್ನೇ ಅನುಸರಿಸುವ ಚೆಲ್ಲಮ್ಮಾಳ್ ತಮ್ಮ ಸುತ್ತಮುತ್ತಲಿನ ಹಲವಾರು ತೆಂಗು ಬೆಳೆಗಾರರಿಗೆ ಮಾದರಿಯಾಗಿದ್ದಾರೆ. ಅಂಡಮಾನ್ ನಿಕೋಬಾರ್ ದ್ವೀಪದ ರಾಮಚಂಗ್ ಎನ್ನುವ ಗ್ರಾಮದ ವಾಸಿಯಾಗಿದ್ದಾರೆ. (ಚಿತ್ರ ೩)

ಪಾರ್ವತಿ ಬರುವಾ: ಪಾರ್ವತಿಯವರಿಗೆ ೧೪ನೇ ವಯಸ್ಸಿನಲ್ಲಿಯೇ ಮದವೇರಿದ ಆನೆಯೊಂದನ್ನು ಪಳಗಿಸಿದ ಯುವತಿ ಎಂಬ ಖ್ಯಾತಿ ಇದೆ. ಸಣ್ಣ ಪುಟ್ಟ ಮಕ್ಕಳು ಗೊಂಬೆಗಳೊಂದಿಗೆ ಆಟವಾಡುವ ಸಮಯದಲ್ಲಿ ಪಾರ್ವತಿ ಜೀವಂತ ಆನೆ, ಕುದುರೆಗಳೊಂದಿಗೆ ಆಟವಾಡುತ್ತಿದ್ದರಂತೆ. ಆನೆಯೊಂದಿಗಿನ ಮೈತ್ರಿ ಇವರನ್ನು ದೇಶದ ಮೊದಲ ಮಹಿಳಾ ಮಾವುತ ಎನ್ನುವ ಕೀರ್ತಿ ಶಿಖರಕ್ಕೇರಿಸಿತು. ಪಾರ್ವತಿ ಬರುವಾ ಎಂಬ ಹೆಣ್ಣುಮಗಳು ಅಸಾಂ ರಾಜ್ಯದ ಗೌರೀಪುರ ಎನ್ನುವ ಗ್ರಾಮಕ್ಕೆ ಸೇರಿದವರು. ಇವರು ರಾಜಮನೆತನದ ಹೆಣ್ಣು ಮಗಳು. ಇವರ ವೃತ್ತಿ ಜೀವನದ ಬಗ್ಗೆ ಬಿಬಿಸಿ ಮಾಧ್ಯಮ ಸಂಸ್ಥೆಯು ಆನೆಗಳ ರಾಣಿ (‘ಕ್ವೀನ್ ಆಫ್ ದಿ ಎಲಿಫೆಂಟ್’) ಎನ್ನುವ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದೆ. ಇವರ ಅದಮ್ಯ ಸಾಹಸ ಕಾರ್ಯವನ್ನು ಗಮನಿಸಿ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. (ಚಿತ್ರ ೪)

ಗದ್ದಾಂ ಸಮ್ಮಯ್ಯ: ತೆಲಂಗಾಣ ರಾಜ್ಯದ ಪ್ರತಿಭಾವಂತ ಯಕ್ಷಗಾನ ಪಟುವಾದ ಇವರು ಈಗಾಗಲೇ ಸುಮಾರು ೧೯ ಸಾವಿರ ಪ್ರದರ್ಶನಗಳನ್ನು ನೀಡಿದ್ದಾರೆ. ಕಳೆದ ಐದು ದಶಕಗಳಿಂದ ಯಕ್ಷಗಾನ ಕಲೆಗೆ ತಮ್ಮ ಜೀವವನ್ನು ತೇಯ್ದ ಇವರು ಜೀವನೋಪಾಯಕ್ಕಾಗಿ ಮಾಡುವುದು ಕೂಲಿ ಕೆಲಸ. ಬೆಳಿಗ್ಗೆಯಿಂದ ಸಂಜೆಯವರೆಗೆ ಬೇರೊಬ್ಬರ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುವ ತೆಲಂಗಾಣದ ಜಾಂಗಾಂವ್ ಪ್ರಾಂತ್ಯದ ಗದ್ದಾಂ ಸಮ್ಮಯ್ಯ ಇವರು ಸಂಜೆಯಾದೊಡನೇ ಕಲಾವಿದರಾಗಿಬಿಡುತ್ತಾರೆ. ಕಂಸ, ದುರ್ಯೋಧನ, ರಾವಣ, ಕೃಷ್ಣ ಮೊದಲಾದ ಪೌರಾಣಿಕ ಪಾತ್ರಗಳನ್ನು ಬಲು ಸಹಜವಾಗಿ ಅಭಿನಯಿಸುವ ಇವರು ಗದೆ ಏರಿಸಿ ನಿಂತರೆಂದರೆ ಅವರಿಗೆ ಅವರೇ ಸಾಟಿ. 'ಚಿಂದುಂ ಯಕ್ಷಗಾನ' ಕಲಾವಿದರಾಗಿ ಇವರು ಪಾತ್ರಗಳಿಗೆ ಜೀವ ತುಂಬಿಸಿ ನಟಿಸುತ್ತಾರೆ. 

ಯಕ್ಷಗಾನದ ಮೂಲಕ ಇವರು ಕೇವಲ ಮನೋರಂಜನೆ ಮಾತ್ರವಲ್ಲ, ಸಾಮಾಜಿಕ ಜಾಗೃತಿಯನ್ನೂ ಮಾಡುತ್ತಾರೆ. ದೇವ ದಾನವರ ಪಾತ್ರಗಳನ್ನು ಮಾಡುತ್ತಲೇ ಅವರು ತಮ್ಮ ಪಾತ್ರಗಳಲ್ಲಿ ತನ್ಮಯತೆಯನ್ನು ಕಂಡಿದ್ದಾರೆ. ಇವರ ಜೀವನದಲ್ಲಿನ ಸಂಕಷ್ಟಗಳು ನೂರಾರಿದ್ದರೂ ವೇಷ ಧರಿಸಿದ ಬಳಿಕ ಮಾತ್ರ ಅವರು ಧರಿಸಿದ ಪಾತ್ರವಾಗಿ ಬಿಡುತ್ತಾರೆ. ತಾವು ನಂಬಿದ ಕಲೆಯ ಮೂಲಕ ಜಾಗೃತಿ ಮೂಡಿಸುವ ಇವರು ಬಹಳಷ್ಟು ಮಂದಿಗೆ ಮಾರ್ಗದರ್ಶಕರಾಗಿದ್ದಾರೆ. ಗದ್ದಾಂ ಸಮ್ಮಯ್ಯ ಅವರ ಈ ನಿಸ್ವಾರ್ಥ ಸೇವೆಯನ್ನು ಗಮನಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. (ಚಿತ್ರ ೫)

ಇವು ಕೆಲವೇ ಕೆಲವು ಮಂದಿ ಸಾಧಕರ ಪರಿಚಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಮರೆಯ ಕಾಯಿಯಂತಿರುವ ಸಾಧಕರ ಪರಿಚಯ ಮಾಡಿಕೊಡಲಾಗುವುದು. ಇಂತಹ ಸಾಧಕರನ್ನು ಹುಡುಕಿ ಅವರಿಗೆ ಸೂಕ್ತ ಗೌರವ ನೀಡುತ್ತಿರುವ ಕೇಂದ್ರ ಸರಕಾರದ ಕಾರ್ಯ ಅಭಿನಂದನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.

(ಮುಗಿಯಿತು)

ಚಿತ್ರ ಕೃಪೆ: ಅಂತರ್ಜಾಲ ತಾಣ