"ಪನೌತಿ" - ಅಪಶಕುನ, "ಐರನ್ ಲೆಗ್" - ದರಿದ್ರ ಕಾಲ್ಗುಣ...!

"ಪನೌತಿ" - ಅಪಶಕುನ, "ಐರನ್ ಲೆಗ್" - ದರಿದ್ರ ಕಾಲ್ಗುಣ...!

ಹೀಗೆ ಕೆಲವು ವ್ಯಕ್ತಿಗಳು ಕೆಲವರನ್ನು ಅತ್ಯಂತ ಅಮಾನವೀಯವಾಗಿ ಟೀಕಿಸಲು ಈ ಪದಗಳನ್ನು ಉಪಯೋಗಿಸುತ್ತಾರೆ. ಇದಕ್ಕೆ ದ್ವೇಷ, ಅಸೂಯೆ ಒಂದು ಕಾರಣವಾದರೆ, ಫಲಿತಾಂಶ ಆಧರಿಸಿ ಸೋತಾಗ ಮಾತನಾಡುವುದು ಇನ್ನೊಂದು ಕಾರಣ, ಮತ್ತೊಂದು ಕೆಲಸವಿಲ್ಲದವರ ಉಡಾಫೆ ಮಾತುಗಳಾದರೆ, ಮಗದೊಂದು ಮೌಡ್ಯ. ಹಿಂದೆ ರಾಹುಲ್ ಗಾಂಧಿಯವರನ್ನು ಅವರು ಚುನಾವಣೆಯಲ್ಲಿ ಸೋತಾಗ ಐರನ್ ಲೆಗ್ ಎಂದು ಟೀಕಿಸಲಾಗುತ್ತಿತ್ತು. ಈಗ ಇದೇ ರಾಹುಲ್ ಗಾಂಧಿ ನರೇಂದ್ರ ಮೋದಿಯವರನ್ನು ಅಪಶಕುನ ಎಂದು ಕರೆದಿದ್ದಾರೆ. ಚಂದ್ರಯಾನ 1 ರ ವಿಫಲತೆ ಮತ್ತು ಈಗಿನ ಕ್ರಿಕೆಟ್ ಫೈನಲ್ ಸೋತ ಸಂದರ್ಭದಲ್ಲಿ ನರೇಂದ್ರ ಮೋದಿ ಹಾಜರಾಗಿದ್ದರು ಎಂಬುದು ಅವರ ಹೇಳಿಕೆಗೆ ಕಾರಣ.

ಈ ಎರಡೂ ರೀತಿಯ ಹೇಳಿಕೆಗಳನ್ನು ಸಮ ಪ್ರಮಾಣದಲ್ಲಿ ವಿರೋಧಿಸಬೇಕು. ದೇಶದ ಪ್ರಮುಖ ರಾಜಕೀಯ ನಾಯಕರೇ ಮೌಡ್ಯದಿಂದ ಅಮಾನವೀಯ ಹೇಳಿಕೆಯನ್ನು ಸಾರ್ವಜನಿಕವಾಗಿ ಹೇಳಿದರೆ ಸಾಮಾನ್ಯ ಜನರ ಮನಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಶಕುನ - ಅಪಶಕುನ, ಒಳ್ಳೆಯ ಕಾಲ್ಗುಣ - ಕೆಟ್ಟ ಕಾಲ್ಗುಣ ಎಂಬುದೇನು ಇಲ್ಲ. ಆಗಿನ ಒಟ್ಟು ಪರಿಸ್ಥಿತಿಯನ್ನು ಅವಲಂಬಿಸಿ ಫಲಿತಾಂಶ - ಪರಿಣಾಮಗಳು ಸಂಭವಿಸುತ್ತವೆ. ಅದು ನಿರೀಕ್ಷಿತವು, ಅನಿರೀಕ್ಷಿತವೂ ಆಗಿರಬಹುದು. ಅದನ್ನು ವಿಮರ್ಶಿಸಬಹುದು ಅಥವಾ ಟೀಕಿಸಲೂಬಹುದು ಆ ವ್ಯಕ್ತಿ ಅದರಲ್ಲಿ ಭಾಗಿಯಾಗಿದ್ದಾಗ ಮಾತ್ರ. ಆತನ ಆಲೋಚನೆಗಳು ಮತ್ತು ಕಾರ್ಯತಂತ್ರಗಳಿಂದ ಸೋಲು ಅಥವಾ ಗೆಲುವು ಸಂಭವಿಸಬಹುದು. ಅದನ್ನು ನೇರವಾಗಿ ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಕೇವಲ ವ್ಯಕ್ತಿಯ ಇರುವಿಕೆಯಿಂದ ಅಥವಾ ಸೋತ ವ್ಯಕ್ತಿಯ ದೈಹಿಕ ಹಾಜರಿಯ ಕಾರಣದಿಂದಾಗಿ ಆತನನ್ನು ನಿಂದಿಸುವುದು ಅತ್ಯಂತ ಅಮಾನವೀಯ. ಈ ಸಂದರ್ಭವನ್ನು, ಘಟನೆಗಳನ್ನು  ಪದಗಳು ವರ್ಣಿಸುವುದು ಕಷ್ಟ. ಇದನ್ನು ಅರ್ಥಮಾಡಿಕೊಳ್ಳಲು ಸಾಮಾನ್ಯ ಜ್ಞಾನ ಸಾಕು. ಇದು ನಮ್ಮೆಲ್ಲರಿಗು ಅನ್ವಯಿಸುತ್ತದೆ.

ಉದಾಹರಣೆಗೆ ಮಗು ಹುಟ್ಟಿದ ನಂತರ ನಮ್ಮ ಮನೆಗಳಲ್ಲಿ ಆಗುವ ಲಾಭ - ನಷ್ಟಗಳು, ಸೊಸೆ ಬಂದ ನಂತರ ಅಥವಾ ಅಳಿಯ ಮನೆ ಪ್ರವೇಶಿಸಿದ ನಂತರ ಆಗುವ ಯಾವುದೇ ಒಳ್ಳೆಯ ಅಥವಾ ಕೆಟ್ಟ ಬೆಳವಣಿಗೆಗೆ ಅವರನ್ನು ಹೊಣೆ ಮಾಡಿ ದೂಷಿಸುವುದು ಮನುಷ್ಯತ್ವಕ್ಕೆ ಮಾಡುವ ಅವಮಾನವಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರ ಕ್ಷಮೆ ಕೇಳುವುದು ಉತ್ತಮ ನಡೆಯಾಗುತ್ತದೆ. " ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವೆ " ಎಂದು ಹೇಳುವ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆಯನ್ನು ನೀಡಬಾರದು.

ಹಾಗೆಯೇ, ನರೇಂದ್ರ ಮೋದಿಯವರು ಆಟಗಾರರ ಡ್ರೆಸ್ಸಿಂಗ್ ರೂಂಗೆ ಹೋಗಿ ಬಹಿರಂಗವಾಗಿ ಸಂತೈಸುವ ನಾಟಕವೂ ಬೇಕಿರಲಿಲ್ಲ. ಅಲ್ಲಿ ಯಾವುದೇ ದುರಂತವೂ ನಡೆದಿರಲಿಲ್ಲ, ಯಾವುದೇ ಸಾವು ಆಗಿರಲಿಲ್ಲ, ಅಸಲಿಗೆ ಭಾರತ ‌11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಎರಡನೇ ವಿಜೇತ ತಂಡವಾಗಿ ಹೊರಹೊಮ್ಮಿತು.  ಕೋಟಿ ರೂಪಾಯಿಗಳ ಬಹುಮಾನದ ಮೊತ್ತ ಪಡೆಯಿತು. ಭಾರತದ ವಿರಾಟ್ ಕೊಹ್ಲಿ ಟೂರ್ನಿಯ ಆಟಗಾರ ಪ್ರಶಸ್ತಿ ಪಡೆದರು. ಇದು‌ ದೊಡ್ಡ ಸಾಧನೆಯಲ್ಲವೇ? ಪ್ರಧಾನ ಮಂತ್ರಿಯವರು ಇದಕ್ಕಿಂತ ಉತ್ತಮವಾಗಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ‌ಕ್ರೀಡೆಯಲ್ಲಿ ಸೋತವರ ಸಾಂತ್ವಾನಕ್ಕಿಂತ ಬದುಕಿನಲ್ಲಿ ಸೋತವರ ಸಾಂತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಹುದ್ದೆ ಅದು.

ಮೊದಲನೆಯ ಸ್ಥಾನ ಸಿಗದ ಅಸಮಾಧಾನ ಇರಬಹುದು. ಆದರೆ ಬಹುತೇಕ ನಮ್ಮ ಬದುಕು ಹಾಗೇ ಅಲ್ಲವೇ, ಬಯಸಿದ್ದು ಸಿಗದೇ ಇರಬಹುದು ಅಥವಾ ಸಮಯಕ್ಕೆ ಸರಿಯಾಗಿ ಸಿಗದಿರಬಹುದು ಅಥವಾ ಜೀವನ ಪರ್ಯಂತ ಸಿಗದಿರಬಹುದು ಅಥವಾ ಇಷ್ಟಪಟ್ಟ ತಕ್ಷಣ ಸಿಗಬಹುದು ಅಥವಾ ಮತ್ಯಾವಾಗಲೋ‌ ಅನಿರೀಕ್ಷಿತವಾಗಿ ಸಿಗಬಹುದು ಹೀಗೆ ಎಲ್ಲಾ ಸಾಧ್ಯತೆಗಳಿರುವ ಯುದ್ಧ ಭೂಮಿಯಲ್ಲವೇ. ಗೆಲ್ಲಬಹುದು - ಸೋಲಬಹುದು  - ಅನಿರೀಕ್ಷಿತವಾಗಿ ಸಾಯಬಹುದು. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ.

ಯುದ್ದದಲ್ಲಿ ಬಾಂಬು ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು. ಯುದ್ದದಂತೆ ಬದುಕಿನಲ್ಲಿ ನಮ್ಮೊಂದಿಗೆ ಹಲವಾರು ಜನರಿರುತ್ತಾರೆ. ಕೆಲವೊಮ್ಮೆ ಮುಂದೆ ಮತ್ತೆ ಕೆಲವರು ಜೊತೆಯಾಗುತ್ತಾರೆ ಅಥವಾ ಸಂಧರ್ಭದ ಒತ್ತಡದಿಂದ ಎಲ್ಲರೂ ಬೇರೆಯಾಗಿ ನಾವು ಒಂಟಿಯೂ ಆಗಬಹುದು.

ಯುದ್ದದಲ್ಲಿರುವ ಯಶಸ್ಸುಗಳು, ಸಂಭ್ರಮಗಳು, ತ್ಯಾಗಗಳು, ತೃಪ್ತಿಗಳು ಬದುಕಿನಲ್ಲೂ ಸಂಭವಿಸುತ್ತದೆ. ಹಾಗೆಯೇ ಸೋಲು, ಹತಾಶೆ, ಒಂಟಿತನ, ಕುತಂತ್ರಗಳೂ ಸಹ ಯುದ್ಧ ಮತ್ತು ಬದುಕಿನ ಭಾಗಗಳೇ ಆಗಿದೆ. ಯುದ್ಧದ ಗೆಲುವು ನಮ್ಮನ್ನು ವಿಜೃಂಬಿಸಿದರೆ ಯುದ್ಧದ ಸೋಲು ನರಕಯಾತನೆಯೂ ಆಗಿ ಬದುಕು ಅಲ್ಲಿಗೆ ಮುಕ್ತಾಯವೂ ಆಗಬಹುದು. ಹಾಗೆ ಜೀವನದ ಯಶಸ್ಸು ನಮ್ಮನ್ನು ಅತ್ಯುತ್ತಮ ಸ್ಥಾನಕ್ಕೆ ಕೊಂಡೊಯ್ದುರೆ ಸೋಲು ಸಾವಾಗಿಯೂ ಪರಿವರ್ತನೆಯಾಗಬಹುದು.

ಯುದ್ಧದ ತೀವ್ರ ಭಾವನೆಗಳು ಆತಂಕಗಳು ಆಯಾಯಾ ಸಂದರ್ಭದ ನಮ್ಮ ನಿರ್ಧಾರಗಳು ನಮ್ಮ ಮುಂದಿನ ಗತಿಯನ್ನು ನಿರ್ಧರಿಸುವಂತೆ ಜೀವನದಲ್ಲಿಯೂ ಕಠಿಣ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ರಣಭೂಮಿಯ ಪ್ರತಿ ಹೆಜ್ಜೆಯನ್ನು ಅತ್ಯಂತ ಜಾಗರೂಕತೆಯಿಂದ, ವಿವೇಚನೆಯಿಂದ, ಸೂಕ್ಷ್ಮ ಮುಂದಾಲೋಚನೆಯಿಂದ, ನಿರೀಕ್ಷಿತ ಪರಿಣಾಮ ಊಹಿಸಿಯೇ ಇಡಬೇಕು ಮತ್ತು ಅದರ ಫಲಿತಾಂಶವನ್ನು ಎದುರಿಸಬೇಕು. ಹಾಗೆಯೇ ಬದುಕಿನಲ್ಲಿಯೂ  ಬಾಲ್ಯದಿಂದ ಮುಪ್ಪಿನವರಗೆ ಆಯಾ ಕಾಲಘಟ್ಟದಲ್ಲಿ ನಾವು ಯೋಚಿಸಿ ನಿರ್ಧರಿಸಬೇಕು ಮತ್ತು ಫಲಿತಾಂಶಗಳನ್ನು ನಮ್ಮೆಲ್ಲ ಶ್ರಮದ ನಂತರವೂ ಬಂದಂತೆ ಸ್ವೀಕರಿಸಬೇಕು. ಕೊರಗುತ್ತಾ ಕುಳಿತರೆ ಸಾವು ಖಚಿತ.

ಯುದ್ದದಲ್ಲಿ ಕೆಲವೊಮ್ಮೆ ಸೋಲಿನ ಅಂಚಿಗೆ ಬರಬಹುದು. ನಮ್ಮ ಯೋಜನೆಗಳು ತಲೆಕೆಳಕಾಗಬಹುದು, ನಮ್ಮವರಿಂದ ನಿರೀಕ್ಷಿತ ಬೆಂಬಲ ಸಿಗದಿರಬಹುದು. ಆಗಲೂ ನಿರಾಶರಾಗದೆ ಕೊನೆಯವರೆಗೂ ಹೋರಾಡಬೇಕು. ಬದುಕಿನಲ್ಲೂ ಕೂಡ  ಇದು ಅಷ್ಟೇ ಸಹಜ. ನಮ್ಮ ಕಣ್ಣ ಮುಂದೆಯೇ ಅನೇಕ ಸಾವುನೋವುಗಳು ಸಂಭವಿಸಿದರೂ ನಾವು ಆ ಕ್ಷಣದ ನಮ್ಮ ಕರ್ತವ್ಯ ಮುಗಿಸಿ ಮನ್ನಡೆಯವುದು ಯುದ್ಧದ ಅನಿವಾರ್ಯತೆ. ಹಾಗೆಯೇ ಬದುಕಿನಲ್ಲಿಯೂ, ಇದರಲ್ಲಿ ಅಂತಹ ವ್ಯತ್ಯಾಸವಿಲ್ಲ. ಅದೃಷ್ಟ ಮತ್ತು ದುರಾದೃಷ್ಟವೆಂಬ ಖಚಿತವಲ್ಲದ, ವಿವರಿಸಲಾಗದ, ಪರಿಣಾಮದವರೆಗೂ ತಿಳಿಯದ ಒಂದು ಆಟ ಮಾತ್ರ ಯುದ್ಧ ಮತ್ತು ಬದುಕಿನಲ್ಲಿ ಇದ್ದೇ ಇರುತ್ತದೆ.

ನಿಮ್ಮೆಲ್ಲಾ ಶ್ರಮ, ಒಳ್ಳೆಯತನ, ಚಾಕಚಕ್ಯತೆ ಎಲ್ಲವೂ ಇದ್ದು ವಿವರಿಸಲಾಗದ ಕಾರಣಕ್ಕೆ ನಿಮಗೆ ಯುದ್ದದಲ್ಲಿ ಸೋಲಾಗಬಹುದು. ಹಾಗೆಯೇ ಜೀವನದಲ್ಲಿಯೂ ಅನಿರೀಕ್ಷಿತವಾಗಿ ಯಶಸ್ಸು ಸಿಗಬಹುದು ಅಥವಾ ಸೋಲೂ ಆಗಬಹುದು. ದುಷ್ಟರು ಜನಪ್ರಿಯರಾಗಬಹುದು, ಉಡಾಫೆಯವರು ಅಧಿಕಾರಕ್ಕೇರಬಹುದು ಮತ್ತು ಪ್ರಾಮಾಣಿಕರು ದಕ್ಷರು ಹೇಳ ಹೆಸರಿಲ್ಲದಂತಾಗಬಹುದು. ಈ ಎಲ್ಲಾ ಸಾಧ್ಯತೆಗಳ ವಿಸ್ಮಯ ಪ್ರಪಂಚ ಯುದ್ಧ ಮತ್ತು ಬದುಕು.

ಹಾಗಾದರೆ ಇದರ ಪಾಠವೇನು ? ಏನೂ ಇಲ್ಲ. ಸೃಷ್ಟಿಯ ಸಹಜತೆಯನ್ನು ಒಪ್ಪಿಕೊಂಡು ನಮ್ಮ ಮೆದುಳಿನ ಗ್ರಹಿಕೆಯ ಪ್ರತಿಕ್ರಿಯೆಗಳನ್ನು ಅನುಸರಿಸುತ್ತಾ ಜೀವವಿರುವವರೆಗೂ ನಮ್ಮ ನಿಯಂತ್ರಣವಿಲ್ಲದ ವಿಷಯಗಳಲ್ಲಿ ಅದನ್ನು ಬಂದಂತೆ ಸ್ವೀಕರಿಸಿ, ನಿಯಂತ್ರಣ ಇರುವ ಕಡೆ ಮತ್ತದೇ ಮೆದುಳ ಅರಿವಿನಿಂದ ಅದನ್ನು ನಮಗೆ ಸಾಧ್ಯವಿರುವಂತೆ ಅನುಕೂಲಕರವಾಗಿ ಪರಿವರ್ತಿಸಿ ಬದುಕುವುದು. ಮಾಡುವುದನ್ನು ಯೋಚಿಸಿ ಮಾಡಿ. ಪರಿಣಾಮ ಸ್ವೀಕರಿಸಿ. ಪಶ್ಚಾತ್ತಾಪಕ್ಕೆ ಹೆಚ್ಚಿನ ಅವಕಾಶ ಕೊಡಬೇಡಿ.

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ