ಪನ್ನೀರು - ಹನಿಗವಿತೆಗಳು
‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ. ಕಲಾವಿದನಾಗಿ, ಹಾಡುಗಾರರಾಗಿ, ಉತ್ತಮ ಸಂಘಟಕರಾಗಿ, ಪ್ರಕಾಶಕರಾಗಿ ಹೀಗೆ ಬಹುಶ್ರುತ ವ್ಯಕ್ತ್ವಿತ್ವದ ಈ ಜೇನುಗಾರ ಮಿತ್ರ ವೃತ್ತಿಯಿಂದ ಸರ್ಕಾರಿ ಶಾಲೆಯ ಶಿಕ್ಷಕರು.
ಈಗಾಗಲೇ ಮಕ್ಕಳಿಗಾಗಿ ‘ಕೋತಿ ಮತ್ತು ಫೋನು', ‘ಬಗೆ ಬಗೆ ಆಟ', 'ಕೈಲಾಸದಲ್ಲಿ ಕ್ರಿಕೆಟ್' ಮಕ್ಕಳ ಪದ್ಯ ಸಂಕಲನ ಹಾಗೂ ‘ಪುಟ್ಟು ಬೇಡಿದ ವರ' ಮಕ್ಕಳ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಅನಂತರ ‘ಮಾತು-ಮುತ್ತು' ಹನಿಗವನ ಸಂಕಲನ ಪ್ರಕಟಿಸಿ ಕಾವ್ಯ ರಸಿಕರಿಂದ ಅಪಾರ ಜನಮನ್ನಣೆ ಪಡೆದ ಪರಮೇಶ್ವರಪ್ಪ ಕುದರಿ ಇದೀಗ ತಮ್ಮ ಮಹತ್ವಾಕಾಂಕ್ಷೆಯ ಕೃತಿ ‘ಪನ್ನೀರು' ಹನಿಗವನಗಳ ಸಂಕಲನವನ್ನು ಲೋಕಾರ್ಪಣೆ ಗೊಳಿಸಲು ಸಜ್ಜಾಗಿದ್ದಾರೆ.
‘ಪನ್ನೀರು' ಮಧುರ ಭಾವನೆಗಳ ಸಿಂಚನದ ಜೇನುಕೊಡ. ಇಲ್ಲಿ ಬೆಳದಿಂಗಳ ಪ್ರೀತಿಯಿದೆ. ಬಿಸಿಯುಸಿರಿನ ತಹತಹವಿದೆ. ತಣ್ಣಗೆ ಉರಿಯುವ ಹಣತೆಗಳಿವೆ. ಲಾವಾ ರಸ ಸಿಡಿಸುವ ಜ್ವಾಲಾಮುಖಿಗಳೂ ಇವೆ.”
ಪನೀರು ಪುಸ್ತಕಕ್ಕೆ ಬೆಂಗಳೂರಿನ ಕವಿ-ಸಾಹಿತಿ ಹಾ ಮ ಸತೀಶ್ ಅವರ ‘ಪ್ರೀತಿಯ ನಾಲ್ಕು ಮಾತುಗಳು' ಎಂಬ ಮುನ್ನುಡಿ ಇದೆ. ಹಾ ಮ.ಸತೀಶ್ ಅವರು ಪರಮೇಶ್ವರಪ್ಪ ಕುದರಿಯವರ ಕಿರುಗವಿತೆಗಳ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬಹುತೇಕ ಸಮಕಾಲೀನರಾದ ಇವರಿಬ್ಬರೂ ಕವಿಗಳಾದುದರಿಂದ ಪರಸ್ಪರರ ಆತ್ಮೀಯತೆಯ ವಿಮರ್ಶೆ ಮಾಡಿಕೊಂಡಿದ್ದಾರೆ. ಸತೀಶ್ ಅವರು ಒಂದೆಡೆ ಬರೆಯುತ್ತಾರೆ “ಮಿತ್ರರಾದ ಪರಮೇಶ್ವರಪ್ಪ ಕುದರಿಯವರ ಬದುಕೇ ಕಾವ್ಯಮಯವೆಂದರೂ ತಪ್ಪಾಗಲಾರದು! ಸಾಹಿತ್ಯದ ಮೇಲೆ ಒಳ್ಳೆಯ ಒಲವಿರುವ ಇವರು, ಕವಿಗಿರುವ ಮೃದು ಮಧುರ ಕಾವ್ಯ ಸಂಪತ್ತಿನ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಕವಿಯ ಕೆಲಸ ಕಾವ್ಯ ರಚನೆ ಮಾಡುವುದು. ನಂತರ ಓದುಗರಿಂದ ಬರುವ ಸಿಹಿ-ಕಹಿ ನುಡಿಗಳನ್ನು ಜೀರ್ಣಿಸಿಕೊಂಡು ತನ್ನ ರಚನೆಗೆ ಓದುಗರನ್ನು ಒದಗಿಸಿಕೊಳ್ಳುವ ಕೆಲಸ ಕಷ್ಟಕರವಾದರೂ, ಇದನ್ನೆಲ್ಲ ಮೀರಿ ನಿಂತ ಇವರು ಕಾವ್ಯ ಪುರಸ್ಕೃತರು.”
ಕವಿ ಪರಮೇಶ್ವರಪ್ಪ ಕುದರಿಯವರು ತಮ್ಮ ‘ಮನದ ಮಾತು' ಬರಹದಲ್ಲಿ ತಮ್ಮ ಕಾವ್ಯ ರಚನೆಗೆ ಪ್ರೋತ್ಸಾಹ ನೀಡಿದವರನ್ನು, ಪ್ರಕಟಿಸಿದ ಪತ್ರಿಕೆಗಳನ್ನು ಸ್ಮರಿಸಿಕೊಂಡಿದ್ದಾರೆ. ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ ಪುಸ್ತಕ ಮುದಿತವಾಗಿದೆ. ಮುನ್ನೂರು ಕಿರುಗವಿತೆಗಳನ್ನು ಹೊಂದಿರುವ ಈ ಪುಸ್ತಕದ ಪ್ರತಿಯೊಂದು ಪುಟದ ಕವನಗಳೂ ಸೊಗಸಾಗಿವೆ, ಅರ್ಥ ಪೂರ್ಣವಾಗಿವೆ. ಕವಿಗಳು ಪ್ರೀತಿಯ ಬಗ್ಗೆ ‘ಪ್ರೀತಿಯೇ ಔಷಧಿ' ಎಂಬ ಕವನದಲ್ಲಿ ಬರೆಯುತ್ತಾರೆ..
ಎಲ್ಲ ನಲಿವಿಗೂ
ಪ್ರೀತಿಯೇ ಪ್ರೇರಣೆ
ಎಲ್ಲ ನೋವಿಗೂ ಪ್ರೀತಿಯೇ ಔಷಧಿ!
ಮತ್ತೇಕೆ ಜಿಪುಣತನ
ಕೈ ತುಂಬಾ ಹಂಚಿ
ಎದೆ ತುಂಬಾ ಹರಡಿ!!
ಪುಸ್ತಕದ ಶೀರ್ಷಿಕೆಯಾದ ‘ಪನ್ನೀರು' ಬಗ್ಗೆ ಕವನ ಹೀಗಿದೆ
ನನ್ನವಳ
ಸೌಂದರ್ಯದ
ದರ್ಶನವಾದಾಗಲೆಲ್ಲ
ಅತ್ಯಾನಂದ!
ಆನಂದಭಾಷ್ಪ
ಸುರಿದು
ಪನ್ನೀರು
ಪಡೆದ ಅನುಭವ!!
ಸಣ್ಣ ಸಣ್ಣ ಕವನಗಳನ್ನು ಓದುತ್ತಾ ಓದುತ್ತಾ ೩೦೦ ಕವನಗಳು ಮುಗಿದದ್ದೇ ಗೊತ್ತಾಗುವುದಿಲ್ಲ. ಅಷ್ಟು ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಸುಮಾರು ೧೧೫ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಪರಮೇಶ್ವರಪ್ಪ ಕುದರಿಯವರು ತಮ್ಮ ತಾಯಿ ದಿ. ಶ್ರೀಮತಿ ಗೌರಮ್ಮ ಕುದರಿಯವರಿಗೆ ಅರ್ಪಿಸಿದ್ದಾರೆ.